ಸೋಮರಡ್ಡಿ ಅಳವಂಡಿ
ಹೌದು, ಕೊಪ್ಪಳ ನಗರದಲ್ಲಿ ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರ 2000ರಲ್ಲಿ ಮೊಟ್ಟಮೊದಲ ಲೇಔಟ್ ಮಾಡಿತ್ತು. ಇದಾದ ಮೇಲೆ ಇದುವರೆಗೂ ಯಾವುದೇ ಲೇಔಟ್ ಮಾಡಿಲ್ಲ.
ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಆಸಿಫ್ ಅಲಿ ಅವರು ಸುಮಾರು 28 ಎಕರೆ ಭೂಮಿ ಖರೀದಿ ಮಾಡಿ, ಲೇಔಟ್ ಮಾಡುವ ಪ್ರಕ್ರಿಯೆ ಪ್ರಾರಂಭಿಸಿದ್ದರು. ಆದರೆ, ಅದಾದ ಆನಂತರ ರೈತರ ಭೂಸ್ವಾಧೀನ ಸೇರಿದಂತೆ ನಾನಾ ಸಮಸ್ಯೆಗಳು ಮತ್ತು ಭೂಮಿಯ ಬೆಲೆ ಏರಿಕೆಯಾಗಿದ್ದರಿಂದ ರೈತರು ಭೂಮಿ ನೀಡಲು ನಿರಾಕರಿಸಿ, ಕೋರ್ಟ್ ಮೆಟ್ಟಿಲು ಏರಿದರು. ಪರಿಣಾಮ ಲೇಔಟ್ ನಿರ್ಮಾಣ ನನೆಗುದಿಗೆ ಬಿದ್ದಿತು.ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಕಳಕಪ್ಪ ಜಾಧವ್ ಅವರು ಇದ್ದಾಗ ರೈತರ ಭೂಮಿಯ ಪರಿಹಾರದ ಸಮಸ್ಯೆ ಇತ್ಯರ್ಥವಾಯಿತು. ಇದಾದ ಮೇಲೆ ಪುನಃ ಲೇಔಟ್ ನಿರ್ಮಾಣ ಪ್ರಕ್ರಿಯೆಗೆ ಮತ್ತೆ ಚಾಲನೆ ದೊರೆಯಿತು. ಇದಾದ ಮೇಲೆ ಲೇ ಔಟ್ ನಿರ್ಮಾಣವಾಗಿದ್ದರೂ ನಿವೇಶನ ಹಂಚಿಕೆಯಾಗಿರಲಿಲ್ಲ. ಈ ವೇಳೆಯಲ್ಲಿ ಇದರಲ್ಲಿ ಸುಮಾರು 19 ಎಕರೆ ಭೂಮಿಯನ್ನು ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ಬಿಟ್ಟುಕೊಡಲಾಯಿತು. ಹೀಗಾಗಿ ಉಳಿದ 9 ಎಕರೆಯನ್ನು ಸಹ ಮೆಡಿಕಲ್ ಕಾಲೇಜಿಗೆ ನೀಡಬೇಕು ಎನ್ನುವ ಕುರಿತು ಚರ್ಚೆ ನಡೆಯುತ್ತಲೇ ಇತ್ತು. ಆದರೆ, ಈ ನಡುವೆ ನಿವೇಶನಕ್ಕಾಗಿ ಸದಸ್ಯತ್ವ ಪಡೆದು, ಆರಂಭಿಕ ಶುಲ್ಕ ಪಾವತಿಸಿ ಕಾಯುತ್ತಲೇ ಇದ್ದವರು ನಮಗೆ ನಿವೇಶನ ನೀಡಲೇಬೇಕು ಎಂದು ಪಟ್ಟು ಹಿಡಿದರು. ಹಲವು ವರ್ಷ ಈ ವಿವಾದ ಮುಂದುವರಿಯಿತು.
ಇನ್ನೇನು ಪ್ರಕ್ರಿಯೆ ಮುಗಿದು ಹಂಚಿಕೆ ಮಾಡಬೇಕು ಎನ್ನುವಾಗ ಸರ್ಕಾರ ಬದಲಾಗಿ, ಪ್ರಾಧಿಕಾರದ ಅಧ್ಯಕ್ಷ ಮಹಾಂತೇಶ ಪಾಟೀಲ್ ಅವರ ಅವಧಿ ಮುಗಿಯಿತು. ಹೀಗಾಗಿ, ಮತ್ತೆ ನನೆಗುದಿಗೆ ಬಿದ್ದಿತು.
ಭರ್ಜರಿ ಲಾಭ: ನಿವೇಶವನ್ನು 2019ರಲ್ಲಿ ಆಗಿನ ಜಿಲ್ಲಾಧಿಕಾರಿ ಸುನೀಲ್ ಕುಮಾರ ಅವರು ಚದರ ಅಡಿಗೆ ₹700ರಂತೆ ದರ ನಿಗದಿ ಮಾಡಿದ್ದಾರೆ. ಈಗ ಅದೇ ದರದ ಆಧಾರ ಮೇಲೆ ಹಂಚಿಕೆ ಮಾಡಿದ್ದಾರೆ. ಸದ್ಯ ಮೆಡಿಕಲ್ ಕಾಲೇಜು ಸುತ್ತಮುತ್ತಲ ಪ್ರದೇಶದಲ್ಲಿ ಚದರ ಅಡಿಗೆ ₹1500-₹2500 ದರ ಇದೆ. ಹೀಗಾಗಿ, ನಿವೇಶನ ಪಡೆದವರಿಗೆ ಭರ್ಜರಿ ಲಾಭವಂತೂ ಆಗಿದೆ.