ಆಕಾಶಪ್ಪಾ, ಟೈಂ ಇದ್ರೆ ನಮ್ಮೂರಿಗೆ ಬಂದು ಹೋಗ್ತೀಯೇನಪ್ಪಾ..

KannadaprabhaNewsNetwork |  
Published : Aug 22, 2026, 02:45 AM IST
ಚಿತ್ರದುರ್ಗ ಮೂರನೇ ಪುಟದ ಲೀಡ್ | Kannada Prabha

ಸಾರಾಂಶ

ಹೊಳಲ್ಕೆರೆ ತಾಲೂಕಿನ ಗಡಿಗ್ರಾಮ ಕೊಳಹಾಳು ಗ್ರಾಮದಲ್ಲಿ ಮತ್ತೆ ಕುಡಿವ ನೀರಿನ ಹಾಹಾಕಾರ ಶುರುವಾಗಿದೆ. ಹಿಂದೊಮ್ಮೆ ಕುಡಿವ ನೀರಿನ ಅಭಾವದಿಂದ ಬೇಸತ್ತಿದ್ದ ಜನತೆ ಪಿಡಿಓ ಹಾಗೂ ತಾಪಂ ಇಓಗೆ ಕೊಠಡಿಯಲ್ಲಿ ಕೂಡಿ ದಿಗ್ಬಂಧನ ಹಾಕಿದ್ದರು.

ಚಿಕ್ಕಪ್ಪನಹಳ್ಳಿ ಷಣ್ಮುಖ

ಕನ್ನಡಪ್ರಭ ವಾರ್ತೆ, ಚಿತ್ರದುರ್ಗ

ಹೊಳಲ್ಕೆರೆ ತಾಲೂಕಿನ ಗಡಿಗ್ರಾಮ ಕೊಳಹಾಳು ಗ್ರಾಮದಲ್ಲಿ ಮತ್ತೆ ಕುಡಿವ ನೀರಿನ ಹಾಹಾಕಾರ ಶುರುವಾಗಿದೆ. ಹಿಂದೊಮ್ಮೆ ಕುಡಿವ ನೀರಿನ ಅಭಾವದಿಂದ ಬೇಸತ್ತಿದ್ದ ಜನತೆ ಪಿಡಿಓ ಹಾಗೂ ತಾಪಂ ಇಓಗೆ ಕೊಠಡಿಯಲ್ಲಿ ಕೂಡಿ ದಿಗ್ಬಂಧನ ಹಾಕಿದ್ದರು.

ರೊಚ್ಚಿಗೆದ್ದ ಜನರ ಮನ ತಣಿಸಲು ಎರಡು ಕೊಳವೆಬಾವಿ ಕೊರೆಯಿಸಿ ನೀರು ಪೂರೈಕೆ ಮಾಡಲಾಗಿತ್ತು. ಈ ಘಟನೆ ಮಾಸುವ ಮುನ್ನವೇ ಮತ್ತೆ ಕುಡಿವ ನೀರಿನ ಅಭಾವದಿಂದ ಗ್ರಾಮ ಬಾಧಿತಗೊಂಡಿದೆ. ಮಳೆ ಬಾರದ ಕಾರಣ ಕೊಳವೆ ಬಾವಿಯಲ್ಲಿ ಅಂತರ್ಜಲ ಪಾತಾಳಕ್ಕಿಳಿದು ಒಂದು ವಾರದಿಂದ ಕೊಳವೆ ಬಾವಿಗಳು ಸ್ತಬ್ದವಾಗಿವೆ. ಮಹಿಳೆಯರು, ಮಕ್ಕಳು, ವೃದ್ಧರು ಕುಡಿವ ನೀರಿಗಾಗಿ ಪರಿತಪಿಸುವಂತಾಗಿದೆ.

ಹಾಲಿ ಇರುವ ಗ್ರಾಮದ ಒಂದು ಕೊಳಾಯಿ ಮುಂಭಾಗ ನೂರಾರು ಕೊಡಗಳು ಸರತಿಗಾಗಿ ಕಾದಿದ್ದು ದಿನವಿಡೀ ಕಾಲ ನೂಕಿದರೂ ಎರಡು ಬಿಂದಿಗೆ ನೀರು ದೊರೆಯದಂತಾಗಿದೆ. ಜಮೀನುಗಳಿಂದ ಹೇಗೋ ನೀರು ತರೋಣವೆಂದು ಜನತೆ ಭಾವಿಸದರೂ ಅದೂ ಸಾಧ್ಯವಾಗಂತಾಗಿದೆ. ನೀರಿಲ್ಲದೆ ಅಡಿಕೆ ತೋಟಗಳು ಒಣಗುತ್ತಿದ್ದು ಯಾರೊಬ್ಬರೂ ಒಂದು ಕೊಡ ನೀರು ಕೊಡುತ್ತಿಲ್ಲ. ದೂರದ ಗೋಪಾಲಪುರಕ್ಕೆ ಹೋಗಿ ನೀರು ತರಲು ಎಲ್ಲರೂ ಹಿಂದೇಟು ಹಾಕುತ್ತಿದ್ದಾರೆ.

ಹೊಸದುರ್ಗ, ಹಿರಿಯೂರು, ಹೊಳಲ್ಕೆರೆ ಗಡಿ ಗ್ರಾಮವಾಗಿರುವ ಕೊಳಹಾಳು ಒಂದು ರೀತಿಯಲ್ಲಿ ಜನ ಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯಕ್ಕೂ ಒಳಗಾಗಿದೆ. ಅನತಿ ದೂರದಲ್ಲಿ ವಾಣಿವಿಲಾಸ ಸಾಗರ ಜಲಾಶಯವಿದ್ದರೂ ಕುಡಿವ ನೀರಿಗೆ ಗ್ರಾಮಸ್ಥರು ತತ್ವಾರ ಪಡುತ್ತಿರುವುದು ನಿಂತಿಲ್ಲ. ನೀರಿಲ್ಲದ ಕಾರಣಕ್ಕೆ ಶಾಲೆಯಲ್ಲಿ ಬಿಸಿಯೂಟ ಬಂದ್ ಆಗಿದೆ. ಮಕ್ಕಳಿಗೆ ಕುಡಿಯಲೂ ನೀರು ಸಿಗದಂತಹ ಪರಿಸ್ಥಿತಿ ಇದೆ. ಹಲವು ತಿಂಗಳಿಂದ ಶಾಲಾ ಮಕ್ಕಳಿಗೆ ನೀರೇ ಸಿಕ್ಕಿಲ್ಲವೆನ್ನುತ್ತಾರೆ ಗ್ರಾಮಸ್ಥರು.

ಜಿಲ್ಲಾ ಉಸ್ತುವಾರಿ ಸಚಿವ ಟಿ. ರಘುಮೂರ್ತಿ ಸಚಿವರಾಗುತ್ತಿದ್ದಂತೆ ಅಧಿಕಾರಿಗಳ ಸಭೆ ಕರೆದು ಬರವನ್ನು ಸಮರ್ಥವಾಗಿ ನಿಭಾಯಿಸಬೇಕು. ಯಾವ ಹಳ್ಳಿಗಳೂ ಕುಡಿವ ನೀರಿನ ಬಾಧೆಯಿಂದ ನರಳುವಂತಾಗಬಾರದೆಂದು ಬಿಗಿ ನಿರ್ದೇಶನ ನೀಡಿದ್ದರು. ಆದರೆ ಕೊಳಹಾಳು ಗ್ರಾಮಕ್ಕೆ ಈ ನಿರ್ದೇಶನ ಅನ್ವಯ ವಾದಂತೆ ಕಾಣಿಸುತ್ತಿಲ್ಲ.

ಜಿಪಂ ಸಿಇಓ ಡಾ.ಆಕಾಶ್ ಗೆ ಕುಡಿವ ನೀರಿನ ಅಭಾವದ ಇಂತಹದ್ದೊಂದು ಗ್ರಾಮ ಹೊಳಲ್ಕೆರೆ ವಿಧಾನಸಭೆ ಕ್ಷೇತ್ರದಲ್ಲಿ ಇದೆ ಎಂಬ ಬಗ್ಗೆ ಅಷ್ಟಾಗಿ ಮಾಹಿತಿ ಇದ್ದಂತಿಲ್ಲ. ಕೊಳಹಾಳು ಗ್ರಾಮದ ಜನರನ್ನು ಊರು ಬಿಡಿಸುವ ಪ್ಲಾನ್ ಏನಾದರೂ ಅಧಿಕಾರಿಗಳು ಹಾಕಿಕೊಂಡಿದ್ದಾರಾ ಎಂಬ ಶಂಕೆಗಳು ಗ್ರಾಮಸ್ಥರಲ್ಲಿ ಮೂಡಿವೆ.

ಡಾ. ಆಕಾಶ್, ನಮ್ಮೂರಿಗೆ ಬಂದು ನೋಡಲು ಟೈಂ ಇದೆಯಾ ಎಂದು ಖಾಲಿ ಕೊಡಗಳ ಒಳಗಿನಿಂದ ಆರ್ತನಾದ ತೇಲಿ ಬರುತ್ತಿದೆ..

-----

ಅಧಿಕಾರಿಗಳು ಬೆಳಿಗ್ಗೆ ಎದ್ದು ಸ್ನಾನ ಮಾಡಿ, ತಿಂಡಿ ತಿಂದು ನೀಟಾಗಿ ಮನೆ ಬಿಟ್ಟು ಆಫೀಸ್‌ಗೆ ಬರುತ್ತಾರೆ. ನಮಗೆ ಸ್ನಾನವೂ ಇಲ್ಲ, ನೀರು ಇಲ್ಲವೆನ್ನುವಂತಾಗಿದೆ. ಅಧಿಕಾರಿಗಳು ಗ್ರಾಮಕ್ಕೆ ಆಗಮಿಸಿ ಏನು, ಎತ್ತ ಅಂತ ವಿಚಾರಿಸಿಲ್ಲ. ದನಕರು, ಮಕ್ಕಳಿಗೆ ನೀರಿಲ್ಲ. ಓದೋ ಹುಡುಗರ ಸಮಸ್ಯೆ ಹೇಳುವಂತಿಲ್ಲ. ನಮಗೆ ಒಬ್ಬೊಬ್ಬರೇ ಹೆಣ್ಣುಮಕ್ಕಳು ಇದ್ದಾರೆ. ಸನಿಹದ ಗೋಪಾಲಪುರಕ್ಕೆ ಹೋಗಿ ತರಬೇಕು. ಅದು ಕಷ್ಟದ ಕೆಲಸ.

ಗಿರಿಜಮ್ಮ, ಕೊಳಹಾಳು ಗ್ರಾಮದ ಮಹಿಳೆ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಡಿಸಿ ಕಚೇರಿಗೆ ನುಗ್ಗಲು ಬಿಜೆಪಿ ವಿಫಲ ಯತ್ನ
ಸಹಕಾರ ಸಂಘಗಳಲ್ಲಿ ಪಕ್ಷ, ಜಾತಿ ನುಸುಳುವುದು ಬೇಡ: ನಿರ್ದೇಶಕ ಜಿ.ಇ. ಅಜ್ಜಪ್ಪ