ಧಾರಣೆಯಲ್ಲಿ ಕುಸಿತ; ಅಡಕೆ ವಲಯದಲ್ಲಿ ಅಲ್ಲೋಲ ಕಲ್ಲೋಲ!

KannadaprabhaNewsNetwork | Updated : Aug 22 2024, 12:47 AM IST

ಸಾರಾಂಶ

ಅಡಕೆಧಾರಣೆ ಕುಸಿತದ ಬೆನ್ನಲ್ಲೆ ಸ್ಥಳೀಯ ಖಾಸಗಿ ವರ್ತಕರು ಮತ್ತು ಸಹಕಾರಿ ವಲಯದ ಮಧ್ಯೆ ಅಡಕೆ ಮಾರುಕಟ್ಟೆಯನ್ನು ನಿಯಂತ್ರಿಸುವ ಸಂಬಂಧ ಸದ್ದಿಲ್ಲದೆ ಮುಸುಕಿನ ಗುದ್ದಾಟವೂ ಆರಂಭಗೊಂಡಿದೆ

ಗೋಪಾಲ್‌ ಯಡಗೆರೆ

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಸಕಾರಣವಿಲ್ಲದೆ ಧಾರಣೆ ಕುಸಿಯುವ ಮೂಲಕ ಆಗಾಗ್ಗೆ ತಲ್ಲಣಗೊಳ್ಳುವ ಅಡಕೆ ಮಾರುಕಟ್ಟೆ ಈ ಬಾರಿ ವಿಶೇಷ ಕಾರಣಕ್ಕೆ ತಲ್ಲಣಗೊಂಡಿದೆ. ಕಳಪೆ ಅಡಕೆ ಪೂರೈಕೆಯ ಕಾರಣವನ್ನು ಮುಂದಿಟ್ಟುಕೊಂಡು ಉತ್ತರ ಭಾರತದ ಪಾನ್‌ ಮಸಾಲಾ ಕಂಪನಿಗಳು ಅಡಕೆ ಮೂಟೆ ಹೊತ್ತು ಲಾರಿಗಳನ್ನು ಮುಲಾಜಿಲ್ಲದೆ ಹಿಂದಕ್ಕೆ ಕಳುಹಿಸುತ್ತಿದ್ದು, ಅಡಕೆ ಧಾರಣೆ ಕುಸಿಯಲಾರಂಭಿಸಿದೆ. ಮಧ್ಯದಲ್ಲಿ ಯಾರೋ ಮಾಡಿದ ಮೋಸದಿಂದಾಗಿ ಇಡೀ ಅಡಕೆ ರೈತ ಸಮುದಾಯ ಕಂಗಾಲು ಪರಿಸ್ಥಿತಿ ಎದುರಾಗಿದೆ.

ಬೆನ್ನಲ್ಲೇ ಸ್ಥಳೀಯ ಖಾಸಗಿ ವರ್ತಕರು ಮತ್ತು ಸಹಕಾರಿ ವಲಯದ ಮಧ್ಯೆ ಅಡಕೆ ಮಾರುಕಟ್ಟೆಯನ್ನು ನಿಯಂತ್ರಿಸುವ ಸಂಬಂಧ ಸದ್ದಿಲ್ಲದೆ ಮುಸುಕಿನ ಗುದ್ದಾಟವೂ ಆರಂಭಗೊಂಡಿದೆ. ಅಡಕೆ ಮಾರುಕಟ್ಟೆಯನ್ನು ಸದಾ ಸದೃಢವಾಗಿಡಲು, ಧಾರಣೆ ಕುಸಿಯದಂತೆ ಶ್ರಮಿಸುತ್ತಿರುವ ಅಡಕೆ ಮಾರಾಟ ವಲಯದಲ್ಲಿರುವ ಸಹಕಾರಿ ಸಂಸ್ಥೆಗಳ ಮೇಲೆ ನಿಯಂತ್ರಣ ಸಾಧಿಸಲು ಖಾಸಗಿ ವಲಯ ಇನ್ನಿಲ್ಲದ ಪ್ರಯತ್ನ ಆರಂಭಿಸಿದೆ.

ಅಡಕೆ ಸಂಸ್ಕರಣೆಯ ಸ್ಥಿತಿ-ಗತಿ:

ಮುಖ್ಯವಾಗಿ ಮಲೆನಾಡಿನಲ್ಲಿ ಅಡಕೆ ಸಂಸ್ಕರಣೆ ಎಂದರೆ ರೈತರಿಗೆ ಅದೊಂದು ಪೂಜನೀಯ ಕೆಲಸವಿದ್ದಂತೆ. ತಾವೇ ಮುಂದೆ ನಿಂತು ಹದವಾಗಿ ಬೇಯಿಸಿ, ಸರಿ ಯಾದ ಪ್ರಮಾಣದಲ್ಲಿ ಚೊಗರು ಬೆರೆಸಿ, ಪರಿಪೂರ್ಣವಾಗಿ ಒಣಗಿಸಿ ಉತ್ತಮ ಗುಣಮಟ್ಟದ ಅಡಕೆ ತಯಾರಿಸುತ್ತಿದ್ದರು. ಆದರೆ ಇತ್ತೀಚಿನ ವರ್ಷಗಳಲ್ಲಿ ಕೂಲಿ ಕಾರ್ಮಿಕರ ಸಮಸ್ಯೆಯಿಂದಾಗಿ ರೈತರು ಅಡಕೆಯನ್ನು ಗುತ್ತಿಗೆಗೆ ಕೊಡುವ ಪದ್ಧತಿಗೆ ಮೊರೆ ಹೋಗಿದ್ದಾರೆ. ಪ್ರತಿ 100 ಕೆ.ಜಿ. ಹಸಿ ಅಡಕೆಗೆ 11 ಕೆಜಿ ಯಿಂದ ಹಿಡಿದು 15 ಕೆಜಿಯವರೆಗೆ ಒಣ ಅಡಕೆಯನ್ನು ನೀಡುವ ಖೇಣಿ ಅಥವಾ ಚೇಣಿ ಪದ್ಧತಿ ಜಾರಿಗೆ ಬಂದಿತ್ತು. ಯಾವುದೇ ರಿಸ್ಕ್ ಇಲ್ಲದೆ ಮನೆ ಬಾಗಿಲಿಗೆ ಒಣ ಅಡಕೆ ಬರುವಾಗ ಇದೇ ಸುಲಭ ಎಂದೆಣಿಸಿಕೊಂಡ ಬಹುಸಂಖ್ಯಾತ ಅಡಕೆ ಬೆಳೆಗಾರರು ಇದರತ್ತ ವಾಲಿದ್ದಾರೆ.

ಕಳಪೆ ಅಡಕೆ ಮಿಕ್ಸಿಂಗ್:

ಇದನ್ನೇ ಬಂಡವಾಳ ಮಾಡಿಕೊಂಡ ಚೇಣಿ ಮಾಡುವ ಗುತ್ತಿಗೆದಾರರು ರೈತರಿಗೆ ವಾಪಸ್ಸು ಕೊಡುವ ಸಂಸ್ಕರಿತ ಅಡಕೆಯ ಜೊತೆಗೆ ಕಳಪೆ ಗುಣಮಟ್ಟದ ಅಡಕೆ ಯನ್ನು ಬೆರಕೆ ಮಾಡುತ್ತಿದ್ದಾರೆ. ಗಮನಿಸದ ರೈತರು ಈ ಅಡಕೆಯನ್ನು ಖಾಸಗಿ ಅಡಕೆ ಮಂಡಿ ಅಥವಾ ಸಹಕಾರಿ ಸಂಸ್ಥೆಗಳ ಮೂಲಕ ಮಾರಾಟಕ್ಕೆ ಕಳುಹಿಸಿ ದ್ದಾರೆ. ಈ ಅಡಕೆಯನ್ನು ಖರೀದಿಸಿದ ವರ್ತಕರು ಉತ್ತರ ಭಾರತದ ಪಾನ್‌ ಮಸಾಲಾ ತಯಾರಕರಿಗೆ ಕಳುಹಿಸಿದ ವೇಳೆ ಈ ಕಳಪೆ ಗುಣಮಟ್ಟ ಕಂಡು ಲೋಡ್‌ ಗಟ್ಟಲೆ ಅಡಕೆಯನ್ನು ವಾಪಸ್ಸು ಕಳುಹಿಸುತ್ತಿದ್ದಾರೆ. ಇದು ಅಡಕೆ ಪೂರೈಸಿದ ಸ್ಥಳೀಯ ವರ್ತಕರನ್ನು ಭಾರೀ ನಷ್ಟಕ್ಕೆ ದೂಡಿದೆ. ಇದರಿಂದ ಪುನಃ ಅಡಕೆ ಖರೀದಿಸುವಲ್ಲಿ ಹಿಂದೇಟು ಹಾಕುತ್ತಿದ್ದು, ಅತ್ಯುತ್ತಮ ಗುಣಮಟ್ಟದ ಅಡಕೆಯನ್ನು ಮಾತ್ರ ಹುಡುಕಿ ಹುಡುಕಿ ಖರೀದಿಸುತ್ತಿದ್ದಾರೆ.

ಸಧ್ಯ ರಾಶಿಇಡಿ ಮಾದರಿಯ ಅಡಕೆಯ ಧಾರಣೆ ಮಾತ್ರ ಗಂಭೀರ ಪ್ರಮಾಣದಲ್ಲಿ ಕುಸಿಯಲಾರಂಭಿಸಿದಿದೆ. ಎರಡು ತಿಂಗಳ ಹಿಂದೆ ಕ್ವಿಂಟಾಲ್‌ ಗೆ 54 ಸಾವಿರ ತಲುಪಿದ್ದ ಅಡಕೆ ಇದೀಗ 47 ಸಾವಿರಕ್ಕೆ ಕುಸಿದಿದೆ. ಮುಂದೆ ಇನ್ನೂ ಕುಸಿಯಬಹುದು ಎಂಬ ಭೀತಿಯೂ ಇದೆ.

ಖಾಸಗಿ-ಸಹಕಾರಿ ವಲಯದ ವಾರ್:

ಇದರ ಬೆನ್ನಲ್ಲೇ ಖಾಸಗಿ ವಲಯದ ಅಡಕೆ ವರ್ತಕರು ಮತ್ತು ಸಹಕಾರಿ ವಲಯದ ನಡುವೆ ಮಾರುಕಟ್ಟೆ ಮೇಲಿನ ಹಿಡಿತಕ್ಕೆ ಪೈಪೋಟಿ ಆರಂಭಗೊಂಡಿದೆ. ಎರಡೂ ಕಡೆಯವರು ಪರಸ್ಪರ ಒಂದಾಗಿ ಸಭೆಯ ಮೇಲೆ ಸಭೆ ನಡೆಸುತ್ತಿದ್ದಾರೆ. ಅಂತಿಮವಾಗಿ ಪರಿಸ್ಥಿತಿ ಎಲ್ಲಿಗೆ ಹೋಗುತ್ತದೆಯೋ ಗೊತ್ತಿಲ್ಲ.

Share this article