ಬಳ್ಳಾರಿ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಹಾಗೂ ಕಾರ್ಯಕಾರಿ ಸಮಿತಿ ಚುನಾವಣೆ ಮತ ಎಣಿಕೆ ಪೂರ್ಣಗೊಂಡಿದ್ದು, ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಇಲ್ಲಿನ ಎಸ್‌ಜಿ ಕಾಲೇಜಿನ ಉಪನ್ಯಾಸಕ ಬಿಚ್ಚಗಲ್ಲು ಪಂಚಾಕ್ಷರಪ್ಪ 223 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಹಾಲಿ ಜಿಲ್ಲಾಧ್ಯಕ್ಷ ಚಾನಾಳ್ ಶೇಖರ್ ಪರಾಭವಗೊಂಡಿದ್ದಾರೆ.ತೀವ್ರ ಕುತೂಹಲ ಮೂಡಿಸಿದ್ದ ಚುನಾವಣೆ ಭಾನುವಾರ ನಡೆಯಿತು. ಭಾನುವಾರ ತಡರಾತ್ರಿವರೆಗೂ ಮತ ಎಣಿಕೆ ನಡೆದು ಸೋಮವಾರ ಬೆಳಗ್ಗೆ ಪೂರ್ಣಗೊಂಡಿತು.
ಹಾನಗಲ್ಲು ಕುಮಾರೇಶ್ವರ ವಚನ ವೃಂದದ ಚಾನಾಳ್ ಶೇಖರ್ ತಂಡದಿಂದ ಕಾರ್ಯಕಾರಿ ಸಮಿತಿಗೆ ಸ್ಪರ್ಧಿಸಿದ್ದ 10 ಮಹಿಳೆಯರು ಹಾಗೂ 20 ಮಂದಿ ಪೈಕಿ 8 ಮಹಿಳೆಯರು ಹಾಗೂ 14 ಪುರುಷರು ಸೇರಿದಂತೆ 22 ಜನರು ಗೆಲುವು ಸಾಧಿಸಿದ್ದಾರೆ. ಚಾನಾಳ್ ಶೇಖರ್ ಅವರಿಗೆ ಸಿರುಗುಪ್ಪ ತಾಲೂಕಿನಲ್ಲಿ ಮಾತ್ರ ಹೆಚ್ಚಿನ ಮತಗಳು ಬಂದಿದ್ದು, ಉಳಿದ ತಾಲೂಕುಗಳಲ್ಲಿ ಹಿನ್ನಡೆಯಾಯಿತು.ತ್ರಿವಿಧ ದಾಸೋಹಿ ಸಿದ್ಧಗಂಗಾ ಶ್ರೀಗಳ ತಂಡದ ಬಿಚ್ಚಗಲ್ಲು ಪಂಚಾಕ್ಷರಪ್ಪ ತಂಡದ ಇಬ್ಬರು ಮಹಿಳೆಯರು, ಆರು ಪುರುಷರು ಸೇರಿ ಎಂಟು ಜನರು ಮಾತ್ರ ಗೆಲುವು ಸಾಧಿಸಿದ್ದಾರೆ.
ಉಪ ಚುನಾವಣೆ ಅಧಿಕಾರಿ ಲಿಂಗನಗೌಡ ಬಸವಭವನದಲ್ಲಿ ಸೋಮವಾರ ಮಧ್ಯಾಹ್ನ ಫಲಿತಾಂಶ ಘೋಷಿಸಿದರು. ಚುನಾವಣೆ ನಡೆಸುವುದ ಬೇಡ. ಅವಿರೋಧ ಆಯ್ಕೆ ಮಾಡಿಕೊಳ್ಳಿ ಎಂದು ಸಮಾಜದ ಹಿರಿಯರ ಮಾತಿಗೆ ಕಿವಿಗೊಡದ ಎರಡು ತಂಡಗಳು ಚುನಾವಣೆ ಅಖಾಡಕ್ಕೆ ಧುಮುಕಿದ್ದವು. ಹೀಗಾಗಿ ಚುನಾವಣೆಯಲ್ಲಿ ಎರಡು ತಂಡಗಳ ನಡುವೆ ತೀವ್ರ ಜಿದ್ದಾಜಿದ್ದಿ ಇತ್ತು.ಚಾನಾಳ್ ಶೇಖರ್ ತಂಡದಿಂದ ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸಿದ್ದರೂ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಚಾನಾಳ್ ಶೇಖರ್ ಅವರನ್ನು ಸೋಲಿಸಿದ್ದೇಕೆ ಎಂಬ ವಿಶ್ಲೇಷಣೆಗಳು ನಡೆದಿವೆ. ವೀರಶೈವ ಲಿಂಗಾಯತರೇತರರಿಗೆ ಸದಸ್ಯತ್ವ ನೀಡಿಕೆ ಹಾಗೂ ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡಿರುವುದು ಶೇಖರ್ ಸೋಲಿಗೆ ಕಾರಣ ಎಂದೇ ವಿಶ್ಲೇಷಿಸಲಾಗುತ್ತಿದೆ.
ಗೆದ್ದ ಸದಸ್ಯರು, ಪಡೆದ ಮತ: ಟಿ.ಎಂ. ಕಿರಣ್‌ಕುಮಾರ ಸ್ವಾಮಿ (2129), ಗೋನಾಳ್ ನಾಗಭೂಷಣಗೌಡ (2977), ಯಾಳ್ಪಿ ಮೇಟಿ ದಿವಾಕರಗೌಡ (2891), ದರೂರು ಜಿ. ಸಾಗರ್ (2867), ಕೋರಿ ಚನ್ನಬಸಪ್ಪ (2822), ಬಿ.ನಾಗರಾಜ್ (2764), ಯು.ನಂದೀಶ್ (2757), ಗಂಗಾವತಿ ವೀರೇಶ್ (2706), ಕೆ.ಪಿ. ಚನ್ನಬಸವರಾಜ್ ಕರ್ಚಿಗನೂರು (2668), ಕನಕಗಿರಿ ರೇಣುಕಪ್ಪ (2630), ಮದಿರೆ ಕುಮಾರಸ್ವಾಮಿ (2582), ಎಸ್.ಎಂ. ನಾಗರಾಜಸ್ವಾಮಿ (2544), ಎನ್.ಚಂದ್ರಮೋಹನ್ (2490), ಎಸ್.ವೈ. ಕಟ್ಟೆಗೌಡ ಸಂಗನಕಲ್ಲು (2486), ಎಚ್.ಆರ್. ಮಲ್ಲಿಕಾರ್ಜುನ (2466), ಕೆ.ಸುರೇಶ್ ಗೌಡ (2428), ಕೆ.ಎಂ. ಶಿವಕುಮಾರ್ (2412), ಡಿ.ಅರುಣಕುಮಾರ್ (2401), ಆರ್.ಪ್ರಭುಶೇಖರಗೌಡ (2391), ಪಿ.ಮಲ್ಲಿಕಾರ್ಜುನ (2385).ಗೆದ್ದ ಮಹಿಳಾ ಸದಸ್ಯರು, ಪಡೆದ ಮತ:
ಆನೆ ರೂಪಾ ಕೊರಲಗುಂದಿ (3278), ಎಂ.ಕಲ್ಯಾಣಿ (3000), ಯಾಟಿ ಭ್ರಮರಾಂಬಾ (2995), ಅನಿತಾ ಶಾನವಾಸಪುರ (2930), ನಂದಾ ಎಸ್. ಪಾಟೀಲ್ (2866), ಸಿಎಂ ಪುಷ್ಪಲತಾ (2837), ಎಂ.ವಿಜಯಲಕ್ಷ್ಮಿ (2784), ವನಜಾಕ್ಷಿ (2782), ಹೇಮಾ ಮಂಜುನಾಥ್ ಹೊಸೂರುಮಠ (2777), ಛಾಯಾ ಮಂಜುನಾಥ್ (2761).ಸಮುದಾಯದ ಪ್ರಗತಿಗೆ ಶ್ರಮಿಸುವೆ:
ಇದು ವೀರಶೈವ ಸಮುದಾಯದ ಗೆಲುವು. ಸಂಘಟಿತ ಪ್ರಯತ್ನದಿಂದ ಈ ಗೆಲುವು ಸಾಧ್ಯವಾಗಿದೆ. ಗೆದ್ದವರೆಲ್ಲ ನಮ್ಮವರೇ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸಮುದಾಯದ ಪ್ರಗತಿಗೆ ಶ್ರಮಿಸುತ್ತೇನೆ ಎನ್ನುತ್ತಾರೆ ವೀರಶೈವ ಮಹಾಸಭಾದ ನೂತನ ಜಿಲ್ಲಾಧ್ಯಕ್ಷ ಬಿಚ್ಚಗಲ್ಲು ಪಂಚಾಕ್ಷರಪ್ಪ.