ಕನ್ನಡಪ್ರಭ ವಾರ್ತೆ ಶಿವಮೊಗ್ಗ
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಂಕೇತ್ ಸಾವಿನ ವಿಚಾರ ತಿಳಿದ ಕೂಡಲೇ ನಾನು ಎಸ್ಪಿ, ಡಿಸಿಗೆ ಕರೆ ಮಾಡಿ ಅವರಿಂದ ಮಾಹಿತಿ ಪಡೆದುಕೊಂಡು ಬಳಿಕ ನಾನು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಅವರಿಗೆ ಮಾಹಿತಿ ನೀಡಿದೆ. ಇಂತಹ ಘಟನೆ ಆಗಬಾರದು. ಆದರೂ, ಇಂತಹ ಘಟನೆ ನಡೆದು ಹೋಗಿದೆ. ಪರಿಹಾರ ಕಡಿಮೆ ಎನ್ನುವ ಬಗ್ಗೆ ಪ್ರತಿಕ್ರಿಯೆ ನೀಡಲ್ಲ. ಎಲ್ಲವನ್ನು ಪರಿಹಾರದಿಂದ ಲೆಕ್ಕ ಹಾಕಲು ಬರುವುದಿಲ್ಲ. ಮೃತ ಸಂಕೇತ್ ಸಹೋದರಿ ಸಹ್ಯಾದ್ರಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಆಕೆಗೆ ಅಗತ್ಯ ನೆರವು ನೀಡುತ್ತೇವೆ. ಸಂಕೇತ ತಂದೆ ಟ್ರ್ಯಾಕ್ಟರ್ ಚಾಲಕರಾಗಿದ್ದು, ಮಕ್ಕಳ ವಿದ್ಯಾಭ್ಯಾಸಕ್ಕೆ ಯಾವುದೇ ಸಹಕಾರ ಬೇಕಾದರೂ ನೀಡುವುದಾಗಿ ಹೇಳಿದ್ದೇವೆ ಎಂದು ತಿಳಿಸಿದರು
ಶಿವಮೊಗ್ಗದಂತಹ ಸೂಕ್ಷ್ಮ ಪ್ರದೇಶದಲ್ಲಿ ಇಂತಹ ವಿಚಾರಗಳಲ್ಲಿ ಎಲ್ಲರೂ ಪಕ್ಷಾತೀತವಾಗಿ ಸಹಕಾರ ನೀಡಿದ್ದಾರೆ. ಮುಂದೆ ಭವಿಷ್ಯದಲ್ಲಿ ಸಂಕೇತ್ ಕುಟುಂಬಕ್ಕೆ ಅಗತ್ಯ ಸಹಕಾರವನ್ನು ನೀಡುತ್ತೇವೆ. ವಿಶೇಷ ತರಗತಿಗಳನ್ನು ರಾತ್ರಿವರೆಗೂ ತೆಗೆದುಕೊಂಡ ನಂತರ ಪೋಷಕರಿಗೂ ಮಾಹಿತಿ ಕೊಟ್ಟಿರುತ್ತಾರೆ. ಪೋಷಕರು ಮಕ್ಕಳ ವಿಷಯದಲ್ಲಿ ಜವಾಬ್ದಾರಿ ತೆಗೆದುಕೊಳ್ಳಬೇಕು. ಮುಂದೆ ನಮ್ಮ ಮುಖಂಡರ ಜೊತೆಗೂಡಿ ಅವರ ಮನೆಗೆ ಭೇಟಿ ನೀಡಲಿದ್ದೇವೆ ಎದು ತಿಳಿಸಿದರು.ಗಾಂಜಾ, ಅಫೀಮು ಮೊದಲಾದವು ಹೊರದೇಶದಿಂದ ಬರುವಾಗ ಗಡಿಯಲ್ಲಿ ಯಾರು ಕಾವಲು ಕಾಯುತ್ತಾರೆ. ಕೆಡಿಪಿ ಸಭೆಗಳಲ್ಲಿ ಎಸ್ಪಿ ಅವರಿಗೆ ಗಾಂಜಾ ಹಾವಳಿ ನಿಯಂತ್ರಣ ಮಾಡಲು ಸೂಚನೆ ನೀಡಿದ್ದೇನೆ. ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ಪ್ರಕರಣ ದಾಖಲು ಮಾಡಿದ್ದಾರೆ. ಕೇಸ್ ಹಾಕಿದ ತಕ್ಷಣ ನಿಯಂತ್ರಣ ಸಾಧ್ಯ ಇಲ್ಲ. ಗಾಂಜಾ ಹಾವಳಿಯ ಬಗ್ಗೆ ಮುಖ್ಯಮಂತ್ರಿ ಗಮನಕ್ಕೂ ತಂದಿದ್ದೇವೆ. ರಾಜ್ಯದಲ್ಲಿಡೆ ಪ್ರವಾಸ ಮಾಡುವ ಸಂದರ್ಭದಲ್ಲಿ ಅಗತ್ಯ ಸೂಚನೆಗಳನ್ನು ಅಧಿಕಾರಿಗಳಿಗೆ ನೀಡುವಂತೆ ಕೋರಿದ್ದೇನೆ. ಗಾಂಜಾ, ಡ್ರಗ್ಸ್ ಹಾವಳಿ ನಿಯಂತ್ರಣಕ್ಕೆ ಎಲ್ಲರ ಸಹಕಾರ ಬೇಕು. ಗಾಂಜಾ ಹಾವಳಿ ನಿಯಂತ್ರಣ ಮಾಡುವ ಕೆಲಸ ಮಾಡಬೇಕು. ಶಿವಮೊಗ್ಗದ ಸೂಕ್ಷ್ಮವಾದ ಪ್ರದೇಶ. ಗಾಂಜಾ ಹಾವಳಿ ಬಗ್ಗೆ ರಾಜಕೀಯವಾಗಿ ಈಗ ಮಾತನಾಡಬಾರದು ಎಂದು ಪ್ರತಿಕ್ರಿಯಿಸಿದರು.
ಜಿಲ್ಲೆಯಲ್ಲಿ ಶಿಕ್ಷಕರೊಬ್ಬರ ಮೇಲೆ ಫೋಕ್ಸೋ ಪ್ರಕರಣವೊಂದು ದಾಖಲಾಗಿದೆ. ಅವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ಇತ್ತೀಚೆಗೆ ಖಾಸಗಿ ಬಸ್ ಅಗ್ನಿ ಅವಘಡಕ್ಕೆ ತುತ್ತಾಗಿರುವುದು ಕಂಡುಬಂದಿದೆ. ಖಾಸಗಿ ವಾಹನಗಳ ಸುರಕ್ಷತಾ ಪ್ರಯಾಣಕ್ಕೆ ಸಂಬಂಧಿಸಿದಂತೆ ಸಾರಿಗೆ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದರು.
ಜಿಲ್ಲೆಗೆ ಬಜೆಟ್‌ನಲ್ಲಿ ಅನುದಾನ ನಿರೀಕ್ಷೆಸೋಮವಾರ ನನ್ನ ಜನುಮ ದಿನವಿದೆ. ಹೀಗಾಗಿ ನಮ್ಮ ಕಡೆಯವರು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಸೊರಬದ ಸುಮಾರು 36 ಸ್ವಚ್ಛತಾ ಕಾರ್ಮಿಕರನ್ನು ವಿಮಾನದಲ್ಲಿ ಬೆಂಗಳೂರಿಗೆ ಕರೆದೊಯ್ಯಲಾಗುತ್ತಿದೆ. ಅವರನ್ನು ಖುಷಿ ಪಡಿಸುವುದು ನಮ್ಮ ಜವಾಬ್ದಾರಿ. ಜಿಲ್ಲೆಗೆ ಹಾಗೂ ಇಲಾಖೆಗೆ ಬಜೆಟ್‌ನಲ್ಲಿ ಅನುದಾನ ಘೋಷಣೆ ಮಾಡುವ ನಿರೀಕ್ಷೆ ಇದೆ. ನಾನು ಸಹ ಮುಖ್ಯಮಂತ್ರಿಗಳಿಗೆ ಅನೇಕ ವಿಚಾರಗಳ ಬಗ್ಗೆ ಮನವಿ ಮಾಡಿದ್ದೇನೆ. ಕಳೆದ ಬಜೆಟ್‌ನಲ್ಲಿ ಆಹಾರ ಸಂಸ್ಕರಣ ಘಟಕದ ಘೋಷಣೆ ಆಗಿತ್ತು. ಆದರೆ, ಜಾಗದ ಸಮಸ್ಯೆ ಉಂಟಾಗಿರುವ ಕಾರಣಕ್ಕೆ ಅದು ಜಾರಿ ಮಾಡಲು ಆಗಿಲ್ಲ. ಅಲ್ಲಿ ಜಾಗ ಒತ್ತುವರಿ ಆಗಿದೆ, ಇದನ್ನು ಸರಿಪಡಿಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.