ಕನ್ನಡಪ್ರಭ ವಾರ್ತೆ ಮಂಡ್ಯ
ಕೆಆರ್‌ಎಸ್ ಬಳಿ ಅಮ್ಯೂಸ್‌ಮೆಂಟ್ ಪಾರ್ಕ್ ಮಾಡುವುದಕ್ಕೆ ನಮ್ಮ ವಿರೋಧವಿದೆ. ಬೇರೆ ಎಲ್ಲಾದರೂ ಅದನ್ನು ಮಾಡಿದರೆ ನಮ್ಮ ವಿರೋಧವಿಲ್ಲ. ಕೆಆರ್‌ಎಸ್ ಅಣೆಕಟ್ಟೆಗೆ ೯೦ ವರ್ಷವಾಗಿದೆ. ಅದರ ಸುರಕ್ಷತೆ ನಮಗೆ ಮುಖ್ಯ. ಅದನ್ನು ಕಾಪಾಡುವುದು ಸರ್ಕಾರ ಮಾತ್ರವಲ್ಲದೆ ಎಲ್ಲರ ಜವಾಬ್ದಾರಿ ಎಂದು ಬುಧವಾರ ಸುದ್ದಿಗಾರರಿಗೆ ತಿಳಿಸಿದರು.
ಕೆಆರ್‌ಎಸ್ ಗ್ರಾಪಂಗೆ ಸೇರಿದ ಆಸ್ತಿಯನ್ನು ಯಾರೂ ಸಹ ಏಕಾಏಕಿ ಖಾತೆ ಮಾಡಲು ಬರುವುದಿಲ್ಲ. ಸರ್ಕಾರಿ ಜಾಗ ಎಂದಾಕ್ಷಣ ಪಂಚಾಯಿತಿ, ಇಲಾಖೆಗೆ ಸೇರಿದ ಆಸ್ತಿಯನ್ನು ಸಂಬಂಧಿಸಿದವರ ಅಭಿಪ್ರಾಯವನ್ನೂ ಕೇಳದೆ ಪರಭಾರೆ ಮಾಡುವುದು ಅಪರಾಧ. ಕಾವೇರಿ ನೀರಾವರಿ ನಿಗಮದ ಹೆಸರಿಗೆ ಕೆಆರ್‌ಎಸ್ ಗ್ರಾಪಂ ಜಾಗವನ್ನು ಪರಭಾರೆ ಮಾಡಿರುವುದು ಸರಿಯಲ್ಲ ಎಂದು ಹೇಳಿದರು.ಕೆಆರ್‌ಎಸ್ ಸುತ್ತಮುತ್ತ ಫಲವತ್ತಾದ ಕೃಷಿ ಭೂಮಿ ಇದೆ. ಅದನ್ನು ಹಾಳು ಮಾಡಿ ಮನರಂಜನಾ ಪಾರ್ಕ್ ನಿರ್ಮಿಸುವುದು ಸರಿಯಲ್ಲ. ನಿರ್ಮಾಣ ವೇಳೆ ನೂರಾರು ಅಡಿ ಆಳಕ್ಕೆ ಪಿಲ್ಲರ್‌ಗಳನ್ನು ಅಳವಡಿಸಬೇಕು. ಕಲ್ಲಿನಿಂದ ಕೂಡಿರುವ ಪ್ರದೇಶವಿದು. ಕೆಆರ್‌ಎಸ್ ಅಣೆಕಟ್ಟು ಕೂಡ ಶಿಲಾಪದರದ ಕಲ್ಲಿನ ಮೇಲೆಯೇ ನಿಂತಿದೆ. ಆ ಸಮಯದಲ್ಲಿ ಸ್ವಲ್ಪ ಅಪಾಯವಾದರೂ ಅಣೆಕಟ್ಟೆಗೆ ದೊಡ್ಡ ಪ್ರಮಾಣದಲ್ಲಿ ಹಾನಿ ಉಂಟಾಗಲಿದೆ. ಇದರ ಜೊತೆಗೆ ಪರಿಸರ, ಜಲ, ವಾಯುಮಾಲಿನ್ಯ ಉಂಟಾಗಲಿದೆ. ಇದರಿಂದ ಕೃಷಿ ಭೂಮಿ ನಾಶವಾಗಲಿದೆ. ರೈತರು ಗುಳೆ ಹೋಗುವ ಪರಿಸ್ಥಿತಿ ಎದುರಾಗಲಿದೆ ಎನ್ನುವುದು ರೈತಸಂಘಟನೆಗಳ ವಾದ ಎಂದು ನುಡಿದರು.
ಯೋಜನೆಯ ವಿರೋಧದ ಹಿಂದೆ ಯಾವ ಷಡ್ಯಂತ್ರವೂ ಇಲ್ಲ. ಮನರಂಜನಾ ಪಾರ್ಕ್ ನಿರ್ಮಾಣ ಅಭಿವೃದ್ಧಿಯಲ್ಲ. ಮುಖ್ಯನಾಲೆ, ವಿತರಣಾ ನಾಲೆ, ಸೀಳುನಾಲೆಗಳನ್ನು ಅಭಿವೃದ್ಧಿಪಡಿಸಿ ನೀರೊದಗಿಸಿದರೆ ಅದಕ್ಕಿಂತ ದೊಡ್ಡ ಅಭಿವೃದ್ಧಿ ಮತ್ತೊಂದಿಲ್ಲ. ಅದಕ್ಕಾಗಿ ಅಮ್ಯೂಸ್‌ಮೆಂಟ್ ಪಾರ್ಕ್ ಯೋಜನೆಯನ್ನು ವಿರೋಧಿಸುತ್ತಿದ್ದೇವೆ ಎಂದು ತಿಳಿಸಿದರು.ಪ್ರವಾಸೋದ್ಯಮ ಅಭಿವೃದ್ಧಿ ದೃಷ್ಟಿಯಿಂದ ಇಂತಹ ಯೋಜನೆಗಳು ಅವಶ್ಯ. ಅವುಗಳನ್ನು ಒಣ ಪ್ರದೇಶದಲ್ಲಿ ನಿರ್ಮಿಸಿದರೆ ಚೆನ್ನ. ಅದನ್ನು ಬಿಟ್ಟು ಕೃಷಿ ಭೂಮಿ, ನೀರಾವರಿ ಪ್ರದೇಶವನ್ನು ಹಾಳುಗೆಡವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.