ಕನ್ನಡಪ್ರಭ ವಾರ್ತೆ ತುಮಕೂರು
ಸಿದ್ದಗಂಗಾ ಮಠದ ಗೋಸಲ ಸಿದ್ದೇಶ್ವರ ವೇದಿಕೆಯಲ್ಲಿ ಭಾನುವಾರ ಆಯೋಜಿಸಿದ್ದ ಶ್ರೀ ಸಿದ್ದಗಂಗಾ ಹಳೆಯ ವಿದ್ಯಾರ್ಥಿಗಳ ಹಾಗೂ ಹಿತೈಷಿಗಳ ಸಂಘದ ವತಿಯಿಂದ ಕೊಡಮಾಡುವ ಸಿದ್ದಗಂಗಾಶ್ರೀ ಸಂಘ ಸಿರಿ ಪ್ರಶಸ್ತಿಯನ್ನು ಪ್ರದಾನ ಮಾಡಿ ಮಾತನಾಡಿದ ಅವರು, ಪರಮಪೂಜ್ಯರಿಗೆ ಹಳೆಯ ವಿದ್ಯಾರ್ಥಿಗಳ ಕಂಡರೆ ಅಭಿಮಾನ, ಪ್ರೀತಿ ಇತ್ತು. ನಿಮ್ಮಲ್ಲಿ ಪೂಜ್ಯರನ್ನು ಕಂಡಷ್ಟು ಖುಷಿಯಾಗುತ್ತಿದೆ ಎಂದರು.
ಶ್ರೀಮಠದ ಬೆಳವಣಿಗೆಯ ಪ್ರತಿ ಹಂತದಲ್ಲು ಶ್ರೀಗಳ ಶ್ರಮ ಇದೆ. ಮಠದ ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಅವರ ಜೀವನವನ್ನೇ ಸಮರ್ಪಿಸಿಕೊಂಡಿದ್ದರು. ಶಿವಕುಮಾರ ಶ್ರೀಗಳ ಮೇಲಿನ ಭಕ್ತಿ, ಶ್ರದ್ಧೆ, ಅಭಿಮಾನ, ಪ್ರೀತಿಯಿಂದ ಹಳೆಯ ವಿದ್ಯಾರ್ಥಿಗಳು ಈ ಸಮಾವೇಶಕ್ಕೆ ನಾಡಿನೆಲ್ಲಡೆಯಿಂದ ಆಗಮಿಸಿದ್ದಾರೆ. ಇದೊಂದು ಕೃತಜ್ಞತಾ ಸಭೆ ಅಂದರೆ ತಪ್ಪಾಗಲಾರದು ಎಂದು ತಿಳಿಸಿದರು.ಮಕ್ಕಳಿಗೆ ಶಿಕ್ಷಣ ಕೊಡಬೇಕು ಎಂಬ ಗುರಿಹೊಂದಿದ್ದ ಶ್ರೀಗಳು, ಮಠದಲ್ಲಿ ಮಕ್ಕಳಿಗೆ ಅನ್ನ, ಆಶ್ರಯ, ಅಕ್ಷರ ದಾಸೋಹ ನೀಡಿದ್ದಲ್ಲದೆ ಗ್ರಾಮೀಣ ಭಾಗದಲ್ಲಿ ಗ್ರಾಮಾಂತರ ಶಾಲೆಗಳನ್ನು ತೆರೆದು ಅವರನ್ನು ಅಕ್ಷರಸ್ಥರನ್ನಾಗಿಸುವುದರ ಜತೆಗೆ ಸಂಸ್ಕಾರವನ್ನು ಕಲಿಸಿ ಉತ್ತಮ ಬದುಕು ರೂಪಿಸಿಕೊಳ್ಳಲು ಅವಕಾಶ ಕಲ್ಪಿಸಿದರು. ಶ್ರೀಗಳ ಆಶಯದಂತೆ ನಾವೆಲ್ಲಾ ಬದುಕೋಣ ಎಂದರು. ಸಿದ್ದಗಂಗಾ ಶಿವಕುಮಾರ ಶ್ರೀ ಪ್ರಶಸ್ತಿ ಸ್ವೀಕರಿಸಿ ಮೈಸೂರಿನ ಡಾ.ಎಸ್.ಪಿ.ಉಮಾದೇವಿ ಹಾಗೂ ಹಿರಿಯ ತಜ್ಞವೈದ್ಯ ತುಮಕೂರಿನ ಡಾ.ಸಿ.ಶರತ್ ಕುಮಾರ್ ಮಾತನಾಡಿದರು.
ಸಾಹಿತ್ಯ ಮತ್ತು ಶೈಕ್ಷಣಿಕ ಕ್ಷೇತ್ರದ ಸಾಧನೆಗಾಗಿ ಮೈಸೂರಿನ ಡಾ.ಎಸ್.ಪಿ.ಉಮಾದೇವಿ ಹಾಗೂ ಹಿರಿಯ ತಜ್ಞವೈದ್ಯ ತುಮಕೂರಿನ ಡಾ.ಸಿ.ಶರತ್ ಕುಮಾರ್ಗೆ ಸಿದ್ದಗಂಗಾ ಶಿವಕುಮಾರ ಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿಯು ತಲಾ 25 ಸಾವಿರ ರು., ನಗದು, ಪ್ರಶಸ್ತಿಪತ್ರ, ಸ್ಮರಣಿಕೆ ಹೊಂದಿದೆ.
ಈ ವೇಳೆ ಕೆಎಸ್ಒಯು ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ, ಸಿದ್ದಗಂಗಾ ಶಿಕ್ಷಣ ಸಂಸ್ಥೆಯ ಕಾರ‍್ಯನಿರ್ವಾಹಕ ನಿರ್ದೇಶಕ ಜಯವಿಭವ ಸ್ವಾಮಿ, ಕೆ.ಎಚ್.ಶಿವರುದ್ರಯ್ಯ, ಎಸ್.ಶಿವಕುಮಾರ್, ವಿದ್ವಾನ್ ಎಂ.ಜಿ.ಸಿದ್ದರಾಮಯ್ಯ ಮತ್ತಿತರರು ಉಪಸ್ಥಿತರಿದ್ದರು.