ಕಾರಟಗಿ ಪುರಸಭೆಯಲ್ಲಿ ಗೋಲ್ ಮಾಲ್ ಆರೋಪ, ತನಿಖೆಗೆ ಆಗ್ರಹ

KannadaprabhaNewsNetwork |  
Published : Oct 17, 2024, 12:57 AM IST
16ಕೆಪಿಎಲ್23 ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಗುಳಗಣ್ಣವರ ಮಾತನಾಡುತ್ತಿರುವುದು. | Kannada Prabha

ಸಾರಾಂಶ

ಕಾರಟಗಿ ಪುರಸಭೆಯಲ್ಲಿ ಆಡಳಿತಾಧಿಕಾರಿ ಅವಧಿಯಲ್ಲಿ ಭಾರಿ ಗೋಲ್ ಮಾಲ್ ಆಗಿದೆ. ಸುಳ್ಳು ಲೆಕ್ಕ ತೋರಿಸಿ, ಲಕ್ಷಾಂತರ ರುಪಾಯಿ ಲೂಟಿ ಮಾಡಲಾಗಿದೆ.

- ನವೀನ್ ಗುಳಗಣ್ಣವರ, ಹೇಮಲತಾ ನಾಯಕ ಆರೋಪ ಕನ್ನಡಪ್ರಭ ವಾರ್ತೆ ಕೊಪ್ಪಳ

ಕಾರಟಗಿ ಪುರಸಭೆಯಲ್ಲಿ ಆಡಳಿತಾಧಿಕಾರಿ ಅವಧಿಯಲ್ಲಿ ಭಾರಿ ಗೋಲ್ ಮಾಲ್ ಆಗಿದೆ. ಸುಳ್ಳು ಲೆಕ್ಕ ತೋರಿಸಿ, ಲಕ್ಷಾಂತರ ರುಪಾಯಿ ಲೂಟಿ ಮಾಡಲಾಗಿದೆ ಎಂದು ವಿಪ ಸದಸ್ಯೆ ಹೇಮಲತಾ ನಾಯಕ, ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಗುಳಗಣ್ಣವರ ಆರೋಪಿಸಿದ್ದಾರೆ.

ನಗರದ ಮೀಡಿಯಾ ಕ್ಲಬ್‌ನಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರಟಗಿ ಪುರಸಭೆಯ ದಾಖಲೆ ಬಿಡುಗಡೆ ಮಾಡಿದರು.

ಆಡಳಿತಾಧಿಕಾರಿ ಅವರ ಅವಧಿಯಲ್ಲಿ ತಿಂಗಳಿಗೆ ₹3 ಲಕ್ಷ ಇಂಧನ ವೆಚ್ಚಕ್ಕಾಗಿ ಬಳಕೆ ಮಾಡಲಾಗಿದೆ. ಆದರೆ, ಈಗ ಕೇವಲ ₹1 ಲಕ್ಷ ಬರುತ್ತದೆ. ಹಾಗಾದರೇ ಅಷ್ಟೇ ವಾಹನಗಳು ಈಗಲೂ ಇದ್ದರೂ ಇಂಧನ ಬಳಕೆಯಲ್ಲಿ ಕಡಿಮೆಯಾಗಿದ್ದು ಹೇಗೆ ಎಂದು ಪ್ರಶ್ನೆ ಮಾಡಿದರು. ಇದರಲ್ಲಿ ಗೋಲ್ ಮಾಲ್ ಆಗಿದ್ದು, ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಡಸ್ಟ್ ಬಿನ್ ಖರೀದಿಯಲ್ಲಿಯೂ ಅಕ್ರಮ ನಡೆದಿದೆ. ಡಸ್ಟ್ ಬಿನ್ ಗೆ ₹1550 ಖರ್ಚು ಹಾಕಲಾಗಿದೆ. ಆದರೆ, ಗುಣಮಟ್ಟದ ಮತ್ತು ಕಂಪನಿಯ ಡಸ್ಟ್ ಬಿನ್ ಗಳೇ ಕೇವಲ ₹850 ಇವೆ. ಇದಕ್ಕಾಗಿ ₹19 ಲಕ್ಷ ಖರ್ಚು ಮಾಡಲಾಗಿದೆ. ಅಚ್ಚರಿ ಎಂದರೇ ಯಾವೊಂದು ಡಸ್ಟ್ ಬಿನ್ ಸಹ ಇಲ್ಲ. ಹಾಗಾದರೇ ಬೋಗಸ್ ಬಿಲ್ ಮಾಡಲಾಗಿದೆ ಎಂದು ದೂರಿದರು.ಖಾಸಗಿ ಜಾಗದಲ್ಲಿ ಇಂದಿರಾ ಕ್ಯಾಂಟೀನ್:

ಸರ್ಕಾರದಿಂದ ಕಾರಟಗಿಯಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣ ಮಾಡುತ್ತಿರುವುದು ಸ್ವಾಗತರ್ಹ. ಆದರೆ, ಅದನ್ನು ಖಾಸಗಿ ಜಾಗೆಯಲ್ಲಿ ಮಾಡುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದರು.

ವಿವಾದ ಇರುವ ಜಾಗೆಯಲ್ಲಿ ನಿರ್ಮಾಣ ಮಾಡಲಾಗುತ್ತದೆ. ಕೋರ್ಟಿನಲ್ಲಿ ಆ ಜಾಗೆಯ ಸಮಸ್ಯೆ ಖಾಸಗಿಯವರಿಗೆ ಆದರೆ ಆಗ ಕಟ್ಟಿದ ಕಟ್ಟಡ ವ್ಯರ್ಥವಾಗುತ್ತದೆ. ಅಷ್ಟಕ್ಕೂ ಆ ಜಾಗೆಯ ವಿವಾದ ಇರುವುದು ಖಾಸಗಿಯವರ ನಡುವಿನ ವಿವಾದವಾಗಿದೆ. ಇದೆಲ್ಲವೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಗೊತ್ತಿದ್ದರೂ ಸಹ ನಿರ್ಮಾಣ ಮಾಡಲಾಗುತ್ತಿದೆ.

ತುರ್ತಾಗಿ ನಿರ್ಮಾಣ ಮಾಡಬೇಕು ಎನ್ನುವ ಕಾರಣಕ್ಕಾಗಿ ಸರ್ಕಾರದ ಹಣ ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಸರಿಯಲ್ಲ ಎಂದರು.

ಸಚಿವರ ಕುಮ್ಮಕ್ಕು:

ಪುರಸಭೆಯಲ್ಲಿ ಆಗಿರುವ ಅಕ್ರಮದ ಕುರಿತು ಎಷ್ಟೇ ದೂರು ನೀಡಿದರೂ ಯಾರು ಸಹ ಗಮನ ಹರಿಸುತ್ತಿಲ್ಲ. ಈ ಕುರಿತು ಪುರಸಭೆ ಸಾಮಾನ್ಯ ಸಭೆಯಲ್ಲಿ ಚರ್ಚೆಗೂ ಅವಕಾಶ ನೀಡುತ್ತಿಲ್ಲ. ಜಿಲ್ಲಾಧಿಕಾರಿಗಳಿಗೂ ಮನವಿ ಮಾಡಿದರೂ ಕ್ರಮವಹಿಸುತ್ತಿಲ್ಲ. ಕೂಡಲೇ ಈ ಕುರಿತು ಸಮಗ್ರ ತನಿಖೆಯಾಗಬೇಕು ಎಂದು ಆಗ್ರಹಿಸಿದರು.

ಮುಖಂಡರಾದ ಬಸವರಾಜ ಎತ್ತಿನಮನಿ, ಆನಂದ ಎಂ. ಕಾರಟಗಿ, ಫಕೀರಪ್ಪ ಇದ್ದರು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ