ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಬಿಜೆಪಿ- ಕಾಂಗ್ರೆಸ್ ನಡುವೆ ಹೊಂದಾಣಿಕೆ ರಾಜಕಾರಣವಿದೆ ಎಂಬ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಹೇಳಿಕೆಯಲ್ಲಿ ಯಾವುದೇ ಸಂಶಯವಿಲ್ಲ. ಹೊಂದಾಣಿಕೆ ರಾಜಕಾರಣ ನಡಿತಿದೆ. ಅದು ನಿಜ. ಯತ್ನಾಳ ಹೇಳುವುದರಲ್ಲಿ ಯಾವುದೇ ಸಂಶಯವೇ ಇಲ್ಲ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿದರು.ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವಿಷಯವನ್ನು ನಾನು, ಸಿಟಿ ರವಿ, ಪ್ರತಾಪ್ ಸಿಂಹ ಸಹ ಹೇಳಿಕೊಂಡು ಬಂದಿದ್ದಾರೆ. ರಾಜ್ಯಾಧ್ಯಕ್ಷ ವಿಜಯೇಂದ್ರ ಚುನಾವಣೆಯಲ್ಲೂ ಕಾಂಗ್ರೆಸ್ ಜೊತೆ ಹೊಂದಾಣಿಕೆಯಾಗಿತ್ತು ಎಂದು ಆರೋಪಿಸಿದರು.
ಬಿಜೆಪಿಯೊಂದಿಗೆ ಸಿದ್ದರಾಮಯ್ಯನವರ ಜೊತೆ ಹೊಂದಾಣಿಕೆಯಾಗಿತ್ತು. ಅವರು ಅಲ್ಲಿ ಗೆದ್ದು ಬಂದ್ರು, ಇವ್ರು ಇಲ್ಲಿ ಗೆದ್ದು ಬಂದ್ರು. ಅದೆಲ್ಲಾ ಗೊತ್ತಿರುವ ವಿಚಾರವೇ ಆಗಿದೆ ಎಂದ ಈಶ್ವರಪ್ಪ, ಶಿಕಾರಿಪುರದಲ್ಲಿ ನಾವು, ಅಲ್ಲಿ ನೀವು ಅಂತ ಬಿಜೆಪಿ ಕಾಂಗ್ರೆಸ್ ಹೊಂದಾಣಿಕೆ ಮಾಡಿಕೊಂಡೇ ಬಂದಿವೆ. ಹೊಂದಾಣಿಕೆ ರಾಜಕಾರಣದಿಂದ ರಾಜ್ಯದಲ್ಲಿ ರಾಜಕೀಯ ಭ್ರಷ್ಟಾಚಾರ, ವ್ಯಭಿಚಾರ ನಡೆಯುತ್ತಿದೆ. ಇದು ರಾಜ್ಯದ ಜನರಿಗೆ ಗೊತ್ತಾಗಿದ್ದು, ಅದು ಕೂಡ ಶೀಘ್ರವೇ ಹೊರಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಬಿಜೆಪಿ ಮತ್ತು ಕಾಂಗ್ರೆಸ್ ಸರ್ಕಾರಗಳ ಅವ್ಯವಹಾರಗಳನ್ನು ಸಿಬಿಐ ತನಿಖೆಗೆ ಒಳಪಡಿಸಬೇಕು ಅನ್ನೋದಕ್ಕೆ ನಾನು ಒತ್ತಾಯ ಮಾಡುತ್ತೇನೆ. ಸಿದ್ದು ನಾನು ಅಂತವನಲ್ಲ ಅಂತಾರೆ, ಚುನಾವಣೆ ಸಮಯದಲ್ಲಿ ಮುಡಾ ಹಗರಣದ ನಿವೇಶನ ಎಂಟೂವರೆ ಕೋಟಿ ಅಂತ ಚುನಾವಣೆ ಆಯೋಗಕ್ಕೆ ತೋರಿಸಿದ್ದಾರೆ. ಸಿದ್ದರಾಮಯ್ಯನವರ ಪತ್ನಿ ಹೆಸರು ಇದರಲ್ಲಿ ಬಂದಿದ್ದು ನನಗೆ ನೋವೆನಿಸುತ್ತಿದೆ. ಈಗ ಅದಕ್ಕೆ ₹ 60 ಕೋಟಿ ಹಣ ಕೊಟ್ಟುಬಿಡಿ ಅಂತಿದ್ದಾರೆ. ಹಾಗಾದ್ರೆ ಇವರು ಚುನಾವಣೆ ಆಯೋಗಕ್ಕೆ ತಪ್ಪು ಲೆಕ್ಕ ತೋರಿಸಿದ್ದಾರೆ. ಇಲ್ಲಿ ಹೊಂದಾಣಿಕೆ ರಾಜಕಾರಣ ನಡೆಯುತ್ತಲೇ ಇದೆ ಎಂದು ಆರೋಪಿಸಿದರು.
ಸಮಾಧಾನವಾದ್ರೆ ಮಾತ್ರ ಬಿಜೆಪಿ ಸೇರ್ಪಡೆ:ಬಿಜೆಪಿ ಮರು ಸೇರ್ಪಡೆ ವಿಚಾರದ ಬಗ್ಗೆ ಮಾತನಾಡಿದ ಅವರು, ನಾನು ಬಿಜೆಪಿ ಸೇರುವ ವಿಚಾರದಲ್ಲಿ ನನ್ನ ಬಳಿ ಬಂದವರ ಜೊತೆ ಚರ್ಚೆ ಮಾಡಿದ್ದೇನೆ. ಚರ್ಚೆಯಾಗಿ ನನಗೆ ಸಮಾಧಾನವಾದ್ರೆ ಮಾತ್ರ ಬಿಜೆಪಿಗೆ ಹೋಗುತ್ತೇನೆ. ಇಲ್ಲದಿದ್ದರೆ ಹೋಗಲ್ಲ ಎಂದು ಈಶ್ವರಪ್ಪ ಸ್ಪಷ್ಟಪಡಿಸಿದರು.ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸಂಘಟನೆ ಕುರಿತು ಹೇಳಿಕೆ ನೀಡಿರುವ ಅವರು, ರಾಯಣ್ಣ ಬ್ರಿಗೇಡ್ ಆಗಬೇಕು ಎಂಬುದು ಚುನಾವಣೆಗೆ ನಿಂತಾಗಿನಿಂದಲೂ ಕೇಳಿ ಬರುತ್ತಿದೆ. ಉತ್ತರ ಕರ್ನಾಟಕ ಸೇರಿ ಬಹಳಷ್ಟು ಒತ್ತಾಯವಿದೆ. ಹೀಗಾಗಿ ರಾಜ್ಯದ ಪ್ರಮುಖರ ಜೊತೆ ಚರ್ಚಿಸಿ ಮುಂದೆ ತೀರ್ಮಾನ ಮಾಡುವುದಾಗಿ ತಿಳಿಸಿದರು.
ಸಿದ್ದರಾಮಯ್ಯ ಜೈಲಿಗೆ ಹೋಗುತ್ತಾರೆ:ಮುಡಾ, ವಾಲ್ಮೀಕಿ ಹಗರಣದಲ್ಲಿ ಸಿದ್ದರಾಮಯ್ಯನವರು ಜೈಲಿಗೆ ಹೋಗುತ್ತಾರೆ. ಯಾವುದೇ ಅನುಮಾನ ಇಲ್ಲ ಎಂದ ಈಶ್ವರಪ್ಪ, ಮುಡಾ ಹಗರಣ, ವಾಲ್ಮೀಕಿ ಹಗರಣದ ನಂತರದಲ್ಲಿ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಮಾಡಿದ 22 ಹಗರಣಗಳ ಆರೋಪಕ್ಕೂ ಉತ್ತರಿಸಿದ ಅವರು, ಬಿಜೆಪಿ- ಕಾಂಗ್ರೆಸ್‌ನ ಎಲ್ಲ ಹಗರಣಗಳನ್ನು ಸಿಬಿಐಗೆ ಕೊಡಿ ಎಂದು ಒತ್ತಾಯಿಸಿದರು.
ತಪ್ಪಾಯ್ತು ಅಂತ ಕ್ಷಮೆ ಕೇಳಿ:ಕೋಟಾ ಶ್ರೀನಿವಾಸ ಪೂಜಾರಿ ಮೇಲೂ ಸಿದ್ದರಾಮಯ್ಯ ಅಪಾದನೆ ಮಾಡಿದ್ದಾರೆ. ಕೋಟಾ ಶ್ರೀನಿವಾಸ ಪೂಜಾರಿ ಪ್ರಾಮಾಣಿಕ ವ್ಯಕ್ತಿ. ಯಾವುದೇ ಹಗರಣದಲ್ಲಿ ಸಿಲುಕೋಕೆ ಸಾಧ್ಯವಿಲ್ಲ. ಒಂದು ರೂಪಾಯಿ ತಿನ್ನುವ ಜನನೂ ಅವರಲ್ಲ. ಅಂತವರ ಮೇಲೂ ಸಿದ್ದರಾಮಯ್ಯ, ಬಿಜೆಪಿ 22 ಹಗರಣ ಪಟ್ಟಿಯಲ್ಲಿ ಹೆಸರು ಸೇರಿಸಿ, ಆಪಾದನೆ ಮಾಡಿದ್ದಾರೆ. ಕೋಟಾ ಶ್ರೀನಿವಾಸ ಮೇಲೆ ಮಾಡಿದ ಆಪಾದನೆ ಸಂಬಂಧ ಕ್ಷಮೆ ಕೇಳಿ ಎಂದು ಒತ್ತಾಯಿಸಿದರು.
----------------------ಕೋಟ್.....
ಮುಡಾ, ವಾಲ್ಮೀಕಿ ಹಗರಣ ಹೇಗಾದರೂ ಸಿಬಿಐಗೆ ಹೋಗೆ ಹೋಗುತ್ತದೆ. ವಾಲ್ಮೀಕಿ ಹಗರಣ ಬ್ಯಾಂಕ್‌ನಿಂದ ಸಿಬಿಐಗೆ ಕೊಟ್ಟಿದ್ದಾರೆ, ಅದರಲ್ಲೂ ಸಿದ್ದರಾಮಯ್ಯ ಪಾತ್ರ ಇದೆ ಎಂಬ ಸುದ್ದಿ ಇದೆ. ಕಾರಣ, ಅವರು ಅರ್ಥ ಸಚಿವರಿದ್ದಾರೆ, ಆ ಮೂಲಕವೂ ಸಿದ್ದರಾಮಯ್ಯ ಸಿಬಿಐಗೆ ಬರ್ತಾರೆ. ಮುಡಾ ಮುಖಾಂತರವೂ ಸಿಬಿಐ ತನಿಖೆ ವ್ಯಾಪ್ತಿಗೆ ಸಿದ್ದರಾಮಯ್ಯ ಬಂದೇ ಬರ್ತಾರೆ. ಈ ಸರ್ಕಾರ ಎಷ್ಟು ದಿನ ಇರುತ್ತೊ ಗೊತ್ತಿಲ್ಲ. ನೀವು ಪ್ರಾಮಾಣಿಕರಂತ ಗೊತ್ತಾಗಬೇಕಾದರೆ ತಕ್ಷಣ ಬಿಜೆಪಿ ಹಾಗೂ ಕಾಂಗ್ರೆಸ್ ಹಗರಣಗಳನ್ನು ಸಿಬಿಐಗೆ ಕೊಡಿ.ಕೆ.ಎಸ್.ಈಶ್ವರಪ್ಪ, ಮಾಜಿ ಡಿಸಿಎಂ.
-------------------------------------------ಬಾಕ್ಸ್
ಅಹಿಂದ ಸಮಾವೇಶಕ್ಕೆ ಸಿದ್ದರಾಮಯ್ಯಗೆ ಹಕ್ಕಿಲ್ಲಮತ್ತೇ ಸಿದ್ದರಾಮಯ್ಯ ಅಹಿಂದ ಸಮಾವೇಶದ ತಯಾರಿ ಮಾಡುತ್ತಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿರುವ ಈಶ್ವರಪ್ಪ, ಅಹಿಂದ ಸಮಾವೇಶ ಮಾಡಲು ಸಿದ್ದರಾಮಯ್ಯಗೆ ನೈತಿಕ ಹಕ್ಕಿಲ್ಲ. ಅಹಿಂದದಲ್ಲಿ ಅಲ್ಪಸಂಖ್ಯಾತರಿದ್ದಾರೆ, ಅಲ್ಪಸಂಖ್ಯಾತರ ನಿಗಮದಿಂದ ಲೂಟಿ ಮಾಡಿದ್ದೀರಿ, ಹಿಂದುಳಿದ ದಲಿತರ ವಿಚಾರದಲ್ಲಿ ವಾಲ್ಮೀಕಿ ನಿಗಮದಿಂದಲೇ ಪ್ರಾಮಾಣಿಕ ಅಧಿಕಾರಿ ಆತ್ಮಹತ್ಯೆಯಾಗಿದೆ. ಯಾವುದ್ಯಾವುದೋ ಖಾತೆಗೆ ಅಕ್ರಮ ಹಣ ವರ್ಗಾವಣೆಯಾಗಿದೆ. ಹೀಗಿರುವಾಗ ಅಹಿಂದ ಸಮಾವೇಶ ಹೇಗೆ ಮಾಡುತ್ತೀರಿ..?. ಹಿಂದಿನಿಂದಲೂ ಅಹಿಂದ ಹೆಸರಿನಲ್ಲಿ ರಾಜಕಾರಣ ಮಾಡುತ್ತಿದ್ದೀರಿ. ಹಿಂದ ವರ್ಗದವರನ್ನೇ ಮೋಸ ಮಾಡಿ ಅಧಿಕಾರಕ್ಕೆ ಬಂದಿದ್ದೀರಿ, ಒಬ್ಬ ಪ್ರಾಮಾಣಿಕರಾಗಿ ನೂರು ಅಹಿಂದ ಸಮಾವೇಶ ಮಾಡಿ ನಾವು ಬೇಡ ಅನ್ನಲ್ಲ. ಹಗರಣಗಳನ್ನ ಸಿಬಿಐ ತನಿಖೆಗೆ ಕೊಡಿ, ತನಿಖೆ ಆಗದೇ ಹೋದ್ರೆ ಅಹಿಂದ ಸಮಾವೇಶ ನಡೆಸಲು ಯಾವ ನೈತಿಕ ಹಕ್ಕು ಇವರಿಗಿಲ್ಲ ಎಂದರು.
----------