ಪ್ರಚಾರ ಸಭೆಯಲ್ಲಿ ಭಾಗಿ
ಕನ್ನಡಪ್ರಭ ವಾರ್ತೆ ಸಕಲೇಶಪುರತಮ್ಮ ತಬ್ಬಲಿ ಮಗನಿಗೂಂದು ಅವಕಾಶ ನೀಡಬೇಕು ಎಂದು ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ತಾಯಿ ಅನುಪಮ ಮನವಿ ಮಾಡಿದರು.
ತಾಲೂಕಿನ ಬಾಳ್ಳುಪೇಟೆಯಲ್ಲಿ ಶುಕ್ರವಾರ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಚುನಾವಣೆ ಪ್ರಚಾರ ಸಭೆಯಲ್ಲಿ ಮಾತನಾಡಿ, ‘ಜಿಲ್ಲೆಯ ಜನತೆ ನಮ್ಮ ಎದುರಾಳಿಗಳಿಗೆ ಗ್ರಾಪಂ ನಿಂದ ಪ್ರಧಾನಿ ಸ್ಥಾನದವರೆಗೂ ಅಧಿಕಾರ ನೀಡಿದ್ದೀರಿ. ಈ ಕುಟುಂಬದ ವಿರುದ್ದ ಹೋರಾಟ ಮಾಡಿ ಸುಸ್ತಾಗಿ ಮಂಡಿಯೂರಿ ಕುಳಿತುಕೊಳ್ಳುವಂತಾಗಿದೆ. ಚಿಕ್ಕವಯಸ್ಸಿನಲ್ಲೆ ತಂದೆ ಕಳೆದುಕೊಂಡ ಶ್ರೇಯಸ್ ಕಷ್ಟದ ನಡುವೆ ಬಧುಕಿ ಬಂದವನು. ನಿರಂತರ ಜನರ ನಡುವೆ ಇರುವ ಇವನಿಗೆ ಒಮ್ಮೆ ಎಲ್ಲರ ಆಶೀರ್ವಾದದ ಅಗತ್ಯವಿದೆ’ ಎಂದು ಹೇಳಿದರು.‘ಮಲೆನಾಡಿಗರನ್ನು ಹೆಚ್ಚಾಗಿ ಗೌರವಿಸುತ್ತಿದ್ದ ನನ್ನ ಮಾವ ಪುಟ್ಟಸ್ವಾಮಿಗೌಡರು ಮಲೆನಾಡಿಗೆ ಸಾಕಷ್ಟು ಅಭಿವೃದ್ದಿ ಕೆಲಸ ಮಾಡಿದ್ದಾರೆ. ಮಲೆನಾಡನ್ನು ಪ್ರಸ್ತುತ ಕಾಡುತ್ತಿರುವ ಜ್ವಲಂತ ಸಮಸ್ಯೆಗಳ ಬಗ್ಗೆ ನಮಗೆ ಅರಿವಿದ್ದು ತಾವು ನಮಗೆ ಆಶೀರ್ವಾದ ಮಾಡಿದ್ದೆ ಆದಲ್ಲಿ ಇಲ್ಲಿನ ಸಮಸ್ಯೆಗಳ ಶಾಶ್ವತ ನಿವಾರಣೆಗೆ ಶಕ್ತಿ ಮೀರಿ ಶ್ರಮಿಸಲಾಗುವುದು’ ಎಂದು ಭರವಸೆ ನೀಡಿದರು.
‘ಕಳೆದ ಬಾರಿ ಕಾಂಗ್ರೆಸ್ ಬೆಂಬಲದಿಂದ ಸಂಸತ್ ಪ್ರವೇಶಿಸಿದ ಸಂಸದ ಪ್ರಜ್ವಲ್ ಕಾಂಗ್ರೆಸ್ ವಿರುದ್ಧವೇ ಟೀಕೆ ಮಾಡುತ್ತಾರೆ. ಇವರಿಗೆ ನೀಯತ್ತು ಎಂಬುದು ಕಾಣೆಯಾಗಿದ್ದು ಮುಂದಿನ ದಿನಗಳಲ್ಲಿ ಬಿಜೆಪಿ ವಿರುದ್ದ ಮಾತನಾಡಿದರೂ ಆಶ್ಚರ್ಯವಿಲ್ಲ. ಯಾವುದಕ್ಕೂ ಜಾಗೃತವಾಗಿರಿ’ ಎಂದರು.ತಾಲೂಕಿನ ಹೆಗ್ಗೂವೆ,ಕುಣಿಗನಹಳ್ಳಿ,ಬಾಗೆ,ಬೆಳಗೋಡು ಗ್ರಾಮದಲ್ಲಿ ರೋಡ್ ಶೋ ಮೂಲಕ ಪ್ರಚಾರ ನಡೆಸಲಾಯಿತು. ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೈರಮುಡಿ ಚಂದ್ರು,ಮುಖಂಡ ಮುರುಳಿ ಮೋಹನ್, ಬಾಚಹಳ್ಳಿ ಪ್ರತಾಪ್, ಬ್ಯಾಕರವಳ್ಳಿ ವಿಜಯ್ ಕುಮಾರ್, ಬೈಕೆರೆ ದೇವರಾಜ್, ಕಲ್ಗಣೆ ಪ್ರಶಾಂತ್ ಇದ್ದರು.
ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶ್ರೇಯಸ್ ಪಟೇಲ್ ಪರವಾಗಿ ಅವರ ತಾಯಿ ಅನುಪಮ ಸಕಲೇಶಪುರದಲ್ಲಿ ರೋಡ್ ಶೋ ಮೂಲಕ ಮತಯಾಚಿಸಿದರು.