ಬಂಟ್ವಾಳ: ಗಂಡನ ಮನೆಯಲ್ಲಿನ ವರದಕ್ಷಿಣೆ ಕಿರುಕುಳ ತಾಳಲಾರದೆ ಮಾನಸಿಕವಾಗಿ ನೊಂದ ನವ ವಿವಾಹಿತೆ ತಾಯಿ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದ್ದು,ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಸಜೀಪ ಮೂಡ ಗ್ರಾಮದ ಸುಭಾಷ್ ನಗರ ನಿವಾಸಿ ನೌಸೀನ್ (22) ಮೃತರು. ನೌಸೀನ್ ಅವರು ಉಳ್ಳಾಲದ ಆಜ್ಮಾನ್ ಜೊತೆ ಮೂರು ತಿಂಗಳ ಹಿಂದೆ ಪ್ರೇಮ ವಿವಾಹ ವಾಗಿದ್ದರು. ವಿವಾಹ ಸಂದರ್ಭದಲ್ಲಿ 18 ಪವನ್ ಚಿನ್ನ ಉಡುಗೂರೆಯಾಗಿ ನೀಡಲಾಗಿತ್ತು. ಅತ್ತೆ ಝೂಬೈದಾ, ಮಗಳು ಅಜ್ಮೀಯಾ ಮತ್ತು ಗಂಡ ಸೇರಿಕೊಂಡು ಹೀಯಾಳಿಸಿದ್ದಲ್ಲದೆ, ಮಾನಸಿಕ ಕಿರುಕುಳ ಕೊಡುತ್ತಿದ್ದರು ಎಂದು ಆರೋಪಿಸಲಾಗಿದೆ. ಈ ಕಾರಣಕ್ಕಾಗಿ ಆಕೆ ಉಳ್ಳಾಲದ ಗಂಡನ ಮನೆಯಿಂದ ಸಜೀಪ ತಾಯಿ ಮನೆಗೆ ಬಂದಿದ್ದಳು.ಮಾನಸಿಕವಾಗಿ ನೊಂದಿದ್ದ ಆಕೆ ನೌಸೀನ ಆ.25 ರಂದು ಮನೆಯಲ್ಲಿ ಯಾರು ಇಲ್ಲದ ವೇಳೆ ಕೋಣೆಯೊಳಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ,ಈ ಸಾವಿನ ಬಗ್ಗೆ ಸೂಕ್ತವಾದ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಕೆಯ ಸಹೋದರ ನಾಸೀರ್ ನಗರ ಪೋಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಸಜೀಪ ಮೂಡ ನಿವಾಸಿ ನೌಸೀನ್ ಉಳ್ಳಾಲ ಮೂಲದ ಅಜ್ಮಾನ ಎಂಬವರಿಗೆ ಇನ್ ಸ್ಟಾಂಗ್ರಾಂ ಮೂಲಕ ಪರಿಚಯವಾಗಿ ಪರಸ್ಪರ ಪ್ರೀತಿ ಉಂಟಾಗಿ ಮನೆಯವರ ಒಪ್ಪಿಗೆ ಮುಖಾಂತರ ಆ.14 ರಂದು ಮದುವೆಯಾಗಿತ್ತು.