ಕನ್ನಡಪ್ರಭ ವಾರ್ತೆ ಹಾಸನ
ಸಮ ಸಮಾಜದ ನಿರ್ಮಾಣದ ಕನಸು ಬಿತ್ತಿರುವ ಅಂಬಿಗರ ಚೌಡಯ್ಯ ಅವರ ಜೀವನದ ಬಗ್ಗೆ ನಮ್ಮ ಮುಂದಿನ ಪೀಳಿಗೆ ತಿಳಿಸುವಂತಹ ಕೆಲಸವಾಗಬೇಕು. ಶರಣರು ಮಾಡಿರುವ ಕ್ರಾಂತಿಯೂ ಇನ್ನೂ ಸಾಕಾರವಾಗಿಲ್ಲ, ಸಮ ಸಮಾಜ ಕಟ್ಟುವ ಕೆಲಸ ನಿರಂತರವಾಗಿ ಆಗಬೇಕು ಎಂದು ಅಪರ ಜಿಲ್ಲಾಧಿಕಾರಿ ಕೆ ಟಿ ಶಾಂತಲಾ ಹೇಳಿದ್ದಾರೆ.ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಹಾಸನಾಂಬ ಕಲಾಕ್ಷೇತ್ರದಲ್ಲಿ ಮಂಗಳವಾರ ಆಯೋಜಿಸಿದ್ದ ಅಂಬಿಗರ ಚೌಡಯ್ಯ ಜಯಂತಿಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ೧೨ನೇ ಶತಮಾನದ ಮಹನೀಯರಲ್ಲಿದ್ದ ಜ್ಞಾನಿಗಳೊಂದಿಗೆ ಅವರು ಮಾಡಿರುವ ಕೆಲಸ-ಕಾರ್ಯಗಳನ್ನು ೨೧ನೇ ಶತಮಾನದಲ್ಲಿಯೂ ಅವರನ್ನು ನೆನೆಸಿಕೊಳ್ಳುತ್ತಿದ್ದೇವೆ ಎಂದರು.
ಅಂಬಿಗರ ಚೌಡಯ್ಯನವರು ನೇರ ನುಡಿ ನೇರ ವ್ಯಕ್ತಿತ್ವ ಉಳ್ಳವರಾಗಿದ್ದರು, ಸಮ ಸಮಾಜ ನಿರ್ಮಾಣಕ್ಕೆ ಕನಸು ಬಿತ್ತಿದ ಶರಣರು, ಶ್ರಮಿಸಿದವರಲ್ಲಿ ಪ್ರಮುಖರು, ಜ್ಞಾನದಿಂದ ಅವರು ಮಾಡಿರುವ ಕೆಲಸ-ಕಾರ್ಯ, ಸಮಾಜಕ್ಕೆ ಕೊಟ್ಟಿರುವ ಕೊಡುಗೆಯನ್ನು ಇಂದು ನೆನಪಿಸಿಕೊಳ್ಳುತ್ತೆದ್ದೇವೆ ಎಂದು ತಿಳಿಸಿದರು. ಅಂಬಿಗರ ಚೌಡಯ್ಯ ಅವರ ಆಶಯದಂತೆ ಸಮಾನತೆಯ ಸಮಾಜವನ್ನು ಕಟ್ಟಲು ಸಣ್ಣ ಪ್ರತಿಜ್ಞೆಯನ್ನು ನಾವೆಲ್ಲರೂ ತೆಗೆದುಕೊಂಡರೆ ಮಾತ್ರ ಅಂಬಿಗರ ಚೌಡಯ್ಯ ಅವರಿಗೆ ನಾವು ಸಲ್ಲಿಸುವ ಗೌರವವಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಹೇಳಿದರು.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಎಚ್.ಎಲ್ ಮಲ್ಲೇಶ ಗೌಡ ಅವರು ಮಾತನಾಡಿ, ದೇಶಕ್ಕೆ ಒಂದು ಸಂಸತ್ತಿನ ಮಾದರಿಯನ್ನು ಕೊಟ್ಟಂತಹ ಕಾಲಘಟ್ಟ ೧೨ನೆಯ ಶತಮಾನವಾಗಿದೆ, ಇದೇ ಕಾಲಘಟ್ಟದವರಾದ ಅಂಬಿಗರ ಚೌಡಯ್ಯನವರು ಬಸವಣ್ಣನವರಿಗೂ ಕೂಡ ಒಮ್ಮೊಮ್ಮೆ ಅರಿವಿನ ದಾರಿಯನ್ನು ತೋರಿಸಿದಂತಹ ಗಟ್ಟಿತನದ ಶರಣರಾಗಿದ್ದಾರೆ. ತಮ್ಮ ಹೆಸರಿನೊಂದಿಗೆ ತಮ್ಮ ಕಾಯಕವನ್ನು ಹೇಳಿಕೊಳ್ಳುವ ಎದೆಗಾರಿಕೆ ಹೊಂದಿದ್ದರು ಎಂದರು.
೧೨ನೇ ಶತಮಾನ ಜಗತ್ತಿನ ಅತ್ಯದ್ಭುತ ಕಾಲಘಟ್ಟಗಳಲ್ಲಿ ಒಂದಾಗಿದೆ. ವಿಶ್ವಕ್ಕೆ ಮಾದರಿಯಾದ, ಕಲ್ಯಾಣ ರಾಜ್ಯವಾದ ಕಾಲಘಟ್ಟ ಇದಾಗಿದೆ. ನಮ್ಮ ಕನ್ನಡ ನೆಲಕ್ಕೆ ಅದ್ಭುತವಾದ ಸೊಗಸಿದೆ. ಇದು ಸರ್ವಜನಾಂಗದ ಶಾಂತಿಯ ತೋಟವಲ್ಲದೆ, ಕಾಂತಿಯ ತೋಟವು ಆಗಿದೆ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಲು ಆಗಮಿಸಿದ ಸಾಫ್ಟ್ ಟೆಕ್ ಕಂಪ್ಯೂಟರ್ ಅಕಾಡೆಮಿಯ ಬಿ.ಜಿ ಗೋಪಾಲಕೃಷ್ಣ ಮಾತನಾಡಿ, ಇಂದು ನಿಜಶರಣ ಅಂಬಿಗರ ಚೌಡಯ್ಯ ನವರ ೯೦೫ನೇ ವರ್ಷದ ಜಯಂತಿಯನ್ನು ಆಚರಿಸುತ್ತಿದ್ದೇವೆ, ಇವರು ಬಸವ ಚಳವಳಿಯ ಕ್ರಾಂತಿಯ ಸಂದರ್ಭದಲ್ಲಿ ಹುಟ್ಟಿದವರಾಗಿದ್ದಾರೆ ಎಂದರು. ಚೌಡಯ್ಯ ಎಂದರೆ ಹೆಚ್ಚಿನ ಜ್ಞಾನವನ್ನು ಪಡೆದವನು ಎಂದರ್ಥ. ಹಾಗಾಗಿ ಇವರು ವೈಚಾರಿಕ ಚಿಂತನೆ ಉಳ್ಳವರು, ಆಯುರ್ವೇದ ವೈದ್ಯರು, ವಿಜ್ಞಾನದ ಕುರಿತು ಜ್ಞಾನವನ್ನು ಪಡೆದುಕೊಂಡವರು ಆಗಿದ್ದರು ಎಂದು ಅವರು ತಿಳಿಸಿದರು.
ಜಯಂತಿಗಳನ್ನು ಆಚರಿಸುವುದರ ಹಿಂದೆ ಇರುವ ಧ್ಯೇಯೋದ್ದೇಶಗಳನ್ನು ಜನಸಾಮಾನ್ಯರು ಒಗ್ಗಟ್ಟಾಗಿ ಪ್ರಚಲಿತ ವಿದ್ಯಮಾನಗಳನ್ನು ಹಂಚಿಕೊಂಡು ಆಚರಿಸಬೇಕು ಎನ್ನುವ ಉದ್ದೇಶದಿಂದ ಸರ್ಕಾರ ಈ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ ಎಂದು ಅಂಬಿಗರ ಚೌಡಯ್ಯ ನವರ ಕುರಿತು ಸವಿವರವಾಗಿ ಉಪನ್ಯಾಸ ನೀಡಿದರು.ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ.ಎಚ್.ಪಿ ತಾರಾನಾಥ್, ಹಾಸನ ನೌಕರರ ಸಂಘದ ಗೌರವಾಧ್ಯಕ್ಷರಾದ ಈ ಕೃಷ್ಣಗೌಡ ಹಾಗೂ ಸಮುದಾಯದ ಇತರೆ ಮುಖಂಡರು ಉಪಸ್ಥಿತರಿದ್ದರು.