ನಿವೇಶನ ರಹಿತರಿಗೆ ಶೀಘ್ರ 20 ಸಾವಿರ ನಿವೇಶನ ಹಂಚಿಕೆ: ಟಿ.ಬಿ. ಜಯಚಂದ್ರ

KannadaprabhaNewsNetwork |  
Published : Feb 02, 2024, 01:00 AM IST
1ಶಿರಾ1: ಶಿರಾ ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಏರ್ಪಡಿಸಿದ್ದ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರಿಗೆ ಅರೋಗ್ಯ ವಿಮೆ ಬಾಂಡ್ ವಿತರಣಾ ಕಾರ್ಯಕ್ರಮವನ್ನು ಶಾಸಕ ಟಿ.ಬಿ.ಜಯಚಂದ್ರ ಉದ್ಘಾಟಿಸಿದರು. ನಗರಸಭೆ ಅಧ್ಯಕ್ಷೆ ಪೂಜಾ ಪೆದ್ದರಾಜು, ಪ್ರಾಂಶುಪಾಲರಾದ ಅನಿಲ್ಕುಮಾರ್ ಸೇರಿದಂತೆ ಹಲವರು ಹಾಜರಿದ್ದರು.  | Kannada Prabha

ಸಾರಾಂಶ

ಶೀಘ್ರದಲ್ಲಿಯೇ ನಿವೇಶನ ಹಂಚಿಕೆ ಕಾರ್ಯದಲ್ಲಿ ಕೈಗೊಳ್ಳಲಾಗುವುದು ಎಲ್ಲಾ ಅಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ಮಾಡಬೇಕು ಎಂದು ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ ಹೇಳಿದರು.

ಕನ್ನಡಪ್ರಭ ವಾರ್ತೆ ಶಿರಾ

ತಾಲೂಕಿನ ಎಲ್ಲಾ ಬಡವರಿಗೂ ಸುಮಾರು 20 ಸಾವಿರ ನಿವೇಶನ ನೀಡಲು ಸಂಕಲ್ಪ ಮಾಡಿ ತಾಲೂಕಿನಾದ್ಯಂತ ಸುಮಾರು 800 ಎಕರೆ ಜಾಗವನ್ನು ಗುರ್ತಿಸಿದ್ದೇನೆ. ಶೀಘ್ರದಲ್ಲಿಯೇ ನಿವೇಶನ ಹಂಚಿಕೆ ಕಾರ್ಯದಲ್ಲಿ ಕೈಗೊಳ್ಳಲಾಗುವುದು ಎಲ್ಲಾ ಅಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ಮಾಡಬೇಕು ಎಂದು ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ ಹೇಳಿದರು.

ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಏರ್ಪಡಿಸಿದ್ದ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರಿಗೆ ಆರೋಗ್ಯ ವಿಮೆ ಬಾಂಡ್ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪತ್ರಕರ್ತ ನಿವೇಶನ ನೀಡಲು ಕಳೆದ ಆರೇಳು ವರ್ಷಗಳ ಹಿಂದೆಯೇ ತೀರ್ಮಾನ ಮಾಡಿದ್ದೆ. ಕೊಡಲು ಆಗಲಿಲ್ಲ. ಈಗ ಸದಾವಕಾಶ ಬಂದಿದೆ. ಯಾವುದೇ ಸಂದರ್ಭದಲ್ಲಿ ಪತ್ರಕರ್ತರಿಗೆ ನಿವೇಶನ ಹಂಚುತ್ತೇನೆ ಎಂದರು.

ದೇಶಕ್ಕೆ ಡಾ.ಬಿ.ಆರ್‌. ಅಂಬೇಡ್ಕರ್‌ ಅವರು ರಚಿಸಿರುವ ಸಂವಿಧಾನದಲ್ಲಿ ನಾಲ್ಕು ಅಂಗಗಳಿವೆ. ಪತ್ರಿಕಾರಂಗವು ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗಗಳಲ್ಲಿನ ತಪ್ಪು ಒಪ್ಪುಗಳನ್ನು ಎತ್ತಿ ಹಿಡಿಯುವವರು. ಪತ್ರಿಕಾ ರಂಗಕ್ಕೆ ಸ್ವಾತಂತ್ರ್ಯವಿರಬೇಕು. ಪತ್ರಕರ್ತರು ಶಾಸಕನಾಗಿರುವವರ ಒಳ್ಳೆಯ ಗುಣಗಳನ್ನು ಬರೆಯಬೇಕು. ಕೆಟ್ಟದ್ದನ್ನು ಬರೆಯಬೇಕು. ಆಗ ಹಲವಾರು ತೊಂದರೆ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಅದಕ್ಕೆ ಧೈರ್ಯ ಬೇಕು. ನಮ್ಮ ದೇಶದಲ್ಲಿ ಬೇರೆ ದೇಶಕ್ಕೆ ಹೋಲಿಸಿದರೆ ಪತ್ರಿಕಾ ರಂಗಕ್ಕೆ ಇರುವ ಸ್ವಾತಂತ್ರ್ಯ ಕಡಿಮೆ ಇದೆ ಎಂದರು.

ನಗರಸಭಾ ಅಧ್ಯಕ್ಷೆ ಪೂಜಾ ಪೆದ್ದರಾಜು ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ವಿದ್ಯಾಭ್ಯಾಸ ಮಾಡಿ ತಮ್ಮ ತಂದೆ ತಾಯಿಗಳಿಗೆ ಕೀರ್ತಿ ತರಬೇಕು. ಓದಿ ಉನ್ನತ ಹುದ್ದೆ ಪಡೆದು ದೇಶ ವಿದೇಶದಲ್ಲಿ ಕೆಲಸ ಮಾಡಿದರೂ ತಮ್ಮ ಹೆತ್ತ ತಂದೆ ತಾಯಿಗಳನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಯಾವುದೇ ಕಾರಣಕ್ಕೂ ವೃದ್ಧಾಶ್ರಮಗಳಿಗೆ ಬಿಡಬಾರದು ಎಂದರು.

ಶಿರಾ ತಾಲೂಕಿನ ವಿದ್ಯಾರ್ಥಿಗಳು ತಾಂತ್ರಿಕ ಶಿಕ್ಷಣಕ್ಕೆ ತುಮಕೂರು ಸೇರಿದಂತೆ ವಿವಿಧ ಜಿಲ್ಲಾ ಕೇಂದ್ರಗಳಿಗೆ ಹೋಗಬೆಕಿತ್ತು. ಶಾಸಕ ಟಿ.ಬಿ. ಜಯಚಂದ್ರ ಅವರು ಶಿರಾದಲ್ಲಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಸ್ಥಾಪಿಸಿ ಸಾವಿರಾರು ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ ಎಂದರು.

ಪ್ರಾಂಶುಪಾಲ ಮೇಜರ್ ಅನಿಲ್ ಕುಮಾರ್‌ ಮಾತನಾಡಿ, ಶಿರಾದಲ್ಲಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಸ್ಥಾಪನೆಯಾಗಿದ್ದರಿಂದ ವಿದ್ಯಾರ್ಥಿಗಳಿಗೆ ಉತ್ತಮ ತಾಂತ್ರಿಕ ಶಿಕ್ಷಣ ದೊರಕುತ್ತಿದೆ. ವಿದ್ಯಾರ್ಥಿಗಳಿಗೆ ಉತ್ತಮ ವಿದ್ಯಾಭ್ಯಾಸ ನೀಡುವುದೇ ನಮ್ಮ ಉದ್ದೇಶ. ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಬೇಕಾದ ಎಲ್ಲಾ ಕಾರ್ಯಕ್ರಮಗಳನ್ನು ನಡೆಸುತ್ತಿದ್ದೇವೆ ಎಂದರು.

ಕಾರ್ಯಕ್ರಮದಲ್ಲಿ ನಗರಸಭೆ ವತಿಯಿಂದ ವಿದ್ಯಾರ್ಥಿನಿಯರಿಗೆ ಸ್ಯಾನಿಟರಿ ಪ್ಯಾಡ್ ಇನ್ಸಿನರೇಟರ್ ಹಾಗೂ ಸ್ಯಾನಿಟರಿ ಪ್ಯಾಡ್ ಡಿಸ್ಪೆನ್ಸರ್‌ ಯಂತ್ರಗಳನ್ನು ವಿತರಿಸಲಾಯಿತು. ನಗರಸಭೆ ಪರಿಸರ ಅಭಿಯಂತರೆ ಪಲ್ಲವಿ, ಶಿರಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಎನ್. ಜಯಪಾಲ್, ಜಿಲ್ಲಾ ಕಾರ್ಯದರ್ಶಿ ದಶರಥ, ಪ್ರಧಾನ ಕಾರ್ಯದರ್ಶಿ ದೇವರಾಜು ಎನ್, ಖಜಾಂಜಿ ಎಸ್.ಕೆ. ಕುಮಾರ್‌, ಪತ್ರಕರ್ತರಾದ ಶಿವಕುಮಾರ್‌, ಮಧುಸೂಧನ್, ಎಂ.ಎಲ್. ನಾಗರಾಜು, ಹನುಮಂತರಾಜು, ಬಾಲಕೃಷ್ಣೇಗೌಡ, ಜಿ.ಆರ್‌. ನಟರಾಜು, ಮಧುಸೂಧನ್ ಸೇರಿದಂತೆ ಹಲವರು ಹಾಜರಿದ್ದರು.

PREV

Recommended Stories

ದೇಶದ ನಾಯಕರಾಗಲು ಶಾಲೆಯಲ್ಲಿ ನಾಯಕತ್ವ ವಹಿಸಿಕೊಳ್ಳಿ
ಪರಿಷ್ಕೃತ ಜಿಎಸ್‌ಟಿ ಬಡ ಜನತೆಗೆ ಅನುಕೂಲ