- ಉಕ್ಕಡಗಾತ್ರಿ ಶ್ರೀ ಕರಿಬಸವೇಶ್ವರ ಸ್ವಾಮಿ ಬೆಳ್ಳಿ ಉತ್ಸವ ಮೂರ್ತಿ ಲೋಕಾರ್ಪಣೆ
ಕನ್ನಡಪ್ರಭ ವಾರ್ತೆ ಹರಿಹರ
ರಾಜ್ಯ, ಹೊರ ರಾಜ್ಯದಲ್ಲಿನ ಭಕ್ತರು ಅಜ್ಜಯ್ಯನಿಗೆ ಹರಕೆ ಅನುಸಾರ ನೀಡಿದ ಕಾಣಿಕೆಗಳಿಂದ ಬೆಳ್ಳಿ ಉತ್ಸವ ಮೂರ್ತಿ ಇಂದು ಲೋಕಾರ್ಪಣೆ ಆಗುತ್ತಿರುವುದು ದೈವಾನುಗ್ರಹ ಎಂದು ಶ್ರೀ ವೃಷಭಪುರಿ ಮಹಾಸಂಸ್ಥಾನದ ಸಿದ್ದರಾಮೇಶ್ವರ ಶ್ರೀ ನುಡಿದರು.ತಾಲೂಕಿನ ಉಕ್ಕಡಗಾತ್ರಿ ಅಜ್ಜಯ್ಯನ ಬೆಳ್ಳಿ ಉತ್ಸವ ಮೂರ್ತಿ ಲೋಕಾರ್ಪಣೆ ಪೂಜಾ ಸಮಾರಂಭದಲ್ಲಿ ಶ್ರೀ ವೃಷಭಪುರಿ ಮಹಾಸಂಸ್ಥಾನದ ಶ್ರೀಗಳು ಮಾತನಾಡಿದರು. ಭಕ್ತರು ನೀಡಿದ ಕಾಣಿಕೆಗಳು ದೇವಸ್ಥಾನ ಮತ್ತು ಭಕ್ತರ ವಸತಿ ಗೃಹಗಳಿಗೆ ಸದ್ವಿನಿಯೋಗ ಆಗುತ್ತಿವೆ. ಅಜ್ಜಯ್ಯ ಭಕ್ತರನ್ನು ಪೊರೆಯುವ ಆರಾಧ್ಯವಾಗಿದ್ದಾರೆ. ಭಕ್ತಿ ಮನುಷ್ಯನನ್ನು ಪ್ರಾಮಾಣಿಕನನ್ನಾಗಿ ರೂಪಿಸುತ್ತದೆ. ಅಜ್ಜಯ್ಯನಲ್ಲಿ ಸಮಸ್ಯೆಗಳಿಗೆ ಅನುಸಾರ ಭಕ್ತರು ಹರಕೆ ಹೊರುತ್ತಾರೆ. ಅಜ್ಜಯ್ಯನ ಕೃಪಾನುಸಾರ ಪರಿಹಾರ ಕಂಡುಕೊಂಡು ದರ್ಶನಕ್ಕೆ ಬರುತ್ತಿದ್ದಾರೆ. ಕ್ಷೇತ್ರದಲ್ಲಿ ಪ್ರತಿ ವರ್ಷ ಭಕ್ತರ ಸಂಖ್ಯೆ ಹೆಚ್ಚುತ್ತಲೇ ಇದೆ. ಫೆ.17 ರಿಂದ 24ರವರಿಗೆ ಮಹಾಶಿವರಾತ್ರಿ ಪ್ರಯುಕ್ತ ಅಜ್ಜಯ್ಯನ ಜಾತ್ರಾ ಮಹೋತ್ಸವ ನಡೆಯುತ್ತದೆ. ಭಕ್ತರು ಶ್ರೀ ಕ್ಷೇತ್ರದಲ್ಲಿ ಸ್ವಚ್ಛತೆ ಕಾಪಾಡಬೇಕು ಎಂದರು.
ಕಾರ್ಯಕ್ರಮದ ಅಂಗವಾಗಿ ವಿಶೇಷ ಪೂಜೆ, ಪೂಜಾಲಂಕಾರ ಮಾಡಲಾಗಿತ್ತು. ಕಮಿಟಿ ಉಪಾಧ್ಯಕ್ಷ ನಂದಿಗೌಡ, ಸದಸ್ಯರಾದ ಹೊಸಳ್ಳಿ ಗದಿಗೆಪ್ಪ, ಗದಿಗಯ್ಯ ಪಾಟೀಲ್, ಪ್ರಕಾಶ್ ಕೋಟೇರ, ಬಸವನಗೌಡ ಪಾಳೇದ, ಮಹಾಂತಯ್ಯ ಚೊಗಚಿಕೊಪ್ಪ, ಜಿಗಳಿ ಇಂದೂಧರ ಇದ್ದರು.
-16 HRR. 03 & 03 A: