ಕನ್ನಡಪ್ರಭ ವಾರ್ತೆ ಚಾಮರಾಜನಗರ
ಡಾ.ಬಿ.ಆರ್.ಅಂಬೇಡ್ಕರ್ ಸಂಘಟನೆಗಳ ಒಕ್ಕೂಟ ಅಸ್ತಿತ್ವದಲ್ಲೇ ಇಲ್ಲ. ಸಮುದಾಯ ಡಾ.ಬಿ.ಆರ್ ಅಂಬೇಡ್ಕರ್ ಸಂಘಟನೆಗಳ ಒಕ್ಕೂಟಕ್ಕೆ ಸಿ.ಕೆ ಮಂಜುನಾಥ್ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿಯೇ ಇಲ್ಲ. ನಗರಸಭೆ ಮಾಜಿ ಅಧ್ಯಕ್ಷ ಎಸ್. ನಂಜುಂಡಸ್ವಾಮಿ ಹಿಂಬಾಲಕರಾಗಿ ಸಂಘದ ಅಕ್ರಮ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಜಿಲ್ಲಾ ಅಂಬೇಡ್ಕರ್ ಸಂಘದ ಅಧ್ಯಕ್ಷ ಪಿ.ಸಂಘಸೇನಾ ಅವರು ಆರೋಪಿಸಿದರು.ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆದಿಕರ್ನಾಟಕ ಅಭಿವೃದ್ಧಿ ಸಂಘ ಸಮುದಾಯದ ಆಸ್ತಿಯಾಗಿದೆ. ಇಲ್ಲಿ ಹತ್ತಾರು ಸಾವಿರ ವಿದ್ಯಾರ್ಥಿಗಳು ವ್ಯಾಸಂಗ ಮಾಡಿದ್ದಾರೆ. ಅನೇಕರು ಅಧಿಕಾರಿಗಳಾಗಿದ್ದಾರೆ. ಕೆಲವರು ಉನ್ನತ ಅಧಿಕಾರಿಗಳೂ ಆಗಿದ್ದಾರೆ ಎಂದು ತಿಳಿಸಿದರು. ಈ ಸಂಘಕ್ಕೆ ನಗರಸಭಾ ಮಾಜಿ ಅಧ್ಯಕ್ಷ ಎಸ್.ನಂಜುಡಸ್ವಾಮಿ ಸ್ವಯಂಘೋಷಿತ ಅಧ್ಯಕ್ಷರಾಗಿದ್ದಾರೆ, ಅವರನ್ನು ಸಮುದಾಯದವರು ಸಭೆ ಸೇರಿ ಮಾಡಿಲ್ಲ. ಅಧ್ಯಕ್ಷರಾದ ಮೇಲೆ ಅವರು ಅಭಿವೃದ್ಧಿಯ ಹೆಸರಿನಲ್ಲಿ ಸಂಘದ ಆಸ್ತಿಯನ್ನು ಪರಭಾರೆ ಮಾಡಿಸಿ,ತಮ್ಮ ಕುಟುಂಬದವರಿಗೆ ಸೇರುವಂತೆ ಮಾಡಿಕೊಂಡಿದ್ದಾರೆ ಎಂದು ದೂರಿದರು.
ಸಂಘದ ಆಸ್ತಿ ಪರಭಾರೆ ವಿರುದ್ಧ ಆದಿಕರ್ನಾಟಕ ಅಭಿವೃದ್ಧಿ ಸಂಘದ ಆಸ್ತಿ ಸಂರಕ್ಷಣಾ ಸಮಿತಿ ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಿದ ಮೇರೆಗೆ ಕಂದಾಯ ಇಲಾಖೆಯ ಅಧಿಕಾರಿಗಳು ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದು. ಸಂಘದ ಅಧ್ಯಕ್ಷರು, ಕಾರ್ಯದರ್ಶಿ, ನಿರ್ದೇಶಕರು ಇತರರ ಮೇಲೆ ಎಫ್‌ಐಆರ್ ಆಗಿದೆ. ಸಂಘಕ್ಕೆ ಆಡಳಿತಾಧಿಕಾರಿ ನೇಮಕಕ್ಕೆ ನ್ಯಾಯಾಲಯದಲ್ಲಿ ತಡೆಯಾಜ್ಞೆ ತಂದಿದ್ದರು. ಮಧ್ಯಂತರ ಜಾಮೀನು ರದ್ದಾಗಿದೆ. ಮುಖ್ಯವಾದವರನ್ನೇ ಪೋಲಿಸರು ಬಂಧಿಸುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದರು.ಆದಿಕರ್ನಾಟಕ ಅಭಿವೃದ್ಧಿ ಸಂಘ, ಅಧ್ಯಕ್ಷರ ಪರ ಸಂಘದ ನಿರ್ದೇಶಕ ಎಸ್.ಮಹದೇವಯ್ಯ, ಡಾ.ಬಿ.ಆರ್.ಅಂಬೇಡ್ಕರ್ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಸಿ.ಕೆ.ಮಂಜುನಾಥ್ ಪತ್ರಿಕಾಗೋಷ್ಠಿ ನಡೆಸಿದ್ದಾರೆ. ಸಂಘದ ಆಸ್ತಿ ಪರಭಾರೆಯಾದ ಮೇಲೆ ಎಸ್.ಮಹದೇವಯ್ಯನವರು ನಿರ್ದೇಶಕರಾಗಿ ಏನು ಮಾಡುತ್ತಿದ್ದರು ? ಹರಿಜನ ವಿದ್ಯಾರ್ಥಿ ನಿಲಯದ ಹೆಸರಿನಲ್ಲಿ ಆಸ್ತಿ ಇದ್ದ ಮೇಲೆ ಆದಿಕರ್ನಾಟಕ ಅಭಿವೃದ್ಧಿ ಸಂಘದಿಂದ 30 ವರ್ಷ ಹೇಗೆ ಭೋಗ್ಯ ಕರಾರು ಮಾಡಿದ್ದರು? ಸಬ್ ರಿಜಿಸ್ಟರ್ ಸಮರ್ಥಿಸಿಕೊಳ್ಳುವುದು ಸರಿಯೇ? ಸಂಘದ ಆಸ್ತಿ ಪರಭಾರೆಯಲ್ಲಿ ಸಂಘದ ನಿರ್ದೇಶಕ ಎಸ್. ಮಹದೇವಯ್ಯ, ಸಬ್ ರಿಜಿಸ್ಟರ್ ಶಾಮೀಲು ಆಗಿದ್ದಾರೆ, ಅವರೆಲ್ಲರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಆದಿಕರ್ನಾಟಕ ಅಭಿವೃದ್ಧಿ ಸಂಘದ ಅನ್ಯಾಯ, ಅಕ್ರಮವನ್ನು ನ್ಯಾಯಾಲಯ ತೀರ್ಮಾನಿಸುತ್ತದೆ. ಎರಡು ಕಡೆಯರವನ್ನು ರಾಜೀ ಸಂಧಾನ ಮಾಡಲು ಸಿ.ಕೆ.ಮಂಜುನಾಥ್ ಯಾರು? ಎಂದು ಜಿಲ್ಲಾ ಅಂಬೇಡ್ಕರ್ ಸಂಘದ ಅಧ್ಯಕ್ಷ ಪಿ.ಸಂಘಸೇನಾ ಖಾರವಾಗಿ ಪ್ರಶ್ನಿಸಿದರು.ಸಮುದಾಯದ ಆಸ್ತಿ ಸಂರಕ್ಷಣೆ ಮಾಡಲು - ಆದಿಕರ್ನಾಟಕ ಅಭಿವೃದ್ಧಿ ಸಂಘದ ಆಸ್ತಿ ಸಂರಕ್ಷಣಾ ಸಮಿತಿ ಪರವಾಗಿ ಜಿಲ್ಲಾ ಅಂಬೇಡ್ಕರ್ ಸಂಘ ಇರುತ್ತದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಚಾಮುಲ್ ನಿರ್ದೇಶಕ ರೇವಣ್ಣ, ಸೋಮಣ್ಣ, ಶಿವಣ್ಣ, ದಡದಹಳ್ಳಿ ಶಂಕರ್, ಉಮೇಶ್ ಹಾಜರಿದ್ದರು.