ಎಸ್‌ಎಸ್‌ ಕೈಲಾಸ ಸಮಾರಾಧನೆಗೆ ಸಮಸ್ತ ಗುರು-ವಿರಕ್ತರು

KannadaprabhaNewsNetwork |  
Published : Dec 19, 2025, 01:45 AM IST
(ಸಾಂದರ್ಭಿಕ ಚಿತ್ರ) | Kannada Prabha

ಸಾರಾಂಶ

ಕಾಂಗ್ರೆಸ್‌ ಹಿರಿಯ ಶಾಸಕ, ದಾವಣಗೆರೆ ಧಣಿ ಖ್ಯಾತಿಯ ಶಿಕ್ಷಣಪ್ರೇಮಿ ಡಾ.ಶಾಮನೂರು ಶಿವಶಂಕರಪ್ಪ ನಿಧನರಾಗಿದ್ದು, ಶ್ರೀ ಕಲ್ಲೇಶ್ವರ ಮಿಲ್‌ನ ಆವರಣದಲ್ಲಿರುವ ಅವರ ಕ್ರಿಯಾ ಸಮಾಧಿಗೆ ಡಿ.26ರಂದು 13ನೇ ದಿನ ಸಾರ್ವಜನಿಕರಿಗಾಗಿ ಶಿವಗಣಾರಾಧನೆ ಹಾಗೂ ಶ್ರದ್ಧಾಂಜಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದು ಸಂಸದೆ, ಶಾಮನೂರು ಕಿರಿಯ ಸೊಸೆ ಡಾ.ಪ್ರಭಾ ಮಲ್ಲಿಕಾರ್ಜುನ ಹೇಳಿದ್ದಾರೆ.

- ಸೋನಿಯಾ, ರಾಹುಲ್‌, ಖರ್ಗೆ ಸೇರಿದಂತೆ ರಾಜಕೀಯ ನಾಯಕರು, ಗಣ್ಯರು ಭಾಗಿ: ಸಂಸದೆ ಡಾ.ಪ್ರಭಾ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಕಾಂಗ್ರೆಸ್‌ ಹಿರಿಯ ಶಾಸಕ, ದಾವಣಗೆರೆ ಧಣಿ ಖ್ಯಾತಿಯ ಶಿಕ್ಷಣಪ್ರೇಮಿ ಡಾ.ಶಾಮನೂರು ಶಿವಶಂಕರಪ್ಪ ನಿಧನರಾಗಿದ್ದು, ಶ್ರೀ ಕಲ್ಲೇಶ್ವರ ಮಿಲ್‌ನ ಆವರಣದಲ್ಲಿರುವ ಅವರ ಕ್ರಿಯಾ ಸಮಾಧಿಗೆ ಡಿ.26ರಂದು 13ನೇ ದಿನ ಸಾರ್ವಜನಿಕರಿಗಾಗಿ ಶಿವಗಣಾರಾಧನೆ ಹಾಗೂ ಶ್ರದ್ಧಾಂಜಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದು ಸಂಸದೆ, ಶಾಮನೂರು ಕಿರಿಯ ಸೊಸೆ ಡಾ.ಪ್ರಭಾ ಮಲ್ಲಿಕಾರ್ಜುನ ಹೇಳಿದರು.

ಕಾರ್ಯಕ್ರಮಕ್ಕೆ ಪಂಚಾಚಾರ್ಯರು, ಶಿವಾಚಾರ್ಯರು, ಗುರು-ವಿರಕ್ತರು, ಕಾಂಗ್ರೆಸ್‌ ಹೈಕಮಾಂಡ್‌ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳಾದ ಡಾ.ಶಿವರಾಜ ಪಾಟೀಲ್‌ ಸೇರಿದಂತೆ ಅನೇಕರ ಗಣ್ಯರು, ಹಿರಿಯರು, ನಾಯಕರು ಆಗಮಿಸುತ್ತಾರೆ. ವಿವಿಐಪಿಗಳ ಪಟ್ಟಿ ಮಾಡುತ್ತಿದ್ದೇವೆ. ಎಲ್ಲ ಕ್ಷೇತ್ರದಲ್ಲೂ ಇರುವ ಅಪ್ಪಾಜಿ ಆತ್ಮೀಯರು ಸಹ ಆಗಮಿಸುತ್ತಾರೆ ಎಂದರು. ನಮ್ಮ ಇಡೀ ಕ್ಷೇತ್ರದಿಂದ ಹಿತೈಷಿಗಳು, ಬೆಂಬಲಿಗರು, ಕಾರ್ಯಕರ್ತರು, ಸಾರ್ವಜನಿಕರು ಸಮಾರಂಭಕ್ಕೆ ಬಂದು ಹೋಗಲು ಸೂಕ್ತ ವ್ಯವಸ್ಥೆ ಮಾಡಲಾಗುವುದು. ವೇದಿಕೆ ನಿರ್ಮಾಣ ಕಾರ್ಯವೂ ನಡೆಯಲಿದೆ. ಇನ್ನು 2 ದಿನದಲ್ಲೇ ಯಾರೆಲ್ಲಾ ಬರುತ್ತಾರೆಂಬುದು ಸ್ಪಷ್ಟವಾಗುತ್ತದೆ. 95 ವರ್ಷ ತುಂಬು ಜೀವನ ನಡೆಸಿದ್ದ ಶಾಮನೂರು ಶಿವಶಂಕರಪ್ಪ ಅಪ್ಪಾಜಿಯವರು ಕಾಂಗ್ರೆಸ್ ಪಕ್ಷದ ನಿಷ್ಠಾವಂತರಾಗಿದ್ದವರು. ಕಾಂಗ್ರೆಸ್‌ನ ಕಾಯಂ ಖಜಾಂಚಿ ಆಗಿದ್ದವರು. ಅಪ್ಪಾಜಿಯವರ ನಿಷ್ಠೆ, ಪಕ್ಷದ ಮೇಲೆ ಅಪಾರ ಅಭಿಮಾನ ಹೊಂದಿದ್ದರು. ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾಗಿ ದುಡಿಯುತ್ತಿದ್ದರು. ಹಾಗಾಗಿ, ಎಲ್ಲರೂ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಡಾ.ಪ್ರಭಾ ಮಾಹಿತಿ ನೀಡಿದರು.

ಇಡೀ ಕುಟುಂಬದ ಜೊತೆಗೆ ಅನ್ಯೂನವಾಗಿದ್ದ ಅಪ್ಪಾಜಿ (ಶಾಮನೂರು ಶಿವಶಂಕರಪ್ಪ) ಅವರಿಲ್ಲದ ದಿನಗಳು ನಮಗೆಲ್ಲರಿಗೂ ನೋವುಂಟು ಮಾಡುತ್ತಿದೆ. ದಿನವಿಡೀ ಅಪ್ಪಾಜಿಯವರ ಜೊತೆಗೆ ಕಳೆದ ಕ್ಷಣಗಳು, ಸನ್ನಿವೇಶಗಳು, ಅವರೊಂದಿಗೆ ನಡೆದ ಮಾತುಕತೆಗಳನ್ನು ಪ್ರತಿ ಕ್ಷಣ ನಾವೆಲ್ಲರೂ ಮೆಲಕು ಹಾಕಿ, ಸಮಯ ಕಳೆಯುತ್ತಿದ್ದೇವೆ ಎಂದು ಕಿರಿಯ ಸೊಸೆ ಪ್ರಭಾ ಹೇಳಿದರು.

ಮಕ್ಕಳು, ಮೊಮ್ಮಕ್ಕಳು, ಮರಿ ಮೊಮ್ಮಕ್ಕಳು, ಅಳಿಯಂದಿರು, ಸೊಸೆಯಂದಿರು, ಅಭಿಮಾನಿಗಳು, ಬಳಗದವರು ಹೀಗೆ ಎಲ್ಲರೂ ಮನೆಯಲ್ಲಿದ್ದೇವೆ. ಹಂತ ಹಂತವಾಗಿ ಅಪ್ಪಾಜಿ ಬೆಳೆದಿದ್ದು, ಎಲ್ಲ ಕ್ಷೇತ್ರಗಳಿಗೂ ಸಲ್ಲಿಸಿದ ಸೇವೆ, ವಿವಿಧ ಸಮಾಜದವರು, ಮುಖಂಡರು, ಆತ್ಮೀಯರು ಬಂದು ನೆನಪುಗಳನ್ನು ಹೇಳಿಕೊಂಡು, ಸಾಂತ್ವನ ಹೇಳುತ್ತಿದ್ದಾರೆ. ನಮ್ಮ ಇಡೀ ಕುಟುಂಬದ ದೊಡ್ಡ ಶಕ್ತಿಯಾಗಿದ್ದರು ಅಪ್ಪಾಜಿ ಎಂದರು.

(ಬಾಕ್ಸ್‌) * ಶಿವಗಣರಾಧನೆಗೆ ಸಿದ್ಧತೆಗಳು - ಕಲ್ಲೇಶ್ವರ ಮಿಲ್‌ನ ಹಿಂಭಾಗದ 150 ಎಕರೆ ಪ್ರದೇಶದಲ್ಲಿ ಕಾರ್ಯಕ್ರಮ

- ಶಿವಗಣಾರಾಧನೆಗೆ ಗುರು-ವಿರಕ್ತರು, ವಿವಿಧ ಸಮುದಾಯಗಳ ಶ್ರೀಗಳು

- ಕಾಂಗ್ರೆಸ್, ಬಿಜೆಪಿ, ಜೆಡಿಎಸ್, ಜೆಡಿಯು ಸೇರಿದಂತೆ ಎಲ್ಲ ಪಕ್ಷಗಳ ನಾಯಕರು ಭಾಗಿ

- ಸೋನಿಯಾ ಗಾಂಧಿ, ರಾಗಾ, ಖರ್ಗೆ, ಸಿದ್ದು, ಡಿಕೆಶಿ ಇನ್ನಿತರ ಅನೇಕ ಗಣ್ಯರು ಭಾಗಿ

- ಅತಿಗಣ್ಯರ ಆಗಮನಕ್ಕಾಗಿ ಭರದಿಂದ 4 ಹೆಲಿಪ್ಯಾಡ್‌ಗಳ ನಿರ್ಮಾಣ ಕಾರ್ಯ

- ಸುಮಾರು 45ರಿಂದ 50 ಸಾವಿರಕ್ಕೂ ಅಧಿಕ ಜನರು ಕಾರ್ಯಕ್ರಮಕ್ಕೆ ಸೇರುವ ಸಾಧ್ಯತೆ

- ಎಲ್ಲ ಜಾತಿಗಳ ಮಠಾಧೀಶರಿಗೂ ಎಸ್‌ಎಸ್‌. ಶಿವಗಣರಾಧನೆಗೆ ಆಹ್ವಾನ

- - -

* 5ನೇ ದಿನದ ಶಿವಗಣಾರಾಧನೆ ನೆರವೇರಿಸಿದ ಕುಟುಂಬ ದಾವಣಗೆರೆ: ದಕ್ಷಿಣ ವಿಧಾನಸಭಾ ಕ್ಷೇತ್ರ ಶಾಸಕರಾಗಿದ್ದ ದಿ. ಶಾಮನೂರು ಶಿವಶಂಕರಪ್ಪನವರ ಕ್ರಿಯಾ ಸಮಾಧಿಗೆ ಕುಟುಂಬ ವರ್ಗದಿಂದ ಹಾಲು-ತುಪ್ಪ ಬಿಡುವ, ಎಡೆ ಹಿಡಿಯುವುದು ಸೇರಿದಂತೆ 5ನೇ ದಿನದ ಶಿವಗಣಾರಾಧನೆ ನಡೆದವು.

ನಗರದ ಶ್ರೀ ಕಲ್ಲೇಶ್ವರ ಮಿಲ್‌ನಲ್ಲಿ ಶಾಮನೂರು ಪುತ್ರಿಯರು, ಪುತ್ರರು, ಸೊಸೆಯಂದಿರು, ಮೊಮ್ಮಕ್ಕಳು, ಮರಿಮೊಮ್ಮಕ್ಕಳು ಸೇರಿದಂತೆ ಬಂಧು-ಬಳಗವು ದುಃಖತಪ್ತರಾಗಿಯೇ 5ನೇ ದಿನದ ಹಾಲು ತುಪ್ಪ ಬಿಡುವ ಕಾರ್ಯ ನೆರವೇರಿಸಿದರು.

ಶಾಮನೂರು ಶಿವಶಂಕರಪ್ಪನವರು ಇಷ್ಟಪಡುತ್ತಿದ್ದ ವಿಶೇಷವಾಗಿ ಸಿಹಿ ತಿನಿಸುಗಳಾದ ಹೋಳಿಗೆ, ಮೈಸೂರು ಪಾಕ್‌, ರಸಗುಲ್ಲಾ, ಹಲ್ವಾ, ಶ್ಯಾವಿಗೆ ಪಾಯಸ, ಗೋಧಿಹುಗ್ಗಿ, ಮುದ್ದೆ, ರೊಟ್ಟಿ, ಮುಳುಗಾಯಿ ಚಟ್ನಿ, ಚಿರೋಟಿ, ಸೀಖರಣೆ, ಪುಂಡಿಸೊಪ್ಪು, ಮುಳುಗಾಯಿ ಪಲ್ಯ, ಬಿಳಿ ಹೋಳಿಗೆ, ಕೋಸಂಬರಿ, ಮೆಣಸಿನಕಾಯಿ, ಇತರೆ ತಿಂಡಿ, ತಿನಿಸು, ಖಾರ ಇನ್ನಿತರೆ ಆಹಾರಗಳನ್ನು ತಯಾರಿಸಿ ಎಡೆಹಿಡಿದರು.

ಎಸ್‌ಎಸ್‌ ಪುತ್ರರು, ಹಿರಿಯ ಕೈಗಾರಿಕೋದ್ಯಮಿಗಳಾದ ಎಸ್.ಎಸ್.ಬಕ್ಕೇಶ, ಎಸ್.ಎಸ್.ಗಣೇಶ, ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ, ಪುತ್ರಿಯರಾದ ಡಾ.ಮಂಜುಳಾ ಶಿವಶಂಕರ, ಸುಧಾ ರಾಜೇಂದ್ರ ಪಾಟೀಲ್, ಡಾ.ಶೈಲಜಾ ಭಟ್ಟಾಚಾರ್ಯ, ಮೀನಾ ಡಾ.ಶರಣ ಪಾಟೀಲ್, ಸೊಸೆಯಂದಿರಾದ ಪ್ರೀತಿ ಬಕ್ಕೇಶ, ರೇಖಾ ಗಣೇಶ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ, ಅಣ್ಣನ ಮಗ ಡಾ. ಎಸ್.ಬಿ. ಮುರುಗೇಶ, ಮೊಮ್ಮಕ್ಕಳಾದ ಆಶಿಕ್‌ ಬಿ.ಶಾಮನೂರು, ಆದಿತ್ ಬಿ.ಶಾಮನೂರು, ಹರ್ಷತಾ ಬಿ.ಶಾಮನೂರು, ಅಭಿಜಿತ್ ಜಿ.ಶಾಮನೂರು, ಆಂಚಲ್ ಜಿ.ಶಾಮನೂರು, ಹರ್ಷತಾ ಜಿ.ಶಾಮನೂರು, ಸಮರ್ಥ ಎಂ.ಶಾಮನೂರು, ಡಾ.ಶ್ರೇಷ್ಠ ಎಂ.ಶಾಮನೂರು, ಶಿವ ಎಂ.ಶಾಮನೂರು, ಅಳಿಯಂದಿರು, ಮೊಮ್ಮಕ್ಕಳು, ಮರಿ ಮೊಮ್ಮಕ್ಕಳು, ಬಂಧು-ಬಳಗ, ಹಿತೈಷಿಗಳು ಇದ್ದರು.

- - -

(ಫೋಟೋ ಬರಲಿವೆ)

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒಳಮೀಸಲು ಹೆಚ್ಚಳ: ಸಿದ್ದು vs ಬೆಲ್ಲದ್‌ ಜಟಾಪಟಿ
ಎಚ್ಚೆತ್ತ ಬೆಂ.ವಿವಿ: ಲೋಪ ಸರಿಪಡಿಸಿ 400 ವಿದ್ಯಾರ್ಥಿಗಳ ಫಲಿತಾಂಶ ಪ್ರಕಟ