ಯಲ್ಲಾಪುರ: ದೇವರಲ್ಲಿ ಭಕ್ತಿಯ ಜತೆ ಭಯವೂ ಇರಬೇಕು. ಅಂದಾಗ ಮಾತ್ರ ನಾವು ಸನ್ಮಾರ್ಗದಲ್ಲಿ ಸಾಗುವುದಕ್ಕೆ ಸಾಧ್ಯ. ಆದ್ದರಿಂದಲೇ ಭಕ್ತಿಗೆ, ನಂಬಿಕೆಗೆ ಪಾತ್ರವಾದ ಧರ್ಮಸ್ಥಳ ಮಂಜುನಾಥ ಸ್ವಾಮಿ ಕಾರಣನಾಗಿದ್ದಾನೆ. ಕ್ಷೇತ್ರದಿಂದ ವಿಭಿನ್ನ ಯೋಜನೆಯ ಮೂಲಕ ಪರ್ಯಾಯ ಸರ್ಕಾರದಂತೆ ಕಾರ್ಯನಿರ್ವಹಿಸುತ್ತಿದೆ ಎಂದು ಸಂಕಲ್ಪ ಸೇವಾ ಸಂಸ್ಥೆಯ ಅಧ್ಯಕ್ಷ ಪ್ರಮೋದ ಹೆಗಡೆ ಹೇಳಿದರು.
ನಿಸ್ವಾರ್ಥದಿಂದ ಸಲ್ಲಿಸುತ್ತಿರುವ ಸೇವೆ ದೇವರಿಗೆ ಪ್ರಿಯವಾಗುತ್ತದೆ. ಸಮಾಜ ಇದನ್ನು ನೋಡಿ ಕಲಿಯಬೇಕು. ಸರ್ಕಾರದ ಮಟ್ಟದಲ್ಲಿ ಇಂತಹ ಕಾರ್ಯಕರ್ತರಿದ್ದರೆ ದೇಶದ ಪ್ರಗತಿ ಎಂದೋ ಪರಿಪೂರ್ಣತೆಯತ್ತ ಸಾಗುತ್ತಿತ್ತು. ಮದ್ಯವ್ಯಸನ ಸಮಾಜದ ಬಹುದೊಡ್ಡ ಕಂಟಕ. ಮದ್ಯದ ನಶೆಯಲ್ಲಿ ಕುಟುಂಬದ ಸ್ವಾಸ್ಥ್ಯ ಹಾಳಾಗುತ್ತದೆ. ಇಂತಹ ಮದ್ಯವರ್ಜನ ಶಿಬಿರದ ಮೂಲಕ ಮನಪರಿವರ್ತನೆ ಕಾರ್ಯ ಕ್ಷೇತ್ರದಿಂದ ಆಗುತ್ತಿದೆ ಎಂದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ. ಟ್ರಸ್ಟ್ ಜಿಲ್ಲಾ ನಿರ್ದೇಶಕ ದಿನೇಶ ಎಂ. ಮಾತನಾಡಿ, ಮನುಷ್ಯನಿಗೆ ಸಂಸ್ಕಾರ ನೀಡಿದರೆ ದೇವಮಾನವನಾಗಿ ಮಾಡಬಹುದು ಎಂಬುದನ್ನು ಮದ್ಯವರ್ಜನ ಶಿಬಿರ ನಿರೂಪಿಸಿದೆ. ಧರ್ಮ ಒಳ್ಳೆಯ ದಾರಿಯನ್ನೇ ತೋರುತ್ತದೆ. ನಾವು ಬೆಳೆಯುತ್ತ ದುಶ್ಚಟಗಳಿಗೆ ದಾಸರಾಗುತ್ತೇವೆ. ಅಂಗಾಂಗಗಳಿಗೆ ₹೧೦ ಕೋಟಿಗೂ ಹೆಚ್ಚು ಬೆಲೆಯಿದೆ. ಹಲವರಿಗೆ ಮದ್ಯಪಾನದ ಮೂಲಕ ಇಂತಹ ಬೆಲೆ ಬಾಳುವ ಅಮೂಲ್ಯ ವಸ್ತುವನ್ನು ನಾಶ ಮಾಡುಕೊಳ್ಳುತ್ತಿದ್ದೇವೆಂಬ ಅರಿವು ಇರುವುದಿಲ್ಲ. ದುಶ್ಚಟ ತೊರೆದು ಮನುಷ್ಯರಾಗಬಯಸುವವರಿಗೆ ಮದ್ಯವರ್ಜನ ಶಿಬಿರ ದಾರಿದೀಪವಾಗಲಿದೆ ಎಂದರು.ವಿಕಾಸ ಬ್ಯಾಂಕ್ ಅಧ್ಯಕ್ಷರು, ೨೧೧೪ನೇ ಮದ್ಯವರ್ಜನ ಶಿಬಿರದ ವ್ಯವಸ್ಥಾಪಾನಾ ಸಮಿತಿ ಅಧ್ಯಕ್ಷರೂ ಆದ ಮುರಳಿ ಹೆಗಡೆ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಶ್ರೀರಂಗ ಕಟ್ಟಿ, ಪ್ರಸಾದ ಹೆಗಡೆ, ನರ್ಮದಾ ನಾಯ್ಕ, ಶ್ಯಾಮಿಲಿ ಪಾಟಣಕರ್, ರಮೇಶ ಕೆ., ಡಿ.ಎನ್. ಗಾಂವ್ಕರ್, ಗಜಾನನ ನಾಯ್ಕ, ಎಸ್.ಎನ್. ಭಟ್ಟ ಏಕಾನ, ಲೋಕನಾಥ ಗಾಂವ್ಕರ್, ಎಂ.ಎಸ್. ಹೆಗಡೆ, ಕುಮುದಾ ಸಾಹಣಿ, ಸುಮಂಗಲಾ ಭಟ್ಟ, ಮಾಲಾ, ಸುಭಾಸ ನಾಯ್ಕ ಮತ್ತಿತರರು ವೇದಿಕೆಯಲ್ಲಿದ್ದರು.