ಕನ್ನಡಪ್ರಭ ವಾರ್ತೆ ಗೋಕಾಕ
ನಮ್ಮ ದೇಶದ ಕೋಹಿನೂರ ವಜ್ರ ಬ್ರೀಟಿಷರು ಹೊತ್ತೊಯ್ದಿರಬಹುದು, ಕುಂದರನಾಡು ಸೇರಿ ಜಿಲ್ಲೆಗೆ ಅಮರಸಿದ್ಧೇಶ್ವರ ಶ್ರೀಗಳು ಕೊಹಿನೂರ ವಜ್ರದಂತೆ. ಅವರಲ್ಲಿ ಹತ್ತು ಹಲವಾರು ಉಪಯುಕ್ತ ಯೋಜನೆಗಳಿದ್ದು ಅವರ ಯೋಜನೆಗಳು ಯಶಸ್ವಿಗೊಳಿಸಲು ಭಕ್ತರು ಸಹಕರಿಸಬೇಕು ಎಂದು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.ತಾಲೂಕಿನ ಅಂಕಲಗಿ ಪಟ್ಟಣದ ಅಡವಿಸಿದ್ಧೇಶ್ವರ ಸಂಸ್ಥಾನ ಮಠದ ಆವರಣದಲ್ಲಿ ಶ್ರೀಮಠದ ಪೀಠಾಧಿಪತಿ ಅಮರಸಿದ್ಧೇಶ್ವರ ಶ್ರೀಗಳು ಗೌರವಾಭಿನಂದನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಂಕಲಗಿ-ಕುಂದರಗಿ ಅಡವಿಸಿದ್ಧೇಶ್ವರ ಮಠದ ಅಮರಸಿದ್ಧೇಶ್ವರ ಶ್ರೀಗಳು ಸತತ ಐದು ವರ್ಷಗಳ ಕಾಲ ಸಂಸ್ಕೃತದಲ್ಲಿ ಪಿಎಚ್‌ಡಿ ಪದವಿ ಪಡೆಯಲು ಶ್ರಮಿಸಿದ್ದಾರೆ. ತಮ್ಮ ವಿಚಾರಗಳನ್ನು ಗ್ರಂಥದ ಮೂಲಕ ನಮ್ಮ ನಾಡಿಗೆ ಸಮರ್ಪಣೆ ಮಾಡಬೇಕು ಎಂಬುವುದು ಅವರ ಆಶಯವಾಗಿತ್ತು. ಅವರ ಆಶಯದಂತೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಅವರ ಗ್ರಂಥಕ್ಕೆ ಪಿಎಚ್‌ಡಿ ಪದವಿ ನೀಡಿದೆ. ಶ್ರೀಗಳಲ್ಲಿರುವ ಜ್ಞಾನ, ಅನೇಕ ವಿಚಾರಗಳನ್ನು ಸಮಾಜಕ್ಕೆ ತಲುಪಿಸಲು ಅವರು ಪ್ರಯತ್ನಿಸುತ್ತಿದ್ದು, ಅವರ ಪ್ರಯತ್ನಕ್ಕೆ ನಾವೆಲ್ಲರೂ ಪ್ರೋತ್ಸಾಹಿಸುವ ಮೂಲಕ ಸಹಕರಿಸೋಣ ಎಂದು ಕೋರಿದರು.ಅಮರಸಿದ್ಧೇಶ್ವರ ಶ್ರೀಗಳು ಬಡ ಮಕ್ಕಳಿಗೆ ಶಿಕ್ಷಣ, ಸಂಗೀತ ಹಾಗೂ ಅನ್ನ ದಾಸೋಹ ಪ್ರಾರಂಭಸುವ ವಿಚಾರ ಸೇರಿ ಅನೇಕ ಹತ್ತು ಹಲವು ವಿಚಾರಗಳನ್ನು ಹೊಂದಿದ್ದಾರೆ. ಅವರಿಗೆ ಶ್ರೀಮಠದ ಭಕ್ತರಾದ ನಾವುಗಳು ಸಹಕರಿಸಬೇಕು. ಶ್ರೀಗಳು ಕುಂದರನಾಡು ಹಾಗೂ ಜಿಲ್ಲೆಯ ವಜ್ರ ಅವರ ಜ್ಞಾನವನ್ನು ಜಿಲ್ಲೆ ಹಾಗೂ ನಾಡಿಗೆ ಉಪಯುಕ್ತವಾಗಿದೆ ಎಂದರು. ಅಮರಸಿದ್ಧೇಶ್ವರ ಶ್ರೀಗಳು ಅಭಿನಂಧನೆ ಸ್ವೀಕರಿಸಿ ಮಾತನಾಡಿ, ನಾನು ಅನೇಕ ವಿಚಾರಗಳನ್ನಿಟ್ಟುಕೊಂಡು ಶ್ರೀಮಠದ ಪೀಠಾಧಿಪತಿಯಾಗಿ ಬಂದಿದ್ದೇನೆ. ನಾನು ಪೀಠಕ್ಕೆ ಅಂಟಿಕೊಳ್ಳುವ ವ್ಯಾಮೋಹಹೊಂದಿವನಲ್ಲ. ಸ್ವಾಮೀಜಿಗಳು ಭಕ್ತರ ಒಡೆಯರಲ್ಲ ನಿಷ್ಠಾವಂತ ಸೇವಕ ಮಾತ್ರ. ಕೆಲವರು ಮಠದ ಶ್ರೀಗಳ ಬಗ್ಗೆ ರಾಜಕೀಯ ಮಾತುಗಳನ್ನಾಡುತ್ತಿದ್ದಾರೆ. ಅಂಕಲಗಿ-ಕುಂದರಗಿ ಮಠದಲ್ಲಿ ಕನ್ನಡಿ ಒರೆಸಲಾಗಿದೆ. ಅಂತವರು ಬಂದು ತಮ್ಮ ಮುಖಕ್ಕೆ ಏನನ್ನು ಬಳೆದುಕೊಂಡು ಬಂದಿದ್ದಾರೆ ಎಂಬುವುದು ನೋಡಬಹುದು. ಆದರೆ, ನಾವು ರಾಜಕೀಯ ಮಾಡಲ್ಲ. ಅಡಿವಿಸಿದ್ಧೇಶ್ವರ ಶ್ರೀಮಠವು ಯಾವುದೇ ಜಾತಿ, ಜನಾಂಗಕ್ಕೆ ಸಮೀತವಾಗಿಲ್ಲ ಸರ್ವ ಧರ್ಮ, ಜನಾಂಗಳ ಮಠವಾಗಿದೆ ಎಂದು ತಿಳಿಸಿದರು.ಅಡವಿಸಿದ್ಧೇಶ್ವರ ಅಜ್ಜನವರು 777 ವರ್ಷಗಳ ತಮ್ಮ ಜೀವಿತಾವಧಿಯಲ್ಲಿ ದೇಶದ ಅನೇಕ ಭಾಗಗಳಲ್ಲಿ 777ಕ್ಕೂ ಹೆಚ್ಚು ಸ್ಥಳಗಳಲ್ಲಿ ತಪಸ್ಸನ್ನು ಗೈದು ಭಕ್ತರ ಉದ್ದಾರಕ್ಕೆ ಶ್ರಮಿಸಿದ್ದರು. ಅವರು ತಪಸ್ಸು ಮಾಡಿದ ಸ್ಥಳದಲ್ಲಿ ಗುಡಿ ಗೋಪುರಗಳು ನಿರ್ಮಾಣವಾಗಿವೆ. ಅವುಗಳಲ್ಲಿ 367 ಶಾಖಾ ಮಠಗಳಿದ್ದು ಅವುಗಳ ಬಗ್ಗೆ ಮಾಹಿತಿಯನ್ನು ಕಲೆಹಾಕಿದ್ದಿನಿ. 80 ಕ್ಕೂ ಅಧಿಕ ಮಠಗಳಿಗೆ ಈಗಾಗಲೇ ಭೇಟಿ ನೀಡಿದ್ದೇನೆ. ಸ್ವಾತಂತ್ರ್ಯ ಪೂರ್ವದಲ್ಲಿ ಕೆಲವು ನಶಿಸಿ ಹೋಗಿರುವುದಾಗಿ ತಿಳಿಸಿದರು.ಬೆಳಗಾವಿ ಜಿಲ್ಲೆಯ ಹಾಗೂ ಕುಂದರನಾಡು ಭಾಗದ ಮಕ್ಕಳಿಗಾಗಿ ಸುಕುಮಾರ ಹಾನಗಲ್ಲ ಕುಮಾರಜ್ಜನವರ ಹೆಸರಿನಲ್ಲಿ ಸಂಗೀತ ಪಾಠಶಾಲೆಯನ್ನು ಪ್ರಾರಂಭಿಸಲಾಗಿದೆ. ಇದರ ಸದುಪಯೋಗಪಡಿಸಿಕೊಳ್ಳುವಂತೆ ತಿಳಿಸಿದರು.ವೇದಿಕೆಯ ಮೇಲೆ ಮುರಗೋಡದ ಮಹಾಂತ ದುರದುಂಡೇಶ್ವರ ಮಠದ ನೀಲಕಂಠ ಮಹಾಸ್ವಾಮಿಗಳು, ಮುನವಳ್ಳಿ ಸೋಮಶೇಖರ ಮಠದ ಮುರುಘರಾಜೇಂದ್ರ ಮಹಾಸ್ವಾಮಿಗಳು, ಕಮತಗಿ ಹೊಳೆಹುಚ್ಚೇಶ್ವರ ಸಂಸ್ಥಾನ ಮಠದ ಹುಚ್ಚೇಶ್ವರ ಮಹಾಸ್ವಾಮಿಗಳು, ಹುಕ್ಕೇರಿಯ ಶಿವಬಸವ ಮಹಾಸ್ವಾಮಿಗಳು, ಕಾರಂಜಿಮಠದ ಗುರುಸಿದ್ಧ ಮಹಾಸ್ವಾಮಿಗಳು, ಅರಳಿಕಟ್ಟಿ ತೊಂಟದಾರ್ಯ ವಿತರಕ್ತ ಮಠದ ಶಿವಮೂರ್ತಿ ಮಹಾಸ್ವಾಮಿಗಳು, ಕಮತೇನಟ್ಟಿ ಪ್ರಭುಲಿಂಗೇಶ್ವರ ಮಠದ ಗುರುದೇವ ದೇವರು, ಪಾಶ್ಚಾಪೂರದ ವಿಶ್ವರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು, ರಾಯಚೂರು ನವಲಕಲ್ ಮಠದ ಸೋಮನಾಥ ಶಿವಾಚಾರ್ಯ ಮಹಾಸ್ವಾಮಿಗಳು, ಮಮದಾಪೂರದ ಚರಮೂರ್ತೇಶ್ವರ ಮಹಾಸ್ವಾಮಿಗಳು, ಬೈಲಹೊಂಗಲದ ಆರಾದ್ರಿಮಠದ ಡಾ.ಮಹಾಂತೇಶ ಶಾಸ್ತ್ರಿಗಳು, ಶಾಸಕರುಗಳಾದ ಬಾಬಾಸಾಹೇಬ ಪಾಟೀಲ, ವಿಶ್ವಾಸ ವೈದ್ಯ, ಪೃಥ್ವಿರಾಜ ಕತ್ತಿ, ಮಾಜಿ ವಿಧಾನ ಪರಿಷತ ಸದಸ್ಯ ಮಹಾಂತೇಶ ಕವಟಗಿಮಠ, ಮುಖಂಡರಾದ ಅಶೋಕ ಪೂಜೇರಿ, ಭರತ ಈಟಿ, ಬ್ರೀಜೇಷ ಪಾಟೀಲ ಉಪಸ್ಥಿತರಿದ್ದರು.ಅಡವಿಸಿದ್ಧೇಶ್ವರ ಸಂಸ್ಥಾನ ಮಠದ ಪೀಠಾಧಿಪತಿ ಅಮರಸಿದ್ಧೇಶ್ವರ ಶ್ರೀಗಳಿಗೆ ವಿವಿಧ ಸಂಘ ಸಂಸ್ಥೆಗಳು, ಗಣ್ಯ ಮಾನ್ಯರು, ಕನ್ನಡಪರ ಸಂಘನೆಯವರು ಗೌರವಾಭಿನಂದನೆ ಸಲ್ಲಿಸಿದರು.