ಕನ್ನಡಪ್ರಭ ವಾರ್ತೆ ಯಳಂದೂರು
ಕುಡಿತವನ್ನೇ ಜೀವನ ಮಾಡಿಕೊಂಡರೆ ಸುಖ ಸಂಸಾರ ಬೀದಿಗೆ ಬರುವುದರ ಜೊತೆಗೆ ಕುಟುಂಬ ಸಂಕಷ್ಟಕ್ಕೆ ಸಿಲುಕಿಕೊಂಡು ಬೀದಿ ಪಾಲಾಗಬೇಕಾಗುತ್ತದೆ ಎಂದು ಚಾಮುಲ್ ಮಾಜಿ ಅಧ್ಯಕ್ಷ ನಾಗೇಂದ್ರ ಹೇಳಿದರು.ತಾಲೂಕಿನ ಗಂಗವಾಡಿ ಗ್ರಾಮದ ಶ್ರೀ ವೀರಭದ್ರೇಶ್ವರ ಸ್ವಾಮಿ ಜಾನಪದ ರಂಗಮಂದಿರದಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ಹಾಗೂ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಡಳಿ ಬೆಂಗಳೂರು, ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನ ಮುಕ್ತಿ ಮತ್ತು ಸಂಶೋಧನಾ ಕೇಂದ್ರ ಲೈಲಾ ಉಜಿರೆ. ಇವರ ಮಾರ್ಗದರ್ಶನದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಯಳಂದೂರು, ರೋಟರಿ ಸಂಸ್ಥೆ ಗ್ರೀನ್ ವೇ ಯಳಂದೂರು, ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರ ಬಿಳಿಗಿರಂಗನ ಬೆಟ್ಟ, ಸಾರ್ವಜನಿಕ ಆರೋಗ್ಯ ಕೇಂದ್ರ ಹಾಗೂ ಪೋಲಿಸ್ ಇಲಾಖೆ ಸ್ಥಳಿಯ ಗ್ರಾಮ ಪಂಚಾಯಿತಿ ಮತ್ತು ಹಾಲು ಉತ್ಪಾದಕರ ಸಹಕಾರ ಸಂಘ ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳ ಸಹಕಾರದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಮದ್ಯವರ್ಜನ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಿತ್ಯ ಕುಡಿಯುವುದನ್ನೇ ಕಾಯಕ ಮಾಡಿಕೊಂಡರೆ ಮನೆಯ ಸಂಸಾರ ಮೂರಾಬಟ್ಟೆಯಾಗುತ್ತದೆ. ಇದರಿಂದ ಸಂಪಾದಿಸಿದ ಕಾಸು ಹಾಳಾಗುವುದರ ಜೊತೆಯಲ್ಲಿ ಕುಟುಂಬದ ಮಾನ ಮರ್ಯಾದೆ ಬೀದಿಯಲ್ಲಿ ಹರಾಜಾಗುತ್ತದೆ. ಇದರಿಂದ ಮನೆಯಲ್ಲಿರುವ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆ ಉಂಟಾಗುತ್ತದೆ.ಮದ್ಯಪಾನ ಆರೋಗ್ಯಕ್ಕೆ ಹಾನಿಕರ ಆದರೂ ಅದನ್ನು ಕುಡಿಯುವುದು ತಪ್ಪು ಎಂದು ತಿಳಿದಿದ್ದರು ಅಮೂಲ್ಯವಾದ ಬದುಕನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.
ರಾಜ್ಯ ರೈತ ಸಂಘದ ಮುಖಂಡ ಹೊನ್ನೂರು ಪ್ರಕಾಶ್ ಮಾತನಾಡಿ, ಮನೆಗಳಲ್ಲಿ ಸಿಗುವ ಧಾನ್ಯಗಳ ಮೂಲಕ ವೈನ್ ತಯಾರಿಸಿಕೊಂಡು ಕುಡಿಯುವುದರಿಂದ ಆರೋಗ್ಯಕ್ಕೆ ಉತ್ತಮವಾಗಿರುತ್ತದೆ. ಆದರೆ ರಾಸಾಯನಿಕ ಕುಡಿತದಿಂದ ಅನಾರೋಗ್ಯಕ್ಕೆ ಸಿಲುಕಿ ಕುಟುಂಬವನ್ನು ಬೀದಿಗೆ ಬರಬೇಕಾದ ಸ್ಥಿತಿ ನಿರ್ಮಾಣವಾಗುತ್ತದೆ. ಸರ್ಕಾರ ಪ್ರತಿ ಬಾರಿಯೂ ಮದ್ಯ ಮಾರಾಟವನ್ನು ನಿಷೇಧಿಸಲಾಗುವುದೆಂದು ಹೇಳುತ್ತದೆ. ಆದರೆ ಮದ್ಯ ಮಾರಾಟ ನಿಲ್ಲಿಸಿದರೆ ಸರ್ಕಾರದ ಆದಾಯಕ್ಕೆ ಕುತ್ತು ಬರುತ್ತದೆಂದು ಅವರು ನಿಲ್ಲಿಸುವುದಿಲ್ಲ ಎಂದು ಹೇಳಿ ಆಕ್ರೋಶ ವ್ಯಕ್ತಪಡಿಸಿದರು.ಕಾರ್ಯಕ್ರಮದಲ್ಲಿ ಮದ್ಯ ವ್ಯಸನ ಮುಕ್ತ ಸಮಿತಿ ಗೌರವ ಅಧ್ಯಕ್ಷ ಕೆ ವೆಂಕಟರಂಗಯ್ಯ, ಜೆಡಿಎಸ್ ಮುಖಂಡ ಬಿ ಪುಟ್ಟಸ್ವಾಮಿ, ಗುಂಬಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಪುಟ್ಟ ಮಾದೇವಿ, ತಾಲೂಕು ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ಅಂಬಳೆ ವೀರಭದ್ರ ನಾಯಕ, ಕಸಾಪ ಅಧ್ಯಕ್ಷ ಯರಿಯೂರು ನಾಗೇಂದ್ರ, ಜಿಲ್ಲಾ ದಲಿತ ಸಂಘರ್ಷ ಸಮಿತಿಯ ಸಂಚಾಲಕ ಸಿ ರಾಜಣ್ಣ, ಸವಿತಾ ಸಮಾಜ ತಾಲೂಕು ಅಧ್ಯಕ್ಷ ಶ್ರೀಕಂಠ ಮೂರ್ತಿ, ಯರಗಂಬಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೋಭಾ, ಧರ್ಮಸ್ಥಳ ಜಿಲ್ಲಾ ನಿರ್ದೇಶಕ ದಿನೇಶ್, ಡಿಸಿ ಬಾಬು, ಬಿಳಿಗಿರಿರಂಗನಾಥ ಸ್ವಾಮಿ ಬೆಟ್ಟದ ದೇವಸ್ಥಾನ ಸಮಿತಿ ಅಧ್ಯಕ್ಷ ಜೆ ಶ್ರೀನಿವಾಸ್, ಬ್ಯಾಂಕ್ ಉಪಾಧ್ಯಕ್ಷ ಭೀಮಪ್ಪ, ದುಗ್ಗಟ್ಟಿ ವೀರಭದ್ರಪ್ಪ, ರೋಟರಿ ಅಧ್ಯಕ್ಷ ಪ್ರಕಾಶ್, ರೋಟರಿ ಕಾರ್ಯದರ್ಶಿ ನಿರಂಜನ್, ಮೈಸೂರು ವಿಭಾಗದ ದೇವೇಂದ್ರ ಹಾಗೂ ತಾಲೂಕು ಯೋಜನೆ ಅಧಿಕಾರಿ ಆನಂದ ಗೌಡ, ಶಿಬಿರಾರ್ಥಿ ವಿದ್ಯಾಧರ ಮತ್ತು ತಾಲೂಕಿನ ಎಲ್ಲಾ ಮೇಲ್ವಿಚಾರಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.