ಕನ್ನಡಪ್ರಭ ವಾರ್ತೆ ತುಮಕೂರುಕಳೆದ ಎರಡು ದಿವಸಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ನಗರದ ಅಮಾನಿಕೆರೆಗೆ ಹೆಚ್ಚಿನ ನೀರು ಹರಿದು ಬಂದು ಬುಧವಾರ ಬೆಳಿಗ್ಗೆ ಕೆರೆ ಕೋಡಿ ಹರಿದಿದೆ.ಶಿರಾ ಗೇಟ್ ರಸ್ತೆಯ ಎಸ್.ಮಾಲ್ ಬಳಿ ಸೇತುವೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಪಕ್ಕದಲ್ಲಿ ಕೋಡಿಯಲ್ಲಿ ನಿರ್ಮಿಸಿದ್ದ ತಾತ್ಕಾಲಿಕ ರಸ್ತೆಯನ್ನು ಒಡೆದು ಕೋಡಿ ನೀರು ಹರಿದುಹೋಗಲು ಅವಕಾಶ ಮಾಡಲಾಗಿದೆ. ಇದರಿಂದ ಈ ಭಾಗದಲ್ಲಿ ಸಂಚಾರ ಸಂಪರ್ಕ ಕಡಿತಗೊಂಡು ವಾಹನ ಸಂಚಾರ ಬಂದ್ ಆಗಿದೆ.ಶಾಸಕ ಜಿ.ಬಿ.ಜ್ಯೋತಿಗಣೇಶ್ ಅವರು ಬೆಳಿಗ್ಗೆ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಪರಿಶೀಲಿಸಿದರು. ಈ ಹಿಂದೆ ಕೋಡಿ ಪಕ್ಕದ ಪ್ರದೇಶದ ಮನೆಗಳಿಗೆ ನೀರು ನುಗ್ಗಿ ಅವಾಂತರವಾಗಿದ್ದು, ಇಲ್ಲಿನ ನಿವಾಸಿಗಳನ್ನು ಶಾಸಕರು ಭೇಟಿ ಮಾಡಿ ಸಮಾಲೋಚನೆ ನಡೆಸಿದರು. ಈ ಬಾರಿ ಮಳೆಯಾದಾಗ ಸಮಸ್ಯೆಯಾಗದಂತೆ ಕ್ರಮ ತೆಗೆದುಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದರು.ಈ ವೇಳೆ ಮಾತನಾಡಿದ ಶಾಸಕ ಜಿ.ಬಿ.ಜ್ಯೋತಿಗಣೇಶ್, ಮಳೆ ಸುರಿದು ಕೆರೆ ಕೋಡಿ ಹರಿದಿರುವುದು ಸಂತಸದ ವಿಷಯ. ಜೊತೆಗೆ ಆತಂಕದ ಪರಿಸ್ಥಿತಿಯೂ ಎದುರಾಗಿದೆ. ಕೋಡಿ ಕೆಳಗಿನ ಮನೆಗಳನ್ನು ತೆರವುಗೊಳಿಸಲು ನಗರ ಪಾಲಿಕೆ ಅಧಿಕಾರಿಗಳು ಕ್ರಮ ತೆಗೆದುಕೊಂಡಿದ್ದಾರೆ. ಕೊಡಿ ಪಕ್ಕದ ಪ್ರದೇಶದ ಮನೆಗಳಿಗೆ ನೀರು ನುಗ್ಗಿ ಸಮಸ್ಯೆ ಆಗದಂತೆ ಎಚ್ಚರಿಕೆ ವಹಿಸಲು ಅಧಿಕಾರಿಗಳಿಗೆ ತಿಳಿಸಿದ್ದೇನೆ. ಕೋಡಿ ನೀರು ಮುಂದೆ ರಿಂಗ್ ರಸ್ತೆಯಲ್ಲಿ ಸರಾಗವಾಗಿ ಹರಿದುಹೋಗುವಂತೆ ವ್ಯವಸ್ಥೆ ಮಾಡಿ ಯಾವುದೇ ಸಮಸ್ಯೆಯಾಗದಂತೆ ಕ್ರಮ ತೆಗೆದುಕೊಳ್ಳಲು ಹೇಳಿದ್ದೇನೆ ಎಂದರು.ಕೋಡಿ ಹರಿಯುತ್ತಿರುವ ಕಾರಣ ಕೋಡಿ ಮೇಲೆ ನಿರ್ಮಾಣ ಮಾಡಲಾಗಿದ್ದ ತಾತ್ಕಾಲಿಕ ಸರ್ವೀಸ್ ರಸ್ತೆಯನ್ನು ಒಡೆದು ನೀರು ಹರಿಯಲು ಅವಕಾಶ ಮಾಡಲಾಗಿದೆ. ಹೀಗಾಗಿ ಈ ಭಾಗದಲ್ಲಿ ಸುರಕ್ಷತೆ ದೃಷ್ಟಿಯಿಂದ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಪಾದಚಾರಿಗಳು ನಿರ್ಮಾಣವಾಗುತ್ತಿರುವ ಸೇತುವೆ ಮೇಲೆ ಓಡಾಡಲು ಅವಕಾಶ ಮಾಡುವಂತೆ ಶಾಸಕರು ಅಧಿಕಾರಿಗಳಿಗೆ ತಿಳಿಸಿದರು.ಪಿಡಬ್ಲುಡಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ರವಿಕುಮಾರ್, ನಗರ ಪಾಲಿಕೆ ಉಪ ಆಯುಕ್ತ ಗಿರೀಶ್, ಇಂಜಿನಿಯರ್ ಸಂದೀಪ್, ಡಿವೈಎಸ್ಪಿ ಕೆ.ಆರ್.ಚಂದ್ರಶೇಖರ್, ಸರ್ಕಲ್ ಇನ್ಸ್ಪೆಕ್ಟರ್ ದಿನೇಶ್‌ಕುಮಾರ್, ಸೇತುವೆ ಗುತ್ತಿಗೆದಾರ ನಾರಾಯಣಪ್ಪ ಮತ್ತಿತರ ಅಧಿಕಾರಿಗಳು ಶಾಸಕರ ಜೊತೆಗಿದ್ದರು.