ವರ್ಷಾಂತ್ಯಕ್ಕೆ ನೇರ ರೈಲು ಮಾರ್ಗ ಕಾಮಗಾರಿ ಆರಂಭದ ನಿರೀಕ್ಷೆ

KannadaprabhaNewsNetwork | Published : Feb 27, 2024 1:34 AM

ಸಾರಾಂಶ

ವರ್ಷಾಂತ್ಯಕ್ಕೆ ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲು ಮಾರ್ಗದ ಕಾಮಗಾರಿ ಆರಂಭವಾಗುವ ನಿರೀಕ್ಷೆಯಿದೆ ಎಂದು ಶಾಸಕ ವೀರೇಂದ್ರ ಪಪ್ಪಿ ಹೇಳಿದರು.

ಚಿತ್ರದುರ್ಗ: ವರ್ಷಾಂತ್ಯಕ್ಕೆ ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲು ಮಾರ್ಗದ ಕಾಮಗಾರಿ ಆರಂಭವಾಗುವ ನಿರೀಕ್ಷೆಯಿದೆ ಎಂದು ಶಾಸಕ ವೀರೇಂದ್ರ ಪಪ್ಪಿ ಹೇಳಿದರು.

ಅಮೃತ ಭಾರತ ರೈಲ್ವೇ ನಿಲ್ದಾಣ ಪುನರಾಭಿವೃದ್ಧಿ ಯೋಜನೆಯಡಿ 41 ಸಾವಿರ ಕೋಟಿ ರು. ವೆಚ್ಚದಲ್ಲಿ ದೇಶದ ವಿವಿಧ 554 ಪ್ರಮುಖ ರೈಲ್ವೇ ನಿಲ್ದಾಣಗಳ ಪುನರಾಭಿವೃದ್ಧಿ, 1500 ಮೇಲು ಹಾಗೂ ಕೆಳಸೇತುವೆಗಳ ಅಭಿವೃದ್ಧಿ ಕಾಮಗಾರಿಗೆ ಸೋಮವಾರ ಪ್ರಧಾನಮಂತ್ರಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದನ್ನು ಸಾಕ್ಷೀಕರಿಸಿ ಮಾತನಾಡಿದ ಅವರು, ನೇರ ರೈಲು ಯೋಜನೆ ಭೂಸ್ವಾಧೀನ ಪ್ರಕ್ರಿಯೆ ಸಂಪೂರ್ಣಗೊಳ್ಳುವ ಹಂತದಲ್ಲಿದೆ ಎಂದರು.

ದಾವಣಗೆರೆ ರಸ್ತೆ ಹಾಗೂ ಕವಾಡಿಗರಹಟ್ಟಿ ಹತ್ತಿರದ ಹೊಳಲ್ಕೆರೆ ರಸ್ತೆಯಲ್ಲಿ ರೇಲ್ವೇ ಸೇತುವೆ ನಿರ್ಮಾಣಕ್ಕೆ ಯೋಜನೆ ರೂಪಿಸಿ, ಮಂಡಳಿ ಅನುಮೋದನೆಗಾಗಿ ಕಳುಹಿಸಿ ಕೊಡಲಾಗಿದೆ. ಜೂನ್ ವೇಳೆಗೆ ಸೇತುವೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗುವುದು. ಅಮೃತ ಯೋಜನೆಯಡಿ 11.78 ಕೋಟಿ ರು. ವೆಚ್ಚದಲ್ಲಿ ಚಿತ್ರದುರ್ಗ ನಗರದ ರೈಲ್ವೇ ನಿಲ್ದಾಣವನ್ನು ನವೀಕರಿಸಿ ಮೇಲ್ದರ್ಜೆಗೆ ಏರಿಸಲಾಗುತ್ತಿದೆ ಎಂದರು.

ಚಿತ್ರದುರ್ಗ ರೈಲ್ವೇ ನಿಲ್ದಾಣ ಪುನರಾಭಿವೃದ್ಧಿ ಯೋಜನೆ ಜಿಲ್ಲೆಗೆ ಪ್ರಧಾನಿಗಳ ಅತಿದೊಡ್ಡ ಕೊಡುಗೆಯಾಗಿದೆ. ನೈರುತ್ಯ ರೈಲ್ವೇ ವಿಭಾಗದಲ್ಲಿ ಒಟ್ಟು 31 ರೈಲ್ವೇ ನಿಲ್ದಾಣಗಳನ್ನು ಅಭಿವೃದ್ಧಿ ಮಾಡಲಾಗುತ್ತಿದ್ದು, ಇದರಲ್ಲಿ ಚಿತ್ರದುರ್ಗ ಸೇರಿರುವುದಕ್ಕೆ ಸಂತಸವಾಗಿದೆ. ಚಿತ್ರದುರ್ಗದಲ್ಲಿ ರೈಲ್ವೇ ಹಾಸ್ಪಿಟಲ್ ಸಹ ನಿರ್ಮಿಸಲು ಬೇಡಿಕೆ ಕೂಗು ಕೇಳಿ ಬಂದಿದೆ. ಮುಂದಿನ ದಿನಗಳಲ್ಲಿ ಪ್ರಧಾನಮಂತ್ರಿ ಅವರನ್ನು ಭೇಟಿ ಮಾಡಿ ರೈಲ್ವೇ ಆಸ್ಪತ್ರೆ ನಿರ್ಮಾಣಕ್ಕೆ ಪ್ರಯತ್ನ ಪಡುವುದಾಗಿ ಶಾಸಕ ವೀರೇಂದ್ರ ಪಪ್ಪಿ ತಿಳಿಸಿದರು.

ಚಿತ್ರದುರ್ಗ ರೈಲ್ವೇ ನಿಲ್ದಾಣವನ್ನು, ಅಮೃತ ಭಾರತ ರೈಲ್ವೇ ನಿಲ್ದಾಣ ಪುನರಾಭಿವೃದ್ಧಿ ಯೋಜನೆಯಡಿ ನವೀನ ಹಾಗೂ ಆಧುನಿಕರಣಗೊಳಿಸಲಾಗುತ್ತಿದೆ. ವಿಶಾಲವಾದ ರೇಲ್ವೇ ಬುಕಿಂಗ್ ಕಚೇರಿ, ಪ್ಲಾಟ್ ಫಾರಂ, ಸುಸಜ್ಜಿತವಾದ ಶೌಚಾಲಯಗಳು, ಶಿಶು ಆರೈಕೆ ಕೇಂದ್ರ, ವಿಐಪಿ ಲಾಂಜ್, ಮಹಿಳೆಯರಿಗೆ ವಿಶ್ರಾಂತಿ ಕೊಠಡಿಗಳು, ಕೊರಿಯರ್ ಹಾಗೂ ಪಾರ್ಸೆಲ್ ಸೇವಾ ಕೇಂದ್ರಗಳು, ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ, ಸಿಸಿಟಿವಿ, ಉಚಿತ ವೈಫೈ, ಎಟಿಎಂ ಕೇಂದ್ರಗಳ ನಿರ್ಮಾಣದ ಜೊತೆಗೆ ವಿಕಲಚೇತನರು ಹಾಗೂ ಹಿರಿಯ ನಾಗರೀಕರ ಸ್ನೇಹಿಯಾಗಿ ರೇಲ್ವೇ ನಿಲ್ದಾಣ ಅಭಿವೃದ್ಧಿಯಾಗಲಿವೆ.

ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ ಸಂದೇಶ ಭಾಷಣ ಈ ಸಂದರ್ಭದಲ್ಲಿ ಪ್ರಸಾರ ಮಾಡಲಾಯಿತು.

ಇದೇ ಸಂದರ್ಭದಲ್ಲಿ ನವ ಭಾರತೀಯ ರೈಲ್ವೇ ಕಲ್ಪನೆ ಕುರಿತು ಮಕ್ಕಳಿಗಾಗಿ ಏರ್ಪಡಿಸಲಾದ ಪ್ರಬಂಧ ಹಾಗೂ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ನೈರುತ್ಯ ರೈಲ್ವೇ ಮುಖ್ಯ ಇಂಜಿನಿಯರ್ ಟಿ.ವಿ.ಭೂಷಣ್, ಹಿರಿಯ ವಿಭಾಗೀಯ ಇಂಜಿನಿಯರ್ ಬಿ.ರೋಹನ್ ಡೊಂಗ್ರೇ, ಡಿಎಸ್‍ಓ ಚಂದ್ರಶೇಖರ್ ಕಂಬಾಳಿ ಮಠ್, ಮುಖಂಡರಾದ ಮುರುಳಿ, ನಗರಸಭಾ ಸದಸ್ಯರಾದ ವೆಂಕಟೇಶ, ತಾರಕೇಶ್ವರಿ ಸೇರಿದಂತೆ ಮತ್ತಿರರು ಉಪಸ್ಥಿತರಿದ್ದರು.

Share this article