೧೦ಕ್ಕೆ ಆಲೆಮನೆ ಶಾಲಾ ಶತಮಾನೋತ್ಸವ:ರಾಮಸ್ವಾಮಿ

KannadaprabhaNewsNetwork | Published : Feb 6, 2025 11:45 PM

ಸಾರಾಂಶ

ಕೊಪ್ಪ, ತಾಲೂಕಿನ ಆಲೆಮನೆ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯು ೧೦೦ ವರ್ಷಗಳನ್ನು ಪೂರೈಸಿದ್ದು, ಈ ಪ್ರಯುಕ್ತ ಫೆ.೧೦ ರಂದು ಶತಮಾನೋತ್ಸವ ಕಾರ‍್ಯಕ್ರಮ ಆಯೋಜಿಸಲಾಗಿದೆ ಎಂದು ಶತಮಾನೋತ್ಸವ ಆಚರಣಾ ಸಮಿತಿ ಗೌರವಾಧ್ಯಕ್ಷ ಎಸ್.ಎನ್.ರಾಮಸ್ವಾಮಿ ಹೇಳಿದರು.

೦೦ ವರ್ಷಗಳನ್ನು ಪೂರೈಸಿದ ಶಾಲೆಯಲ್ಲಿ ಕಾರ್ಯಕ್ರಮ । ಆಹ್ವಾನ ಪತ್ರಿಕೆ ಬಿಡುಗಡೆ

ಕನ್ನಡಪ್ರಭ ವಾರ್ತೆ, ಕೊಪ್ಪ

ತಾಲೂಕಿನ ಆಲೆಮನೆ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯು ೧೦೦ ವರ್ಷಗಳನ್ನು ಪೂರೈಸಿದ್ದು, ಈ ಪ್ರಯುಕ್ತ ಫೆ.೧೦ ರಂದು ಶತಮಾನೋತ್ಸವ ಕಾರ‍್ಯಕ್ರಮ ಆಯೋಜಿಸಲಾಗಿದೆ ಎಂದು ಶತಮಾನೋತ್ಸವ ಆಚರಣಾ ಸಮಿತಿ ಗೌರವಾಧ್ಯಕ್ಷ ಎಸ್.ಎನ್.ರಾಮಸ್ವಾಮಿ ಹೇಳಿದರು.

ಬುಧವಾರದಂದು ಶಾಲೆಯಲ್ಲಿ ಆಹ್ವಾನ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಶಾಲೆ ೧೯೦೫ರಲ್ಲಿ ಮಿಷನರಿ ಶಾಲೆಯಾಗಿ ಆರಂಭಗೊಂಡಿದ್ದು ಸೂರ‍್ಯದೇವಸ್ಥಾನದಲ್ಲಿ ಕಾರ್ಯಾಚರಿಸುತ್ತಿತ್ತು. ೧೯೨೪ರಲ್ಲಿ ಮೈಸೂರಿನ ಅರಸರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ರಾಜ್ಯದಲ್ಲಿ ೬೦೦೦ ಕನ್ನಡ ಶಾಲೆಗಳನ್ನು ಆರಂಭಿಸಿದ್ದು ಅದರಲ್ಲಿ ಈ ಆಲೆಮನೆ ಶಾಲೆಯೂ ಒಂದು. ಸರ್ಕಾರಿ ಕಟ್ಟಡದಲ್ಲಿ ಶಾಲೆ ಆರಂಭವಾದ ಅಧಿಕೃತ ದಾಖಲೆಗಳ ಪ್ರಕಾರ ಫೆ.೧೦ರಂದು ಶತಮಾನೋತ್ಸವ ಕಾರ‍್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾಜ್, ವಿಧಾನ ಪರಿಷತ್ ಉಪ ಸಭಾಪತಿ ಎಂ.ಕೆ.ಪ್ರಾಣೇಶ್ ಉಪಸ್ಥಿತರಿರಲಿದ್ದಾರೆ ಎಂದು ಮಾಹಿತಿ ನೀಡಿದರು.

ಶತಮಾನೋತ್ಸವ ಸಮಿತಿ ಅಧ್ಯಕ್ಷ ಎ.ಓ.ಸುರೇಶ್ ಅಧ್ಯಕ್ಷತೆ ವಹಿಸುವರು. ಶಿಕ್ಷಣ ಸಚಿವ ಮಧು ಬಂಗಾರಪ್ಪ ಶತ ಮಾನೋತ್ಸವ ಉದ್ಘಾಟಿಸಲಿದ್ದಾರೆ. ಶಾಸಕ ಟಿ.ಡಿ.ರಾಜೇಗೌಡ ಶಿಕ್ಷಕರನ್ನು ಸನ್ಮಾನಿಸಲಿದ್ದಾರೆ. ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಸ್ಮರಣ ಸಂಚಿಕೆ ಬಿಡುಗಡೆಗೊಳಿಸುವರು. ಡಿಐಜಿಪಿ ರವಿ ಡಿ.ಚನ್ನಣ್ಣನವರ್ ವಿಶೇಷ ಅತಿಥಿಗಳಾಗಿದ್ದಾರೆ. ಹೊಸ ನಗರದ ಸರ್ಕಾರಿ ಪ್ರಥಮ ದರ್ಜೆಕಾಲೇಜು ಕನ್ನಡ ವಿಭಾಗದ ಮುಖ್ಯಸ್ಥ ಕೆ.ಶ್ರೀಪತಿ ಹಳಗುಂದ ಪ್ರಧಾನ ಭಾಷಣ ಮಾಡಲಿದ್ದಾರೆ ಎಂದು ತಿಳಿಸಿದರು.

ಸಂಜೆ ೪ ಗಂಟೆಗೆ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಗುರುಮೂರ್ತಿ ಅಧ್ಯಕ್ಷತೆಯಲ್ಲಿ ಸಮಾರೋಪ ನಡೆಯಲಿದ್ದು, ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಎಚ್.ಎಂ.ರವಿಕಾಂತ್ ಬಹುಮಾನ ವಿತರಿಸಲಿದ್ದಾರೆ. ಕ್ಷೇತ್ರ ಶಿಕ್ಷಣ ಸಮನ್ವಯ ಅಧಿಕಾರಿ ಯಶೋಧ ಸಮಾರೋಪ ಭಾಷಣ ಮಾಡಲಿದ್ದಾರೆ. ೫ ಗಂಟೆಗೆ ಶಾಲಾ ಮಕ್ಕಳಿಂದ ಸಂಸ್ಕೃತಿಕ ಕಾರ‍್ಯಕ್ರಮ, ೭ ಗಂಟೆಗೆ ಕನ್ನಡದ ಖ್ಯಾತ ಸಂಗೀತ ಗಾಯಕರಾದ ದಿಯಾ ಹೆಗಡೆ, ಸುರೇಖಾ ಹೆಗಡೆ, ಶಶಿಕಿರಣ್ ಭಟ್, ಪ್ರೀತಮ್ ಸಂಗೀತ ಸಂಜೆ ಕಾರ‍್ಯಕ್ರಮ ನಡೆಯಲಿದೆ ಎಂದು ಹೇಳಿದರು.

ಶತಮಾನೋತ್ಸವ ಆಚರಣಾ ಸಮಿತಿ ಸಂಚಾಲಕ ಎಚ್.ಎಂ.ರವಿಕಾಂತ್ ಮಾತನಾಡಿ ಶಾಲೆ ಹಳೆ ವಿದ್ಯಾರ್ಥಿ ಗಳು, ದಾನಿಗಳು, ಶತಮಾನೋತ್ಸವ ಕಾರ‍್ಯಕ್ರಮಕ್ಕೆ ಸಹಕಾರ ನೀಡಿದ್ದು ಈಗಾಗಲೇ ಶಾಲೆಯಲ್ಲಿ ಸುಮಾರು ೫ ಲಕ್ಷ ವೆಚ್ಚದಲ್ಲಿ ಅಭಿವೃದ್ಧಿ ಕಾರ‍್ಯ ನಡೆದಿವೆ. ವಿದ್ಯಾರ್ಥಿಗಳಿಗೆ ಸೌಲಭ್ಯ ಒದಗಿಸಲು ಶಾಶ್ವತ ನಿಧಿ ಸ್ಥಾಪಿಸಬೇಕೆಂಬುದು ಶತಮಾನೋತ್ಸವ ಆಚರಣಾ ಸಮಿತಿ ಉದ್ದೇಶ ಎಂದರು.

ಅಧ್ಯಕ್ಷ ಎ.ಓ.ಸುರೇಶ್ ಆಲೆಮನೆ, ಎಚ್.ಎಸ್.ರಮೇಶ್, ಖಜಾಂಚಿ ಶಂಕರನಾರಾಯಣ ಉಡುಪ, ಪ್ರಚಾರ ಸಮಿತಿ ಎಚ್.ಕೆ. ವಿಶ್ವ ಹೊಸ್ಕೇರಿ, ಆಹಾರ ಸಮಿತಿ ಚಂದ್ರೆಗೌಡ, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಗುರುಮೂರ್ತಿ, ಶತಮಾನೋತ್ಸವ ಆಚರಣೆ ವಿವಿಧ ಸಮಿತಿಗಳ ಪದಾಧಿಕಾರಿಗಳಾದ ಮಂಜುನಾಥ್, ಸುಧಾಕರ್, ಸುರೇಂದ್ರ.ಟಿ.ಆರ್., ಗೋಪಾಲಕೃಷ್ಣ, ಹಿರೇಕೊಡಿಗೆ ಗ್ರಾಪಂ ಸದಸ್ಯ ರವೀಂದ್ರ ಮತ್ತಿತರರು ಇದ್ದರು.

Share this article