ಕನ್ನಡಪ್ರಭ ವಾರ್ತೆ ಬೀದರ್
ಅಕ್ಕ ಅವರ ಲಿಂಗೈಕ್ಯ ಗದ್ದುಗೆ ಮೇಲೆ ಲಿಂಗಾಯತ ಧರ್ಮಗ್ರಂಥ ಗುರುವಚನವನ್ನು ಇರಿಸಿ ಗೌರವ ಸಲ್ಲಿಸಲಾಯಿತು. ಅನಂತರ ಅಕ್ಕನವರ ಯೋಗಾಂಗ ತ್ರಿವಿಧಿ ಪಠಿಸಿ, ವಚನಗಳನ್ನು ಸಾಮೂಹಿಕವಾಗಿ ಓದಿ, ಜ್ಯೋತಿ ಬೆಳಗಿಸಿ, ಬಸವ ಜಯ ಘೋಷ ಹಾಕಿ, ಮಂಟಪವನ್ನು ಶರಣ ಲೋಕಕ್ಕೆ ಸಮರ್ಪಿಸಲಾಯಿತು. ನೆರೆದ ಶರಣ- ಶರಣೆಯರು ಭಕ್ತಿ ಮೇರೆ ಮೀರಿ ಕೆಲ ಕ್ಷಣ ಭಾವುಕರಾದರು.
ಐಕ್ಯ ಮಂಟಪದ ನಿರ್ಮಾಣ ಅದ್ಭುತವಾಗಿದೆ. ಉದ್ಘಾಟನೆ ವಿಧಿ-ವಿಧಾನಗಳನ್ನು ತಾತ್ವಿಕವಾಗಿ ಯೋಜಿಸಲಾಗಿದೆ ಎಂದು ಐಕ್ಯ ಮಂಟಪ ಅನಾವರಣ ಹಾಗೂ ಮಾಸಿಕ ಶರಣ ಸಂಗಮ ಕಾರ್ಯಕ್ರಮ ಉದ್ಘಾಟಿಸಿದ ಹುಲಸೂರಿನ ಡಾ.ಶಿವಾನಂದ ಸ್ವಾಮೀಜಿ ಬಣ್ಣಿಸಿದರು. ಅಕ್ಕ ಅನ್ನಪೂರ್ಣತಾಯಿ ಬಸವ ಧರ್ಮದ ಮರೆಯಲಾಗದ ಮಾಣಿಕ್ಯ. ಬೀದರ್‌ನಲ್ಲೇ ಜನಿಸಿ, ಆಕಾಶದೆತ್ತರಕ್ಕೆ ಬೆಳೆದ ಪ್ರತಿಭೆ. ಅವರ ವಾಣಿಯಲ್ಲಿ ದೈವಿಶಕ್ತಿ ಇತ್ತು ಎಂದು ಸ್ಮರಿಸಿದರು.ಅಕ್ಕ ಅವರು ಹೇಳಿಕೊಟ್ಟ ಬಸವ ತತ್ವದಂತೆ ನಡೆದರೆ ಅವರಿಗೆ ಶಾಂತಿ ಸಿಗುತ್ತದೆ. ಅಕ್ಕ ಎಲ್ಲಿಯೂ ಹೋಗಿಲ್ಲ. ನಮ್ಮ-ನಿಮ್ಮೆಲ್ಲರ ಹೃದಯದಲ್ಲಿ ಐಕ್ಯವಾಗಿದ್ದಾರೆ. ಪ್ರಭುದೇವ ಸ್ವಾಮೀಜಿ ಮೂಲಕ ಮತ್ತೆ ಮಾರ್ಗ ತೋರುತ್ತಿದ್ದಾರೆ ಎಂದು ಮಾರ್ಮಿಕವಾಗಿ ನುಡಿದರು.
ಮೈಸೂರಿನ ಸಾಹಿತಿ ದೇವರಾಜು ಪಿ. ಚಿಕ್ಕಹಳ್ಳಿ ಉಪನ್ಯಾಸ ನೀಡಿ, ಯುವಜನರು ಜನ ಕಲ್ಯಾಣ, ಧಾರ್ಮಿಕ ಕಾರ್ಯಗಳಲ್ಲೂ ತೊಡಗಿಸಿಕೊಳ್ಳಬೇಕು. ಯುವಕರು ವಚನಗಳನ್ನು ಮೈಗೂಡಿಸಿಕೊಂಡರೆ ಕಲ್ಯಾಣ ರಾಜ್ಯ ನಿರ್ಮಾಣ ಸಾಧ್ಯ ಎಂದು ಪ್ರತಿಪಾದಿಸಿದರು. ಬೀದರ್‌ನ ಲಿಂಗಾಯತ ಮಹಾಮಠ ವಚನಗಳ ಸಾರ ಸಾರುವ ಕಾರ್ಯದಲ್ಲಿ ನಿರತವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಚರಜಂಗಮ ಸಿದ್ರಾಮಪ್ಪ ಕಪಲಾಪುರೆ, ಎಂಜಿನಿಯರ್ ಹಾವಶೆಟ್ಟಿ ಪಾಟೀಲ, ಕಲಬುರಗಿಯ ಬಸವ ಸೇವಾ ಪ್ರತಿಷ್ಠಾನದ ಮನೋಹರ ಜೀವಣಗಿ, ಸಾಹಿತಿ ರಮೇಶ ಮಠಪತಿ ಅತಿಥಿಗಳಾಗಿದ್ದರು.
ಪರುಷಕಟ್ಟೆಯ ಚನ್ನಬಸವಣ್ಣ ಹಾಗೂ ರೇವಣಪ್ಪ ಮೂಲಗೆ ವಚನ ಗಾಯನ ಮಾಡಿದರು. ಕದಳಿಶ್ರೀ ಪ್ರದರ್ಶಿಸಿದ ಆಕರ್ಷಕ ವಚನ ನೃತ್ಯ ಸಭಿಕರ ಮನ ಸೆಳೆಯಿತು. ಅಲ್ಪಾವಧಿಯಲ್ಲೇ ಆಕರ್ಷಕ ಐಕ್ಯ ಮಂಟಪ ನಿರ್ಮಿಸಿದ ಎಂಜಿನಿಯರ್‌ಗಳಾದ ಪ್ರಕಾಶ ಮಠಪತಿ ಹಾಗೂ ಆನಂದ ವಡ್ಡನಕೇರಿ ಅವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು.