ಶಿಕ್ಷಣದಿಂದ ಮನುಷ್ಯನ ಸರ್ವತೋಮುಖ ವಿಕಾಸ

KannadaprabhaNewsNetwork |  
Published : Jan 09, 2025, 12:45 AM IST
ಪ.ಪೂ. ಶೈಕ್ಷಣಿಕ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿದ ಸಚಿವ ಕೆ.ಎನ್. ರಾಜಣ್ಣ,  | Kannada Prabha

ಸಾರಾಂಶ

ಶಿಕ್ಷಣ ಕಲಿಕೆ ಮತ್ತು ಸಾಂಸ್ಕೃತಿಕ ಚಟುವಟಿಕೆಯಿಂದ ಮನುಷ್ಯನ ಸರ್ವತೋಮುಖ ವಿಕಾಸವಾಗುತ್ತದೆ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ, ತುಮಕೂರುಶಿಕ್ಷಣ ಕಲಿಕೆ ಮತ್ತು ಸಾಂಸ್ಕೃತಿಕ ಚಟುವಟಿಕೆಯಿಂದ ಮನುಷ್ಯನ ಸರ್ವತೋಮುಖ ವಿಕಾಸವಾಗುತ್ತದೆ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ಅಭಿಪ್ರಾಯಪಟ್ಟರು. ನಗರದ ಎಂಪ್ರೆಸ್ ಕರ್ನಾಟಕ ಪಬ್ಲಿಕ್ ಶಾಲೆಯ ಆಡಿಟೋರಿಯಂನಲ್ಲಿ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ), ರಾಜ್ಯ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ನಿಧಿ ಹಾಗೂ ಜಿಲ್ಲಾ ಪ್ರಾಚಾರ್ಯರ ಸಂಘದ ಸಹಯೋಗದಲ್ಲಿ ಏರ್ಪಡಿಸಿದ್ದ 2024-25ನೇ ಶೈಕ್ಷಣಿಕ ಸಾಲಿನ ಪದವಿ ಪೂರ್ವ ಕಾಲೇಜುಗಳ ರಾಜ್ಯ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಲಿಕೆಗೆ ಬಡವ, ಶ್ರೀಮಂತ ಎಂಬ ಭೇದ-ಭಾವ ಇರುವುದಿಲ್ಲ. ದೇವರು ಎಲ್ಲರಿಗೂ ಒಂದೇ ರೀತಿಯಾದ ಬುದ್ಧಿಶಕ್ತಿಯನ್ನು ಕೊಟ್ಟಿರುತ್ತಾನೆ. ಆ ಬುದ್ಧಿಶಕ್ತಿಯನ್ನು ಸೂಕ್ತ ರೀತಿಯಲ್ಲಿ ಬಳಸಿಕೊಂಡು ಉತ್ತಮ ವಿದ್ಯಾರ್ಥಿಗಳಾಗಿ ಹೊರ ಹೊಮ್ಮಬೇಕು ಎಂದು ಅವರು ಕರೆ ನೀಡಿದರು. ಉತ್ತಮ ಶಿಕ್ಷಣ ಪಡೆಯುವ ಎಲ್ಲ ಅಗತ್ಯ ಸೌಲಭ್ಯಗಳು ಇಂದು ಲಭ್ಯ ಇವೆ. ಅವುಗಳನ್ನು ಸದುಪಯೋಗಪಡಿಸಿಕೊಂಡು ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆದು ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಬೇಕು ಎಂದು ಹೇಳಿದರು.ಶಾಲಾ-ಕಾಲೇಜುಗಳಲ್ಲಿ ಕ್ರೀಡಾ ಸ್ಪರ್ಧೆ ಆಯೋಜನೆ ಸಾಮಾನ್ಯ. ಆದರೆ ಸಾಂಸ್ಕೃತಿಕ ಸ್ಪರ್ದೆಗಳು ನಡೆಸುತ್ತಿರುವುದು ವಿಶೇಷವಾಗಿದೆ. ಸ್ಪರ್ಧೆಗಳಲ್ಲಿ ಗೆಲ್ಲುವುದು ಮುಖ್ಯವಲ್ಲ, ಪಾಲ್ಗೊಳ್ಳುವುದು ಮುಖ್ಯ. ಇಂತಹ ಸ್ಪರ್ಧೆಗಳು ನಿಮ್ಮ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿವೆ ಎಂದರು.

ಪ್ರೊ. ಕೃಷ್ಣಮೂರ್ತಿ ಬಿಳಿಗೆರೆ ಮಾತನಾಡಿ, ಸಾಂಸ್ಕೃತಿಕ ಬದುಕು ಬಡವಾದರೆ ನಾವೆಷ್ಟೇ ಶ್ರೀಮಂತರಾದರೂ ಪ್ರಯೋಜನವಿಲ್ಲ. ಸಾಂಸ್ಕೃತಿಕ ಕ್ಷೇತ್ರ ರಾಜಕಾರಣವನ್ನು ನಿಯಂತ್ರಿಸುತ್ತದೆ. ಹಾಗಾಗಿ ಸಾಂಸ್ಕೃತಿಕ ಕ್ರಾಂತಿ ನಡೆಯಬೇಕಿದೆ ಎಂದರು.

ಸಾಂಸ್ಕೃತಿಕ ಕಾರ್ಯಕ್ರಮ ಒಂದು ಮಾನಸಿಕ ಕ್ರೀಡೆ. ಇದರಲ್ಲಿ ಎಲ್ಲಾ ಮಕ್ಕಳು ಸಾಂಸ್ಕೃತಿಕ ನಾಯಕತ್ವ ವಹಿಸಲಿದ್ದಾರೆ ಎಂದರು. ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಗೆ ಬರಬೇಕಾದರೆ ಶತಮಾನಗಳ ತ್ಯಾಗ, ಬಲಿದಾನ ಇದೆ. ಪ್ರಜಾಪ್ರಭುತ್ವದ ಧರ್ಮ ಉಳಿಯಲು ಸಾಂಸ್ಕೃತಿಕ ನಾಯಕರು ಬೇಕು ಎಂದು ಅವರು ತಿಳಿಸಿದರು.ಅಧಿಕಾರ ಎಂಬುದು ಅಹಂಕಾರ ಅಲ್ಲ, ಅದೊಂದು ಜವಾಬ್ದಾರಿ. ಇದನ್ನು ಅರ್ಥೆÊಸಿಕೊಂಡು ಅಧಿಕಾರದಲ್ಲಿರುವವರು ತಮ್ಮ ಜವಾಬ್ದಾರಿ ನಿರ್ವಹಿಸಿದರೆ ಎಲ್ಲವೂ ಸಮತೋಲನದಿಂದ ಸಾಗುತ್ತದೆ ಎಂದು ಅವರು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಶಾಸಕ ಜ್ಯೋತಿಗಣೇಶ್ ಮಾತನಾಡಿ, ಕಲೆ, ಸಾಹಿತ್ಯ, ಕ್ರೀಡೆ ಇಲ್ಲದ ಜೀವನ ಸತ್ತಂತೆ. ಆದ್ದರಿಂದ ವಿದ್ಯಾರ್ಥಿ ಜೀವನದಲ್ಲಿ ವಿದ್ಯಾರ್ಥಿಗಳು ಈ ಎಲ್ಲ ಚಟುವಟಿಕೆಗಳಲ್ಲಿ ಭಾಗಿಯಾಗುವ ಮೂಲಕ ತಮ್ಮ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು. ಪ್ರಸ್ತುತ ದಿನಗಳಲ್ಲಿ ಭಾಷೆಗಳು, ಸಂಸ್ಕೃತಿಗಳು ನಾಶವಾಗುತ್ತಿವೆ. ಇಂದಿನ ಪೀಳಿಗೆಗೂ ನಮಗೂ ಅಜಗಜಾಂತರ ವ್ಯತ್ಯಾಸಗಳು ಕಂಡು ಬರುತ್ತಿದೆ. ಹಾಗಾಗಿ ನಮಗೂ ಇಂದಿನ ಪೀಳಿಗೆಗೂ ಸೇತುವೆ ಕಟ್ಟುವ ಅನಿವಾರ್ಯತೆ ಇದೆ ಎಂದರು.

ಸಮಾರಂಭದಲ್ಲಿ ಜಿಲ್ಲಾಧಿಕಾರಿ ಶುಭಕಲ್ಯಾಣ್, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಡಾ. ಬಾಲಗುರುಮೂರ್ತಿ, ಪ್ರಾಂಶುಪಾಲರ ಸಂಘದ ಪ್ರಭಾಕರ್‌ರೆಡ್ಡಿ, ಡಾ. ಲಕ್ಷ್ಮಣದಾಸ್ , ಬಸವರಾಜು, ಮಹಾಲಿಂಗೇಶ್, ಮಲ್ಲಯ್ಯ, ಡಾ. ಸದಾಶಿವಯ್ಯ, ಚಂದ್ರಶೇಖರ್ ಆರಾಧ್ಯ, ರವಿಕುಮಾರ್, ಗೋವಿಂದರಾಜು ಮತ್ತಿತರರು ಉಪಸ್ಥಿತರಿದ್ದರು.

ಕೋಟ್‌

ವ್ಯಕ್ತಿತ್ವದ ಅಳತೆಗೋಲು ಎಂದು ಹೇಳಬಹುದು. ಇದನ್ನು ಗಮನದಲ್ಲಿಟ್ಟುಕೊಂಡು ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ಉತ್ತಮ ಪ್ರಜೆಗಳಾಗಿ ಹೊರಹೊಮ್ಮಿ ಅತ್ಯುತ್ತಮ ಭವಿಷ್ಯವನ್ನು ಕಂಡುಕೊಳ್ಳಬೇಕು - ಕೆ. ಎನ್‌. ರಾಜಣ್ಣ, ಸಚಿವಬಾಕ್ಸ್‌..

ಏಕ ಸಂಸ್ಕೃತಿ ಹೇರಿಕೆಗೆ ಹುನ್ನಾರ: ಬಿಳಿಮಲೆ

ಸಮಾರಂಭ ಉದ್ಘಾಟಿಸಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ್ ಬಿಳಿಮಲೆ ಮಾತನಾಡಿ, ನಮ್ಮದು ಬೆಸೆಯುವ ಸಂಸ್ಕೃತಿ. ಎಲ್ಲವನ್ನು ಬೆಸೆದುಕೊಂಡು ನಾಡನ್ನು ರೂಪಿಸಿಕೊಂಡಿದ್ದೇವೆ. ಹಾಗಾಗಿ ನಾವು ಕೋಮುವಾದಿಗಳಾಗಬಾರದು, ಜಾತಿವಾದಿಗಳಾಗಬಾರದು, ಕನ್ನಡವಾದಿಗಳಾಗಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಪ್ರಾದೇಶಿಕವಾಗಿ ನೂರಾರು ಸಂಸ್ಕೃತಿಗಳು ನಮ್ಮ ನಾಡಿನಲ್ಲಿಯೇ ಇವೆ. ಇಂತಹ ವೈವಿಧ್ಯಮಯ ಸಂಸ್ಕೃತಿ ನಡುವೆ ಏಕ ಸಂಸ್ಕೃತಿಯ ಏರಿಕೆ ಮಾಡುವ ಹುನ್ನಾರ ನಡೆದಿದೆ. ಇದಕ್ಕೆ ನಾವು ಅವಕಾಶ ಕೊಡಬಾರದು ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ