ಅಳ್ನಾವರ:
ಪಟ್ಟಣದಲ್ಲಿ ಮಂಗಳವಾರ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ ಅವರು, ಇಲ್ಲಿಯ ನಿವಾಸಿಗಳು ಪ್ರಸ್ತಾಪಿಸಿದ ಅನೇಕ ಸಮಸ್ಯೆಗಳನ್ನು ಪರಿಶೀಲಿಸಿ ಸಂಬಂಧಿಸಿದ ಇಲಾಖೆಗಳಿಂದ ಮಾಹಿತಿ ಪಡೆದು ಹಂತ-ಹಂತವಾಗಿ ಪರಿಹರಿಸಲು ಪ್ರಯತ್ನಿಸುತ್ತೇನೆ. ತಾಲೂಕು ಕೇಂದ್ರವಾಗಿರುವ ಅಳ್ನಾವರದ ಸರ್ಕಾರಿ ಆಸ್ಪತ್ರೆಯಲ್ಲಿ ಕಳೆದ ಏಳು ವರ್ಷದಿಂದ ಕಾಯಂ ಎಂಬಿಬಿಎಸ್ ವೈದ್ಯರಿಲ್ಲ ಎನ್ನುವುದು ಗಂಭೀರ ಸಮಸ್ಯೆ. ಆದಷ್ಟು ಶೀಘ್ರ ಪರಿಹಾರ ನೀಡಲಾಗುವುದು ಎಂದರು.
ಸಾರ್ವಜನಿಕರ ಅಹವಾಲುಗಳು ಕೇವಲ ಅರ್ಜಿ ರೂಪದಲ್ಲಿ ಉಳಿಯದೇ ನಿಗದಿತ ಅವಧಿಯಲ್ಲಿ ಪರಿಹಾರ ಸಿಗುವಂತೆ ಕ್ರಮ ಕೈಗೊಳ್ಳಲಾಗುವುದು ಎಂದ ಅವರು,ಅಧಿಕಾರಿಗಳು ಕಚೇರಿಯಲ್ಲಿ ಮಾತ್ರವಲ್ಲದೆ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಪರಿಶೀಲಿಸಬೇಕು. ಜನಸಾಮಾನ್ಯರೊಂದಿಗೆ ನೇರ ಸಂಪರ್ಕ ಹೆಚ್ಚಿಸಲು ತಿಂಗಳಿಗೆ ಕನಿಷ್ಠ ಒಂದು ಬಾರಿ ತಾಲೂಕು ಮಟ್ಟದಲ್ಲಿ ಸಾರ್ವಜನಿಕ ಸಭೆ ಮಾಡಲು ಸೂಚಿಸಿದ್ದೇನೆ ಎಂದರು. ಇದೇ ವೇಳೆ ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ ನಾಗರಿಕರು ರಸ್ತೆ, ಕುಡಿಯುವ ನೀರು, ಆಸ್ಪತ್ರೆ ಸೌಲಭ್ಯ, ಭೂ ದಾಖಲೆ, ಮನೆ ಹಂಚಿಕೆ, ವಿದ್ಯುತ್ ಸಮಸ್ಯೆ ಸೇರಿದಂತೆ ಅನೇಕ ವಿಷಯಗಳ ಕುರಿತು ಮನವಿ ಸಲ್ಲಿಸಿದರು.
ತಾಲೂಕಿನ ಇಂದಿರಮ್ಮನ ಕೆರೆಯನ್ನು ಪ್ರವಾಸಿ ತಾಣವನ್ನಾಗಿಸಲು ಹುಲಿಕೇರಿ ಗ್ರಾಮಸ್ಥರು ಮನವಿ ಸಲ್ಲಿಸಿದರೆ, ಪಟ್ಟಣದಲ್ಲಿರುವ ಶೌಚಾಲಯಗಳನ್ನು ದುರಸ್ತಿ ಮಾಡಿಸಿ ಸಾರ್ವಜನಿಕರ ಬಳಕೆಗೆ ಅನುಕೂಲ ಮಾಡಲು ಕೊಡುವುದು, ಪಟ್ಟಣದ ಮೂಲಭೂತ ಸೌಕರ್ಯಕ್ಕೆ ವಾರ್ಷಿಕ ₹ 5 ಕೋಟಿ ಅನುದಾನ ನೀಡುವುದು ಸೇರಿದಂತೆ ಗ್ರಂಥಾಲಯ ಪ್ರಾರಂಭ ಮತ್ತು ಆಶ್ರಯ ನಿವಾಸಿಗಳಿಗೆ ಮನೆಯ ಹಕ್ಕುಪತ್ರ ನೀಡುವಂತೆ ಮನವಿಗಳು ಸಲ್ಲಿಕೆಯಾದವು.
ಈ ವೇಳೆ ಪ್ರಭಾರ ತಹಸೀಲ್ದಾರ್ ಡಾ. ಡಿ.ಎಚ್. ಹೂಗಾರ, ಅಧಿಕಾರಿಗಳಾದ ಹನುಮಂತ ಕೊಚ್ಚರಗಿ, ಶಿರಸ್ತೇದಾರ ಅಜ್ಜಪ್ಪ ಮಂಗಳಗಟ್ಟಿ, ಎಂ.ಎಸ್. ಬಿರಾದಾರ, ರಾಜಶೇಖರ ಅನಗೌಡರ, ಡಾ. ಸುನೀಲ ಬನ್ನಿಗೋಳ, ರವಿಚಂದ್ರ ಪಾಟೀಲ, ಸಂಪತಕುಮಾರ ಒಡೆಯರ, ಗುರು ಸುಣಗಾರ, ಡಾ. ಕೆ.ಎನ್. ತನುಜಾ ಮತ್ತಿತರರು ಇದ್ದರು.
ಜಿಲ್ಲಾಧಿಕಾರಿಗಳ ಅಹವಾಲು ಸ್ವೀಕಾರ ಸಮಯದಲ್ಲಿ 10 ಕಂದಾಯ, 5 ಗ್ರಾಪಂ, 17 ಪಪಂ, 3 ಶಿಕ್ಷಣ ಇಲಾಖೆ, ಒಂದು ಪೊಲೀಸ್, ಮೂರು ಆರೋಗ್ಯ, ಎರಡು ಗ್ರಂಥಾಲಯ, ಒಂದು ಕ್ರೀಡೆ, ಮೂರು ಹೆಸ್ಕಾಂ ಸೇರಿದಂತೆ ಒಟ್ಟು 45 ಅರ್ಜಿಗಳು ಸ್ವೀಕಾರವಾಗಿವೆ.