ಧಾರವಾಡ ಜಿಲ್ಲಾಸ್ಪತ್ರೆಗೆ ಸಿಗುವುದೇ ಹೊಸ ಕ್ಯಾಂಪಸ್‌!

KannadaprabhaNewsNetwork |  
Published : Feb 18, 2026, 02:15 AM IST
ಧಾರವಾಡ ನಗರದ ಕೋಟಿ ಬಳಿ ಇರುವ ಜಿಲ್ಲಾಸ್ಪತ್ರೆ. | Kannada Prabha

ಸಾರಾಂಶ

ಪ್ರಸ್ತಾವಿತ ಹೊಸ ಆಸ್ಪತ್ರೆಯನ್ನು ರಾಷ್ಟ್ರೀಯ ಹೆದ್ದಾರಿ ಬೇಲೂರು ಬಳಿ 20 ಎಕರೆ ಸರ್ಕಾರಿ ಭೂಮಿಯಲ್ಲಿ ನಿರ್ಮಿಸಲು ಯೋಜಿಸಲಾಗಿದೆ. ಆರೋಗ್ಯ ಸೇವೆ ಸುಧಾರಿಸಲು ಆಧುನಿಕ 500 ಹಾಸಿಗೆಗಳ ಸೌಲಭ್ಯ ನಿರ್ಮಿಸಲು ಜಿಲ್ಲಾಡಳಿತವು ಸರ್ಕಾರದ ಅನುಮೋದನೆಗೆ ಎರಡು ವರ್ಷಗಳ ಹಿಂದೆಯೇ ಕಳುಹಿಸಿದೆ.

ಬಸವರಾಜ ಹಿರೇಮಠ

ಧಾರವಾಡ:

ನಿತ್ಯ ನೂರಾರು ಹೊರ ರೋಗಿಗಳ ಭೇಟಿ, ಅವರಿಗೆ ಸಮರ್ಪಕ ಚಿಕಿತ್ಸೆ ಒದಗಿಸುವುದು, ಅತ್ಯಧಿಕ ಸಂಖ್ಯೆಯಲ್ಲಿ ಹೆರಿಗೆ, ಮಹಿಳೆ, ಮಕ್ಕಳು, ಹಿರಿಯರು ಹೀಗೆ ಹಲವು ಪ್ರತ್ಯೇಕ ವಿಭಾಗಗಳ ನಿರ್ವಹಣೆ ಮತ್ತು ಹೆಚ್ಚಿನ ಸಂಖ್ಯೆಯ ಒಳರೋಗಿಗಳ ದಾಖಲಾತಿಯಿಂದ ಜಿಲ್ಲಾಸ್ಪತ್ರೆಯು ದಿನದಿಂದ ದಿನಕ್ಕೆ ತೀವ್ರ ಒತ್ತಡದ ಸಂದರ್ಭ ಅನುಭವಿಸುತ್ತಿದೆ. ಜನರ ದುರಾದೃಷ್ಟಕ್ಕೆ ಇದರ ಅಭಿವೃದ್ಧಿಗೆ ತಾಂತ್ರಿಕ ಕಾರಣಗಳು ಅಡ್ಡಿಯಾಗಿವೆ.

ಐತಿಹಾಸಿಕ ಮಹತ್ವವುಳ್ಳ ಧಾರವಾಡ ಕೋಟೆಗೆ ಹೊಂದಿಕೊಂಡು ಸ್ವಾತಂತ್ರ್ಯ ಪೂರ್ವದಲ್ಲಿ ನಿರ್ಮಾಣವಾದ ಈ ಜಿಲ್ಲಾಸ್ಪತ್ರೆಯು, ಆರೋಗ್ಯ ಸೇವೆಗಳಿಗೆ ಹೆಚ್ಚುತ್ತಿರುವ ಬೇಡಿಕೆ ಅನ್ವಯ ಪುನರ್‌ ರಚಿಸುವ ಅವಶ್ಯಕತೆ ಇದೆ. ಆದರೆ, ರಾಜಕೀಯ ಇಚ್ಛಾಶಕ್ತಿ ಇಲ್ಲದ ಕಾರಣ ಸಾಧ್ಯವಾಗುತ್ತಿಲ್ಲ. ಜಿಲ್ಲಾಸ್ಪತ್ರೆ ನವೀಕರಣಕ್ಕೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ASI) ನಿಯಮಗಳು ಒಂದೆಡೆ ಅಡ್ಡಿಯಾದರೆ, ಬೇರೆಡೆ ಸ್ಥಳಾಂತರಿಸಿ ಆಸ್ಪತ್ರೆಯನ್ನೇ ಪುನರ್‌ ರಚನೆ ಮಾಡಲು ರಾಜ್ಯ ಸರ್ಕಾರದ ವಿಳಂಬ ನೀತಿ ಎದುರಾಗಿದೆ. ಈ ಎರಡು ತಾಂತ್ರಿಕ ಕಾರಣಗಳ ಮಧ್ಯೆ ಸಿಲುಕಿರುವ ಆಸ್ಪತ್ರೆಯ ವಿಸ್ತರಣಾ ಯೋಜನೆಗಳು ಅನೇಕ ವರ್ಷಗಳಿಂದ ಸ್ಥಗಿತಗೊಂಡಿವೆ.

ಧಾರವಾಡ ಕೋಟೆ ಮತ್ತು ಸುತ್ತಮುತ್ತಲಿನ 300 ಮೀಟರ್ ಪ್ರದೇಶವನ್ನು ಸಂರಕ್ಷಿತ ಪ್ರದೇಶವೆಂದು ಘೋಷಿಸಲಾಗಿದೆ. ಇದು ಆಸ್ಪತ್ರೆಯು ದೊಡ್ಡ ಪ್ರಮಾಣದ ನಿರ್ಮಾಣ ಅಥವಾ ಪುನರಾಭಿವೃದ್ಧಿ ಮಾಡಲು ಮೊದಲ ಅಡ್ಡಿಯಾಗಿದೆ. ಹೊಸ-ಹೊಸ ವಿಭಾಗ ಹಾಗೂ ಹಾಸಿಗೆ ಸಾಮರ್ಥ್ಯ ಹೆಚ್ಚಿಸುವ ಮೂಲಕ ಆಸ್ಪತ್ರೆಯನ್ನು ಬಹು ವಿಶೇಷತಾ ಸೌಲಭ್ಯ, ಮೂಲಭೂತ ಸೌಕರ್ಯಗಳಿಗೆ ಪರಿವರ್ತಿಸುವ ಯೋಜನೆಗಳು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಎರಡು ವರ್ಷಗಳ ಹಿಂದೆಯೇ, ಜಿಲ್ಲಾಡಳಿತವು ಆಸ್ಪತ್ರೆಯನ್ನು ಧಾರವಾಡದಿಂದ 11 ಕಿಮೀ ದೂರದಲ್ಲಿರುವ ಬೇಲೂರಿನಲ್ಲಿರುವ ಹೊಸ ಕ್ಯಾಂಪಸ್‌ಗೆ ಸ್ಥಳಾಂತರಿಸಲು ಪ್ರಸ್ತಾಪಿಸಿದೆ.

₹ 363 ಕೋಟಿ ಬೇಡಿಕೆ:

ನಿತ್ಯ ಸಾವಿರಾರು ಬಡ ರೋಗಿಗಳು ಆಸ್ಪತ್ರೆಯ ಚಿಕಿತ್ಸೆ ನಿರೀಕ್ಷಿಸುತ್ತಾರೆ. ಹೆಚ್ಚಾಗಿ ಗ್ರಾಮೀಣ ಹಾಗೂ ದುರ್ಬಲ ವರ್ಗದ ಜನರೇ ಜಿಲ್ಲಾಸ್ಪತ್ರೆಗೆ ಬರುತ್ತಾರೆ. ನಿತ್ಯ 800 ಹೊರ ರೋಗಿಗಳು, 10ರಿಂದ 15 ಹೆರಿಗೆಗಳಾಗುತ್ತವೆ. ಆದ್ದರಿಂದ ಜಿಲ್ಲಾಸ್ಪತ್ರೆಗೆ ತುರ್ತಾಗಿ ಹೆಚ್ಚುವರಿ ಹಾಸಿಗೆ, ಸುಧಾರಿತ ಸೌಲಭ್ಯ, ಹೊಸ ವಿಭಾಗಗಳು ಸೇರಿದಂತೆ ಹೊಸ ವ್ಯವಸ್ಥೆ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಹೊಸ ಕ್ಯಾಂಪಸ್‌ಗೆ ಸ್ಥಳಾಂತರವಾಗಲು ₹ 363 ಕೋಟಿ ಅನುದಾನದ ಪ್ರಸ್ತಾವನೆ ಹೋಗಿದ್ದು, ಈ ಬಜೆಟ್‌ನಲ್ಲಿ ಘೋಷಣೆ ಮಾಡಿದರೆ ಅನುಕೂಲ ಎನ್ನುತ್ತಾರೆ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಸಂಗಪ್ಪ ಗಾಬಿ.

ಬಜೆಟ್‌ ನಿರೀಕ್ಷೆ?:

ಹುಬ್ಬಳ್ಳಿಯಲ್ಲಿರುವ ಕರ್ನಾಟಕ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ನಂತರ ಜಿಲ್ಲೆಗೆ ಮಾತ್ರವಲ್ಲದೆ ನೆರೆಯ ಪ್ರದೇಶಗಳಿಗೂ ಸೇವೆ ಸಲ್ಲಿಸುವ ಅತಿದೊಡ್ಡ ಸರ್ಕಾರಿ ಆಸ್ಪತ್ರೆ ಇದಾಗಿದೆ. ಇಷ್ಟಾಗಿಯೂ ಮೂಲಸೌಕರ್ಯಗಳ ಕೊರತೆಯಿಂದ ಬಹುತೇಕ ಗಂಭೀರ, ತುಸು ಗಂಭೀರ ಸಮಸ್ಯೆಯ ರೋಗಿಗಳನ್ನು ಹುಬ್ಬಳ್ಳಿಯ ಕಿಮ್ಸ್‌ಗೆ ಶಿಫಾರಸು ಮಾಡುವ ಸ್ಥಿತಿ ಇದೆ. ಇದರೊಂದಿಗೆ ಜಿಲ್ಲಾಸ್ಪತ್ರೆಯ ಪ್ರವೇಶದ ತೊಂದರೆಯೂ ಇದೆ. ಕೋಟೆ ಪ್ರದೇಶದಿಂದ ಬರುವ ಹಾಗೂ ಕಾರ್ಪೋರೇಶನ್‌ ವೃತ್ತದ ಮೂಲಕ ಬರುವ-ಹೋಗುವ ರಸ್ತೆಗಳು ಕಿರಿದಾಗಿದ್ದು, ದಟ್ಟಣೆಯೂ ಇರುತ್ತದೆ. ಆ್ಯಂಬುಲೆನ್ಸ್‌ಗಳು ಆಸ್ಪತ್ರೆಗೆ ಬರಲು-ಹೋಗಲು ಪರದಾಡಬೇಕಾಗುತ್ತದೆ. ಇದು ತೀವ್ರವಾಗಿ ಅಸ್ವಸ್ಥ ರೋಗಿಗಳಿಗೆ ಹಲವು ಬಾರಿ ಅಪಾಯ ತಂದಿರುವ ಉದಾಹರಣೆಗಳೂ ಇವೆ. ಈ ಹಿನ್ನೆಲೆಯಲ್ಲಿ ಈ ಬಾರಿಯಾದರೂ ರಾಜ್ಯ ಬಜೆಟ್‌ನಲ್ಲಿ ಜಿಲ್ಲಾಸ್ಪತ್ರೆಗೆ ಹೊಸ ವ್ಯವಸ್ಥೆಯ ಭಾಗ್ಯ ದೊರೆಯಲಿದೆಯೇ ಕಾದು ನೋಡಬೇಕಿದೆ.

ಪ್ರಸ್ತಾವಿತ ಹೊಸ ಆಸ್ಪತ್ರೆಯನ್ನು ರಾಷ್ಟ್ರೀಯ ಹೆದ್ದಾರಿ ಬೇಲೂರು ಬಳಿ 20 ಎಕರೆ ಸರ್ಕಾರಿ ಭೂಮಿಯಲ್ಲಿ ನಿರ್ಮಿಸಲು ಯೋಜಿಸಲಾಗಿದೆ. ಆರೋಗ್ಯ ಸೇವೆ ಸುಧಾರಿಸಲು ಆಧುನಿಕ 500 ಹಾಸಿಗೆಗಳ ಸೌಲಭ್ಯ ನಿರ್ಮಿಸಲು ಜಿಲ್ಲಾಡಳಿತವು ಸರ್ಕಾರದ ಅನುಮೋದನೆಗೆ ಎರಡು ವರ್ಷಗಳ ಹಿಂದೆಯೇ ಕಳುಹಿಸಿದೆ. ಹೊಸ ಕ್ಯಾಂಪಸ್, ಹೈಟೆಕ್‌ ವೈದ್ಯಕೀಯ ಮೂಲಸೌಕರ್ಯ ಮತ್ತು ಮೀಸಲಾದ ಹೃದ್ರೋಗ ಬ್ಲಾಕ್ ಒಳಗೊಂಡಿದೆ. ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಮತ್ತು ಶಾಸಕರಾದ ವಿನಯ ಕುಲಕರ್ಣಿ ಮತ್ತು ಎನ್‌.ಎಚ್. ಕೊನರಡ್ಡಿ ಸೇರಿದಂತೆ ಸ್ಥಳೀಯ ಚುನಾಯಿತ ಪ್ರತಿನಿಧಿಗಳು ಈ ಪ್ರಸ್ತಾವನೆಗೆ ಬೆಂಬಲವೂ ಇದೆ. ಅಷ್ಟೇ ಗಟ್ಟಿಯಾಗಿ ಮುಖ್ಯಮಂತ್ರಿಗೆ ಪ್ರಸ್ತಾಪಿಸಿ ಯೋಜನೆ ಅನುಮೋದನೆ ಮಾಡಿಕೊಂಡು ಬರುವ ಇಚ್ಛಾಶಕ್ತಿ ಈ ಮುಖಂಡರು ಬೆಳೆಸಿಕೊಳ್ಳಬೇಕಿದೆ ಎನ್ನುವುದು ಧಾರವಾಡ ಜನರ ಆಗ್ರಹ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗ್ರಾಮಸಭೆ ಅಭಿಪ್ರಾಯ ಯೋಜನೆಯಾಗಿ ಜಾರಿಯಾಗಲಿ: ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ
ಮಕ್ಕಳಲ್ಲಿ ಧಾರ್ಮಿಕ ಶ್ರೀಮಂತಿಕೆ ಬೆಳೆಸಲಿ: ಗವಿಸಿದ್ದೇಶ್ವರ ಶ್ರೀ