ಕನ್ನಡಪ್ರಭ ವಾರ್ತೆ ಕಲಬುರಗಿ
ವಿಶ್ವ ಮೆಚ್ಚಿದ ನಾಯಕ ನರೇಂದ್ರ ಮೋದಿಯವರ ಆಡಳಿತವನ್ನು ಮೆಚ್ಚಿ ಕಾಂಗ್ರೆಸ್ಸಿನ ನಾಯಕರೆಲ್ಲ ದಂಡು ದಂಡಾಗಿ ಬಿಜೆಪಿಗೆ ಪಕ್ಷಾಂತರವಾಗುತ್ತಿರುವುದರಿಂದ ಕಾಂಗ್ರೆಸ್ ಗೆ ದಿಗಿಲುಂಟಾಗಿದೆ ಎಂದು ಲೋಕಸಭಾ ಸದಸ್ಯರಾದ ಡಾ.ಉಮೇಶ್ ಜಾಧವ್ ಹೇಳಿದರು.ಕಲಬುರ್ಗಿಯಲ್ಲಿ ಗುರುವಾರ ನಡೆದ ದಕ್ಷಿಣ ಮಂಡಲದ ಪಟ್ಟಣ ಮಹಾಶಕ್ತಿ ಕೇಂದ್ರದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ರಾಹುಲ್ ಗಾಂಧಿಯವರ ಜೊತೆ ಪಾದಯಾತ್ರೆ ಮಾಡಿದವರು ಮತ್ತು ಕರ್ನಾಟಕದಲ್ಲಿ ಮುಖ್ಯಮಂತ್ರಿಗಳ ಪರಮಾಪ್ತರು ಎಲ್ಲರೂ ಕೂಡ ಕಾಂಗ್ರೆಸ್ ತ್ಯಜಿಸಿ ರಾಷ್ಟ್ರಕ್ಕೆ ಮೋದಿ ಬೇಕೆಂಬ ಒಂದೇ ಉದ್ದೇಶದಿಂದ ಬಿಜೆಪಿಗೆ ಪಕ್ಷಾಂತರ ಹೊಂದಿ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಮೋದಿಯವರ ಜೊತೆ ಕೈಜೋಡಿಸಲು ಸಿದ್ಧರಾಗಿದ್ದಾರೆ. ಇಂತಹ ಬೆಳವಣಿಗೆ ಕಲಬುರ್ಗಿ ಜಿಲ್ಲೆಯಲ್ಲೂ ಕಂಡುಬರುತ್ತಿದೆ. 2047 ಕ್ಕೆ ಭಾರತವನ್ನು ವಿಶ್ವದಲ್ಲಿ ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿಸಲು ಎಲ್ಲರೂ ಮೋದಿ ಪರವಾಗಿ ಧ್ವನಿ ಎತ್ತುತ್ತಿದ್ದು ಈ ಚುನಾವಣೆಯಲ್ಲಿ ರಾಷ್ಟ್ರದಲ್ಲಿ ಮೋದಿ ಅಲೆ ಪ್ರಬಲವಾಗಿದೆ ಎಂದು ಹೇಳಿದರು.
ಕಾಂಗ್ರೆಸ್ 65 ವರ್ಷಗಳ ಆಡಳಿತದಲ್ಲಿ ಏನು ಮಾಡಲಿಲ್ಲ. ಈಗ ಬಿಜೆಪಿಯನ್ನು ಅಭಿವೃದ್ಧಿ ಶೂನ್ಯ ಎಂದು ಟೀಕಿಸುವುದು ಹಾಸ್ಯಾಸ್ಪದ ಸ್ವತಃ ಮಲ್ಲಿಕಾರ್ಜುನ ಖರ್ಗೆಯವರು ರೈಲ್ವೆ ಸಚಿವರಾಗಿದ್ದರೂ ಒಂದು ರೈಲು ಗಾಡಿ ಕಲಬುರ್ಗಿಗೆ ಕೊಡಲಿಲ್ಲ. ರೈಲು ನಿಲ್ದಾಣಗಳ ಅಭಿವೃದ್ಧಿ ಮಾಡಲಿಲ್ಲ. ಎಂ ಎಸ್ ಕೆ ಮಿಲ್ ಮುಚ್ಚಿದ್ದಲ್ಲದೆ ಯಾವುದೇ ಹೊಸ ಯೋಜನೆ ನೀಡಲಿಲ್ಲ. ಹೊನ್ನಕಿರಣಗಿಯಲ್ಲಿ ಒಂದು ಲಕ್ಷ ಜನರಿಗೆ ಉದ್ಯೋಗ ಕೊಡುವ ಮೆಗಾ ಜವಳಿ ಪಾರ್ಕ್, ಭಾರತ್ ಮಾಲಾ ರಸ್ತೆ, ಎರಡು ಕೋಟಿ ರೂಪಾಯಿ ವೆಚ್ಚದಲ್ಲಿ ಸುಲೇಪೇಟದಲ್ಲಿ ನೂತನ ಅಂಚೆ ಕಚೇರಿ, ರಾಷ್ಟ್ರೀಯ ಹೆದ್ದಾರಿ ನಿರ್ಮಾಣ,1475 ಕೋಟಿ ರೂ. ವೆಚ್ಚದ ಚೆನ್ನೈ- ಸೂರತ್ ಭಾರತ್ ಮಾಲಾ ರಸ್ತೆ , ವಂದೇ ಭಾರತ್ ರೈಲು ಆರಂಭಿಸಿದ ಬಿಜೆಪಿ ಕೆಲಸ ಇವುಗಳೆಲ್ಲ ಕಾಂಗ್ರೆಸ್ಸಿನ ಕಣ್ಣಿಗೆ ಕಾಣುತ್ತಿಲ್ಲ. ಇದು ಅಭಿವೃದ್ಧಿ ಅಲ್ಲವೇ? ಎಂದು ಜಾಧವ್ ಖಾರವಾಗಿ ಪ್ರಶ್ನಿಸಿದರು.ಮೋದಿ ಅವರು ನೀಡುವ 5 ಕೆಜಿ ಅಕ್ಕಿಯನ್ನು ನಾವೇ ನೀಡುತ್ತಿರುವುದಾಗಿ ಹೇಳುವ ಕಾಂಗ್ರೆಸ್ಸಿನ ಸುಳ್ಳು ಈಗ ಬಯಲಾಗಿದೆ. ಕಲ್ಬುರ್ಗಿ ಜಿಲ್ಲೆಯನ್ನು ಕ್ರಿಮಿನಲ್ ಜಿಲ್ಲೆಯನ್ನಾಗಿ ಪರಿವರ್ತಿಸಿದ ಕಾಂಗ್ರೆಸ್ಸಿನ ಆಡಳಿತದಿಂದ ಜನರು ಬೇಸತ್ತು ಹೋಗಿದ್ದಾರೆ. ಮರಳು ಮಾಫಿಯಾ, ಅಕ್ರಮ ದಂಧೆಗಳಿಗೆ ಬೆಂಬಲಿಸಲು ಸರಕಾರಿ ನೌಕರರ ಮೇಲೆ ಒತ್ತಡ, ಬಿಜೆಪಿ ಕಾರ್ಯಕರ್ತರ ಮೇಲೆ ಸುಳ್ಳು ಮೊಕದ್ದಮೆ, ಎಫ್ ಐ ಆರ್ ದಾಖಲು, ಗಡಿ ಪಾರು ಶಿಕ್ಷೆ ಮುಂತಾಗಿ ಹಿಂಸೆ ನೀಡುತ್ತಿರುವುದು ನಾಗರಿಕರಿಗೆ ಮನವರಿಕೆಯಾಗಿದೆ ಎಂದರು.
ಮೇಯರ್ ವಿಶಾಲ್ ದರ್ಗಿ ಕೃಷ್ಣಾ ಜಿ ಕುಲಕರ್ಣಿ, ವಿಧಾನ ಪರಿಷತ್ ಸದಸ್ಯರಾದ ಬಿ.ಜಿ ಪಾಟೀಲ್, ಕಲ್ಬುರ್ಗಿ ಬಿಜೆಪಿ ನಗರ ಅಧ್ಯಕ್ಷರಾದ ಚಂದು ಪಾಟೀಲ್, ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರು ಮಾತನಾಡಿದರು. ಕಾರ್ಯಕ್ರಮದಲ್ಲಿ ಉಮೇಶ್ ಪಾಟೀಲ್, ಶಿವಯೋಗಿ ನಾಗನಹಳ್ಳಿ, ಮಹಾದೇವ ಬೆಳಮಗಿ, ಸಂಜಯ್ ಮಿಸ್ಕಿನ್, ರಾಮಚಂದ್ರ ಕುಂಕುಮಕರ್, ಸುಭಾಷ್ ಓಗಿ, ಚಂದ್ರಶೇಖರ್ ಅಂಬ, ಮಲ್ಲಿಕಾರ್ಜುನ್ ಚೋರ್ ಬಸ್ತಿ, ಅನಿಲ್ ಕುಮಾರ್ ಡಂಗೆ ಮಲ್ಲಿಕಾರ್ಜುನ್ ಕಾಟೆ, ಅರುಣ್ ಕುಮಾರ್ ಓಗಿ ,ಚಂದ್ರಶೇಖರ್ ಜಾನೆ, ವೆಂಕಟೇಶ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.