ಬಳ್ಳಾರಿ: ಬಾಬಾ ಸಾಹೇಬ್ ಅಂಬೇಡ್ಕರ್ ಸಾಮಾಜಿಕ ಸಮಾನತೆಗೆ ಬದುಕಿನುದ್ದಕ್ಕೂ ಶ್ರಮಿಸಿದರು ಎಂದು ಮೋಕಾ ಠಾಣೆ ಪಿಎಸ್‌ಐ ಎ.ಕಾಳಿಂಗ ತಿಳಿಸಿದರು.
ಜಾತಿ ವ್ಯವಸ್ಥೆ ತೊಡೆದು ಹಾಕಬೇಕು. ಅಸ್ಪೃಶ್ಯತೆಯಿಂದ ಸಮಾಜವನ್ನು ಮುಕ್ತಗೊಳಿಸಬೇಕು. ಪ್ರತಿಯೊಬ್ಬರಿಗೂ ಗೌರವಯುತ ಸಾಮಾಜಿಕ ಸ್ಥಾನಮಾನ ಸಿಗಬೇಕು ಎಂಬ ಆಶಯ ಹೊಂದಿದ್ದರು. ಶಿಕ್ಷಣ ಮತ್ತು ಜ್ಞಾನಕ್ಕಾಗಿ ಹೆಚ್ಚಿನ ಆದ್ಯತೆ ನೀಡಿದರು. ಸಂವಿಧಾನ ಮತ್ತು ಪ್ರಜಾಪ್ರಭುತ್ವ, ಮಹಿಳಾ ಸಬಲೀಕರಣ, ಸ್ವಾಭಿಮಾನದ ಬದುಕು ಹಾಗೂ ಸ್ವಾವಲಂಬಿ ಹಕ್ಕುಗಳಿಗಾಗಿ ಹೋರಾಡಬೇಕು ಎಂದು ಕರೆ ನೀಡಿದ್ದರು. ಅವರ ಆಶಯದಂತೆ ಸಾಮಾಜಿಕ ಸಮಾನತೆಯ ಕಾರ್ಯವಾಗಬೇಕಿದೆ. ಪ್ರತಿಯೊಬ್ಬರು ಸ್ವಾವಲಂಬನೆ ಸಾಧಿಸಬೇಕಿದೆ ಎಂದು ಹೇಳಿದರು.
ಪ್ರಸ್ತುತ ಸಮಾಜಕ್ಕೆ ಡಾ. ಬಿ.ಆರ್. ಅಂಬೇಡ್ಕರ್ ನೀಡಿರುವ ಸಂವಿಧಾನವು ಎಲ್ಲ ಸಮುದಾಯಗಳಿಗೂ ವಿದ್ಯೆ, ಉದ್ಯೋಗ, ರಾಜಕೀಯ ಸೇರಿ ಎಲ್ಲ ಕ್ಷೇತ್ರಗಳಲ್ಲೂ ಸಮಾನ, ನ್ಯಾಯಯುತ ಅವಕಾಶಗಳನ್ನು ಕಲ್ಪಿಸಿದೆ.ಅಂಬೇಡ್ಕರ್ ಅವರ ಸಾಧನೆಯಲ್ಲಿ ರಮಾಬಾಯಿ ಅವರ ಪಾತ್ರ ಸರ್ವ ಶ್ರೇಷ್ಠವಾದದ್ದು, ಅಂಬೇಡ್ಕರ್ ಅವರ ಸಂವಿಧಾನದಿಂದಲೇ ನಾನು ಇಂದು ಈ ಸ್ಥಾನ ದೊರೆತಿದೆ ಎಂದರು.
ಮಹದೇವ ತಾತ ಕಲಾ ಸಂಘದ ಅಧ್ಯಕ್ಷ ಪುರುಷೋತ್ತಮ ಹಂದ್ಯಾಳು ಮಾತನಾಡಿ, ಜೀವನದ ಪಾಠ ಕಲಿಯಲು ರಂಗಭೂಮಿ ದಾರಿದೀಪವಾಗುತ್ತದೆ. ಶಾಲಾ ಮಕ್ಕಳಿಗೆ ಇಂತಹ ಮಹಾನ್ ನಾಯಕರ ನಾಟಕಗಳು ಅತ್ಯವಶ್ಯಕ. ಮಕ್ಕಳಲ್ಲಿ ಅರಿವು ಮೂಡಿಸುವ ಹಿನ್ನೆಲೆಯಲ್ಲಿ ನಮ್ಮ ಸಂಘದಿಂದ ಇಂತಹ ನಾಟಕ ಪ್ರದರ್ಶನ ಆಯೋಜಿಸಲಾಗಿದೆ ಎಂದರು.
ಸಂಘದ ಅಧ್ಯಕ್ಷ ಪುರುಷೋತ್ತಮ ಹಂದ್ಯಾಳು, ಪಿಎಸ್‌ಐ ಕಾಳಿಂಗ, ಸಾಹಿತಿ ಭುವನೇಶ ಕುಂಬಾರ ಅವರನ್ನು ಸನ್ಮಾನಿಸಲಾಯಿತು. ಅಕ್ಷತಾ ಹಾಗೂ ಸಂಧ್ಯಾ ತಂಡದವರು ಗೀತಗಾಯನ ಪ್ರಸ್ತುತ ಪಡಿಸಿದರು.