ನೀರು ಬಳಕೆಯಲ್ಲಿ ರೈತರಿಗೆ ವೈಜ್ಞಾನಿಕ ಪ್ರಜ್ಞೆ ಅಗತ್ಯ: ನಂಜುಂಡೇಗೌಡ

KannadaprabhaNewsNetwork | Published : Jul 23, 2024 12:35 AM

ಸಾರಾಂಶ

ಕರ್ನಾಟಕದಲ್ಲಿ ಅತಿ ಹೆಚ್ಚು ನೀರು ಕೆಆರ್‌ಎಸ್ ಅಚ್ಚುಕಟ್ಟು ಭಾಗದಲ್ಲಿ ಅಪವ್ಯಯವಾಗುತ್ತಿದೆ. ಈ ಭಾಗದ ರೈತರಲ್ಲಿ ನೀರಿನ ಮಹತ್ವದ ಅರಿವಿಲ್ಲ. ಕಳೆದ ವರ್ಷ ಭೀಕರ ಬರಗಾಲವನ್ನು ಎದುರಿಸಿದ್ದೇವೆ. ಜಲಸಂಪನ್ಮೂಲ ಇಲಾಖೆಯವರೊಟ್ಟಿಗೆ ರೈತರು ಮತ್ತು ನೀರು ಬಳಕೆದಾರರ ಸಹಕಾರ ಸಂಘದ ಪ್ರತಿನಿಧಿಗಳು ಸಹಕಾರ ನೀಡಿ ನೀರಿನ ಮಹತ್ವವನ್ನು ಅರ್ಥೈಸಿಕೊಂಡು ನೀರಿನ ಮಿತವ್ಯಯ ಮತ್ತು ಸದ್ಬಳಕೆ ಮಾಡಿಕೊಳ್ಳುವ ಹಾಗೆ ವೈಜ್ಞಾನಿಕವಾಗಿ ತರಬೇತಿ ಪಡೆಯಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ಕೆಆರ್‌ಎಸ್ ಅಣೆಕಟ್ಟು ಅಚ್ಚುಕಟ್ಟು ಪ್ರದೇಶದ ರೈತರು ನೀರು ನಿರ್ವಹಣೆಯಲ್ಲಿ ವೈಜ್ಞಾನಿಕ ಪ್ರಜ್ಞೆ ಬೆಳೆಸಿಕೊಳ್ಳಬೇಕೆಂದು ವಿಶ್ವೇಶ್ವರಯ್ಯ ನಾಲಾ ವಿಭಾಗದ ಕಾರ್ಯಪಾಲಕ ಅಭಿಯಂತರ ನಂಜುಂಡೇಗೌಡ ತಿಳಿಸಿದರು.

ತಾಲೂಕಿನ ಮಂಗಲ ಗ್ರಾಮದ ನೀರು ಬಳಕೆದಾರರ ಸಹಕಾರ ಸಂಘದ ಸದಸ್ಯರು ಧಾರವಾಡದ ನೆಲ, ಜಲ ನಿರ್ವಹಣಾ ಸಂಸ್ಥೆಯ ಆಹ್ವಾನದ ಮೇರೆಗೆ ಮೂರು ದಿನಗಳ ಅಧ್ಯಯನ ಪ್ರವಾಸಕ್ಕೆ ತೆರಳುತ್ತಿರುವ ಸಂದರ್ಭದಲ್ಲಿ ಬೀಳ್ಕೊಡುಗೆ ನೀಡಿ ಮಾತನಾಡಿದರು.

ಕರ್ನಾಟಕದಲ್ಲಿ ಅತಿ ಹೆಚ್ಚು ನೀರು ಕೆಆರ್‌ಎಸ್ ಅಚ್ಚುಕಟ್ಟು ಭಾಗದಲ್ಲಿ ಅಪವ್ಯಯವಾಗುತ್ತಿದೆ. ಈ ಭಾಗದ ರೈತರಲ್ಲಿ ನೀರಿನ ಮಹತ್ವದ ಅರಿವಿಲ್ಲ. ಕಳೆದ ವರ್ಷ ಭೀಕರ ಬರಗಾಲವನ್ನು ಎದುರಿಸಿದ್ದೇವೆ. ಜಲಸಂಪನ್ಮೂಲ ಇಲಾಖೆಯವರೊಟ್ಟಿಗೆ ರೈತರು ಮತ್ತು ನೀರು ಬಳಕೆದಾರರ ಸಹಕಾರ ಸಂಘದ ಪ್ರತಿನಿಧಿಗಳು ಸಹಕಾರ ನೀಡಿ ನೀರಿನ ಮಹತ್ವವನ್ನು ಅರ್ಥೈಸಿಕೊಂಡು ನೀರಿನ ಮಿತವ್ಯಯ ಮತ್ತು ಸದ್ಬಳಕೆ ಮಾಡಿಕೊಳ್ಳುವ ಹಾಗೆ ವೈಜ್ಞಾನಿಕವಾಗಿ ತರಬೇತಿ ಪಡೆಯಬೇಕು ಎಂದು ಸಲಹೆ ನೀಡಿದರು.

ನೀರು ನಿರ್ವಹಣೆಯಲ್ಲಿ ರೈತರು ಹಿಂದಿನ ಕಾಲದ ಪದ್ಧತಿ ಅಳವಡಿಸಿಕೊಂಡಿರುವುದು ಸರಿಯಲ್ಲ. ನೀರಿನ ಮಿತ ಬಳಕೆಯಲ್ಲಿ ಆದಾಯೋತ್ಪನ್ನವಾಗುವ ಮಿಶ್ರ ಬೇಸಾಯ ಪದ್ಧತಿ ಅನುಸರಿಸುವಂತೆ ಸಲಹೆ ನೀಡಿದರು.

ನೀರು ಬಳಕೆದಾರರ ಸಹಕಾರ ಸಂಘಗಳ ಸಹಕಾರ ಮಹಾಮಂಡಲ ನಿರ್ದೇಶಕ ಎಂ.ಯೋಗೀಶ್ ಮಾತನಾಡಿ, ಅಧ್ಯಯನ ಪ್ರವಾಸದಲ್ಲಿ ನೀರಾವರಿ ಆಡಳಿತದ ಮಹತ್ವ, ಜಲ ಸಂಕಷ್ಟ ಸಮಯದಲ್ಲಿ ಸಂಘಗಳ ಪಾತ್ರ, ಸಂಘಗಳ ಆಡಳಿತ ಮಂಡಳಿ ಸದಸ್ಯರು ಮತ್ತು ಕಾರ್ಯದರ್ಶಿಗಳ ಕರ್ತವ್ಯ, ವಾರಾಬಂದಿ ಮತ್ತು ಕಾಲುವೆ ನಿರ್ವಹಣೆ ಕ್ರಮಗಳು, ಸಮಗ್ರ ಕೃಷಿ ಪದ್ಧತಿ, ಅಚ್ಚುಕಟ್ಟು ಪ್ರದೇಶದಲ್ಲಿ ನೀರಾವರಿ ಕರ ವಸೂಲಿಯ ಆಕರಣೆ ಮತ್ತು ಶುಲ್ಕ ಸಂಗ್ರಹಣೆ ವಿಧಾನ, ಲಾಭದಾಯಕ ಬೆಳೆಗಳ ಮಹತ್ವ, ಸಿರಿಧಾನ್ಯಗಳ ಪ್ರಾಮುಖ್ಯತೆ, ಇಸ್ತ್ರೇಲ್ ಮಾದರಿಯ ಹನಿ ನೀರಾವರಿ ಪದ್ಧತಿಗಳ ಬಗ್ಗೆ ಪ್ರಾತ್ಯಕ್ಷಿತೆ, ಸಂಘದ ಸದಸ್ಯರುಗಳೊಟ್ಟಿಗೆ ಮೂರು ದಿನಗಳ ಅಧ್ಯಯನ ಪ್ರವಾಸದಲ್ಲಿ ಹಮ್ಮಿಕೊಳ್ಳಲಾಗಿದ್ದು, ಇದನ್ನು ರೈತರು ಬಳಸಿಕೊಳ್ಳಬೇಕು ಎಂದು ಕೋರಿದರು.

ಸಹಾಯಕ ಕಾರ್ಯಪಾಲಕ ಅಭಿಯಂತರ ವಿಶ್ವನಾಥ್, ಸಹಾಯಕ ಎಂಜಿನಿಯರ್ ಎ.ಎನ್. ಕೆಂಪರಾಜು, ನೀರು ಬಳಕೆದಾರರ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಬಿ. ಸುರೇಶ್ ಮತ್ತಿತರರು ಉಪಸ್ಥಿತರಿದ್ದರು.

Share this article