ಕನ್ನಡಪ್ರಭ ವಾರ್ತೆ ಶಿರಾಳಕೊಪ್ಪ
ಶಿರಾಳಕೊಪ್ಪ ಬಳಿ ಇರುವ ಬಳ್ಳಿಗಾವಿ ಅಲ್ಲಮ ಪ್ರಭುಗಳು ವಾಸವಿದ್ದ ಸ್ಥಳ ಹಾಗೂ ಅವರ ಗದ್ದುಗೆಗೆ ೧ಕೋಟಿ ರು. ವೆಚ್ಚದ ಅಭಿವೃದ್ಧಿ ಕಾರ್ಯಕ್ಕೆ ತಾಲೂಕು ಶಾಸಕ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರೊಂದಿಗೆ ಸಂಸದ ರಾಘವೇಂದ್ರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಈ ಅಭಿವೃದ್ಧಿ ಕಾರ್ಯಕ್ಕೆ ಬಿ.ವೈ. ವಿಜಯೇಂದ್ರ ತಮ್ಮ ಅನುದಾನದಲ್ಲಿ ೧ ಕೋಟಿ ರು. ಕೊಡುವುದಾಗಿ ಘೋಷಿಸಿದ್ದು, ತಾವು ಕೂಡ ಸಂಪೂರ್ಣ ಸಹಕಾರ ಕೊಡುತ್ತೇನೆ ಎಂದರು.ಈ ಹಿಂದೆ ನಮ್ಮ ಸರ್ಕಾರವಿದ್ದಾಗ ಇಲ್ಲಿನ ಅಭಿವೃದ್ಧಿಗೆ ೨ಕೋಟಿ ಹಣ ಬಿಡುಗಡೆ ಆಗಿತ್ತು, ಆದರೆ ಕೇಂದ್ರ ಪುರಾತತ್ವ ಇಲಾಖೆಯ ಹಾಗೂ ಸ್ಥಳೀಯವಾಗಿ ಕೆಲಸಂಗತಿ ತಿಳಿಯದೇ ಬಿಡುಗಡೆ ಆದ ಹಣ ವಾಪಸ್ಸು ಹೋಗಿ ಈ ಕೆಲಸ ಹಿಂದೆ ಬಿದ್ದಿತು. ಈಗ ಏನೇ ಆದರೂ ಈ ಕೆಲಸ ಹಾಗೂ ಇದರ ಸುತ್ತಮುತ್ತಲ ಕೆಲಸವನ್ನು ಮಾಡುತ್ತೇವೆ ಎಂದರು.
ಶಾಸಕ ಬಿ.ವೈ. ವಿಜಯೇಂದ್ರ ಮಾತನಾಡಿ, ಇಂತಹ ಐತಿಹಾಸಿಕ ಸ್ಥಳದ ಅಭಿವೃದ್ಧಿ ಕಾರ್ಯ ಮಾಡುವುದು ನಮ್ಮ ಪೂರ್ವಜನ್ಮದ ಪುಣ್ಯ ಎಂದು ಭಾವಿಸಿದ್ದೇನೆ. ಇಂದು ಬೆಳಗ್ಗೆ ಈ ಕ್ಷೇತ್ರಕ್ಕೆ ಅನುದಾನ ಕೊಡಬೇಕು ಎಂದು ಸಂಸದ ರಾಘಣ್ಣ ಹೇಳಿದಾಗ ಇತರ ಎಲ್ಲಾ ಕೆಲಸಗಳನ್ನು ಬದಿಗೊತ್ತಿ ೧ ಕೋಟಿ ಅನುದಾನ ಕೊಡುವುದಾಗಿ ತಿಳಿಸಿದ್ದೆ, ಈ ಹಿಂದೆ ಯಡಿಯೂರಪ್ಪನವರು ಮುಖ್ಯಮಂತ್ರಿ ಆದಾಗ ರಾಜ್ಯದಲ್ಲಿ ಸಾಕಷ್ಟು ಅಭಿವೃದ್ಧಿ ಆಯಿತು. ನಮ್ಮ ಶಿಕಾರಿಪುರ ತಾಲೂಕನ್ನು ವಿಜಯನಗರ ಸಾಮ್ರಾಜ್ಯ ಅಭಿವೃದ್ಧಿ ಆದಂತೆ ಅಭಿವೃದ್ಧಿಪಡಿಸಿದರು ಎಂದರು.
ಶಿರಾಳಕೊಪ್ಪ ವೀರಕ್ತಮಠದ ಸಿದ್ದೇಶ್ವರ ಸ್ವಾಮಿಗಳು ಆಶೀವರ್ಚನ ನೀಡಿ ಈ ಕಾರ್ಯಕ್ಕೆ ೧ ಲಕ್ಷ ರು. ಕೊಡುವುದಾಗಿ ಹೇಳಿದರು.