ಕನ್ನಡಪ್ರಭ ವಾರ್ತೆ ಮೈಸೂರು
ಬೋಗಾದಿ ರಸ್ತೆ ಜಂಕ್ಷನ್ ಅನ್ನು ಪಾದಾಚಾರಿಗಳ ಸಂಚಾರಕ್ಕೆ ಸುರಕ್ಷಿತ ಆಗಿರುವಂತೆ ರೂಪಿಸುವುದು ಹೇಗೆ ಎಂದು ಚರ್ಚಿಸಲಾಯಿತು. ಇಲ್ಲಿ ಯಶಸ್ಸನ್ನು ವಾಹನಗಳು ಎಷ್ಟು ಸುಗಮವಾಗಿ ಚಲಿಸಬಲ್ಲವು ಎಂಬುದರಿಂದಲ್ಲ. ಸಾರ್ವಜನಿಕ ಸ್ಥಳಗಳ ಹಂಚಿಕೆ ಎಲ್ಲಾ ಗುಂಪುಗಳಿಗೂ ಹೇಗೆ ಸಮಾನವಾಗಿ ಹಂಚಿಕೆಯಾಗಿದೆ ಎಂಬುದರ ಆಧಾರದಿಂದ ಅಳೆಯಲಾಗುತ್ತದೆ.
ಕಾರ್ಯಾಗಾರವು ರಸ್ತೆಗಳನ್ನು ಕೇವಲ ಟ್ರಾಫಿಕ್‌ಕಾರಿಡಾರ್ ಗಳಾಗಿ ನೋಡದೆ, ಅದನ್ನು ದೈನಂದಿನ ಜೀವನದ ಭಾಗ ಮತ್ತು ಸಂಚಾರದ ಸ್ಥಳವನ್ನಾಗಿ ಪರಿಗಣಿಸಿತ್ತು. ಎಂಎಸ್‌ಎ ಕಾಲೇಜಿನ ವಿದ್ಯಾರ್ಥಿಗಳು ಈ ಕಾರ್ಯಗಾರದಲ್ಲಿ ಬೋಗಾದಿ ರಸ್ತೆಯನ್ನು ಸುರಕ್ಷಿತ ಮತ್ತು ಜನಸ್ನೇಹಿ ಮಾಡುವ ನಿಟ್ಟಿನಲ್ಲಿ ತಾವು ರೂಪಿಸಿದ ಪಾದಾಚಾರಿಗಳ ಸಂಚಾರಕ್ಕೆ ಸುರಕ್ಷಿತವಾದ ರಸ್ತೆಗಳ ವಿನ್ಯಾಸ ಪ್ರಸ್ತಾವನೆ ಮುಂದಿಡಲಾಯಿತು. ನಂತರ ಈ ವಿನ್ಯಾಸಗಳ ಕುರಿತು ವಿವಿಧ ಕ್ಷೇತ್ರಗಳನ್ನು ಪ್ರತಿನಿಧಿಸಿದ್ದ ಸದಸ್ಯರು ಮತ್ತು ಈ ರಸ್ತೆಯ ದೈನಂದಿನ ಪಾದಾಚಾರಿಗಳ ಪ್ರತಿಕ್ರಿಯೆ ಪಡೆದು ಪರಿಶೀಲಿಸುವ ಮೂಲಕ ಈ ಪ್ರಸ್ತಾವನೆಗೆ ಇನ್ನಷ್ಟು ಬಲತುಂಬಲಾಯಿತು.ನಗರದ ಸಂಚಾರ ವ್ಯವಸ್ಥೆಯ ಸಮಸ್ಯೆಗಳ ಮೇಲೆ ಕೇಂದ್ರೀಕರಿಸಿದ್ದ ಈ ಕಾರ್ಯಾಗಾರವು ರಸ್ತೆಗಳನ್ನು ಅಂಗವಿಕಲರು, ವಿದ್ಯಾರ್ಥಿಗಳು, ವೃದ್ಧರು ಮತ್ತು ಇತರ ಪಾದಚಾರಿಗಳ ದಿನನಿತ್ಯದ ಓಡಾಟಕ್ಕೆ ಅನುಕೂಲವಾಗುವಂತೆ ಉತ್ತಮವಾಗಿ ರೂಪಿಸಬಲ್ಲ ಮಾರ್ಗೋಪಾಯಗಳ ಕುರತು ಚರ್ಚಿಸಿತು.
ಬೋಗಾದಿ ರಸ್ತೆಯು ವಾಕ್‌ಮತ್ತು ಶ್ರವಣ ಸಂಸ್ಥೆ, ಪ್ರಾದೇಶಿಕ ಶಿಕ್ಷಣ ಸಂಸ್ಥೆ ಮತ್ತು ಜೆಎಸ್‌ಎಸ್ ಕಾಲೇಜಿನಂತಹ ಪ್ರಮುಖ ಶಿಕ್ಷಣ ಸಂಸ್ಥೆಗಳನ್ನು ಸಂಪರ್ಕಿಸುವ ರಸ್ತೆಯಾಗಿದೆ. ಆದರೆ ಪ್ರಸ್ತುತ ಈ ಮಾರ್ಗವು ಅಸುರಕ್ಷಿತ ರಸ್ತೆ ದಾಟುವಿಕೆ, ಹಾಳಾದ ಪಾದಚಾರಿ ಮಾರ್ಗ, ಸಂಚಾರ ದಟ್ಟಣೆ ಮುಂತಾದ ಹಲವು ಸವಾಲು ಎದುರಿಸುತ್ತಿದೆ.ಡಿಸೆಂಬರ್ ನಲ್ಲಿ ನಡೆದ ಆರಂಭಿಕ ಕಾರ್ಯಾಗಾರದ ನಂತರ, ಗ್ರೀನ್‌ಪೀಸ್ ಇಂಡಿಯಾ, ತನ್ನ ಇಮ್ಯಾಜಿನೇರಿಯಮ್ -ಟು- ಆಕ್ಷನ್ ವಿಧಾನದ ಮೂಲಕ, ವಾಕ್‌ಮತ್ತು ಶ್ರವಣ ಸಂಸ್ಥೆ ಹಾಗು ಜೆಎಸ್‌ಎಸ್ ಕಾಲೇಜು ಜಂಕ್ಷನ್ (ಬೋಗಾದಿ ರಸ್ತೆ) ನಲ್ಲಿ ಸಂಚಾರ ವ್ಯವಸ್ಥೆಗಳ ಪರಿಶೀಲನೆಗಾಗಿ ಸಮುದಾಯದ ಸಹಭಾಗಿತ್ವದಲ್ಲಿ ಆಡಿಟ್ ನಡೆಸಿತು. ಈ ಆಡಿಟ್ ನ ನೇತೃತ್ವ ವಹಿಸಿದ್ದ ಎಂಎಸ್‌ಎ ಸಂಸ್ಥೆಯ ವಾಸ್ತುಶಿಲ್ಪ ವಿದ್ಯಾರ್ಥಿಗಳು ಅಂಗವಿಕಲರು, ಅವರ ಆರೈಕೆದಾರರು ಮತ್ತು ಸ್ಥಳೀಯ ಪಾದಾಚಾರಿಗಳೊಂದಿಗೆ ಮಾತುಕತೆ ನಡೆಸಿದರು.
ವಿದ್ಯಾರ್ಥಿಗಳು ಸುಲಭವಾಗಿ ಗೋಚರಿಸಬಲ್ಲ ಜೀಬ್ರಾ ಕ್ರಾಸಿಂಗ್, ರ್ಯಾಂಪ್ ಗಳನ್ನು, ಸಂಚಾರಿ ಸಂಜ್ಞಾ ಫಲಕ ಅಳವಡಿಸುವುದು, ಸುದೀರ್ಘ ಪಾದಾಚಾರಿ ಮಾರ್ಗಗಳು ಮತ್ತು ಪಾದಚಾರಿಗಳಿಗೆ ಆದ್ಯತೆ ನೀಡುವ ಸಂಚಾರ-ವ್ಯವಸ್ಥೆಯ ಕ್ರಮ ಒಳಗೊಂಡ ಪ್ರಸ್ತಾವನೆ ಕುರಿತು ಚರ್ಚಿಸಿದರು.ಪ್ರಾಕ್ಟಿಷನರ್ ದೀಪಕ್ ಶ್ರೀನಿವಾಸನ್, ಗ್ರೀನ್ ಪೀಸ್ ಇಂಡಿಯಾದ ಪ್ರಚಾರಕಿ ಸೆಲೋಮಿ ಗಾರ್ನಾಯಕ್ ಮೊದಲಾದವರು ಇದ್ದರು.