ಕನ್ನಡದ ಮೂಲ ಕೃಷಿಕ ಆಲೂರರು ಕನ್ನಡಗಿರೆಲ್ಲರ ಪ್ರಾತಃ ಸ್ಮರಣೀಯರು : ಡಾ. ಜಿನದತ್ತ ಹಡಗಲಿ

KannadaprabhaNewsNetwork |  
Published : Mar 01, 2025, 01:08 AM ISTUpdated : Mar 01, 2025, 08:31 AM IST
25ಡಿಡಬ್ಲೂಡಿ1ಆಲೂರು ಭವನದಲ್ಲಿರುವ ಆಲೂರು ವೆಂಕಟರಾವ ಅವರ ಕಂಚಿನ ಪುತ್ಥಳಿಗೆ ಮಂಗಳವಾರ ಗಣ್ಯರು ಮಾಲಾರ್ಪಣೆ ಮತ್ತು ಪುಷ್ಫಾರ್ಪಣೆ ಮಾಡಿದರು.  | Kannada Prabha

ಸಾರಾಂಶ

ಆಲೂರರೆಂದರೆ ಅದೊಂದು ಕನ್ನಡ ಗುಡಿಯ ಗೋಪುರವಾಗಿದ್ದು, ಕನ್ನಡಗಿರೆಲ್ಲರ ಪ್ರಾತಃ ಸ್ಮರಣೀಯರಾಗಿದ್ದಾರೆ ಎಂದು ಡಾ. ಜಿನದತ್ತ ಹಡಗಲಿ ಸ್ಮರಿಸಿಕೊಂಡರು.

ಧಾರವಾಡ: ಕನ್ನಡದ ಮೂಲ ಕೃಷಿಕ ಆಲೂರು ವೆಂಕಟರಾವರ ಹೆಸರಿನ ಮಾತ್ರದಿಂದಲೇ ನಾವು ಪುಳಕಿತಗೊಂಡಿದ್ದೇವು ಎಂದು ಪ್ರೆಸ್‌ ಇನ್‌ಫಾರ್ಮೇಶನ್‌ ಬ್ಯೂರೋ ನಿವೃತ್ತ ಪ್ರಾಚಾರ್ಯ ಮನೀಶ ದೇಸಾಯಿ ಹೇಳಿದರು.

ಆಲೂರು ವೆಂಕಟರಾವರ 61ನೇ ಪುಣ್ಯಸ್ಮರಣೆಯಲ್ಲಿ ಮಾತನಾಡಿ, ನಾವು ಅವರನ್ನು ನೋಡದೇ ಇದ್ದರೂ ಅವರ ಕನ್ನಡದ ಕಾರ್ಯಗಳಿಂದ ಪ್ರೇರಿತರಾಗಿ ಸಾಧನೆಕೇರಿಯಲ್ಲಿ ಸರಕ್ಯೂಲೇಟಿಂಗ್ ಲೈಬ್ರರಿ ಪ್ರಾರಂಭಿಸಿ ಅಲ್ಲಿ ಕರ್ನಾಟಕ ಗತವೈಭವ, ಲೋಕಮಾನ್ಯ ತಿಲಕರ ಕನ್ನಡ ಗೀತಾ ರಹಸ್ಯ ಕನ್ನಡ ಅನುವಾದ ಹಾಗೂ ಇನ್ನಿತರ ಮಹತ್ವದ ಕನ್ನಡ ಕೃತಿಗಳನ್ನು ಸಂಗ್ರಹಿಸಿ ಓದುಗರಿಗೆ ವಿತರಿಸಿದ್ದು ನೆನಪಿದೆ ಎಂದು ಆಲೂರರ ಕನ್ನಡ ಕಟ್ಟುವ ಕಾರ್ಯಗಳನ್ನು ಸ್ಮರಿಸಿಕೊಂಡರು.

ವಿಶೇಷ ಉಪನ್ಯಾಸಕರಾಗಿ ಆಗಮಿಸಿದ್ದ ನಿವೃತ್ತ ಪ್ರಾಧ್ಯಾಪಕ ಡಾ. ಜಿನದತ್ತ ಹಡಗಲಿ, ಒಂದು ಕಾಲಕ್ಕೆ ವೈಭವಯುತ ಸಾಮ್ರಾಜ್ಯವೆಂದೇ ಗುರುತಿಸಿಕೊಂಡಿದ್ದ ವಿಜಯನಗರದ ಹಂಪಿಯ ಭಗ್ನಾವಶೇಷಗಳು, ಪಳೆಯುಳಿಕೆಗಳು ತಮ್ಮ ಹೃದಯವನ್ನು ಕಲಕಿ ಬಿಟ್ಟಾಗ ತೀವ್ರ ಹತಾಶೆ ಅನುಭವಿಸಿದ ಆಲೂರರು ಆ ದಿನವನ್ನು ತಮ್ಮ ಜೀವನದಲ್ಲಿ ಕ್ರಾಂತಿ ಮಾಡಿದ ದಿನವೆಂದೇ ಭಾವಿಸುತ್ತಾರೆ. ಆ ಕ್ಷಣದಿಂದ ವಿಜಯನಗರದ ಪುನರುತ್ಥಾನ, ಕನ್ನಡ ಕರ್ನಾಟಕತ್ವ, ಕರ್ನಾಟಕ ಏಕೀಕರಣಗಳ ಹೊಸ ಹೊಳವುಗಳನ್ನು ಕಂಡು ಅವುಗಳ ಸಾಕ್ಷಾತ್ಕಾರವಾಗಿ ಪಣತೊಡುತ್ತಾರೆ. ವಂಗಭಂಗ ಚಳುವಳಿಯ ಕಾವು ಇವರನ್ನು ತಟ್ಟಿ ಮತ್ತಷ್ಟು ದು:ಖವಾಗಿ ನಿಸ್ವಾರ್ಥ ಭಾವನೆಯಿಂದ ಈ ನಾಡು ನನ್ನ ಮನೆ, ಈ ದೇಶ ನನ್ನ ಕುಟುಂಬವೆಂಬ ಸೂತ್ರವನ್ನು ಮೂಲವಾಗಿಸಿಕೊಂಡು ತಮ್ಮ ಹೊರಾಟಕ್ಕೆ ಶ್ರೀಕಾರ ಹಾಕುತ್ತಾರೆ ಎಂದರು.

ಕನಾಟಕ ವಿದ್ಯಾವರ್ಧಕ ಸಂಘ, ವಾಗ್ಬೊಷಣ ಪತ್ರಿಕೆಯ ಸಂಪಾದಕತ್ವ ಮುಂತಾದವುಗಳಲ್ಲಿ ಸಕ್ರಿಯವಾಗಿ ಭಾಗಿಯಾಗುತ್ತಾರೆ, ಧಾರವಾಡದಲ್ಲಿ 1907ರಲ್ಲಿ ಮೊದಲ ಬಾರಿ ಕನ್ನಡ ಗ್ರಂಥಕರ್ತರ ಸಮ್ಮೇಳನ ನಡೆಸುತ್ತಾರೆ. ಮುಂದುವರಿಕೆಯಾಗಿ ಜರುಗಿದ 3ನೇಯ ಸಮ್ಮೇಳನ ಈ ನಾಡಿನ ಪ್ರತಿಷ್ಠಿತ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತಿನ ಹುಟ್ಟಿಗೆ ನಾಂದಿಯಾಗುತ್ತದೆ. ಕರ್ನಾಟಕ ಗತವೈಭವ, ಕರ್ನಾಟಕ ವೀರರತ್ನಗಳಂತಹ ಪುಸ್ತಕಗಳನ್ನು ಪ್ರಕಟಿಸಿ ಮಲಗಿದ ಕನ್ನಡಿಗರತ್ತ ಚಾಟಿ ಬೀಸುತ್ತಾರೆ. ಆಲೂರರ ಇಂಥ ಕ್ರಾಂತಿಕಾರಿ ಹೆಜ್ಜೆಗಳನ್ನು ಸರಿಯಾಗಿಯೇ ಗುರುತಿಸಿದ ವರಕವಿ ಬೇಂದ್ರೆ ಅಲೂರರನ್ನು ಕರ್ನಾಟಕ ಪ್ರಾಣೋಪಾಸಕರೆಂದು ಹೆಮ್ಮೆಯಿಂದ ಕೊಂಡಾಡುತ್ತಾರೆ. ಆಲೂರರೆಂದರೆ ಅದೊಂದು ಕನ್ನಡ ಗುಡಿಯ ಗೋಪುರವಾಗಿದ್ದು, ಕನ್ನಡಗಿರೆಲ್ಲರ ಪ್ರಾತಃ ಸ್ಮರಣೀಯರಾಗಿದ್ದಾರೆ ಎಂದು ಡಾ. ಜಿನದತ್ತ ಹಡಗಲಿ ಸ್ಮರಿಸಿಕೊಂಡರು.

ಟ್ರಸ್ಟ್ ಅಧ್ಯಕ್ಷ ಡಾ. ಪ್ರಮೋದಗಾಯಿ ಅಧ್ಯಕ್ಷತೆ ವಹಿಸಿದ್ದರು. ಗೀತಾ ಆಲೂರ ಪ್ರಾರ್ಥಿಸಿದರು. ಸದಸ್ಯ ಕಾರ್ಯದರ್ಶಿ ಕುಮಾರ ಬೆಕ್ಕೇರಿ ಸ್ವಾಗತಿಸಿದರು. ಡಾ. ದೀಪಕ ಆಲೂರ ನಿರೂಪಿಸಿದರು. ಶ್ರೀನಿವಾಸ ವಾಡಪ್ಪಿ ವಂದಿಸಿದರು. ಡಾ. ಎಚ್.ವಿ. ಖಂಡಕಿ, ಕವಿ ನರಸಿಂಹ ಪರಾಂಜಪೆ, ಎಸ್.ಎಂ. ದೇಶಪಾಂಡೆ ಇದ್ದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ