ಲ್ಯಾಂಡ್ ಜಿಹಾದ್ ಹೆಸರಲ್ಲಿ ವಕ್ಫ್ ಅಕ್ರಮ ಆರೋಪ

KannadaprabhaNewsNetwork | Published : Nov 6, 2024 12:53 AM

ಸಾರಾಂಶ

Allegation of illegal Waqf in the name of Land Jihad

ಚಿತ್ರದುರ್ಗದಲ್ಲಿ ಬಿಜೆಪಿ ಪ್ರತಿಭಟನೆ । ಜಿಲ್ಲಾಧಿಕಾರಿಗೆ ಮನವಿ ಸಲ್ಲಿಕೆ

------

ಕನ್ನಡಪ್ರಭ ವಾರ್ತೆ, ಚಿತ್ರದುರ್ಗ

ಲ್ಯಾಂಡ್ ಜಿಹಾದ್ ನೆಪದಲ್ಲಿ ರಾಜ್ಯ ಸರ್ಕಾರ ವಕ್ಫ್ ಅಕ್ರಮ ನಡೆಸುತ್ತಿದೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ನಗರದ ಒನಕೆ ಓಬವ್ವ ವೃತ್ತದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಬಿಜೆಪಿ ಕಾರ್ಯದರ್ಶಿ ಜಿಂಕಲ್ ಬಸವರಾಜ್, ನೂರಾರು ವರ್ಷಗಳಿಂದ ಉಳುಮೆ ಮಾಡುತ್ತಿರುವ ರೈತರ ಜಮೀನುಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ವಸತಿ ಸಚಿವ ಬಿ.ಝಡ್.ಜಮೀರ್ ವಶಪಡಿಸಿಕೊಳ್ಳಲು ಹೊರಟಿದ್ದಾರೆ. ಎಸ್ಸಿ, ಎಸ್ಟಿ ಹಾಗೂ ಸ್ಮಾರಕಗಳಿರುವ ಸಾವಿರಾರು ಎಕರೆ ಜಮೀನು ಕಬಳಿಸಿ ವಕ್ಫ್ ಎಂದು ನಮೂದಿಸಲು ಹೊರಟಿದೆ. ಸುಲಭವಾಗಿ ಪಹಣಿ ಬದಲಾಗುವುದಿಲ್ಲ. ಮುಟೇಷನ್ ಆಗಬೇಕು. ಮಠ ಮಾನ್ಯ, ಸ್ಕೂಲ್, ಚರ್ಚ್‍ಗೆ ಸೇರಿದ ಜಮೀನನ್ನು ತನ್ನ ವಶಕ್ಕೆ ತೆಗೆದುಕೊಳ್ಳುವ ಹುನ್ನಾರವಿದು. 1974 ರ ವಕ್ಫ್ ಕಾಯಿದೆ ಕೂಡಲೆ ರದ್ದುಪಡಿಸಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಬೇಕಾಗುತ್ತದೆಂದು ಎಚ್ಚರಿಸಿದರು.

ಎಂ.ಶಿವಮೂರ್ತಿ ಮಾತನಾಡಿ, ಚಳ್ಳಕೆರೆ ತಾಲೂಕಿನಲ್ಲಿ ಮಾದಿಗ ಸಮುದಾಯಕ್ಕೆ ಸೇರಿದ ಭೂಮಿಯನ್ನು ವಕ್ಫ್ ತನ್ನ ಸುಪರ್ದಿಗೆ ತೆಗೆದುಕೊಳ್ಳಲು ಹೊರಟಿದೆ. ವಕ್ಫ್ 1995ರಲ್ಲಿ ಬಂದಿದ್ದು, ನಮಗೆ 1959ರಲ್ಲಿ ಜಮೀನು ನೀಡಲಾಗಿದೆ. ಒಂದಕ್ಕೊಂದು ತಾಳೆಯಿಲ್ಲವಾದರೂ ರಾಜ್ಯ ಸರ್ಕಾರ ಜಮೀನು ಕಬಳಿಸಲು ಹೊರಟಿದೆ. ವಸತಿ ಸಚಿವ ಜಮೀರ್ ರಾಜ್ಯದ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ, ತಹಸೀಲ್ದಾರ್‌ ಗಳನ್ನು ಬೆದರಿಸುತ್ತಿದ್ದಾರೆ. ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ರೈತರ ಜಮೀನು ಉಳಿಯಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಒಂದೊಂದು ಕಡೆ ಒಂದೊಂದು ರೀತಿಯ ಹೇಳಿಕೆಗಳನ್ನು ನೀಡುತ್ತಿರುವುದು ಶೋಭೆಯಲ್ಲ ಎಂದರು.

ಭೀಮಸಮುದ್ರದ ಜಿ.ಎಸ್.ಅನಿತ್‍ಕುಮಾರ್ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಒಂದಲ್ಲ ಒಂದು ರೀತಿಯ ಹಗರಣದಲ್ಲೆ ಮುಳುಗಿದೆ. ಸಾಲದೆಂಬಂತೆ ಈಗ ವಕ್ಫ್ ಖ್ಯಾತೆ ಶುರು ಮಾಡಿದೆ. ಮುಡಾ, ವಾಲ್ಮೀಕಿ ಹಗರಣ ಮುಚ್ಚಿ ಹಾಕಲು ಲ್ಯಾಂಡ್ ಜಿಹಾದ್ ಕೈಗೆತ್ತಿಕೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ವಸತಿ ಸಚಿವ ಜಮೀರ್ ಅಹಮದ್‍ಖಾನ್ ಇವರು ಅಧಿಕಾರದಿಂದ ವಜಾಗೊಳಿಸಬೇಕೆಂದು ಒತ್ತಾಯಿಸಿದರು.

ಬಿಜೆಪಿ ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿ ಮಲ್ಲಿಕಾರ್ಜುನ್ ಮಾತನಾಡಿ, ಗುಡ್ಡದರಂಗವ್ವನಹಳ್ಳಿ ಬಳಿಯಿರುವ ವಿ.ವಿ ಜಾಗವನ್ನು ವಕ್ಫ್ ಗೆ ಸೇರಿಸಿಕೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ರೈತರ ಜಮೀನು ವಶಪಡಿಸಿಕೊಳ್ಳುವುದಿಲ್ಲವೆಂದು ಬಾಯಿ ಮಾತಿನಲ್ಲಿ ಹೇಳಿದರೆ ಸಾಲದು ಗೆಜೆಟ್ ನೋಟಿಫಿಕೇಷನ್ ಹೊರಡಿಸಬೇಕು. ರಾತ್ರೋ ರಾತ್ರಿ ಜಮೀನಿನ ಖಾತೆ ಬದಲಾವಣೆಯಾಗುತ್ತಿರುವುದರಿಂದ ಸಿಎಂ ಮತ್ತು ವಸತಿ ಸಚಿವ ಇಬ್ಬರು ರಾಜಿನಾಮೆ ನೀಡಬೇಕು. ಇಲ್ಲವಾದಲ್ಲಿ ಬೃಹತ್ ಹೋರಾಟ ನಡೆಸಲಾಗುವುದೆಂದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಪತ್‍ಕುಮಾರ್, ರಾಂದಾಸ್, ನಗರ ಮಂಡಲ ಅಧ್ಯಕ್ಷ ನವೀನ್ ಚಾಲುಕ್ಯ, ಗ್ರಾಮಾಂತರ ಮಂಡಲ ಅಧ್ಯಕ್ಷ ಕಲ್ಲೇಶಯ್ಯ ಯುವ ಮೋರ್ಚಾ ರಾಜ್ಯ ಕಾರ್ಯದರ್ಶಿ ಭಾರ್ಗವಿ ದ್ರಾವಿಡ್, ಮಾಧ್ಯಮ ವಕ್ತಾರ ದಗ್ಗೆಶಿವಪ್ರಕಾಶ್, ವಕ್ತಾರ ನಾಗರಾಜ್‍ಬೇದ್ರೆ, ಮೊಳಕಾಲ್ಮುರು ಮಂಡಲ ಅಧ್ಯಕ್ಷ ಡಾ.ಮಂಜುನಾಥ್, ಭರಮಸಾಗರ ಮಂಡಲ ಅಧ್ಯಕ್ಷ ಶೈಲೇಶ್, ಶಾಂತಮ್ಮ, ಯರ್ರಿಸ್ವಾಮಿ, ಲೋಕೇಶ್, ರಾಮು, ಚಂದ್ರು, ಸಿಂಧುತನಯ, ಪರಶುರಾಮ್, ಕಲ್ಲಂಸೀತಾರಾಮರೆಡ್ಡಿ, ಕಾರ್ಯದರ್ಶಿ ಮೋಹನ್, ನರೇಂದ್ರ ಹೊನ್ನಾಳಿ ಪಾಲ್ಗೊಂಡಿದ್ದರು.

-------------

ಪೋಟೋ:

ಲ್ಯಾಂಡ್ ಜಿಹಾದ್ ನೆಪದಲ್ಲಿ ರಾಜ್ಯ ಸರ್ಕಾರ ವಕ್ಫ್ ಅಕ್ರಮ ನಡೆಸುತ್ತಿದೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಚಿತ್ರದುರ್ಗದಲ್ಲಿ ಪ್ರತಿಭಟನೆ ನಡೆಸಿದರು.

------

ಪೋಟೋ ಫೈಲ್ ನೇಮ್- 5 ಸಿಟಿಡಿ6

Share this article