ಶಿಕ್ಷಣ ಸಂಸ್ಥೆ ಅಭಿವೃದ್ಧಿ ಯಲ್ಲಿ ಹಳೆ ವಿದ್ಯಾರ್ಥಿಗಳ ಪಾತ್ರ ದೊಡ್ಡದು: ಯದುವೀರ್ ಒಡೆಯರ್

KannadaprabhaNewsNetwork |  
Published : Jun 12, 2025, 12:42 AM IST
ಚಿತ್ರ :10ಎಂಡಿಕೆ5 : ಸಂಸದ ಯದುವೀರ್ ಒಡೆಯರ್ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸಿದರು.  | Kannada Prabha

ಸಾರಾಂಶ

ಯಾವುದೇ ಒಂದು ಶಿಕ್ಷಣ ಸಂಸ್ಥೆಯ ಸಮಗ್ರ ಅಭಿವೃದ್ಧಿಯಲ್ಲಿ ಹಳೆ ವಿದ್ಯಾರ್ಥಿಗಳ ಪಾತ್ರ ದೊಡ್ಡದು ಎಂದು ಸಂಸದ ಯದುವೀರ್‌ ಒಡೆಯರ್‌ ಹೇಳಿದರು.

ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

ಯಾವುದೇ ಒಂದು ಶಿಕ್ಷಣ ಸಂಸ್ಥೆಯ ಸಮಗ್ರ ಅಭಿವೃದ್ಧಿ ಯಲ್ಲಿ ಹಳೆಯ ವಿದ್ಯಾರ್ಥಿಗಳ ಪಾತ್ರ ದೊಡ್ಡದು ಎಂದು ಮೈಸೂರು- ಕೊಡಗು ಕ್ಷೇತ್ರದ ಸಂಸದ ಯದುವೀರ್ ಕೃಷ್ಣ ದತ್ತ ಚಾಮರಾಜ ಒಡೆಯರ್ ಹೇಳಿದರು.

ಸುಂಟಿಕೊಪ್ಪದ ಸರ್ಕಾರಿ ಪ್ರಾಥಮಿಕ, ಪ್ರೌಢ ಹಾಗೂ ಪದವಿಪೂರ್ವ ಕಾಲೇಜುಗಳ ಹಳೆಯ ವಿದ್ಯಾರ್ಥಿಗಳ ವತಿಯಿಂದ ಮಂಜನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ವ್ಯಕ್ತಿತ್ವ ವಿಕಸನ, ಗೌರವ ಸಮರ್ಪಣೆ ಹಾಗೂ ಪುಸ್ತಕ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

2047ರ :ಹೊತ್ತಿಗೆ ಭಾರತವು ವಿಕಸಿತ ಭಾರತ ಮಾಡಬೇಕೆಂದು ಪ್ರಧಾನಿ ಕನಸು ಕಂಡಿದ್ದಾರೆ. ಆ ಕನಸನ್ನು ನನಸಾಗಿಸುವ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮಗಳನ್ನು ಭಾರತ ಸರ್ಕಾರ ಹಮ್ಮಿಕೊಂಡಿದೆ. ಇಂತಹ ಕಾರ್ಯಕ್ರಮಗಳಲ್ಲಿ ಶಿಕ್ಷಣ ಪದ್ಧತಿಯನ್ನು ಅಮೂಲಾಗ್ರವಾಗಿ ಹೊಸತನದತ್ತ ಕೊಂಡೊಯ್ಯುವುದು ನಮ್ಮ ಆದ್ಯತೆಯಾಗಿದೆ. ಪ್ರಸ್ತುತ ವಿದ್ಯಾರ್ಥಿಗಳು ಅಮೃತ ಕಾಲದ ಪೀಳಿಗೆಯವರಾಗಿದ್ದು ಹೊಸತನ ಮತ್ತು ಬದಲಾವಣೆಗಳಿಗೆ ತಮ್ಮನ್ನು ತೆರೆದುಕೊಂಡು ಶಿಕ್ಷಣ ವ್ಯವಸ್ಥೆಯನ್ನು ಸದುಪಯೋಗ ಪಡಿಸಿಕೊಂಡು ಭವ್ಯ ಭಾರತದ ಸತ್ಪ್ರಜೆಗಳಾಗಿ ಬಾಳಬೇಕೆಂದು ಅವರು ಕರೆ ನೀಡಿದರು.

ಕೊಡಗು ಪ್ರಕೃತಿ ರಮಣೀಯತೆ ಮತ್ತು ರಾಷ್ಟ್ರೀಯತೆ ಮೇಳೈಸಿದ ಜಿಲ್ಲೆಯಾಗಿದ್ದು, ಮೈಸೂರು ಸಾಂಸ್ಕೃತಿಕವಾಗಿ ಅತ್ಯಂತ ಶ್ರೀಮಂತಿಕೆಯನ್ನು ಹೊಂದಿದ ಪ್ರದೇಶವಾಗಿದೆ. ಮೈಸೂರು ಮತ್ತು ಕೊಡಗನ್ನು ಯಾರು ಯಾರಿಗೂ ಪರಿಚಯಿಸಬೇಕಾದ ಅಗತ್ಯವಿಲ್ಲ .ಅಂತಹ ನೆಲ, ಜಲ, ಪ್ರಾದೇಶಿಕ ಸೊಗಡು , ಸಾಂಸ್ಕೃತಿಕ ಮಹತ್ವ ಮತ್ತು ಜನಜೀವನದ ವೈವಿಧ್ಯತೆಗಳನ್ನು ಹೊಂದಿದ ಪ್ರದೇಶವೆಂದು ಸಂಸದರು ಈ ಸಂದರ್ಭ ಬಣ್ಣಿಸಿದರು.

ಸಂಪೂರ್ಣವಾಗಿ ದುರಸ್ತಿ ಗೊಳಿಸಬೇಕು:

ಪ್ರಸ್ತುತ ಶಾಲಾ ಮೈದಾನಕ್ಕೆ ಬೇಲಿ ಮತ್ತು ಕ್ರೀಡಾಂಗಣವನ್ನು ಸಂಪೂರ್ಣವಾಗಿ ದುರಸ್ತಿಗೊಳಿಸಬೇಕು. ಆದರೆ ಮೈಸೂರು ಮತ್ತು ಕೊಡಗು ಬಹುದೊಡ್ಡ ಭೂ ವಿಸ್ತಾರವನ್ನು ಹೊಂದಿದ್ದು ಈ ಬಾರಿ ಬೇಲಿ ಅಥವಾ ಕ್ರೀಡಾಂಗಣ ಯಾವುದನ್ನು ಮೊದಲು ಮಾಡಬೇಕು ಎಂಬುದನ್ನು ನೀವು ನಿರ್ಧರಿಸಿ ಹೇಳಿದರೆ ಅದಕ್ಕೆ ಅನುದಾನ ಒದಗಿಸಲಾಗುವುದೆಂದು ಅವರು ಭರವಸೆ ನೀಡಿದರು.

ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ (ಅಭಿವೃದ್ಧಿ ) ರಾದ ಸಿ.ರಂಗಧಾಮಪ್ಪ ಮಾತನಾಡಿ, ಶಾಲೆಯ ಅಭಿವೃದ್ಧಿಗೆ ನಮ್ಮ ಶಾಲೆ, ನಮ್ಮ ಜವಾಬ್ದಾರಿ: ಕಾರ್ಯಕ್ರಮದಡಿ ಈ ಶಾಲೆಯ ಹಿರಿಯ ವಿದ್ಯಾರ್ಥಿಗಳಿಂದ ಈ ಶಾಲೆಗೆ ಉತ್ತಮ ಕೊಡುಗೆ ನೀಡಿರುವುದು ಹೆಮ್ಮೆ. ಮಕ್ಕಳಿಗೆ ಪೂರಕವಾಗಿ ಲೇಖನ ಸಾಮಾಗ್ರಿಗಳನ್ನು ಉಚಿತವಾಗಿ ನೀಡುತ್ತಿರುವುದು ಶ್ಲಾಘನೀಯವಾದುದು.

ಕ್ರೀಡಾ ಚಟುವಟಿಕೆಗಳಿಗೆ ಸಲಕರಣೆಗಳ ಅವಶ್ಯಕತೆ ಇದೆ. ಬ್ಯಾಂಡ್ ಸೆಟ್ ಮತ್ತು ಧ್ವನಿವರ್ಧಕ, ಮಕ್ಕಳಿಗೆ ಬಿಸಿಯೂಟಕ್ಕೆ ಉಚಿತ ತಟ್ಟೆ ನೀಡಲು ಮನವಿ ಮಾಡಿದರು.

ಉತ್ತಮ ಶಿಕ್ಷಣ ಕೊಡಬೇಕು:

ಹೆಸರಾಂತ ವಾಗ್ಮಿ ಬೆಂಗಳೂರಿನ ನಿಖಿತ್ ರಾಜ್ ಮೌರ್ಯ ಮಾತನಾಡಿ, ಮೇಷ್ಟ್ರು ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬಬೇಕು. ಸವಾಲನ್ನು ಸವಾಲಾಗಿ ಸ್ವೀಕರಿಸಬೇಕು ಮತ್ತು ಎದುರಿಸಬೇಕು.

ಸಮಾಜದಲ್ಲಿ ಜಾತಿ- ಧರ್ಮದ ಹೆಸರಿನಲ್ಲಿ ಘರ್ಷಣೆ ಆಗಬಾರದು. ಕಲಾಂ, ಪೇಪರ್ ಹಾಕುತ್ತಿದ್ದ ವ್ಯಕ್ತಿ, ಕನಸು, ಪೈಲೆಟ್ , ವಿಜ್ಞಾನಿ, ರಾಷ್ಟ್ರಪತಿ ಆದರು.

ಕನಸು ಕಾಣಿ, ನೀವು ಅವರ ರೀತಿಯಲ್ಲಿ ಕನಸು ಕಾಣಬೇಕು ಅದು ನಿದ್ರೆಯಲ್ಲಿ ಬೀಳುವ ಕನಸಾಗಬಾರದು. ನೀವು ಆತ್ಮ ವಿಶ್ವಾಸ ಬೆಳೆಸಿಕೊಳ್ಳಬೇಕು. ಬಡತನ, ಸಮಸ್ಯೆ ಎಷ್ಟೇ ಇದ್ದರೂ ತೊಂದರೆಗಳಿಲ್ಲ. ಸಾಧನೆಯ ಕನಸು ಬಿಡಬಾರದು. ಪೋಷಕರು ಮತ್ತು ಶಿಕ್ಷಕರು ಮಕ್ಕಳಲ್ಲಿ ಆತ್ಮವಿಶ್ವಾಸ ಬೆಳೆಸಬೇಕಾಗಿದೆ‌‌. ಶಿಕ್ಷಕರು, ಪೋಷಕರು ತಮ್ಮ ಮಕ್ಕಳಲ್ಲಿ ಬದುಕನ್ನು ಮತ್ತು ಸಮಾಜವನ್ನು ಎದುರಿಸುವ ಸವಾಲು, ಆತ್ಮವಿಶ್ವಾಸ ಹಾಗೂ ಧೈರ್ಯ ಬೆಳೆಸಿ. ಅವರಿಗೆ ಉತ್ತಮ ಶಿಕ್ಷಣ ಕೊಡಬೇಕು ಎಂದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪಿ.ಎಂ.ಲತೀಫ್ ಮಾತನಾಡಿ, ಇಂತಹ ಕಾರ್ಯಕ್ರಮಕ್ಕೆ ಎಲ್ಲರೂ ಸಹಕರಿಸಬೇಕು. ಇಂತಹ ಉತ್ತಮ ಕಾರ್ಯ, ಸೇವೆಗೆ ಯಾವುದೇ ಭಿನ್ನಾಭಿಪ್ರಾಯ ಸರಿಯಲ್ಲ ಎಂದರು.

ಗೌರವ, ಸನ್ಮಾನ:

ಇದೇ ವೇಳೆ ಸಂಸದರಾದ ಯದುವೀರ್ ಕೃಷ್ಣ ದತ್ತ ಚಾಮರಾಜ ಒಡೆಯರ್ ಹಾಗೂ ಶಾಲೆಯ ಅಭಿವೃದ್ಧಿಗೆ ಸಹಕರಿಸಿದ ದಾನಿಗಳನ್ನು ಗೌರವಿಸಿ ಸನ್ಮಾನಿಸಲಾಯಿತು‌.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ಆರ್.ಸುನಿಲ್ ಕುಮಾರ್ ವಹಿಸಿದ್ದರು.

ವೇದಿಕೆಯಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಶಿವಮ್ಮ, ಕಾಫಿ ಬೆಳೆಗಾರರಾದ ಆನಂದ ಬಸಪ್ಪ, ಎಸ್.ಎಲ್.ಎನ್ ಸನೂಹ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎನ್.ವಿಶ್ವನಾಥನ್, ಶಾಂತಿಗೇರಿ ತೋಟದ ಮಾಲೀಕ ಸುಂದರಂ ರಾಮಸ್ವಾಮಿ, ಮೋದೂರು ತೋಟದ ಮಾಲೀಕರಾದ ಬಿ.ಎಸ್. ನಕುಲ್ ಪೂಣಚ್ಚ, ಜಿಲ್ಲಾಧಿಕಾರಿಗಳ ಕಾನೂನು ಸಲಹೆಗಾರ ಎ.ಲೋಕೇಶ್ ಕುಮಾರ್, ಅರಸು ಪ್ಲಾಂಟೇಷನ್ ಮಾಲೀಕರಾದ ಪೃಥ್ವಿ ಪೊನ್ನಪ್ಪ, ಮರ ವ್ಯಾಪಾರಿ ವಿಲಿಯಂ, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀಲತ, ಸರ್ಕಾರಿ ಪ್ರೌಢ ಶಾಲೆಯ ಉಪಪ್ರಾಂಶುಪಾಲ ಬಾಲಕೃಷ್ಣ, ಜಿ.ಯಂಪಿ ಶಾಲೆಯ ಮುಖ್ಯ ಶಿಕ್ಷಕಿ ಗೀತಾ, ಕೆನರಾ ಬ್ಯಾಂಕಿನ ವ್ಯವಸ್ಥಾಪಕ ಎಸ್.ಎಂ.ಅನಿಕೇತ್, ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುನಿಲ್, ಉಪಾಧ್ಯಕ್ಷ ಆರ್.ಹೆಚ್.ಶರೀಫ್, ಪದಾಧಿಕಾರಿಗಳಾದ ಎಸ್.ಪಿ.ಸಂದೀಪ್, ಅರುಣ್ ಕುಮಾರ್, ಹರೀಶ್, ಅನಿಲ್, ರಜಾಕ್, ಅಬ್ದುಲ್ ಅಜೀಜ್, ಉಮ್ಮರ್, ಸಿ.ಮಹೇಂದ್ರ, ಧನುಕಾವೇರಪ್ಪ, ಶಶಿಕುಮಾರ್ ರೈ ಇತರರು ಇದ್ದರು.

ಮೊದಲಿಗೆ ವಿದ್ಯಾರ್ಥಿಗಳು ಸ್ವಾಗತಿಸಿ , ರಜಾಕ್ ಸ್ವಾಗತಿಸಿ, ಅನಿಲ್ ವಂದಿಸಿದರು.

ಮದ್ಯಾಹ್ನದ ನಂತರ ಸರ್ಕಾರಿ ಜಿ.ಎಂ.ಪಿ ಶಾಲೆ ಮತ್ತು ಸರ್ಕಾರಿ ಪ್ರೌಢಶಾಲೆಯ ಕನ್ನಡ ಮಾಧ್ಯಮ ಶಾಲೆಯ ಎಲ್ಲ ವಿದ್ಯಾರ್ಥಿಗಳಿಗೆ ಹಳೆಯ ವಿದ್ಯಾರ್ಥಿಗಳಿಂದ ಪುಸ್ತಕ ವಿತರಣೆ ಮಾಡಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''