ಶಾಂತಿಯುತ, ನಕಲು ರಹಿತ ಪಿಯು ಪರೀಕ್ಷೆಗೆ ಸಿದ್ಧತೆ: ಜಿಲ್ಲಾಧಿಕಾರಿ ಸ್ನೇಹಲ್‌

KannadaprabhaNewsNetwork |  
Published : Feb 22, 2026, 02:15 AM IST
ಮದಮದಮ | Kannada Prabha

ಸಾರಾಂಶ

ಶಾಂತಿಯುತ, ಸುಗಮ, ನಕಲು ರಹಿತ ಪರೀಕ್ಷೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಸ್ನೇಹಲ್‌ .ಆರ್‌.ತಿಳಿಸಿದರು.

ಧಾರವಾಡ: ಪ್ರಸ್ತಕ ವರ್ಷದ ಪಿಯುಸಿ ವಾರ್ಷಿಕ ಪರೀಕ್ಷೆಯು ಫೆ,28ರಿಂದ ಮಾರ್ಚ್ 17ರವರೆಗೆ ನಡೆಯಲಿವೆ. 12,665 ಪುರುಷ ಹಾಗೂ 14,289 ಮಹಿಳಾ ವಿದ್ಯಾರ್ಥಿಗಳು ಸೇರಿ ಒಟ್ಟು 26,954 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಶಾಂತಿಯುತ, ಸುಗಮ, ನಕಲು ರಹಿತ ಪರೀಕ್ಷೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಸ್ನೇಹಲ್‌ .ಆರ್‌.ತಿಳಿಸಿದರು.

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಜಿಲ್ಲಾಡಳಿತ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳ ಕುರಿತು ಕೈಗೊಂಡ ಕ್ರಮಗಳ ಕುರಿತು ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ಪ್ರಥಮ ಬಾರಿಗೆ ಪರೀಕ್ಷೆಗೆ 11,269 ಪುರುಷ ಹಾಗೂ 13445 ಮಹಿಳಾ ಸೇರಿ ಒಟ್ಟು 24,714 ಜನ ಪರೀಕ್ಷೆಗೆ ನೋಂದಾಉಯಿಸಿಕೊಂಡಿದ್ದರೆ, 1,234 ಪುರುಷ ಹಾಗೂ 682 ಮಹಿಳೆಯರು ಪುನಾರಾವರ್ತಿತ, ಖಾಸಗಿ ಅಭ್ಯರ್ಥಿಗಳಾಗಿ 150 ಪುರುಷ ಹಾಗೂ 148 ಮಹಿಳೆಯರು ಹಾಗೂ ಫಲಿತಾಂಶ ಸುಧಾರಣೆಗಾಗಿ 12 ಪುರುಷ ಮತ್ತು 14 ಮಹಿಳಾ ವಿದ್ಯಾರ್ಥಿಗಳು ಸೇರಿದಂತೆ 2240 ಪರೀಕ್ಷಾರ್ಥಿಗಳು ಹೆಸರು ನೋಂದಾಯಿಸಿಕೊಂಡಿದ್ದಾರೆ ಎಂದರು.

ಕಲಾ ವಿಭಾಗದಲ್ಲಿ 3152 ಪುರುಷ ಹಾಗೂ 3455 ಮಹಿಳಾ ವಿದ್ಯಾರ್ಥಿಗಳು ಸೇರಿ ಒಟ್ಟು 6607 ವಿದ್ಯಾರ್ಥಿಗಳು, ವಾಣಿಜ್ಯ 3315 (ಪು), 3863(ಮ) ವಿದ್ಯಾರ್ಥಿಗಳು ಸೇರಿ 7178 ವಿದ್ಯಾರ್ಥಿಗಳು, ವಿಜ್ಞಾನ 6198(ಪು) ಹಾಗೂ 6971 (ಮ) ವಿದ್ಯಾರ್ಥಿಗಳು ಸೇರಿ ಒಟ್ಟು 13,169 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ ಎಂದರು.

ಜಿಲ್ಲೆಯಲ್ಲಿ 176 ಕಾಲೇಜುಗಳ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಧಾರವಾಡ -16, ಹುಬ್ಬಳ್ಳಿ-18, ಅಳ್ನಾವರ 1, ಕಲಘಟಗಿ 2, ಕುಂದಗೋಳ 3, ನವಲಗುಂದ 2 ಹಾಗೂ ಅಣ್ಣಿಗೇರಿ 1 ಸೇರಿ ಒಟ್ಟು 43 ಪರೀಕ್ಷಾ ಕೇಂದ್ರಗಳಿವೆ ಎಂದು ತಿಳಿಸಿದರು.

ಪ್ರತಿ ಪರೀಕ್ಷಾ ಕೇಂದ್ರಗಳಿಗೆ ಸಿಸಿಟಿವಿ ವ್ಯವಸ್ಥೆ ಹಾಗೂ ಮೂಲಭೂತ ಸೌಲಭ್ಯಗಳಿರುವುದನ್ನು ಖಚಿತಪಡಿಸಲಾಗಿದೆ. ಜಿಪಂ ಕಾರ್ಯಾಲಯದಲ್ಲಿ ವೆಬ್‌ಕಾಸ್ಟಿಂಗ್ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದು ವಿವರಿಸಿದರು

ಸುಗಮ, ನಕಲುರಹಿತ, ಶಾಂತಿಯುತ ಪರೀಕ್ಷೆ ನಡೆಸುವಂತೆ ಸಂಬಂಧಪಟ್ಟ ಅಧಿಕಾರಿ ವರ್ಗಕ್ಕೆ ಸೂಚಿಸಿದ ಅವರು, ಡೆಸ್ಕ್‌ ಕೊರತೆ ಇದ್ದರೆ ಸಂಬಂಧಿತ ಟ್ಯಾಗ್ ಮಾಡಿದ ಕಾಲೇಜುಗಳಿಂದ ವ್ಯವಸ್ಥೆ ಮಾಡಿಕೊಳ್ಳಬೇಕು. ಪರೀಕ್ಷಾ ಕೇಂದ್ರದ ಸುತ್ತಮುತ್ತಲಿನ 200 ಮೀಟರ್ ವ್ಯಾಪ್ತಿಯನ್ನು ನಿಷೇಧಿತ ಪ್ರದೇಶವೆಂದು ಘೋಷಿಸಲಾಗುವುದು.

ಮೇಲ್ವಿಚಾರಣೆಗಾಗಿ ಜಿಲ್ಲಾ ಖಜಾನೆ ಹಾಗೂ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ 24x7 ಸಿಸಿಟಿವಿ ಕ್ಯಾಮೆರಾ ವೀಕ್ಷಣೆ ವ್ಯವಸ್ಥೆ ಕಲ್ಪಿಸಲಾಗಿದೆ. ಪರೀಕ್ಷಾರ್ಥಿಗಳು ಹಾಗೂ ಪರೀಕ್ಷಾ ಕೇಂದ್ರಗಳಿಗೆ ನೇಮಕಗೊಂಡ ಅಧಿಕಾರಿಗಳು ಮತ್ತು ಸಿಬ್ಬಂದಿ ಹೊರತುಪಡಿಸಿ ಇತರರಿಗೆ ಪರೀಕ್ಷಾ ಕೇಂದ್ರ ಪ್ರವೇಶಕ್ಕೆ ಅವಕಾಶ ಇಲ್ಲ ಎಂದು ಸ್ಪಷ್ಟಪಡಿಸಿದರು.

ಪರೀಕ್ಷಾ ಕೇಂದ್ರದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್‌ ವ್ಯವಸ್ಥೆ ಮಾಡಲಾಗಿದೆ. ಶಾಂತಿ ಮತ್ತು ಭದ್ರತೆ ಕಾಪಾಡಲು ಕ್ರಮ ಕೈಗೊಳ್ಳಬೇಕು. ಜಿಲ್ಲಾ ಖಜಾನೆಯಿಂದ ಪರೀಕ್ಷಾ ಕೇಂದ್ರಗಳಿಗೆ ಸಾಗಿಸುವ ಗೌಪ್ಯ ಸಾಮಗ್ರಿಗಳ ವಾಹನಗಳಿಗೆ ಶಸ್ತ್ರಸಜ್ಜಿತ ಪೊಲೀಸ್ ಬೆಂಗಾವಲು ಒದಗಿಸಬೇಕು. ವಾಹನಗಳ ಮೇಲೆ ಜಿಪಿಎಸ್ ಟ್ರ‍್ಯಾಕಿಂಗ್ ವ್ಯವಸ್ಥೆ ಅಳವಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಪರೀಕ್ಷಾ ಕೇಂದ್ರಕ್ಕೆ ಸಿಟಿಂಗ್ ಸ್ಕ್ವಾಡ್, ಜಿಲ್ಲಾ ಜಾಗೃತದಳ ಹಾಗೂ ತಾಲೂಕು ಜಾಗೃತದಳ ನೇಮಿಸಿ, ಕಟ್ಟುನಿಟ್ಟಿನ ಮೇಲ್ವಿಚಾರಣೆ ವ್ಯವಸ್ಥೆ ಮಾಡಲಾಗುತ್ತದೆ ಎಂದು ಹೇಳಿದರು.

ಪರೀಕ್ಷಾ ಕೇಂದ್ರದಲ್ಲಿ ಮುಖ್ಯಾಧಿಕಾರಿಗಳನ್ನು ಹೊರತುಪಡಿಸಿ, ಉಳಿದ ಸಿಬ್ಬಂದಿಗಳು ಮೊಬೈಲ್ ಫೋನ್, ಸ್ಮಾರ್ಟ್ ಫೋನ್, ಸ್ಮಾರ್ಟ್ ವಾಚ್, ಐ-ಫೋನ್ ಸೇರಿದಂತೆ ಯಾವುದೇ ಎಲೆಕ್ಟ್ರಾನಿಕ್ ಸಾಧನ ಬಳಸುವಂತಿಲ್ಲ ಎಂದರು

ಜಿಪಂ ಸಿಇಒ ಭುವನೇಶ ಪಾಟೀಲ ಮಾತನಾಡಿ, ಪರೀಕ್ಷೆಗಳನ್ನು ಶಾಂತಿಯುತವಾಗಿ ಮತ್ತು ಸುಗಮವಾಗಿ ನಡೆಸಲು ಅಗತ್ಯ ಕ್ರಮಕೈಗೊಳ್ಳಲಾಗಿದೆ ಎಂದರು.

ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ತೇಜಸ್ವಿನಿ ನಾರಾಯಣಕರ, ಪಿಯುಸಿ ಪರೀಕ್ಷಾ ಕಾರ್ಯಕ್ಕೆ ನಿಯೋಜನೆಗೊಂಡ ಅಧಿಕಾರಿಗಳು, ಸಿಬ್ಬಂದಿ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಲೋಕಾ ದಾಳಿ ವಿರೋಧಿಸಿ ಶಾಸಕರ ಬೆಂಬಲಿಗರಿಂದ ಪ್ರತಿಭಟನೆ
ಬೇಡ್ತಿ - ಅಘನಾಶಿನಿ ಯೋಜನೆಯನ್ನು ಸಂಘಟಿತವಾಗಿ ನಿಲ್ಲಿಸಿ: ಸ್ವರ್ಣವಲ್ಲಿ ಶ್ರೀ