ಅಕ್ಕಮಹಾದೇವಿ ಜಯಂತಿ ಜಿಲ್ಲಾ ಕೇಂದ್ರಕ್ಕೆ ವಿಸ್ತರಿಸಲಿ

KannadaprabhaNewsNetwork | Published : May 1, 2024 1:17 AM

ಸಾರಾಂಶ

ವೈರಾಗ್ಯದ ತವನಿಧಿಯಾದ ಅಕ್ಕಮಹಾದೇವಿ 12ನೇ ಶತಮಾನದಲ್ಲಿಯೇ ಸ್ತ್ರೀ ಚಳವಳಿಯ ಪ್ರಮುಖರಾಗಿ ಸ್ವಾಭಿಮಾನದ ಪ್ರತೀಕವಾಗಿದ್ದರು. ಚಿಕ್ಕವಯಸ್ಸಿನಲ್ಲೇ ಸಕಲ ಸುಖವನ್ನು ತ್ಯಜಿಸಿ ಮಹಿಳಾ ಹಕ್ಕುಗಳಿಗೆ ಹೋರಾಟದ ಮಾರ್ಗದರ್ಶಕಿಯಾಗಿದ್ದರು ಎಂದು ಸಂಶೋಧಕ ಡಾ. ಡಿ.ಎನ್.ಯೋಗೀಶ್ವರಪ್ಪ ಹೇಳಿದರು.

ಕನ್ನಡಪ್ರಭ ವಾರ್ತೆ ತುಮಕೂರುವೈರಾಗ್ಯದ ತವನಿಧಿಯಾದ ಅಕ್ಕಮಹಾದೇವಿ 12ನೇ ಶತಮಾನದಲ್ಲಿಯೇ ಸ್ತ್ರೀ ಚಳವಳಿಯ ಪ್ರಮುಖರಾಗಿ ಸ್ವಾಭಿಮಾನದ ಪ್ರತೀಕವಾಗಿದ್ದರು. ಚಿಕ್ಕವಯಸ್ಸಿನಲ್ಲೇ ಸಕಲ ಸುಖವನ್ನು ತ್ಯಜಿಸಿ ಮಹಿಳಾ ಹಕ್ಕುಗಳಿಗೆ ಹೋರಾಟದ ಮಾರ್ಗದರ್ಶಕಿಯಾಗಿದ್ದರು ಎಂದು ಸಂಶೋಧಕ ಡಾ. ಡಿ.ಎನ್.ಯೋಗೀಶ್ವರಪ್ಪ ಹೇಳಿದರು.ನಗರದ ಜಯದೇವ ವಿದ್ಯಾರ್ಥಿನಿಲಯದ ಮುರುಘರಾಜೇಂದ್ರ ಸಭಾಂಗಣದಲ್ಲಿ ಬಸವಕೇಂದ್ರ ಅನುಭವ ಮಂಟಪದ ಸಹಯೋಗದಲ್ಲಿ ಶ್ರೀಮತಿ ಲಲಿತಾ ಮೋಹನ್‌ ಸ್ಮರಣಾರ್ಥ ಏರ್ಪಡಿಸಿದ್ದ ಅಕ್ಕಮಹಾದೇವಿ ಜಯಂತಿಯಲ್ಲಿ ಮಾತನಾಡಿದರು. ಅಕ್ಕಮಹಾದೇವಿ ಜಯಂತಿಯನ್ನು ಸರ್ಕಾರ ಕೇವಲ ರಾಜಧಾನಿಯಲ್ಲಿ ಆಚರಿಸುತ್ತಿದೆ. ಆದರೆ ಅದನ್ನು ಜಿಲ್ಲೆ ಮತ್ತು ತಾಲೂಕು ಕೇಂದ್ರಗಳಿಗೆ ವಿಸ್ತರಿಸಿ ಆಚರಿಸಬೇಕು. ಇದರಿಂದ ಮಹಿಳಾ ಕುಲಕ್ಕೆ ಗೌರವ ನೀಡಿದಂತಾಗುತ್ತದೆ ಎಂದರು.

ಅಕ್ಕಮಹಾದೇವಿ ಕಿರಿಯ ವಯಸ್ಸಿನಲ್ಲೇ ಸಂಸಾರವೆಂಬ ವ್ಯಾಮೋಹ ಕಿತ್ತೆಸೆದಳು. ಅವರ ನಿರ್ವಸ್ತ್ರ ಸ್ಥಿತಿ ಕೇವಲ ಕೌಶಿಕನ ವಿರುದ್ಧದ ಬಂಡಾಯವೆಂದು ಹೇಳಬಹುದು. ಮಹಾದೇವಿಯಕ್ಕ ನಿರಾಡಂಬರದ ಕನ್ನಡಿಯಾಗಿ ಬೆಳಗಿದ ಕನ್ನಡದ ಮೊದಲ ಕವಯಿತ್ರಿ ಹಾಗೂ ಶರಣ ಸಮೂಹಕ್ಕೆ ಸಹೋದರಿಯಾಗಿದ್ದಳು ಎಂದು ಹೇಳಿದರು.

ಹುಬ್ಬಳ್ಳಿಯ ಕಮಲಮ್ಮ ಮಾತನಾಡಿ, ಅನುಭವ ಮಂಟಪವು ಶತಮಾನಗಳಿಂದ ದಿವ್ಯನಿರ್ಲಕ್ಷ್ಯ, ಅವಹೇಳನಕ್ಕೆ ಒಳಗಾಗಿದ್ದ ಸ್ತ್ರೀ ಕುಲಕ್ಕೆ ಸ್ವಾತಂತ್ರ್ಯಒದಗಿಸಿದೆ. ಅಕ್ಕಮಹಾದೇವಿ ಅಲ್ಲಮಪ್ರಭು ಎತ್ತಿದ ಎಲ್ಲ ಪ್ರಶ್ನೆಗಳಿಗೂ ಸಮಂಜಸ ಉತ್ತರ ನೀಡಿ ಮಹಾದೇವಿಯಾಗಿದ್ದಳು. ಅಲ್ಲಮರಿಂದಲೇ ಅಕ್ಕಮಹಾದೇವಿ ಎಂದು ಕರೆಸಿಕೊಂಡು ಶ್ರೀಶೈಲದ ಕದಳಿ ವನದಲ್ಲಿ ಚನ್ನಮಲ್ಲಿಕಾರ್ಜುನನಲ್ಲಿ ಐಕ್ಯವಾಗಿರುವುದು ಐತಿಹಾಸಿಕ ಸತ್ಯವಾಗಿದೆ ಎಂದರು.

ಉಪನ್ಯಾಸಕ ವಿಜಯಕುಮಾರ ಕಮ್ಮಾರ್ ಮಾತನಾಡಿ, ಅಲ್ಲಮ ಮತ್ತು ಅಕ್ಕಮಹಾದೇವಿ ಅಂದಿನ ಅತ್ಯಂತ ವಿಶಿಷ್ಟ ಸಂವೇದನೆಯ ವ್ಯಕ್ತಿತ್ವಗಳಾಗಿದ್ದರು. ಅನುಭವಿ, ಕವಿಯೂ ಆಗಿದ್ದ ಅಕ್ಕನ ವಚನಗಳು ಕನ್ನಡ ಸಾಹಿತ್ಯದ ಬರವಣಿಗೆಗಳಾಗಿವೆ. ಅತ್ಯಂತ ಕಿರಿಯ ವಯಸ್ಸಿನಲ್ಲೇ 430 ಕ್ಕೂ ಹೆಚ್ಚು ವಚನಗಳು ರಚಿಸಿದ್ದರು. ಅಲ್ಲದೆ ತ್ರಿವಿಧಿಯಂತಹ ಕೃತಿಯನ್ನು ಕನ್ನಡ ಸಾಹಿತ್ಯಕ್ಕೆ ಕೊಡುಗೆಯಾಗಿ ನೀಡಿದ ಅಕ್ಕಮಹಾದೇವಿ ಮಹಿಳೆಯೂ ಪುರುಷನಷ್ಟೇ ಜ್ಞಾನಿ ಎಂಬುದನ್ನು ಸಾಬೀತುಪಡಿಸಿದ್ದಾರೆ ಎಂದು ಹೇಳಿದರು.ಹುಬ್ಬಳ್ಳಿ ಮಠದ ಅಕ್ಕನಾಗಮ್ಮ, ಬಸವಕೇಂದ್ರದ ಕಲ್ಪನಾ ಉಮೇಶ್ ಮಾತನಾಡಿದರು. ವೇದಿಕೆಯಲ್ಲಿ ಬಸವಕೇಂದ್ರದ ಅಧ್ಯಕ್ಷ ಸಿದ್ಧಗಂಗಮ್ಮ, ಕದಳಿ ವೇದಿಕೆಯ ಅಧ್ಯಕ್ಷ ನಾಗರತ್ನ ಚಂದ್ರಪ್ಪ, ಕೈಗಾರಿಕೋದ್ಯಮಿ ಡಿ.ವಿ.ಶಿವಾನಂದ, ಜಾಗತಿಕ ಲಿಂಗಾಯತ ಮಹಾಸಭಾದ ನಾಗಭೂಷಣ್, ತಾಲೂಕು ಕಸಾಪ. ಅಧ್ಯಕ್ಷ ಚಿಕ್ಕಬೆಳ್ಳಾವಿ ಶಿವಕುಮಾರ್, ಬಸವಕೇಂದ್ರದ ಆಶಾ ನಿರಂಜನ್ ಹಾಜರಿದ್ದರು.

Share this article