ಚನ್ನಪಟ್ಟಣ: ಕಂದಾಯ ಇಲಾಖೆಯ ಅಧಿಕಾರಿಗಳ ಭ್ರಷ್ಟಾಚಾರ, ತಾಲೂಕು ಮತ್ತು ಜಿಲ್ಲಾ ಆಡಳಿತದ ವೈಫಲ್ಯ ಮತ್ತು ಬಡ ರೈತರ ಭೂ ಹಕ್ಕುಗಳ ರಕ್ಷಣೆಯಲ್ಲಿ ಆಗುತ್ತಿರುವ ವಿಳಂಬ ಮತ್ತು ದಲಿತ ವಿರೋಧಿ ಧೋರಣೆಯನ್ನು ಖಂಡಿಸಿ ಏ.೮ರ ಬುಧವಾರದಿಂದ ತಾಲೂಕು ಕಚೇರಿ ಆವರಣದಲ್ಲಿ ನನ್ನ ಭೂಮಿ ನನ್ನ ಹಕ್ಕು ಹೋರಾಟ ಸಮಿತಿಯಿಂದ ಅನಿರ್ಧಿಷ್ಟಾವಧಿ ಅಹೋರಾತ್ರಿ ಪ್ರತಿಭಟನಾ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ಪದಾಧಿಕಾರಿಗಳು ತಿಳಿಸಿದರು.
ರಾಜ್ಯ ಸರ್ಕಾರ ತಾಲೂಕಿನಲ್ಲಿ ಭೂ ಕಂದಾಯ ಕಾಯ್ದೆ ೧೯೬೪ರ ಪ್ರಕಾರ ಸುಮಾರು ೭ ಸಾವಿರ ರೈತರಿಗೆ ಹಾಗೂ ದಲಿತರಿಗೆ ಬಗರ್ ಹುಕುಂ ಸಾಗುವಳಿ ದರ್ಖಾಸ್ತು ಮತ್ತು ಇನಾಮತಿ ಜಮೀನುಗಳ ರೂಪದಲ್ಲಿ ನೀಡಿದ್ದು ಅದನ್ನು ಉಳಿಸುವುದು ಸಹ ಸರ್ಕಾರ ಹಾಗೂ ಅಧಿಕಾರಿಗಳ ಜವಾಬ್ದಾರಿ ಆಗಿದೆ. ಸರ್ಕಾರವು ಕೇವಲ ಕೆಲವರಿಗೆ ಮಾತ್ರ ಸಂಪೂರ್ಣ ದಾಖಲೆಗಳನ್ನು ನೀಡಿ ಉಳಿದವರನ್ನು ಸರ್ಕಾರಿ ಸವಲತ್ತಿನಿಂದ ವಂಚಿಸಿ, ವಿನಾಕಾರಣ ಕಚೇರಿಗೆ ಅಲೆಯುವಂತೆ ಮಾಡುತ್ತಿದೆ. ಇದರಲ್ಲಿ ತಾಲೂಕು ಆಡಳಿತ ಮತ್ತು ಶಾಸಕರ ವೈಫಲ್ಯ ಎದ್ದು ಕಾಣುತ್ತಿದೆ ಎಂದು ಕಿಡಿಕಾರಿದರು.
ನನ್ನ ಭೂಮಿ ಅಭಿಯಾನ ವಿಫಲ:ರಾಜ್ಯ ಸರ್ಕಾರ ನನ್ನ ಭೂಮಿ ಅಭಿಯಾನದಡಿ ದೊಡ್ಡ ಮಟ್ಟದ ಪ್ರಚಾರ ನಡೆಸುತ್ತಿದ್ದರೂ ಚನ್ನಪಟ್ಟಣ ತಾಲೂಕಿನಲ್ಲಿ ೨೦೨೪ರಿಂದ ಫೆಬ್ರವರಿ ೨೬ರ ವರೆಗೆ ಕೇವಲ ೧೭೩ ರೈತರ ಪೋಡಿ ದುರಸ್ತಿ ಕಾರ್ಯ ಮಾತ್ರ ನಡೆಸಿದೆ. ಇದು ಒಟ್ಟು ಮಂಜೂರಾದ ರೈತರ ಶೇ.೧ರಷ್ಟು ಕೂಡ ಇಲ್ಲದಿರುವುದು ಸರ್ಕಾರ ಮತ್ತು ತಾಲೂಕು ಆಡಳಿತದ ವಿಫಲತೆಗೆ ಹಿಡಿದ ಕೈಗನ್ನಡಿಯಾಗಿದೆ. ನನ್ನ ಭೂಮಿ ಅಭಿಯಾನವು ಕೇವಲ ಪ್ರಚಾರಕ್ಕೆ ಸೀಮಿತವಾಗದೇ ಅರ್ಹ ಫಲಾನುಭವಿಸಗಳಿಗೆ ನ್ಯಾಯ ಒದಗಿಸಬೇಕು. ಭ್ರಷ್ಟಗೊಂಡ ಅಧಿಕಾರಿಗಳು ಮತ್ತು ಸರ್ಕಾರದ ಬೇಜವಾಬ್ದಾರಿಯಿಂದ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಬೇಕು ಎಂದು ಆಗ್ರಹಿಸಿ ಇದೇ ಏ.೮ರಿಂದ ತಾಲ್ಲೂಕು ಕಚೇರಿ ಮುಂದೆ ಫಲಾನುಭವಿಗಳ ಜೊತೆಗೆ ತಾಲೂಕಿನ ದಲಿತಪರ, ರೈತಪರ, ಪ್ರಗತಿಪರ ಹಾಗೂ ಮಹಿಳಾ ಸಂಘಟನೆಗಳ ಬೆಂಬಲದೊಂದಿಗೆ ಅಹೋರಾತ್ರಿ ಪ್ರತಿಭಟನಾ ಧರಣಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಸಮಿತಿಯ ಸಂಯೋಜಕರಾದ ನಿಂಗಯ್ಯ, ಪ್ರಕಾಶ್ ಬಾಚಹಳ್ಳಿ, ಪ್ರಸಾದ್ ಜಿ., ಮೋಹನ್‌ಕುಮರ್, ಲೋಕೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಚನ್ನಪಟ್ಟಣದಲ್ಲಿ ನನ್ನ ಭೂಮಿ ನನ್ನ ಹಕ್ಕು ಹೋರಾಟ ಸಮಿತಿ ಪದಾಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.