ವಿಶ್ವಕಪ್ಪ್‌ ಗೆದ್ದ ಕಬಡ್ಡಿ ಆಟಗಾರ್ತಿ ಧನಲಕ್ಷ್ಮಿಗೆ ಆಳ್ವಾಸ್‌ ಸನ್ಮಾನ

KannadaprabhaNewsNetwork |  
Published : Dec 08, 2025, 02:45 AM IST
32 | Kannada Prabha

ಸಾರಾಂಶ

ಡಾಕಾದಲ್ಲಿ ನಡೆದ ಎರಡನೇ ಕಬಡ್ಡಿ ವಿಶ್ವಕಪ್‌ನಲ್ಲಿ ಭಾರತೀಯ ಮಹಿಳಾ ತಂಡವನ್ನು ಪ್ರತಿನಿಧಿಸಿ ವಿಶ್ವಕಪ್ ಗೆದ್ದ ಆಳ್ವಾಸ್ ಸ್ಪೋರ್ಟ್ಸ್‌ ಕ್ಲಬ್‌ನ ಕಬಡ್ಡಿ ಆಟಗಾರ್ತಿ ಧನಲಕ್ಷ್ಮೀ ಪೂಜಾರಿ ಅವರಿಗೆ ಅಭಿನಂದನಾ ಸಮಾರಂಭ ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ನೆರವೇರಿತು.

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ, ದಕ್ಷಿಣ ಕನ್ನಡ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಮಂಗಳೂರು, ಮೂಡುಬಿದಿರೆ ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಹಾಗೂ ಬ್ರಹ್ಮಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘ ಮೂಡಬಿದಿರೆ ಜಂಟಿ ಸಹಯೋಗದಲ್ಲಿ ಡಾಕಾದಲ್ಲಿ ನಡೆದ ಎರಡನೇ ಕಬಡ್ಡಿ ವಿಶ್ವಕಪ್‌ನಲ್ಲಿ ಭಾರತೀಯ ಮಹಿಳಾ ತಂಡವನ್ನು ಪ್ರತಿನಿಧಿಸಿ ವಿಶ್ವಕಪ್ ಗೆದ್ದ ಆಳ್ವಾಸ್ ಸ್ಪೋರ್ಟ್ಸ್‌ ಕ್ಲಬ್‌ನ ಕಬಡ್ಡಿ ಆಟಗಾರ್ತಿ ಧನಲಕ್ಷ್ಮೀ ಪೂಜಾರಿ ಅವರಿಗೆ ಅಭಿನಂದನಾ ಸಮಾರಂಭ ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು.ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಮಾತನಾಡಿ, ಭಾರತದ ಅನೇಕ ರಾಜ್ಯಗಳು ಕ್ರೀಡಾ ಸಾಧಕರಿಗೆ ಅವರ ಸಾಧನೆಯನ್ನು ಮತ್ತಷ್ಟು ಉತ್ತೇಜಿಸಲು ಸರ್ಕಾರಿ ಉದ್ಯೋಗವನ್ನು ನೀಡುತ್ತಿವೆ. ಹರಿಯಾಣ, ಉತ್ತರ ಪ್ರದೇಶ, ಮಧ್ಯಪ್ರದೇಶ, ಛತ್ತೀಸ್‌ಗಢ ಮತ್ತು ಕೇರಳ ಸರ್ಕಾರಗಳು ಕ್ರೀಡೆಯಲ್ಲಿ ರಾಷ್ಟ್ರ-ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ನೇರ ನೇಮಕಾತಿ ಮೂಲಕ ಉದ್ಯೋಗಗಳನ್ನು ಒದಗಿಸುತ್ತಿರುವುದು ಗಮನಾರ್ಹ. ಇದರ ಪರಿಣಾಮವಾಗಿ ಆ ರಾಜ್ಯಗಳಲ್ಲಿ ಕ್ರೀಡೆಗೆ ಯುವ ಸಮುದಾಯದ ಆಕರ್ಷಣೆ ಹೆಚ್ಚಾಗಿ, ಮೂಲಸೌಕರ್ಯ ಅಭಿವೃದ್ಧಿಗೊಂಡು ಪದಕಗಳ ಪ್ರಮಾಣವೂ ಏರಿಕೆಯಾಗುತ್ತಿದೆ. ಈ ನೆಲೆಯಲ್ಲಿ ಕರ್ನಾಟಕ ಸರ್ಕಾರವೂ ಕ್ರೀಡಾಪಟುಗಳಿಗೆ ಸರ್ಕಾರಿ ಉದ್ಯೋಗ ನೀಡಲು ಮುಂದಾಗಬೇಕು. ಇದು ಕ್ರೀಡಾಪಟುವಿಗೆ ಆರ್ಥಿಕ ಭದ್ರತೆ ನೀಡುವುದಷ್ಟೇ ಅಲ್ಲ ಅವರ ಸಾಧನೆಗೆ ಸಮರ್ಥ ಗೌರವ ಮತ್ತು ಬದುಕಿನ ಭವಿಷ್ಯಕ್ಕೆ ಭದ್ರ ನೆಲೆ ನೀಡಿದಂತಾಗುತ್ತದೆ. ಯುವ ಶಕ್ತಿಯನ್ನು ದೇಶದ ಪ್ರಗತಿಗೆ ಬಳಸಲು ಸರ್ಕಾರ, ಇಲಾಖೆಗಳು ಹಾಗೂ ಕ್ರೀಡಾ ಸಂಸ್ಥೆಗಳು ಸಮನ್ವಯದಿಂದ ಕೆಲಸ ಮಾಡುವ ಅಗತ್ಯವಿದೆ ಎಂದರು.ಕರ್ನಾಟಕ ಅಮೆಚೂರ್ ಕಬಡ್ಡಿ ಅಸೋಷಿಯೇಶನ್‌ನ ಗೌರವಾಧ್ಯಕ್ಷ ರಾಕೇಶ್ ಮಲ್ಲಿ ಧನಲಕ್ಷ್ಮಿಗೆ ಅಭಿನಂದನೆ ಸಲ್ಲಿಸಿ, ಮುಂದಿನ ದಿನಗಳಲ್ಲಿ ಅವರಿಗೆ ಸರ್ಕಾರಿ ಹುದ್ದೆ ದೊರೆಯುವಂತೆ ಮಾಡಲು ಸರ್ಕಾರದ ಮಟ್ಟದಲ್ಲಿ ಅಗತ್ಯ ಒತ್ತಡವನ್ನು ತರಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು. ಆಳ್ವಾಸ್ ಸಂಸ್ಥೆ ಕಬಡ್ಡಿ ಸೇರಿದಂತೆ ವಿವಿಧ ಕ್ರೀಡೆಗಳಿಗೆ ನೀಡುತ್ತಿರುವ ನಿರಂತರ ಬೆಂಬಲ ಮತ್ತು ಪ್ರೋತ್ಸಾಹವೇ ಇಂದು ಸಂಸ್ಥೆಯನ್ನು ರಾಜ್ಯ-ರಾಷ್ಟ್ರ ಮಟ್ಟದಲ್ಲಿ ಮುಂಚೂಣಿಯಲ್ಲಿ ನಿಲ್ಲಿಸಿದೆ ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಧನಲಕ್ಷ್ಮಿ, ವಿಶ್ವ ವೇದಿಕೆಯಲ್ಲಿ ಭಾರತದ ತ್ರಿವರ್ಣಪತಾಕೆಯನ್ನು ಹೆಮ್ಮೆಯಿಂದ ಹಾರಾಡಿಸುವ ಅವಕಾಶ ದೊರೆತ ಕ್ಷಣ ನನ್ನ ಜೀವನದ ಅತ್ಯಂತ ಸ್ಮರಣೀಯ ಕ್ಷಣವಾಗಿತ್ತು ಎಂದು ಭಾವಪೂರ್ಣವಾಗಿ ನುಡಿದರು. ತಮ್ಮ ಯಶಸ್ಸಿನ ಹಿನ್ನಲೆಯಲ್ಲಿ ಆಳ್ವಾಸ್ ಸಂಸ್ಥೆಯ ಪಾತ್ರವನ್ನು ವಿಶೇಷವಾಗಿ ಉಲ್ಲೇಖಿಸಿ, ಆಳ್ವಾಸ್ ಸೇರದೇ ಇದ್ದರೆ ಇಂತಹ ಸಾಧನೆ ನನ್ನಿಂದ ಸಾಧ್ಯವಾಗುತ್ತಿರಲಿಲ್ಲ. ಇಲ್ಲಿ ಸೇರಿದ್ದರಿಂದ ಕ್ರೀಡೆ ಮಾತ್ರವಲ್ಲದೆ, ಶೈಕ್ಷಣಿಕ ಕ್ಷೇತ್ರದಲ್ಲಿಯೂ ಉತ್ತಮ ಅಂಕ ಪಡೆಯಲು ಸಾಧ್ಯವಾಯಿತು ಎಂದರು.

ಧನಲಕ್ಷ್ಮಿ ಹಾಗೂ ಅವರ ಪೋಷಕರನ್ನು ಸನ್ಮಾನಿಸಿ, ಆಳ್ವಾಸ್ ಸಂಸ್ಥೆಯ ವತಿಯಿಂದ ನಗದು ಹಣ ನೀಡಿ ಗೌರವಿಸಲಾಯಿತು. ಉದ್ಯಮಿ ನಾರಾಯಣ ಪಿಎಂ, ಬ್ರಹ್ಮಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘ ಮೂಡಬಿದಿರೆಯ ಅಧ್ಯಕ್ಷ ಸುರೇಶ್ ಕೆ ಪೂಜಾರಿ, ಮೂಡುಬಿದಿರೆ ತಾಲೂಕು ಅಮೆಚೂರ್ ಕಬಡ್ಡಿ ಅಸೋಷಿಯೇಶನ್‌ ಉಪಾಧ್ಯಕ್ಷ ಸುದರ್ಶನ್, ಧನಲಕ್ಷ್ಮಿ ಕೋಚ್ ಹಂಸವತಿ ಇದ್ದರು. ದ.ಕ ಅಮೆಚೂರ್ ಕಬಡ್ಡಿ ಅಸೋಷಿಯೇಶನ್‌ನ ಗೌರವಾಧ್ಯಕ್ಷ ಪುರುಷೋತ್ತಮ ಪೂಜಾರಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ದೈಹಿಕ ಶಿಕ್ಷಕ ನವೀನಚಂದ್ರ ಅಂಬೂರಿ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಮುಂದಿನ ಸಿಎಂ ಯಾರು?’ ಎನ್ನುವ ಬಗ್ಗೆಯೂ ರಾಜ್ಯದಲ್ಲಿ ಬೆಟ್ಟಿಂಗ್‌ - ನಿಯಂತ್ರಿಸಿ'
ಕ್ರೈಂ ಹೆಚ್ಚಳಕ್ಕೆ ಸಿಬ್ಬಂದಿ ಕೊರತೆ ಕಾರಣ : ಡಾ.ಜಿ.ಪರಮೇಶ್ವರ್‌