ಭಕ್ತರಿಗೆ ನಾಗಮಲೆಗೆ ಹೋಗಲು ಅವಕಾಶ ಮಾಡಿಕೊಡಿ

KannadaprabhaNewsNetwork | Published : Feb 27, 2024 1:34 AM

ಸಾರಾಂಶ

ಕಳೆದ ನೂರಾರು ವರ್ಷಗಳಿಂದ ನಾಗಮಲೆ ಶ್ರೀ ಕ್ಷೇತ್ರಕ್ಕೆ ಭಕ್ತಾದಿಗಳು ದರ್ಶನ ಮಾಡಿಕೊಂಡು ಬರುತ್ತಿದ್ದಾರೆ ಅವರಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಧಾರ್ಮಿಕ ಸೇವೆಗೆ ತೊಂದರೆ ನೀಡಬಾರದು ಎಂದು ಮಾಜಿ ಶಾಸಕ ಆರ್ ನರೇಂದ್ರ ತಿಳಿಸಿದರು.

ಕನ್ನಡಪ್ರಭ ವಾರ್ತೆ ಹನೂರು ಕಳೆದ ನೂರಾರು ವರ್ಷಗಳಿಂದ ನಾಗಮಲೆ ಶ್ರೀ ಕ್ಷೇತ್ರಕ್ಕೆ ಭಕ್ತಾದಿಗಳು ದರ್ಶನ ಮಾಡಿಕೊಂಡು ಬರುತ್ತಿದ್ದಾರೆ ಅವರಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಧಾರ್ಮಿಕ ಸೇವೆಗೆ ತೊಂದರೆ ನೀಡಬಾರದು ಎಂದು ಮಾಜಿ ಶಾಸಕ ಆರ್ ನರೇಂದ್ರ ತಿಳಿಸಿದರು.

ಕಾಂಗ್ರೆಸ್ ಕಚೇರಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿ ಕಳೆದ ನೂರಾರು ವರ್ಷಗಳಿಂದ ಮಂಡ್ಯ, ಮೈಸೂರು, ಚಾಮರಾಜನಗರ, ಕನಕಪುರ ರಾಮನಗರ ಸೇರಿದಂತೆ ತಮಿಳುನಾಡಿನಿಂದ ಸಾವಿರಾರು ಭಕ್ತರು ನಾಗಮಲೆ ಕ್ಷೇತ್ರಕ್ಕೆ ಭೇಟಿ ನೀಡಿ ತಮ್ಮ ಹರಕೆ ಸಲ್ಲಿಸುತ್ತಿದ್ದಾರೆ. ಅರಣ್ಯ ಇಲಾಖೆಯವರು ಧಾರ್ಮಿಕ ಭಾವನೆಗೆ ದಕ್ಕೆ ತರಬಾರದು ಭಕ್ತರಿಗೆ ನಾಗಮಲೆಗೆ ಹೋಗಲು ಅವಕಾಶ ಮಾಡಿಕೊಡಬೇಕು, ಮಲೆ ಮಹದೇಶ್ವರ ಬೆಟ್ಟ ಕಾಡಂಚಿನ ಐದು ಗ್ರಾಮಗಳ ಜನರು ಸಣ್ಣಪುಟ್ಟ ಅಂಗಡಿಗಳನ್ನು ತೆರೆದು ನಾಗಮಲೆ ಕ್ಷೇತ್ರಕ್ಕೆ ಹೋಗುವವರನ್ನೇ ನಂಬಿಕೊಂಡು ಸಣ್ಣಪುಟ್ಟ ವ್ಯಾಪಾರ ಹಾಗೂ ಜ್ಯೂಸ್ ಮಜ್ಜಿಗೆ ಮಾರಾಟ ಮಾಡಿ ಜೀವನ ನಡೆಸುತ್ತಿದ್ದಾರೆ. ಸರ್ಕಾರಕ್ಕೆ ಚಾರಣ ಹೋಗುವವರಿಗೆ ನಿರ್ಬಂಧವಿದ್ದರೆ ಅದರ ಬಗ್ಗೆ ನಮ್ಮ ಯಾವುದೇ ಅಭ್ಯಂತರವಿಲ್ಲ, ನಿಮ್ಮ ಕಾನೂನನ್ನು ಪಾಲನೆ ಮಾಡಿ ಸರ್ಕಾರದ ನಿಯಮದಂತೆ ಚಾರಣ ಹೋಗುವವರೆಗೂ ಆನ್ಲೈನ್ನಲ್ಲಿ ಬುಕ್ ಮಾಡಿಕೊಂಡು ಅವಕಾಶ ನೀಡುವುದಾಗಿ ತಿಳಿದು ಬಂದಿದೆ. ಅವರಿಗೂ ಸಹ ಅವಕಾಶ ಮಾಡಿಕೊಡಿ ಎಂದರು. ಇದನ್ನು ಹೊರತುಪಡಿಸಿ ನಾಗಮಲ್ಲೇಶ್ವರನ ದರ್ಶನಕ್ಕೆ ಹೋಗುವವರಿಗೆ ಯಾವುದೇ ತೊಂದರೆ ಕೊಡಬಾರದು. ಮಲೆ ಮಹದೇಶ್ವರ ಬೆಟ್ಟದಿಂದ ನಾಗಮಲೆ ಕ್ಷೇತ್ರಕ್ಕೆ ತೆರಳುವ ಭಕ್ತಾದಿಗಳನ್ನು ಜೀಪ್‌ನಲ್ಲಿ ಕರೆದುಕೊಂಡು ಹೋಗಲಾಗುತ್ತಿತ್ತು . ಇದೀಗ ಜೀಪ್‌ಗಳನ್ನು ಸಹ ನಿಷೇಧ ಮಾಡಲಾಗಿದೆ. ವಾಹನಗಳ ಸಮರ್ಪಕ ದಾಖಲಾತಿ ಇರುವವರಿಗೆ ಅವಕಾಶ ಮಾಡಿಕೊಡಬೇಕು. ಈ ಸಂಬಂಧ ಕೂಡಲೇ ಸಿಎಂ ಸಿದ್ದರಾಮಯ್ಯ ಹಾಗೂ ಅರಣ್ಯ ಸಚಿವ ಈಶ್ವರ್ ಖಂಡ್ರೆರವರ ಜೊತೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಲು ಕ್ರಮ ವಹಿಸುತ್ತೇನೆ ಅಲ್ಲಿಯವರೆಗೂ ಭಕ್ತಾದಿಗಳಿಗೆ ತೊಂದರೆ ನೀಡಬಾರದು ಎಂದರು.

ಖಂಡನೆ: ಇತ್ತೀಚಿನ ದಿನಗಳಲ್ಲಿ ಅರಣ್ಯ ಇಲಾಖೆಯ ಕಿರಿಯ ಅಧಿಕಾರಿಗಳು ರೈತರು ಹಾಗೂ ನಾಗರಿಕರ ಮೇಲೆ ಹಲ್ಲೆ ನಡೆಸುತ್ತಿರುವುದು ಖಂಡನೀಯ, ಕಳೆದ ವಾರ ರೈತರು ತಮ್ಮ ಜಮೀನಿನಲ್ಲಿ ಕಾಡಾನೆ ದಾಳಿಯಿಂದ ಫಸಲು ನಾಶವಾಗಿರುವುದರ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಲು ದೂರವಾಣಿ ಕರೆ ಮಾಡಿದ್ದಾರೆ. ಆದರೆ ಅವರು ಎರಡು ದಿನಗಳ ಕಳೆದರೂ ಬಾರದೆ ಇದ್ದಿದ್ದರಿಂದ ಮತ್ತೊಮ್ಮೆ ಕರೆ ಮಾಡಿ ಆನೆ ಸತ್ತು ಹೋಗಿದೆ ಎಂದು ಸ್ಥಳಕ್ಕೆ ಕರೆಸಿಕೊಂಡಿದ್ದಾರೆ. ರೈತರು ತಪ್ಪು ಮಾಹಿತಿ ನೀಡಿ ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಕರೆಸಿಕೊಂಡಿರುವುದು ಮೇಲ್ನೋಟಕ್ಕೆ ತಪ್ಪೇ ಇರಬಹುದು, ಆದರೆ ಅವರ ಸಂಕಟವನ್ನು ಹೇಳಿಕೊಳ್ಳಲು ಈ ರೀತಿ ಮಾಡಿದ್ದಾರೆ ಹೊರತು ಬೇರೆ ಉದ್ದೇಶದಿಂದ ಅವರು ಮಾಡಿಲ್ಲ. ಈ ಸಂದರ್ಭದಲ್ಲಿ ರೈತರ ಬೆಳೆ ನಾಶಕ್ಕೆ ಪರಿಹಾರ ಕೊಡುವ ಬದಲು ಅವರ ಜೊತೆ ವಾಗ್ವಾದ ನಡೆಸಿ ರೈತರು ಹಾಗೂ ರೈತ ಮಹಿಳೆಯರ ಮೇಲೆ ಹಲ್ಲೇ ಮಾಡಿರುವುದು ಸರಿಯಾದ ಕ್ರಮವಲ್ಲ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ತಮ್ಮ ಇಲಾಖೆಯ ಕಿರಿಯ ಅಧಿಕಾರಿಗಳಿಗೆ ಇನ್ನು ಮುಂದೆ ರೈತರ ಮೇಲೆ ಹಲ್ಲೆ ಮಾಡದಂತೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದ್ದಾರೆ.ಈ ಸಂದರ್ಭದಲ್ಲಿ ಪಪಂ ಸದಸ್ಯರಾದ ಗಿರೀಶ್, ಹರೀಶ್ ಹಾಜರಿದ್ದರು.

Share this article