ಭಾರಿ ಮಳೆ- ಪ್ರವಾಹ ಪರಿಸ್ಥಿತಿ ನಿರ್ವಹಣೆಗೆ ಸಕಲ ಸಿದ್ಧತೆ : ಸಚಿವ ಸತೀಶ ಜಾರಕಿಹೊಳಿ

KannadaprabhaNewsNetwork |  
Published : Jul 26, 2024, 01:44 AM ISTUpdated : Jul 26, 2024, 12:50 PM IST
ರಾಯಬಾಗ ತಾಲೂಕಿನ ದಿಗ್ಗೇವಾಡಿಯಲ್ಲಿ ಅತಿವೃಷ್ಟಿಯಿಂದ ಉಂಟಾಗಿರುವ ಹಾನಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಪರಿಶೀಲಿಸಿದರು. ಡಿಸಿ ರೋಷನ್‌ ರೋಹನ್, ಜಿಪಂ ಸಿಇಒ ರಾಹುಲ್‌ ಶಿಂಧೆ, ಎಸ್ಪಿ ಭೀಮಾಶಂಕರ ಗುಳೇದ ಇತರರು ಇದ್ದರು. | Kannada Prabha

ಸಾರಾಂಶ

ನೆರೆಯ ಮಹಾರಾಷ್ಟ್ರ ಹಾಗೂ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಚಿವ ಸತೀಶ ಜಾರಕಿಹೊಳಿ, ಗುರುವಾರ ರಾಯಬಾಗ ತಾಲೂಕಿನ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

  ಬೆಳಗಾವಿ :ನೆರೆಯ ಮಹಾರಾಷ್ಟ್ರ ಹಾಗೂ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಚಿವ ಸತೀಶ ಜಾರಕಿಹೊಳಿ, ಗುರುವಾರ  ರಾಯಬಾಗ ತಾಲೂಕಿನ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ಜಮಖಂಡಿ-ಮಿರಜ್ ರಾಜ್ಯ ಹೆದ್ದಾರಿ ಮೇಲಿನ ಕುಡಚಿ ಸೇತುವೆ ಮುಳುಗಡೆಯಾಗಿದ್ದು, ನೀರಿನ ಮಟ್ಟದ ಏರಿಳಿತದ ಕುರಿತು ಮಾಹಿತಿ ಪಡೆದರು. ಬಳಿಕ ಹಳೇ ದಿಗ್ಗೇವಾಡಿಯಲ್ಲಿ ಪ್ರವಾಹ ಪರಿಸ್ಥಿತಿ ಅವಲೋಕಿಸಿದರು.

ಈ ವೇಳೆ ಕುಡಚಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸತೀಶ ಜಾರಕಿಹೊಳಿ, ಪ್ರವಾಹಕ್ಕೆ ತುತ್ತಾಗುವ ಪ್ರದೇಶಗಳಲ್ಲಿ ಈಗಾಗಲೇ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಪ್ರವಾಹಕ್ಕೆ ತುತ್ತಾಗಬಹುದಾದ ಗ್ರಾಮಗಳನ್ನು ಗುರುತಿಸಲಾಗಿದ್ದು, ಪ್ರವಾಹ ಸಂದರ್ಭದಲ್ಲಿ ಸ್ಥಳಾಂತರಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.

ಸದ್ಯಕ್ಕೆ ಮಹಾರಾಷ್ಟ್ರದಲ್ಲಿ ಮಳೆ ಜಾಸ್ತಿಯಾಗುತ್ತಿದ್ದು, ಮೂರು ಲಕ್ಷ ಕ್ಯುಸೆಕ್‌ ನೀರು ಬಿಟ್ಟಾಗ ಪ್ರವಾಹ ಪರಿಸ್ಥಿತಿ ಉದ್ಭವಿಸಿ ತೊಂದರೆಯಾಗಲಿದೆ. ಆದ್ದರಿಂದ ಈ ಬಗ್ಗೆ ನಿರಂತರವಾಗಿ ನಿಗಾ ವಹಿಸಲಾಗಿದೆ ಎಂದು ತಿಳಿಸಿದರು.

ಸಂಭವನೀಯ ಪ್ರವಾಹ ನಿರ್ವಹಣೆಗೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ಮಳೆ ಹೆಚ್ಚಾಗುತ್ತಿರುವುದರಿಂದ ರಕ್ಷಣಾ ತಂಡ, ಕಾಳಜಿ ಕೇಂದ್ರ ಸೇರಿದಂತೆ ಅಗತ್ಯ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲಾಗಿದೆ ಎಂದರು.

ಅಗತ್ಯವಿರುವ ಪ್ರದೇಶಗಳಲ್ಲಿ ಕಾಳಜಿ ಕೇಂದ್ರ ತೆರೆಯಲು ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಜನರು‌ ಬಂದರೆ ಯಾವುದೇ ತೊಂದರೆ ಇಲ್ಲ. ಕೆಲವು ಜನರು ಕಾಳಜಿ ಕೇಂದ್ರ ಅಥವಾ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳ್ಳಲು ಹಿಂದೇಟು ಹಾಕುತ್ತಿದ್ದು, ಅಧಿಕಾರಿಗಳು ಅವರ ಮನವೊಲಿಸಲಿದ್ದಾರೆ ಎಂದು ಸಚಿವರು ತಿಳಿಸಿದರು.

ಜಿಲ್ಲೆಯ ಪರಿಸ್ಥಿತಿಯ ಕುರಿತು ಮಾಹಿತಿ ನೀಡಿದ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಜಿಲ್ಲೆಯಲ್ಲಿ ಸದ್ಯಕ್ಕೆ 35 ಬೋಟ್ ಲಭ್ಯವಿದ್ದು, ಹೆಚ್ಚು ಬೋಟ್ ಗಳು ಅವಶ್ಯವಿದ್ದಲ್ಲಿ ಕಾರವಾರದಿಂದ ತರಿಸಲಾಗುವುದು. ಸದ್ಯಕ್ಕೆ ಆತಂಕಪಡುವ ಪರಿಸ್ಥಿತಿ ಇಲ್ಲ ಎಂದು ಹೇಳಿದರು.

ಮಹಾರಾಷ್ಟ್ರದಲ್ಲಿ ಮೂರು ದಿನ ರೆಡ್ ಅಲರ್ಟ್ ಇದೆ. ನೀರು ಬಿಡುಗಡೆ ಕುರಿತು ಅಲ್ಲಿನ‌ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿಕೊಂಡು ಪರಸ್ಪರ ಮಾಹಿತಿ ವಿನಿಮಯ ಮಾಡಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ವಿವರಿಸಿದರು.

ಪರಿಸ್ಥಿತಿ ಆಧರಿಸಿ ಗ್ರಾಮಸ್ಥರನ್ನು ಕಾಳಜಿ‌ ಕೇಂದ್ರಗಳಿಗೆ ಜನರನ್ನು ಸ್ಥಳಾಂತರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಖಾನಾಪುರದಲ್ಲಿ ಎನ್.ಡಿ.ಆರ್.ಎಫ್. ತಂಡವನ್ನು ಕೂಡ ನಿಯೋಜಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ತಿಳಿಸಿದರು.

ಜಿಪಂ ಸಿಇಒ ರಾಹುಲ್ ಶಿಂಧೆ, ಪ್ರೊಬೇಷನರಿ ಐಎಎಸ್ ಅಧಿಕಾರಿ ದಿನೇಶಕುಮಾರ ಮೀನಾ, ಚಿಕ್ಕೋಡಿ ಉಪವಿಭಾಗಾಧಿಕಾರಿ ಸುಭಾಷ ಸಂಪಗಾಂವಿ, ರಾಯಬಾಗ ತಹಸೀಲ್ದಾರ್ ಕೆ.ಎಸ್. ಕುಲಕರ್ಣಿ, ಬುಡಾ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.ಅತಿವೃಷ್ಟಿಯಿಂದ ಮನೆ ಕಳೆದುಕೊಂಡ ಕುಟುಂಬಗಳಿಗೆ ಮನೆ‌ ನಿರ್ಮಾಣಕ್ಕೆ ರಾಜ್ಯ ಸರ್ಕಾರದಿಂದ ₹3 ಲಕ್ಷ ನೀಡಲು ಚಿಂತನೆ‌ ನಡೆಸಲಾಗುತ್ತಿದೆ. ಇದರೊಂದಿಗೆ ಕೇಂದ್ರ‌ ಸರ್ಕಾರದ ನೆರವು ಒದಗಿಸುವುದರ ಜತೆಗೆ ಇತರೆ ಯೋಜನೆಗಳ‌ ಪ್ರಯೋಜನ ಕೂಡ ಒದಗಿಸಲಾಗುವುದು. ₹5 ಲಕ್ಷ ಘೋಷಣೆ ಮಾಡಿದ್ದಾಗ ಎಲ್ಲರಿಗೂ ಪರಿಹಾರ ತಲುಪಿಸುವುದು ಸಾಧ್ಯವಾಗಿಲ್ಲ. ಹಾಗಾಗಿ ನೆರವು ಮೊತ್ತ‌ ಕಡಿಮೆಯಾದರೂ ಸರಿ ಎಲ್ಲರಿಗೂ ಪರಿಹಾರ ತಲುಪಿಸುವುದು ಸರ್ಕಾರದ ಉದ್ದೇಶವಿದೆ.

-ಸತೀಶ ಜಾರಕಿಹೊಳಿ ಜಿಲ್ಲಾ ಉಸ್ತುವಾರಿ ಸಚಿವ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಲು ಸಾಲು ರಜೆ, ಪ್ರವಾಸಿ ತಾಣ ರಷ್‌
ಭೂಮಿ ಮಾರಿದ ಇನ್ಫಿ ಬಗ್ಗೆ ಕಾರ್ತಿ ತೀವ್ರ ಆಕ್ರೋಶ