ಜಿಲ್ಲೆಯಲ್ಲಿ ಮೂಲ ಸೌಕರ್ಯ ಕಲ್ಪಿಸಲು ಶಕ್ತಿಮೀರಿ ಪ್ರಯತ್ನ: ಕೃಷಿ ಸಚಿವ ಸಿಆರ್‌ಎಸ್

KannadaprabhaNewsNetwork |  
Published : Jul 23, 2024, 12:35 AM IST
22ಕೆಎಂಎನ್ ಡಿ15 | Kannada Prabha

ಸಾರಾಂಶ

ಈ ಹಿಂದೆ ನಾನು ಶಾಸಕ ಮತ್ತು ಸಚಿವನಾಗಿದ್ದ ಅವಧಿಯಲ್ಲಿ ತಾಲೂಕಿನ ಬಹುತೇಕ ಗ್ರಾಮಗಳಿಗೆ ರಸ್ತೆ ಮತ್ತು ಸೇತುವೆ ನಿರ್ಮಾಣ ಮಾಡಿಸಲಾಗಿತ್ತು. ಕಳೆದ ಐದು ವರ್ಷದಲ್ಲಿ ಈ ಭಾಗದ ಜನರಿಗೆ ಅನುಕೂಲವಾಗುವಂತೆ ಯಾವ ರಸ್ತೆಗಳು ಅಭಿವೃದ್ಧಿಯಾಗಿವೆ ಎಂಬುದನ್ನು ಜನರೇ ಅರ್ಥೈಸಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ನಾಗಮಂಗಲ

ಗ್ರಾಮೀಣ ಪ್ರದೇಶದ ಎಲ್ಲ ಜನರು ಶಾಂತಿ ನೆಮ್ಮದಿಯಿಂದ ಜೀವನ ನಡೆಸುವ ಸಲುವಾಗಿ ರಸ್ತೆ, ಚರಂಡಿ ಸೇರಿದಂತೆ ಅಗತ್ಯ ಮೂಲ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಶಕ್ತಿಮೀರಿ ಪ್ರಯತ್ನಿಸುವುದಾಗಿ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

ತಾಲೂಕಿನ ದೇವಲಾಪುರ ಹಾಗೂ ಬೆಳ್ಳೂರು ಹೋಬಳಿಯ ವಿವಿಧ ಗ್ರಾಮಗಳಲ್ಲಿ ಹೇಮಾವತಿ ಇಲಾಖೆಯ 14 ಕೋಟಿ ರು.ಗೂ ಅಧಿಕ ವೆಚ್ಚದ ಕಾಂಕ್ರೀಟ್ ಮತ್ತು ಡಾಂಬರೀಕರಣ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಈ ಹಿಂದೆ ನಾನು ಶಾಸಕ ಮತ್ತು ಸಚಿವನಾಗಿದ್ದ ಅವಧಿಯಲ್ಲಿ ತಾಲೂಕಿನ ಬಹುತೇಕ ಗ್ರಾಮಗಳಿಗೆ ರಸ್ತೆ ಮತ್ತು ಸೇತುವೆ ನಿರ್ಮಾಣ ಮಾಡಿಸಲಾಗಿತ್ತು. ಕಳೆದ ಐದು ವರ್ಷದಲ್ಲಿ ಈ ಭಾಗದ ಜನರಿಗೆ ಅನುಕೂಲವಾಗುವಂತೆ ಯಾವ ರಸ್ತೆಗಳು ಅಭಿವೃದ್ಧಿಯಾಗಿವೆ ಎಂಬುದನ್ನು ಜನರೇ ಅರ್ಥೈಸಿಕೊಳ್ಳಬೇಕು ಎಂದರು.

ಮುಂದಿನ ನಾಲ್ಕು ವರ್ಷದೊಳಗೆ ತಾಲೂಕಿನಲ್ಲಿ ಶಿಥಿಲಗೊಂಡಿರುವ ಎಲ್ಲ ರಸ್ತೆಗಳನ್ನು ಅಭಿವೃದ್ಧಿಪಡಿಸುವ ಜೊತೆಗೆ, ಜನರ ನಿರೀಕ್ಷೆಗೂ ಮೀರಿ ಅಭಿವೃದ್ಧಿ ಕೆಲಸ ಮಾಡುವುದಾಗಿ ತಿಳಿಸಿದರು.

ತಾಲೂಕಿನ ವಿವಿಧ ಗ್ರಾಮಗಳ ರಸ್ತೆ ಅಭಿವೃದ್ಧಿಗಾಗಿ ಈಗಾಗಲೇ ಹಲವು ಇಲಾಖೆಗಳಿಂದ 250 ಕೋಟಿ ರು.ಗೂ ಹೆಚ್ಚು ಅನುದಾನ ಮಂಜೂರು ಮಾಡಿಸಲಾಗಿದೆ. ಎಲ್ಲ ಕಾಮಗಾರಿಗಳು ದೀರ್ಘಕಾಲ ಬಾಳಿಕೆ ಬರುವಂತೆ ಗುಣಮಟ್ಟದಿಂದ ಕೂಡಿರಬೇಕೆಂಬುದೇ ನನ್ನ ಉದ್ದೇಶ. ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಕಾಮಗಾರಿಯ ಗುಣಮಟ್ಟ ಕಾಯ್ದುಕೊಳ್ಳಬೇಕು. ಯಾವುದೇ ಲೋಪ ಕಂಡುಬಂದಲ್ಲಿ ನಾನು ಸಹಿಸುವುದಿಲ್ಲ ಎಂದರು.

ಬಳಿಕ ತಾಲೂಕಿನ ದೊಡ್ಡಹುಪ್ಪಳ ಗ್ರಾಮದಿಂದ ತೊರಲ್ಲನಾಯ್ಕನಹಳ್ಳಿ ಮಾರ್ಗವಾಗಿ ದೊಡ್ಡಜಕ್ಕನಹಳ್ಳಿವರೆಗೆ ಹಾಗೂ ವಳಗೆರೆಪುರದಿಂದ ಚಿಕ್ಕಜಟಕ ಗ್ರಾಮದ ವರೆಗೆ ಹೇಮಾವತಿ ಇಲಾಖೆಯ 8.5 ಕೋಟಿ ರು. ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿ ಮತ್ತು ಬೆಳ್ಳೂರು ಹೋಬಳಿಯ ಸೀಗೆಹಳ್ಳಿಯಿಂದ ನೆಲ್ಲಿಗೆರೆ ಮತ್ತು ಸೀಗೆಹಳ್ಳಿಯಿಂದ ಹೊಸಮನೆ ಗ್ರಾಮದ ವರೆಗೆ ಹೇಮಾವತಿ ಇಲಾಖೆಯ 6 ಕೋಟಿಗೂ ಅಧಿಕ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದರು.

ಹೇಮಾವತಿ ಇಲಾಖೆ ಯಡಿಯೂರು ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಶ್ರೀನಿವಾಸ್, ಉಪ ವಿಭಾಗದ ಎಇಇ ರುದ್ರೇಶ್, ಎಇ ಗೋವಿಂದೇಗೌಡ, ಬೆಳ್ಳೂರು ಕ್ರಾಸ್ ಉಪವಿಭಾಗದ ಎಇಇಗಳಾದ ಶ್ಯಾಂಸುಂದರ್, ರಾಜೇಗೌಡ, ಸಮಾಜ ಸೇವಕ ಹಾಗೂ ಕಾಂಗ್ರೆಸ್ ಮುಖಂಡ ಮಾವಿನಕೆರೆ ಸುರೇಶ್, ಮನ್ಮುಲ್ ಮಾಜಿ ನಿರ್ದೇಶಕ ಡಿ.ಟಿ.ಕೃಷ್ಣೇಗೌಡ, ಡಿ.ಕೆ.ರಾಜೇಗೌಡ, ಮರಿಸ್ವಾಮಿ, ಎಸ್‌ಎಲ್‌ಡಿಬಿ ನಿರ್ದೇಶಕ ತಿಮ್ಮರಾಯಿಗೌಡ, ಎನ್.ಟಿ.ಕೃಷ್ಣಮೂರ್ತಿ, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ತಮ್ಮಣ್ಣ, ಮುಖಂಡರಾದ ಶ್ರೀನಿವಾಸ್, ದೊಡ್ಡರಾಮಣ್ಣ, ಶೇಖರ್, ನಾರಾಯಣ, ಚಾಮರಾಜ್ ಸೇರಿದಂತೆ ಹಲವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!