ಕೊಪ್ಪಳ: ಅಳವಂಡಿ ಬೆಟಗೇರಿ ಏತ ನೀರಾವರಿ ಯೋಜನೆಯನ್ನು ಪ್ರಾಯೋಗಿಕವಾಗಿ ಶೀಘ್ರದಲ್ಲಿಯೇ ಶುರು ಮಾಡಿ ರೈತರ ಭೂಮಿಗೆ ನೀರು ಕೊಡುವ ಪ್ರಯತ್ನ ಮಾಡಲಾಗುವುದು ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದ್ದಾರೆ.
ಅಳವಂಡಿ ಜಿಪಂ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಅಡಿಗಲ್ಲು ಹಾಗೂ ಉದ್ಘಾಟನೆ ನೆರವೇರಿಸಿ ಮಾತನಾಡಿದರು.ಅಳವಂಡಿ ಜಿಪಂ ವ್ಯಾಪ್ತಿಯ ಕಂಪ್ಲಿ, ಅಳವಂಡಿ, ಗುಡಗೇರಿ ಕವಲೂರು, ಮುರ್ಲಾಪುರ ಘಟ್ಟರೆಡ್ಡಿಹಾಳ್, ಬೆಳಗಟ್ಟಿ, ಹಟ್ಟಿ, ಹೈದರ್ ನಗರ, ಕೇಸಲಾಪುರ ಹಾಗೂ ರಘುನಾಥನಹಳ್ಳಿ ಗ್ರಾಮಗಳಲ್ಲಿ ₹3.86 ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಅಡಿಗಲ್ಲು ಹಾಗೂ ಉದ್ಘಾಟನೆ ನೆರವೇರಿಸಿದರು.
ಈ ವೇಳೆ ಮಾತನಾಡಿದ ಅವರು, ಕಳೆದ 12 ವರ್ಷಗಳಿಂದಲೂ ಕೂಡ ಕ್ಷೇತ್ರದ ಪ್ರತಿಯೊಂದು ಗ್ರಾಮದ ಅಭಿವೃದ್ಧಿಗೆ ಅನುದಾನ ನೀಡಿ ಅಭಿವೃದ್ಧಿ ಕೆಲಸ ಮಾಡಿದ್ದೇವೆ. ಈ ವರ್ಷದ ಕೆಕೆಆರ್ ಡಿಬಿ ಯೋಜನೆಯಡಿಯಲ್ಲಿ ಕೂಡ ಪ್ರತಿಯೊಂದು ಗ್ರಾಮದ ಅಭಿವೃದ್ಧಿ ಕಾಮಗಾರಿಗೆ ಅನುದಾನ ನೀಡುವ ಕೆಲಸ ಮಾಡಿದ್ದೇವೆ. ಸಿಸಿ ರಸ್ತೆ, ಚರಂಡಿ, ಶಾಲಾ ಕೊಠಡಿ ಹಾಗೂ ಕುಡಿಯುವ ನೀರಿನ ಯೋಜನೆ ಕಾರ್ಯ ಕೈಗೆತ್ತಿಕೊಂಡಿದ್ದೇವೆ ಎಂದರು.ಈ ಭಾಗದ ಬಹುದಿನಗಳ ಬೇಡಿಕೆ ಆಗಿದ್ದ ಅಳವಂಡಿ-ಬೆಟಗೇರಿ ಏತ ನೀರಾವರಿ ಯೋಜನೆಯ ಕಾಮಗಾರಿ ಮುಗಿದಿದ್ದು. ಇನ್ನೂ ತಿಂಗಳದ ಒಳಗೆ ಟ್ರೈಯಲ್ ರನ್ ಚೆಕ್ ಮಾಡುತ್ತೇವೆ. ಈ ಭಾಗವನ್ನು ಸಂಪೂರ್ಣ ನೀರಾವರಿ ಪ್ರದೇಶ ಮಾಡುತ್ತೇವೆ. ದಯವಿಟ್ಟು ರೈತರು ವಿಂಡ್ ಮಿಲ್ ಮತ್ತು ಸೋಲಾರ್ ಕಂಪನಿಯವರಿಗೆ ಹೊಲ ನೀಡಬೇಡಿ ಎಂದು ಮನವಿ ಮಾಡಿದರು.
ಇತ್ತೀಚಿಗೆ ಸತತ ಮಳೆಯಿಂದ ಅಳವಂಡಿ ಭಾಗದಲ್ಲಿ ರಸ್ತೆಗಳು ಹದಗೆಟ್ಟಿದ್ದು, ಅದಕ್ಕೂ ಕೂಡ ಕಲ್ಯಾಣ ಪಥ ಯೋಜನೆಯಡಿಯಲ್ಲಿ, ಕೆಕೆಆರ್ ಡಿಬಿ ಹಾಗೂ ಮುಖ್ಯಮಂತ್ರಿಗಳು ನೀಡಿರುವ ವಿಶೇಷ ಅನುದಾನದಲ್ಲಿ ರಸ್ತೆ ಅಭಿವೃದ್ಧಿ ಕೆಲಸ ತೆಗೆದುಕೊಂಡಿದ್ದೇವೆ. ಅಳವಂಡಿ ಭಾಗದಲ್ಲಿ ಅಳವಂಡಿ ಹತ್ತಿರ ಇರುವ ಬ್ರಿಡ್ಜ್, ರಘುನಾಥನಳ್ಳಿ ಬ್ರಿಡ್ಜ್ ಹಾಗೂ ನೆಲೋಗಿಪುರ ಬ್ರಿಡ್ಜ್ ನಿರ್ಮಾಣ ಆಗಬೇಕು.ಇದಕ್ಕೂ ಕೂಡ ಕ್ರಮ ವಹಿಸಿದ್ದೇವೆ. ಈಗಾಗಲೇ ಎಸ್ಟಿಮೇಟ್ ಕೂಡ ಮಾಡಿಸಿದ್ದೇವೆ. ಅನುದಾನ ತಂದು ಅಭಿವೃದ್ಧಿ ಪಡಿಸುತ್ತೇವೆ. ಇದರಿಂದ ಜನರು ಸಂಚಾರ ಮಾಡಲಿಕ್ಕೆ ಹೆಚ್ಚು ಅನುಕೂಲವಾಗುತ್ತದೆ ಎಂದರು.ಈ ಸಂದರ್ಭದಲ್ಲಿ ಅಳವಂಡಿ ಗ್ರಾಪಂ ಅಧ್ಯಕ್ಷ ಶಂಕ್ರಮ್ಮ ಜೋಗಿನ್, ಗವಿಸಿದ್ದಪ್ಪ ಕರಡಿ, ಗೂಳಪ್ಪ ಹಲಿಗೇರಿ, ಭರಮಪ್ಪ ಹಟ್ಟಿ, ಕೃಷ್ಣರಡ್ಡಿ ಗಲಬಿ, ಪ್ರಸನ್ನ ಗಡಾದ, ಗಾಳೆಪ್ಪ ಪೂಜಾರ್, ಭೀಮಣ್ಣ ಬೋಚನಹಳ್ಳಿ, ತೋಟಪ್ಪ ಹ್ಯಾಟಿ, ತೋಟಪ್ಪ ಸಿಂಟ್ರ, ದೇವಪ್ಪ ಹಳ್ಳಿ, ಪಂಪಣ್ಣ ಪೂಜಾರ, ಗುರುಬಸವರಾಜ ಹಳ್ಳಿಕೇರಿ, ಅನ್ವರ್ ಗಡಾದ, ಮಹಾಂತೇಶ ಕವಲೂರು, ನಾಗರಾಜ್ ಕಗ್ಗಲ, ಹೊನ್ನಕೇರಪ್ಪ ಕವಲೂರು, ಸುರೇಶ ದಾಸರೆಡ್ಡಿ, ಮಲ್ಲು ಪೂಜಾರ, ಪರಶುರಾಮ ಕೆರಳ್ಳಿ, ತಹಶೀಲ್ದಾರ ವಿಠ್ಠಲ್ ಚೌಗಲೆ, ತಾಪಂ ಇಓ ದುಂಡೇಶ, ಅಕ್ಬರ ಪಲ್ಟಾನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.