ಶಿರಹಟ್ಟಿ: ಎಲ್ಲ ಹಿಂದೂ ಸಮಾಜಗಳು ಒಗ್ಗಟ್ಟಾಗಿ ದೇಶ ಉಳಿಸಬೇಕು ಎಂದು ಶ್ರೀರಾಮಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ ಕರೆ ನೀಡಿದರು.
ಶಿರಹಟ್ಟಿಯಲ್ಲಿ ಇತ್ತೀಚೆಗೆ ಎಸ್‌ಡಿಪಿಐ ಪುಂಡರು ಅಮಾಯಕ ಹಿಂದೂಗಳನ್ನು ಹೊಡೆದಿದ್ದಾರೆ, ಇದನ್ನು ಗಂಭೀರವಾಗಿ ಪರಿಗಣಿಸಬೇಕು, ನಮ್ಮ ಮೇಲೆ ಕೇಸ್ ಹಾಕಲಿ, ಜೈಲಿಗೆ ಹಾಕಲಿ, ಇದಕ್ಕೆಲ್ಲಾ ಹೆದರಬೇಡಿ, ಇಲ್ಲಿಂದ ಮೂರು ಜಿಲ್ಲೆಗಳಿಗೆ ಗೋಮಾಂಸ ಹೋಗುತ್ತಿದೆ ಎನ್ನುವ ವಿಷಯ ತಿಳಿಯುತ್ತಿದೆ. ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿದ್ದರೂ ಇದು ಹೇಗೆ ಸಾಧ್ಯ? ಇದನ್ನು ಪೋಲೀಸ್ ಅಧಿಕಾರಿಗಳು ತಡೆಯದೇ ಹೋದರೆ ಇದರ ವಿರುದ್ದವೂ ಶಿರಹಟ್ಟಿ ಬಚಾವ್ ಹೋರಾಟ ಪ್ರಾರಂಭಿಸುವುದಾಗಿ ಹೇಳಿದರು.
ವಿಜಯಪುರದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ, ರಾಜ್ಯದ ಜನತೆ ಉತ್ತರ ಪ್ರದೇಶದ ಮಾದರಿಯಲ್ಲೇ ರಾಜ್ಯದಲ್ಲಿ ಆಡಳಿತ ಬರಬೇಕೆನ್ನುವ ನಿರೀಕ್ಷೆಯಲ್ಲಿದ್ದಾರೆ. ಗಾಂಧಿ ಮತ್ತು ನೆಹರು ಮಾಡಿದ ತಪ್ಪಿನಿಂದ ಇಂದು ದೇಶವು ಅನೇಕ ತೊಂದರೆಗಳನ್ನು ಅನುಭವಿಸುತ್ತಿದೆ. ನೇತಾಜಿ ಸುಭಾಸ್‌ಚಂದ್ರ ಬೋಸ್ ಮತ್ತು ಭಗತ್‌ಸಿಂಗರಂತಹ ಮಹನೀಯರಿಂದ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆ. ನೆಹರು ವಕ್ಫ್ ಆಸ್ತಿಗಳ ರಕ್ಷಣೆಗೆ ಕಾಯ್ದೆ ಜಾರಿಗೊಳಿಸಿದ್ದರು. ಅದನ್ನು ನರೇಂದ್ರ ಮೋದಿ ಅವರು ತಿದ್ದುಪಡಿ ಮಾಡಿ ದೇಶದ ಆಸ್ತಿಯನ್ನು ರಕ್ಷಣೆ ಮಾಡಿದ್ದಾರೆ. ಡಿಜೆ ಹಳ್ಳಿ, ಹುಬ್ಬಳ್ಳಿಯ ಗಲಭೆ, ಪಹಲ್ಗಾಮ್‌ನಲ್ಲಿ ನಡೆದ ಘಟನೆ ಹೀಗೆ ಅನೇಕ ಕಡೆಗಳಲ್ಲಿ ಹಿಂದೂಗಳ ಮೇಲೆ ನಿರಂತರ ದಾಳಿ ನಡೆಯುತ್ತಿವೆ. ಪೋಲೀಸರ ನೈತಿಕ ಬಲ ಕುಸಿದಿದ್ದರಿಂದ ಎಲ್ಲ ಕಡೆಗಳಲ್ಲಿಯೂ ನೆಮ್ಮದಿಯ ವಾತಾವರಣವಿಲ್ಲ. ಆದ್ದರಿಂದ ೨೦೨೮ಕ್ಕೆ ನಮ್ಮ ಸರ್ಕಾರ ಬಂದರೆ ಪೊಲೀಸ್ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ, ಎಲ್ಲರಿಗೂ ಎಕೆ-೪೭ ಗನ್, ಮದರಸಾ ಬಂದ್‌ನಂತಹ ಬಿಗಿ ಕ್ರಮಗಳನ್ನು ಜಾರಿಗೊಳಿಸಲಾಗುವುದು. ಆದ್ದರಿಂದ ಎಲ್ಲ ಸಮಾಜದ ಹಿಂದೂಗಳು ಒಗ್ಗಟ್ಟಾಗಿ ದೇಶ ಕಟ್ಟುವ ಕೆಲಸದಲ್ಲಿ ಭಾಗಿಯಾಗಬೇಕು ಎಂದು ಹೇಳಿದರು.ಕೂಡಲಸಂಗಮ ಪಂಚಮಸಾಲಿಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಹುಲ್ಲೂರಿನ ಅಮೋಘಿ ಸಿದ್ದೇಶ್ವರ ಸ್ವಾಮೀಜಿ, ಶ್ರೀರಾಮ ಸೇನೆಯ ರಾಜ್ಯ ಸಂಚಾಲಕ ರಾಜು ಖಾನಪ್ಪನವರ, ಸಂತೋಷ ಕುರಿ, ನಾಗರಾಜ ಲಕ್ಕುಂಡಿ, ಬಸವರಾಜ ಪಲ್ಲೇದ, ರಾಮಣ್ಣ ಕಂಬಳಿ, ಶಂಕರ ಮರಾಠೆ, ಪ್ರವೀಣಗೌಡ ಪಾಟೀಲ, ಶಂಕರ ಭಾವಿ, ಜಾನು ಲಮಾಣಿ, ಆನಂದ ಸ್ವಾಮಿ, ಬಸವರಾಜ ಕಲ್ಯಾಣಿ, ಈರಣ್ಣ ಕೋಟಿ, ದೇವೂ ಪೂಜಾರ, ಮಂಜುನಾಥ ಸೊಂಟನೂರ, ಶಿವಾನಂದ ಬಟ್ಟೂರ ಮುಂತಾದವರು ಉಪಸ್ಥಿತರಿದ್ದರು.