ಅಳ್ನಾವರದ ಕಟ್ಟಿಗೆ ವ್ಯಾಪಾರಕ್ಕೆ ಸಿಗುವುದೇ ಉತ್ತೇಜನ!

KannadaprabhaNewsNetwork |  
Published : Mar 01, 2026, 02:30 AM IST
ಕಟ್ಟಿಗೆಯ ಕೆಲಸದಲ್ಲಿ ನಿರತನಾಗಿರುವ ವ್ಯಕ್ತಿ. | Kannada Prabha

ಸಾರಾಂಶ

ಅಳ್ನಾವರದ ಸಾಗವಾನಿ ಸೇರಿದಂತೆ ತರಹೇವಾರಿ ಜಾತಿಯ ಕಟ್ಟಿಗೆಯು ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದೆ. ಅಳ್ನಾವರ ಕಟ್ಟಿಗೆ ವ್ಯಾಪಾರ ಅಷ್ಟೊಂದು ಸಮೃದ್ಧಿಯಾಗಿದ್ದು, ಪಟ್ಟಣದ ಮುಕ್ಕಾಲು ಭಾಗದ ಜನರು ತಮ್ಮ ಮೂಲ ಉದ್ಯೋಗ ಬಡಿಗತನಕ್ಕಾಗಿಯೇ ಅರ್ಪಿಸಿಕೊಂಡಿದ್ದಾರೆ.

ಶಶಿಕುಮಾರ ಪತಂಗೆ

ಅಳ್ನಾವರ

ಈ ವರ್ಷದ ಆರ್ಥಿಕ ಆಯವ್ಯಯದಲ್ಲಿ ಅಳ್ನಾವರದ ಕಟ್ಟಿಗೆ ವ್ಯಾಪಾರಕ್ಕೆ ಸರ್ಕಾರ ಉತ್ತೇಜನ ನೀಡಲು ಗುಡಿ ಕೈಗಾರಿಕೆ ಸ್ಥಾಪನೆ ಸೇರಿದಂತೆ ಹಲವು ಯೋಜನೆ ಘೋಷಿಸುವುದೇ ಎಂಬ ನಿರೀಕ್ಷೆಯಲ್ಲಿ ತಾಲೂಕಿನ ಜನರು ಬಜೆಟ್‌ನತ್ತ ಚಿತ್ತ ನೆಟ್ಟಿದ್ದಾರೆ.

ಅಳ್ನಾವರದ ಸಾಗವಾನಿ ಸೇರಿದಂತೆ ತರಹೇವಾರಿ ಜಾತಿಯ ಕಟ್ಟಿಗೆಯು ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದೆ. ಅಳ್ನಾವರ ಕಟ್ಟಿಗೆ ವ್ಯಾಪಾರ ಅಷ್ಟೊಂದು ಸಮೃದ್ಧಿಯಾಗಿದ್ದು, ಪಟ್ಟಣದ ಮುಕ್ಕಾಲು ಭಾಗದ ಜನರು ತಮ್ಮ ಮೂಲ ಉದ್ಯೋಗ ಬಡಿಗತನಕ್ಕಾಗಿಯೇ ಅರ್ಪಿಸಿಕೊಂಡಿದ್ದಾರೆ. ಆದರೆ, ಅವರಿಗೆ ಸರ್ಕಾರದಿಂದ ಸೂಕ್ತ ಗುಡಿ ಕೈಗಾರಿಕೆಯ ಕಾರ್ಖಾನೆಗಳಿಲ್ಲದೆ ತಮ್ಮ ಮನೆಗಳಲ್ಲೋ ಅಥವಾ ಟಿಂಬರ್ ವ್ಯಾಪಾರಿಗಳ ಕೈಕೆಳಗೋ ಕೆಲಸ ಮಾಡುವಂತಾಗಿದೆ. ಕಟ್ಟಿಗೆ ವಸ್ತುಗಳನ್ನು ನಿರ್ಮಿಸುವ ಕುಶಲ ಕಾರ್ಮಿಕರಿಗಾಗಿ ಪಟ್ಟಣದಲ್ಲಿ ಗುಡಿ ಕೈಗಾರಿಕಾ ವಲಯ ಸ್ಥಾಪಿಸಬೇಕಿದೆ.

ಕಾಲೇಜು ಸ್ಥಾಪನೆ?:

ಹಾಗೆಯೇ, ಅಪೂರ್ಣಗೊಂಡ ತಾಲೂಕು ಕ್ರೀಡಾಂಗಣದ ಕಾಮಗಾರಿ ಪೂರ್ಣಗೊಳಿಸುವ ಜತೆಗೆ ಶೈಕ್ಷಣಿಕವಾಗಿ ಪಟ್ಟಣವನ್ನು ಗಟ್ಟಿಗೊಳಿಸಲು ವಸತಿ ಶಾಲೆಗಳು ಸಹ ಅಗತ್ಯವಾಗಿದೆ. ಅಳ್ನಾವರ ಸೇರಿದಂತೆ ತಾಲೂಕಿನ ಗಡಿಯಲ್ಲಿರುವ ಖಾನಾಪೂರ, ಕಿತ್ತೂರು ಮತ್ತು ರಾಮನಗರದಿಂದ ನಿತ್ಯ ನೂರಾರು ವಿದ್ಯಾರ್ಥಿಗಳು ಡಿಪ್ಲೊಮಾ ಮತ್ತು ಐಟಿಐ ಕಾಲೇಜುಗಳಿಗೆ ಬೇರೆಡೆ ಹೋಗುತ್ತಿದ್ದು ಅಳ್ನಾವರದಲ್ಲಿಯೇ ಈ ಕಾಲೇಜುಗಳ ಸ್ಥಾಪನೆ ಮಾಡಬೇಕು ಎಂಬುದು ಈ ಭಾಗದ ವಿದ್ಯಾರ್ಥಿಗಳ ಆಗ್ರಹವಾಗಿದೆ.

ಸಮುದಾಯ ಆಸ್ಪತ್ರೆ:

ಕಳೆದ ವರ್ಷದ ಬಜೆಟ್‌ನಲ್ಲಿ ಸಚಿವ ಸಂತೋಷ ಲಾಡ್ ಇಲ್ಲಿಯ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೆರಿಸಿದ್ದರು. ಆದರೆ, ಇನ್ನೂ ಸಮುದಾಯ ಆರೋಗ್ಯ ಕೇಂದ್ರದ ಕಾಮಗಾರಿ ಪ್ರಾರಂಭವಾಗಿಲ್ಲ. ಇನ್ನಾದರೂ ಶೀಘ್ರವಾಗಿ ಕಾಮಗಾರಿಗೆ ವೇಗ ಸಿಗುವುದೇ ಎಂದು ಸ್ಥಳೀಯರು ಪ್ರಶ್ನಿಸುತ್ತಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮಂತ್ರಿ ಮಂಡಲದಲ್ಲಿರುವ, ಪ್ರಭಾವಿ ಸಚಿವರೂ ಆದ ಸಂತೋಷ ಲಾಡ್ ತಮ್ಮ ಕೇತ್ರಕ್ಕೆ ಹೆಚ್ಚಿನ ಅನುದಾನ ತಂದು ಹೊಸ ತಾಲೂಕು ಹಾಗೂ ರಾಜ್ಯದಲ್ಲಿಯೇ ಅತ್ಯಂತ ಸಣ್ಣ ತಾಲೂಕು ಎನಿಸಿರುವ ಅಳ್ನಾವರ ಅಭಿವೃದ್ಧಿಗೆ ಬಜೆಟ್‌ನಲ್ಲಿ ಕೊಡುಗೆ ನೀಡುತ್ತಾರೆಯೇ ಕಾದು ನೋಡಬೇಕಿದೆ. ಅಳ್ನಾವರಕ್ಕೆ ಕಟ್ಟಿಗೆ ಗುಡಿ ಕೈಗಾರಿಕೆ ಕಾರ್ಖಾನೆಗಳು ಮತ್ತು ಡಿಪ್ಲೊಮಾ, ಐಟಿಐ ಕಾಲೇಜಿನ ಅವಶ್ಯವಿದೆ. ಕಾರ್ಮಿಕ ಸಚಿವರು ಈ ಬಾರಿಯ ಬಜೆಟ್‌ನಲ್ಲಿ ನಮ್ಮ ಪಾಲಿನ ಬೇಡಿಕೆಗಳನ್ನು ಈಡೇರಿಸುತ್ತಾರೆ ಎಂಬ ನಂಬಿಕೆ, ವಿಶ್ವಾಸವಿದೆ.

ಪ್ರಶಾಂತ ಪವಾರ, ಸ್ಥಳಿಯ ನಿವಾಸಿಕಾರ್ಮಿಕ ಶೇಯೋಭಿವೃದ್ಧಿಗಾಗಿ ಸಂತೋಷ ಲಾಡ್ ರಾಜ್ಯದಲ್ಲಿ ಹಲವಾರು ಕಾರ್ಮಿಕ ಯೋಜನೆ ತಂದಿದ್ದು ಪಟ್ಟಣದಲ್ಲಿ ಸಣ್ಣ ಕೈಗಾರಿಕಾ ವಲಯ ಸ್ಥಾಪಿಸಲು ಸಚಿವರಿಗೆ ಮತ್ತು ಜಿಲ್ಲಾಧಿಕಾರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.

ಅಮೂಲ ಗುಂಜೀಕರ, ಪಪಂ ಮಾಜಿ ಅಧ್ಯಕ್ಷ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅನುಭವದ ಮೂಲಕ ವಿಜ್ಞಾನ ಕಲಿಯಿರಿ: ಕುಲಪತಿ ಖಾನ್‌
ಮಾರ್ಚ್ 5ರಂದು ರಾಮನಗರದಲ್ಲಿ ಉದ್ಯೋಗ ಮೇಳ