ಹುಡಾದಲ್ಲಿ ಇಡಬ್ಲ್ಯೂಎಸ್‌ ಸ್ಕೀಂ!

KannadaprabhaNewsNetwork | Published : Aug 22, 2024 12:46 AM

ಸಾರಾಂಶ

ಪ್ರತಿ ಹೊಸ ಲೇಔಟ್‌ನಲ್ಲಿ ಶೇ.1, 2ರಿಂದ 5ರಷ್ಟು ಇಡಬ್ಲ್ಯೂಎಸ್‌ಗೆ ಮೀಸಲಿಡಬೇಕು. ಇವರಿಗೆ ಮಾರುಕಟ್ಟೆ ದರಕ್ಕೆ ನೀಡುವಂತಿಲ್ಲ. ಬದಲಿಗೆ ಎಸ್‌.ಆರ್‌ ದರ (ಶೆಡ್ಯೂಲ್‌ ಆಫ್‌ ರೇಟ್‌)ದಂತೆ ನೀಡಬೇಕು.

ಶಿವಾನಂದ ಗೊಂಬಿ

ಹುಬ್ಬಳ್ಳಿ:

ಹುಬ್ಬಳ್ಳಿ-ಧಾರವಾಡದಲ್ಲಿ ಎಲ್ಲಿಯೇ ಹೊಸ ಲೇಔಟ್‌ ಆದರೂ ಇನ್ಮುಂದೆ ಅದರಲ್ಲಿ ಶೇ.1 ಅಥವಾ ಶೇ. 2ರಷ್ಟಾದರೂ ಆರ್ಥಿಕ ದುರ್ಬಲ ವರ್ಗದವರಿಗೆ (ಇಡಬ್ಲ್ಯೂಎಸ್‌) ಮೀಸಲಿಡುವಂತಹ ನಿಯಮ ಜಾರಿಗೊಳಿಸಲು ಹುಡಾ (ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರ) ಚಿಂತನೆ ನಡೆಸಿದೆ. ಈ ಸಂಬಂಧ ನಿಯಮ ರೂಪಿಸುವ ಕೆಲಸದಲ್ಲಿ ಹುಡಾ ನಿರತವಾಗಿದೆ. ಇದು ಜಾರಿಯಾದರೆ ರಾಜ್ಯದಲ್ಲೇ ಪ್ರಥಮ ಪ್ರಯೋಗವೆನಿಸಲಿದೆ.

ಏನಿದು ಯೋಚನೆ:

ಹುಡಾದಲ್ಲಿ ಪ್ರತಿವರ್ಷ ಹತ್ತಾರು ಹೊಸ ಲೇಔಟ್‌ ಪರವಾನಗಿ ಪಡೆಯಲು ಡೆವಲಪರ್ಸ್‌ ಬರುತ್ತಾರೆ. ಒಂದೆರಡು ಎಕರೆಯಿಂದ ಹಿಡಿದು ನೂರಾರು ಎಕರೆ ವರೆಗೂ ಹೊಸ ಲೇಔಟ್‌ಗೆ ಪರವಾನಗಿ ನೀಡಲಾಗುತ್ತದೆ. ಆದರೆ ಎಲ್ಲವೂ ಮಾರುಕಟ್ಟೆ ದರದಂತೆಯೇ ಮಾರಾಟ ಮಾಡಲಾಗುತ್ತದೆ. ಈಗ ಭೂಮಿ ದರ ಏರಿಕೆ ಆಗುತ್ತಿರುವುದನ್ನು ನೋಡಿದರೆ ಆರ್ಥಿಕವಾಗಿ ದುರ್ಬಲವಾದ ವರ್ಗ (ಇಕಾನಮಿಕಲಿ ವೀಕರ್ಸ್‌ ಸೆಕ್ಷನ್‌) ಅವರಿಗೆ ತೆಗೆದುಕೊಳ್ಳಲು ಸಾಧ್ಯವೇ ಇಲ್ಲ. ಅಷ್ಟೊಂದು ಗಗನಕ್ಕೆ ಏರುತ್ತಿದೆ. ಆದರೆ ಎಲ್ಲರಿಗೂ ಸ್ವಂತ ಸೂರು ಮಾಡಿಕೊಳ್ಳಬೇಕು ಎಂಬ ಆಸೆಯಂತೂ ಇದ್ದೆ ಇರುತ್ತದೆ. ಹಾಗಂತ ಸರ್ಕಾರ ಏನೂ ಮಾಡುತ್ತಿಲ್ಲ ಅಂತೇನೂ ಅಲ್ಲ. ಸರ್ಕಾರವೂ ಆಶ್ರಯ ಮನೆ ಸೇರಿದಂತೆ ವಿವಿಧ ಆವಾಸ ಯೋಜನೆಗಳಲ್ಲಿ ಬಡವರಿಗೆ ಮನೆ ನಿರ್ಮಿಸಿಕೊಡುತ್ತಿದೆ. ಆದರೂ ಎಲ್ಲರಿಗೂ ಸೂರು ಕಲ್ಪಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಆದರೆ ಹೊಸ ಲೇಔಟ್‌ಗಳಲ್ಲಿ ಈಗಿನ ದರ ನೋಡಿದರೆ ಮಧ್ಯಮ ವರ್ಗಕ್ಕೂ ನಿವೇಶನ ಖರೀದಿಸುವುದು ಅಸಾಧ್ಯದ ಮಾತು ಎಂಬಂತಾಗಿದೆ.

ಹೀಗಾಗಿ ಪ್ರತಿ ಹೊಸ ಲೇಔಟ್‌ನಲ್ಲಿ ಶೇ.1, 2ರಿಂದ 5ರಷ್ಟು ಇಡಬ್ಲ್ಯೂಎಸ್‌ಗೆ ಮೀಸಲಿಡಬೇಕು. ಇವರಿಗೆ ಮಾರುಕಟ್ಟೆ ದರಕ್ಕೆ ನೀಡುವಂತಿಲ್ಲ. ಬದಲಿಗೆ "ಎಸ್‌.ಆರ್‌ " ದರ (ಶೆಡ್ಯೂಲ್‌ ಆಫ್‌ ರೇಟ್‌)ದಂತೆ ನೀಡಬೇಕು. ಅದನ್ನು ಹುಡಾಕ್ಕೇನೂ ಕೊಡುವುದು ಬೇಡ. ಬದಲಿಗೆ ಡೆವಲಪರ್‌ಗಳೇ ಎಸ್‌ಆರ್‌ ದರ ನೀಡಿ ಖರೀದಿಸಲು ಮುಂದೆ ಬರುವ ಆರ್ಥಿಕ ದುರ್ಬಲ ವರ್ಗದವರಿಗೆ ನೀಡಬೇಕು. ಅಥವಾ ಅವರೇ ಮನೆ ನಿರ್ಮಿಸಿಕೊಟ್ಟರೂ ಅಡ್ಡಿಯಿಲ್ಲ. ಅದಕ್ಕೆ ತಗುಲುವ ವೆಚ್ಚ ಹಿಡಿದು ಮಾರಾಟ ಮಾಡಬಹುದು. ಆದರೆ ಯಾವುದೇ ಕಾರಣಕ್ಕೂ ಮಾರುಕಟ್ಟೆ ಬೆಲೆ ನಿಗದಿ ಮಾಡುವಂತಿಲ್ಲ ಎಂಬ ನಿಯಮ ಮಾಡಬೇಕೆನ್ನುವುದು ಹುಡಾದ ಯೋಚನೆ.

ಸಿದ್ಧತೆ:

ಈ ರೀತಿ ಮಾಡಬೇಕೆಂದರೆ ಏನೇನು ನಿಯಮಗಳಿದ್ದರೆ ಉತ್ತಮ. ಹುಡಾದಲ್ಲಿ ಅರ್ಜಿ ಸಲ್ಲಿಸಿದವರನ್ನು ಇದರಲ್ಲಿ ಪರಿಗಣಿಸಬೇಕೋ? ಬೇಡವೋ? ಇಂತಲ್ಲಿ ನಿವೇಶನ ಪಡೆಯಲು ಎಷ್ಟು ವಾರ್ಷಿಕ ಆದಾಯ ನಿಗದಿ ಮಾಡಬಹುದು ಎಂಬ ಬಗ್ಗೆಯೆಲ್ಲ ಚರ್ಚೆಯಾಗುತ್ತಿದ್ದು, ಈ ಬಗ್ಗೆ ನಿಯಮ ಸಿದ್ಧಪಡಿಸುವಲ್ಲಿ ಹುಡಾ ಅಧಿಕಾರಿ ವರ್ಗ ತಯಾರಿ ಮಾಡುತ್ತಿದೆ ಎಂದು ಮೂಲಗಳು ತಿಳಿಸಿವೆ.

ಯಾರ ಯೋಚನೆಯಿದು:

ಹುಡಾದ ಅಧ್ಯಕ್ಷರಾಗಿ ಕಳೆದ ನಾಲ್ಕೈದು ತಿಂಗಳ ಹಿಂದೆಯಷ್ಟೇ ಅಧಿಕಾರ ವಹಿಸಿಕೊಂಡಿರುವ ಶಾಕೀರ ಸನದಿ ಅವರ ಯೋಚನೆಯಿದು. ಹುಡಾದಲ್ಲಿ ಪೆಂಡಿಂಗ್‌ ಇರುವ ಅರ್ಜಿಗಳನ್ನು ಗಮನಿಸಿ ಏನಾದರೂ ಮಾಡಬೇಕು ಎಂಬ ಯೋಚನೆ ಅವರದು. ಇದಿನ್ನೂ ಪ್ರಾಥಮಿಕ ಹಂತದಲ್ಲಿದೆ. ನಿಯಮ ರೂಪಿಸಿದ ಬಳಿಕ ಸಭೆಯಲ್ಲಿ ಚರ್ಚಿಸಿ ಮತ್ತೇನಾದರೂ ಬದಲಾವಣೆ ಮಾಡುವುದಿದ್ದರೆ ಮಾಡಿ ಸರ್ಕಾರದ ಅನುಮೋದನೆ ಪಡೆದು ಜಾರಿಗೊಳಿಸುವ ಯೋಚನೆ ಹುಡಾದ್ದು.

ಒಟ್ಟಿನಲ್ಲಿ ಎಲ್ಲರಿಗೂ ಸೂರು ಎಂಬ ಕಲ್ಪನೆಯ ಕನಸು ಸಾಕಾರಗೊಳಿಸಲು ಹುಡಾ ಈ ಬಗೆಯ ವಿನೂತನ ಪ್ರಯೋಗ ಮಾಡಲು ಮುಂದಾಗಿರುವುದು ಮೆಚ್ಚುಗೆಗೆ ಪಾತ್ರವಾಗಿದೆ ಎಂದರೆ ತಪ್ಪಾಗಲಿಕ್ಕಿಲ್ಲ.ಹೊಸ ಲೇಔಟ್‌ಗಳಲ್ಲಿ ಇಡಬ್ಲ್ಯೂಎಸ್‌ಗೆ ಶೇ.1ರಿಂದ 2 ನಿವೇಶನ ಮೀಸಲಿಡುವಂತಾಗಬೇಕು ಎಂಬ ಯೋಚನೆ ಮಾಡಲಾಗುತ್ತಿದೆ. ಹಾಗಂತ ಡೆವಲಪರ್ಸ್‌ ಹುಡಾಕ್ಕೆ ನಿವೇಶನ ನೀಡುವುದು ಬೇಡ. ಅವರೇ ನೇರವಾಗಿ ಮಾರಾಟ ಮಾಡಲಿ. ಆದರೆ ಅದು ಎಸ್‌ಆರ್‌ ದರದಂತೆ ಇರಬೇಕು ಅಷ್ಟೇ. ಇದು ಚಿಂತನೆ. ಈ ಸಂಬಂಧ ಹುಡಾದಲ್ಲಿ ನಿಯಮ ರೂಪಿಸಿದ ಬಳಿಕ ಚರ್ಚೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹುಡಾ ಅಧ್ಯಕ್ಷ ಶಾಕೀರ ಸನದಿ ಹೇಳಿದರು.

Share this article