ಡಿಡಿಪಿಐ ವಿರುದ್ಧ ಆರೋಪ: ತನಿಖೆಗೆ ಇಬ್ಬರು ಅಧಿಕಾರಿಗಳ ನೇಮಕ

KannadaprabhaNewsNetwork |  
Published : Jun 12, 2025, 03:02 AM ISTUpdated : Jun 12, 2025, 03:03 AM IST
ಚಿಕ್ಕಮಗಳೂರಿನ ಜಿಪಂ ಸಭಾಂಗಣದಲ್ಲಿ ಸಂಸದ ಕೋಟಾ ಶ್ರೀನಿವಾಸ್‌ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ಬುಧವಾರ ದಿಶಾ ಸಭೆ ನಡೆಯಿತು. ಎಂ.ಕೆ. ಪ್ರಾಣೇಶ್‌, ಎಚ್‌.ಡಿ. ತಮ್ಮಯ್ಯ, ಎಸ್‌.ಎಲ್‌. ಭೋಜೇಗೌಡ, ಸಿ.ಟಿ. ರವಿ, ನಯನ ಮೋಟಮ್ಮ ಇದ್ದರು. | Kannada Prabha

ಸಾರಾಂಶ

ಚಿಕ್ಕಮಗಳೂರುಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ವಿರುದ್ಧ ಇರುವ ಆರೋಪಗಳ ಬಗ್ಗೆ ತನಿಖೆ ನಡೆಸಲು ಇಬ್ಬರು ಅಧಿಕಾರಿ ಗಳನ್ನು ನೇಮಕ ಮಾಡಿ ತನಿಖೆ ನಡೆಸಬೇಕು ಎಂದು ಸಂಸದ ಕೋಟಾ ಶ್ರೀನಿವಾಸ್‌ ಪೂಜಾರಿ ಜಿಪಂ ಸಿಇಒಗೆ ಸೂಚನೆ ನೀಡಿದರು.

15 ದಿನಗಳೊಳಗೆ ವರದಿ ನೀಡಲು ಸಂಸದರ ಸೂಚನೆ । ಚಿಕ್ಕಮಗಳೂರು ಜಿಪಂನಲ್ಲಿ ನಡೆದ ದಿಶಾ ಸಭೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ವಿರುದ್ಧ ಇರುವ ಆರೋಪಗಳ ಬಗ್ಗೆ ತನಿಖೆ ನಡೆಸಲು ಇಬ್ಬರು ಅಧಿಕಾರಿ ಗಳನ್ನು ನೇಮಕ ಮಾಡಿ ತನಿಖೆ ನಡೆಸಬೇಕು ಎಂದು ಸಂಸದ ಕೋಟಾ ಶ್ರೀನಿವಾಸ್‌ ಪೂಜಾರಿ ಜಿಪಂ ಸಿಇಒಗೆ ಸೂಚನೆ ನೀಡಿದರು.

ಜಿಪಂ ಸಭಾಂಗಣದಲ್ಲಿ ಬುಧವಾರ ನಡೆದ ಕೇಂದ್ರ ಪ್ರಾಯೋಜಿತ ಕಾರ್ಯಕ್ರಮಗಳ ಜಿಲ್ಲಾ ಮಟ್ಟದ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿಧಾನಪರಿಷತ್‌ ಸದಸ್ಯರು ಗಂಭೀರವಾಗಿ ಆರೋಪ ಮಾಡಿರುವ ಹಿನ್ನಲೆಯಲ್ಲಿ ತನಿಖಾಧಿಕಾರಿಗಳು ತನಿಖೆ ನಡೆಸಿ 15 ದಿನಗಳೊಳಗೆ ವರದಿ ನೀಡಬೇಕು ಎಂದು ಹೇಳಿದರು.

ಸಭೆ ಆರಂಭದಲ್ಲಿ ಅನುಪಾಲನಾ ವರದಿ ಮೇಲಿನ ಚರ್ಚೆಯಲ್ಲಿ ವಿಧಾನಪರಿಷತ್‌ ಸದಸ್ಯ ಎಸ್‌.ಎಲ್‌. ಭೋಜೇಗೌಡ ಮಾತನಾಡಿ, ಕಳೆದ ದಿಶಾ ಸಭೆಯಲ್ಲಿ ಶಾಲೆ ಬಿಟ್ಟು ಹೋಗಿರುವ ಮಕ್ಕಳನ್ನು ಶಾಲೆಗೆ ಕಡ್ಡಾಯವಾಗಿ ಕರೆ ತರಬೇಕೆಂದು ಡಿಡಿಪಿಐ ಅವರಿಗೆ ಸೂಚನೆ ನೀಡಲಾಗಿತ್ತು. ಈ ಕೆಲಸ ಆಗಿದೆಯಾ, ಅನುಪಾಲನಾ ವರದಿಯಲ್ಲಿ ಮುಖ್ಯವಾಹಿನಿಗೆ ತರಲು ಸಹಕರಿಸುತ್ತಿದ್ದಾರೆಂದು ಹೇಳಲಾಗಿದೆ. ಇದರ ಅರ್ಥ ಏನು ಎಂದು ಪ್ರಶ್ನಿಸಿದರು.

ಇದಕ್ಕೆ ವಿಧಾನಪರಿಷತ್‌ ಸದಸ್ಯ ಸಿ.ಟಿ. ರವಿ ಸಹ ಧ್ವನಿಗೂಡಿಸಿದರು. ಬಳಿಕ ಉತ್ತರ ನೀಡಿದ ಡಿಡಿಪಿಐ ಪುಟ್ಟರಾಜು ಅವರು, ಶಾಲೆಗಳಿಂದ ಹೊರಗುಳಿದ 195 ವಿದ್ಯಾರ್ಥಿಗಳ ಪೈಕಿ 97 ವಿದ್ಯಾರ್ಥಿಗಳನ್ನು ಪತ್ತೆ ಹಚ್ಚಿ ಶಾಲೆಗೆ ಸೇರಿಸಿಕೊಳ್ಳಲಾಗಿದೆ. ಇನ್ನುಳಿದವರನ್ನು ಪತ್ತೆ ಹಚ್ಚಿ ಶಾಲೆಗೆ ಸೇರಿಸಲಾಗುವುದು ಎಂದು ಹೇಳುತ್ತಿದ್ದಂತೆ, ಇವರಿಗೆ ಈ ವಿಷಯದಲ್ಲಿ ಆಸಕ್ತಿ ಇಲ್ಲ, ಇಂತಹ ಅಧಿಕಾರಿಗಳಿಂದ ಜಿಲ್ಲೆಯಲ್ಲಿ ಶೈಕ್ಷಣಿಕ ಗುಣಮಟ್ಟ ಸುಧಾರಣೆ ಆಗುವುದಿಲ್ಲ. ಅವರನ್ನು ರಜೆ ಮೇಲೆ ಕಳುಹಿಸಿ ಎಂದು ಎಸ್‌.ಎಲ್‌. ಭೋಜೇಗೌಡ ಹೇಳಿದರು.

ಶಿಕ್ಷಣ ಇಲಾಖೆಯಲ್ಲಿ ಆಗಿರುವ ಲೋಪದ ಬಗ್ಗೆ ಆರೋಪ ಬರುತ್ತಿರುವ ಹಿನ್ನಲೆಯಲ್ಲಿ ತನಿಖೆಗಾಗಿ ಇಬ್ಬರು ಅಧಿಕಾರಿಗಳನ್ನು ನೇಮಕ ಮಾಡಿ 15 ದಿನಗಳೊಳಗೆ ವರದಿ ನೀಡಬೇಕೆಂದು ಸಂಸದ ಕೋಟಾ ಶ್ರೀನಿವಾಸ್‌ ಪೂಜಾರಿ ಸೂಚನೆ ನೀಡಿದ ಮೇರೆಗೆ ಈ ವಿಷಯದ ಮೇಲಿನ ಚರ್ಚೆ ಅಂತಿಮಗೊಂಡಿತು.ವಸತಿ ಯೋಜನೆ: ನೋಟಿಸ್‌ ಜಾರಿ

ಪ್ರಧಾನಮಂತ್ರಿ ಅವಾಸ್‌ ಯೋಜನೆಯಡಿ 673 ಮನೆಗಳು ಮಂಜೂರಾಗಿದ್ದು, ಈ ಪೈಕಿ 6 ಮನೆಗಳು ಮಾತ್ರ ನಿರ್ಮಾಣ ಗೊಂಡಿವೆ. ಈ ಯೋಜನೆಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಪ್ರಗತಿ ಕಂಡು ಬಂದಿಲ್ಲ. ಈ ಕುರಿತು ಸಂಸದರು ಕಾರಣ ಕೇಳಿದಾಗ, ಜಿಪಂ ಸಿಇಒ ಕೀರ್ತನಾ ಉತ್ತರಿಸಿ, ಹಲವು ಫಲಾನುಭವಿಗಳು ಮೊದಲ ಕಂತಿನ ಅನುದಾನ ತೆಗೆದುಕೊಂಡು ಮನೆಗಳನ್ನು ನಿರ್ಮಾಣ ಮಾಡಿಲ್ಲ. ಆ ಹಣವನ್ನು ಬೇರೆ ಉದ್ದೇಶಕ್ಕಾಗಿ ಬಳಸಿಕೊಂಡಿದ್ದಾರೆ. ಅಂತಹವರಿಗೆ ಗ್ರಾಮ ಪಂಚಾಯ್ತಿಗಳಿಂದ 3 ಬಾರಿ ನೋಟಿಸ್‌ ನೀಡಲಾಗಿದೆ. ಮನೆಗಳನ್ನು ನಿರ್ಮಾಣ ಮಾಡಬೇಕು. ಇಲ್ಲವಾದಲ್ಲಿ ಈಗಾಗಲೇ ಪಡೆದಿರುವ ಹಣ ವಾಪಸ್‌ ನೀಡಬೇಕೆಂದು ಸೂಚನೆ ನೀಡಲಾಗಿದೆ ಎಂದರು.--- ಬಾಕ್ಸ್‌ ---ಜಲ ಜೀವನ್‌ ಮಿಷನ್‌ - ಕ್ಷೇತ್ರವಾರು ಪರಿಶೀಲನೆಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಂಪರ್ಕ ಕಲ್ಪಿಸುವ ಜಲ ಜೀವನ್‌ ಮಿಷನ್‌ ಯೋಜನೆ ಕುರಿತು ಚರ್ಚೆ ಆರಂಭವಾಗುತ್ತಿದ್ದಂತೆ ಸಂಸದ ಕೋಟಾ ಶ್ರೀನಿವಾಸ್‌ ಪೂಜಾರಿ ಇಲ್ಲಿಗೆ ಸಮೀಪದ ದಾಸರಹಳ್ಳಿ ಗ್ರಾಮದಲ್ಲಿ ಜಲಜೀವನ್‌ ಮಿಷನ್‌ ಯೋಜನೆ ನ್ಯೂನ್ಯತೆ ಕುರಿತು ಸಾರ್ವಜನಿಕರಿಂದ ಬಂದಿರುವ ದೂರನ್ನು ವಿವರವಾಗಿ ತಿಳಿಸಿದರು.

ಇದಕ್ಕೆ ಜಿಪಂ ಸಿಇಒ ಮಾತನಾಡಿ, ಹಲವೆಡೆ ಈ ರೀತಿ ನ್ಯೂನ್ಯತೆಗಳು ಕಂಡು ಬರುತ್ತಿದೆ. ನೀರಿನ ಲಭ್ಯತೆ ಪರಿಶೀಲಿಸದೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಅಲ್ಲಲ್ಲಿ ನೀರು ಅಲ್ಲದೆ ಹಲವು ಕಾಮಗಾರಿ ಮುಗಿಸಿದ್ದಾರೆ ಎಂದು ಹೇಳುತ್ತಿದ್ದಂತೆ, ಸಿ.ಟಿ. ರವಿ ಮಾತನಾಡಿ, ಜನರಿಗೆ ಅನುಕೂಲವಾಗಬೇಕು, ಗುತ್ತಿಗೆದಾರರಿಗೆ, ಅಧಿಕಾರಿಗಳಿಗಲ್ಲ, ಹಾಗಾಗಿ ತನಿಖೆ ನಡೆಸ ಬೇಕೆಂದು ಹೇಳಿದರು. ಇದಕ್ಕೆ ಧ್ವನಿಗೂಡಿಸಿದ ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ಈ ಕುರಿತು ಕ್ಷೇತ್ರವಾರು ಸಭೆ ನಡೆಸಿ ಪರಿಶೀಲನೆ ನಡೆಸದೇ ಹೋದರೆ ಈ ಯೋಜನೆ ವಿಫಲವಾಗಲಿದೆ ಎಂದರು.

ಅವರ ಸಲಹೆಯಂತೆ ಸಭೆ ನಡೆಸಲು ಜಿಲ್ಲಾಧಿಕಾರಿ ಮೀನಾ ನಾಗರಾಜ್‌ ಸಮ್ಮತಿಸಿದರು. ಈ ಎಲ್ಲಾ ಪ್ರಕ್ರಿಯೆ ಒಂದು ತಿಂಗಳೊಳಗೆ ಪೂರೈಸಬೇಕು ಎಂದು ಸಂಸದರು ಸೂಚನೆ ನೀಡಿದರು.

--- ಬಾಕ್ಸ್‌-- ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕಳೆದ 2 ವರ್ಷಗಳಿಂದ ಮೂಗ್ತಿಹಳ್ಳಿ - ಮೂಡಿಗೆರೆ (ರಾಷ್ಟ್ರೀಯ ಹೆದ್ದಾರಿ - 173) ಕಾಮಗಾರಿ ಪ್ರಸ್ತಾಪ ಆಗುತ್ತಲೇ ಇದೆ. ಯಾವಾಗ ಕಾಮಗಾರಿ ಆರಂಭವಾಗುತ್ತದೆ ಎಂದು ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ಪ್ರಶ್ನಿಸಿದರು.

ಉತ್ತರ ನೀಡಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿ, ಟೆಂಡರ್‌ ಪ್ರಕ್ರಿಯೆ ಶೇ. 90 ರಷ್ಟು ಮುಕ್ತಾಯವಾಗಿದೆ. ಕೇಂದ್ರದ ಹಣಕಾಸು ಇಲಾಖೆಯೂ ಒಪ್ಪಿಗೆ ಸೂಚಿಸಿದೆ. ಇನ್ನೊಂದು ಹಂತದ ಕಾಮಗಾರಿಗೆ ಒಪ್ಪಿಗೆ ಸಿಕ್ಕ ಕೂಡಲೇ ಟೆಂಡರ್‌ ಪ್ರಕ್ರಿಯೆ ಆರಂಭವಾಗಲಿದೆ ಎಂದು ಹೇಳಿದರು. ಈ ಕೆಲಸ ಇನ್ನೊಂದು ತಿಂಗಳೊಳಗೆ ಮುಗಿಸಬೇಕೆಂದು ಸಂಸದರು ಸೂಚನೆ ನೀಡಿದರು.

ಚಿಕ್ಕಮಗಳೂರು ನಗರದಲ್ಲಿ ರಿಂಗ್‌ ರೋಡ್‌ ಮಾಡುವ ಪ್ರಸ್ತಾವನೆ ಇದ್ದು, ಈ ನಕ್ಷೆ ಬದಲಾವಣೆ ಮಾಡುವ ಹುನ್ನಾರ ನಡೆಯುತ್ತಿದೆ ಎಂಬ ಮಾಹಿತಿ ಇದೆ. ಹಾಗೇನಾದರೂ ಅದಲ್ಲಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಎಚ್‌.ಡಿ. ತಮ್ಮಯ್ಯ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಈಗ ಸಿದ್ಧಪಡಿಸಿರುವ ನಕ್ಷೆ ಪ್ರಕಾರ ರಸ್ತೆ ನಿರ್ಮಾಣ ಮಾಡಿದರೆ ಏರ್‌ ಸ್ಟ್ರೀಪ್‌ ಮೇಲೆ ಹಾದು ಹೋಗಲಿದೆ. ಅದ್ದರಿಂದ ಪರಿಶೀಲನೆ ನಡೆಸಬೇಕೆಂದು ಸಲಹೆ ನೀಡಲಾಗಿದೆ ಎಂದು ಸಿ.ಟಿ. ರವಿ ಹೇಳುತ್ತಿದ್ದಂತೆ ಹಾಗೇನೂ ಆಗುವುದಿಲ್ಲ, ಅದೆಲ್ಲಾ ತಪ್ಪು ಮಾಹಿತಿ ಮೂಲ ನಕ್ಷೆಯಲ್ಲಿ ಯಾವುದೇ ರೀತಿಯಲ್ಲೂ ಬದಲಾವಣೆ ಮಾಡಬಾರದು. ಇದರಿಂದ ಕಾಮಗಾರಿ ಆರಂಭಕ್ಕೆ ಇನ್ನಷ್ಟು ತಡವಾಗಲಿದೆ ಎಂದು ತಮ್ಮಯ್ಯ ಹೇಳಿದರು. 11 ಕೆಸಿಕೆಎಂ 1ಚಿಕ್ಕಮಗಳೂರಿನ ಜಿಪಂ ಸಭಾಂಗಣದಲ್ಲಿ ಸಂಸದ ಕೋಟಾ ಶ್ರೀನಿವಾಸ್‌ ಪೂಜಾರಿ ಅಧ್ಯಕ್ಷತೆಯಲ್ಲಿ ಬುಧವಾರ ದಿಶಾ ಸಭೆ ನಡೆಯಿತು. ಎಂ.ಕೆ. ಪ್ರಾಣೇಶ್‌, ಎಚ್‌.ಡಿ. ತಮ್ಮಯ್ಯ, ಎಸ್‌.ಎಲ್‌. ಭೋಜೇಗೌಡ, ಸಿ.ಟಿ. ರವಿ, ನಯನಾ ಮೋಟಮ್ಮ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪುನೀತರಾಜಕುಮಾರ ಪುತ್ಥಳಿ ಅನಾವರಣ
ಬೆಂಗಳೂರು ನಗರದಲ್ಲಿ ಮತ್ತೊಂದು ಮೇಲ್ಸೇತುವೆ ನಿರ್ಮಾಣ