ಶ್ರೀನಿವಾಸನ ದಯೆಗಾಗಿ ಕಾದಿರುವ ಬಸ್‌ ನಿಲ್ದಾಣ

KannadaprabhaNewsNetwork |  
Published : Oct 15, 2025, 02:06 AM IST
ಮೂಲಭೂತ ಸೌಕರ್ಯವಿಲ್ಲದ ಗುಬ್ಬಿ ಬಸ್ ನಿಲ್ದಾಣ | Kannada Prabha

ಸಾರಾಂಶ

ಆನಂದ ದೀಕ್ಷಿತ, ಕನ್ನಡಪ್ರಭ ವಾರ್ತೆ ಗುಬ್ಬಿ ದೀಪದ ಕೆಳಗೆ ಕತ್ತಲು ಎನ್ನುವಂತೆ ರಾಷ್ಟ್ರದಲ್ಲಿಯೇ ಅತ್ಯುತ್ತಮ ಸಾರಿಗೆ ನಿಗಮ ಎಂಬ ಹೆಗ್ಗಳಿಕೆ ಪಡೆದಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷರ ತವರಿನಲ್ಲಿಯೇ ಬಸ್‌ ನಿಲ್ದಾಣ ಮೂಲ ಸೌಕರ್ಯದಿಂದ ನಲಗುತ್ತಿದೆ.

ಆನಂದ ದೀಕ್ಷಿತ, ಕನ್ನಡಪ್ರಭ ವಾರ್ತೆ ಗುಬ್ಬಿ ದೀಪದ ಕೆಳಗೆ ಕತ್ತಲು ಎನ್ನುವಂತೆ ರಾಷ್ಟ್ರದಲ್ಲಿಯೇ ಅತ್ಯುತ್ತಮ ಸಾರಿಗೆ ನಿಗಮ ಎಂಬ ಹೆಗ್ಗಳಿಕೆ ಪಡೆದಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷರ ತವರಿನಲ್ಲಿಯೇ ಬಸ್‌ ನಿಲ್ದಾಣ ಮೂಲ ಸೌಕರ್ಯದಿಂದ ನಲಗುತ್ತಿದೆ.

ಹೌದು, ಗುಬ್ಬಿ ಬಸ್ ನಿಲ್ದಾಣದಲ್ಲಿ ಹತ್ತು ಹಲವಾರು ಸಮಸ್ಯೆಗಳಿದ್ದರೂ ಕೆಎಸ್ಆರ್ ಟಿಸಿ ನಿಗಮದ ಅಧ್ಯಕ್ಷರೂ ಆಗಿರುವ ಶಾಸಕ ಎಸ್.ಆರ್. ಶ್ರೀನಿವಾಸ್ ಹಾಗೂ ತುಮಕೂರಿನ ಕೆಎಸ್ಆರ್‌ಟಿಸಿ ಡಿಪೋ ಮ್ಯಾನೇಜರ್ ಆಗಲಿ, ಇತ್ತ ತಲೆ ಹಾಕಿಲ್ಲ.

ಕುಡಿಯುವ ನೀರು, ಮಹಿಳೆಯರಿಗೆ ವಿಶ್ರಾಂತಿ ಕೊಠಡಿ ಸೇರಿದಂತೆ ಪ್ರಯಾಣಿಕರಿಗೆ ಮೂಲಭೂತ ಸೌಕರ್ಯ ಕಲ್ಪಿಸಲು ಪಟ್ಟಣದ ಕೆಎಸ್ಆರ್ ಟಿಸಿ ಬಸ್ ನಿಲ್ದಾಣ ವಿಫಲವಾಗಿದೆ. ಬಸ್ ನಿಲ್ದಾಣದಲ್ಲಿರುವ ಅವ್ಯವಸ್ಥೆ ಬಗ್ಗೆ ಈಗಾಗಲೇ ಪ್ರಯಾಣಿಕರು ಹಾಗೂ ವಿದ್ಯಾರ್ಥಿಗಳು ತುಮಕೂರಿನ ಡಿಪೋ ಮ್ಯಾನೇಜರ್ ಗೆ ದೂರವಾಣಿ ಮೂಲಕ ತಿಳಿಸಿದ್ದರೂ ಸಹ ಯಾವುದೇ ಕ್ರಮ ಕೈಗೊಂಡಿಲ್ಲ. ಗುಬ್ಬಿ ಬಸ್ ನಿಲ್ದಾಣದಿಂದ ನಿತ್ಯ ಸಾವಿರಾರು ಪ್ರಯಾಣಿಕರು ಸಾರಿಗೆ ಬಸ್ ಗಳಲ್ಲಿ ಸಂಚರಿಸುತ್ತಾರೆ. ಆದರೂ ಚಿಕ್ಕ ಮಕ್ಕಳಿಗೆ ಹಾಲು ಕುಡಿಸಲು ವಿರಾಮ ಕೊಠಡಿಯಿಲ್ಲ. ಕುಳಿತು ವಿಶ್ರಾಂತಿ ಪಡೆಯಲು ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕ ವಿಶ್ರಾಂತಿ ಕೊಠಡಿಗಳು ಇಲ್ಲವಾಗಿದೆ.

ಇತ್ತೀಚೆಗೆ ಬಸ್ ಸ್ಟಾಂಡಿನಲ್ಲಿ ಪ್ರಯಾಣಿಕರೊಬ್ಬರಿಗೆ ಕೆ ಎಸ್ ಆರ್ ಟಿ ಸಿ ಬಸ್ ಡಿಕ್ಕಿ ಹೊಡೆದು ಪ್ರಯಾಣಿಕನೊಬ್ಬ ಆಸ್ಪತ್ರೆ ಸೇರಿದ್ದಾನೆ. ಈ ಬಸ್ ಸ್ಟ್ಯಾಂಡಿನಲ್ಲಿ ಅನೇಕ ದುರಂತಗಳು ನಡೆಯುತ್ತಿದ್ದು. ದುರಂತ ನಡೆದಾಗ ಮಾತ್ರ ಭದ್ರತಾ ಸಿಬ್ಬಂದಿಯನ್ನು ನೇಮಿಸುತ್ತಾರೆ 15 ದಿನ ಭದ್ರತಾ ಸಿಬ್ಬಂದಿ ಕೆಲಸ ಮಾಡುತ್ತಾನೆ ನಂತರ ಕಾಣೆ ಆಗುತ್ತಾನೆ ಎಂದು ಪ್ರಯಾಣಿಕರು ದೂರಿದ್ದಾರೆ.ಬಸ್ ಸ್ಟಾಂಡ್ ಗೆ ಖಾಸಗಿ ವಾಹನ ಕೂಡ ಮನ ಬಂದಂತೆ ಬಂದು ಹೋಗುತ್ತಿದೆ. ಬಸ್ ಡಿಪೋ ಮಾಡಿ ಎಂದು ನಿಗಮ ಅಧ್ಯಕ್ಷರಿಗೆ ಸಾರ್ವಜನಿಕರು ತಿಳಿಸಿದರೂ ಸಹ ಅವರ ಮಾತಿಗೆ ಬೆಲೆ ಇಲ್ಲದಂತಾಗಿದೆ. ಇನ್ನು ಮುಂದಾದರೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಪ್ರಯಾಣಿಕರಿಗೆ ಅನುಕೂಲ ಮಾಡಬೇಕೆಂದು ಪ್ರಯಾಣಿಕ ಹಾಗೂ ಸಾರ್ವಜನಿಕರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಈ ಕೆಎಸ್ಆರ್ಟಿಸಿ ಬಸ್ ಸ್ಟ್ಯಾಂಡು 2004ರಲ್ಲಿ ಮಾಜಿ ಶಾಸಕ ದಿವಂಗತ ವೀರನಗೌಡರು ಹಾಗೂ ಸಚಿವ ಡಾ. ಪರಮೇಶ್, ಸಚಿವ ಜಯಚಂದ್ರ ಉದ್ಘಾಟನೆ ಮಾಡಿದ್ದು. ಈಗ ಈ ಬಸ್ ಸ್ಟ್ಯಾಂಡಿಗೆ 21 ವರ್ಷ ಆಗಿದ್ದು ಕೆಲವು ಭಾಗದಲ್ಲಿ ಮಳೆ ಬಂದರೆ ಸೋರುವ ಸ್ಥಿತಿಯಲ್ಲಿದೆ. ಗುಬ್ಬಿ ಬಸ್ ನಿಲ್ದಾಣವನ್ನು 10 ಕೋಟಿ ರು. ವೆಚ್ಚದಲ್ಲಿ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಉತ್ತಮವಾದ ಕೆಎಸ್ಆರ್ ಟಿಸಿ ಬಸ್ ನಿಲ್ದಾಣದ ಕಾಮಗಾರಿಗೆ ಅತಿ ಶೀಘ್ರದಲ್ಲಿಯೇ ಚಾಲನೆ ನೀಡಲಾಗುವುದು. - ಶ್ರೀನಿವಾಸ್, ಶಾಸಕರು ಹಾಗೂ ಅಧ್ಯಕ್ಷರು ಕೆಎಸ್‌ಆರ್‌ಟಿಸಿ. ಗುಬ್ಬಿ ಪಟ್ಟಣಕ್ಕೆ ಶೀಘ್ರ ಬಸ್ ಡಿಪೋ ಕಲ್ಪಿಸಬೇಕು. ಜೊತೆಗೆ ಮೂಲಭೂತ ಸೌಕರ್ಯ ಕಲ್ಪಿಸುವುದು ಜೊತೆಗೆ ನಿರಂತರವಾಗಿ ಬಸ್ ಸೌಕರ್ಯ ಕಲ್ಪಿಸಬೇಕು - ಸಿ.ಜಿ. ಲೋಕೇಶ್, ರೈತರ ಸಂಘದ ಪ್ರಧಾನ ಕಾರ್ಯದರ್ಶಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮರಳು ಮಾಫಿಯಾದಿಂದ ಶಾಸಕಿ ಕರೆಮ್ಮಗೆ ಬೆದರಿಕೆ
ಉಡುಪಿಯ ಕೃಷ್ಣಮಠದಲ್ಲಿ ಇನ್ನು ಭಕ್ತರಿಗೆ ಕಟ್ಟುನಿಟ್ಟಿನ ನಿಯಮ ಜಾರಿ