ಹಿಂದುಳಿದ ವರ್ಗಗಳಿಗೆ ಉನ್ನತ ಸಾಧನೆಯ ಮಹತ್ವಾಕಾಂಕ್ಷೆ ಅಗತ್ಯ: ದಯಾನಂದಪುರಿ ಸ್ವಾಮೀಜಿ

KannadaprabhaNewsNetwork |  
Published : Jul 03, 2024, 12:17 AM IST
ದೊಡ್ಡಬಳ್ಳಾಪುರದ ಪಿಸಿವಿ ಚಾರಿಟಬಲ್ ಟ್ರಸ್ಟ್‌ ನೇತೃತ್ವದಲ್ಲಿ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಸಾಧಕ ವಿದ್ಯಾರ್ಥಿಗಳಿಗೆ ದಯಾನಂದಪುರಿ ಸ್ವಾಮೀಜಿ, ದಿವ್ಯಜ್ಞಾನಾನಂದ ಸ್ವಾಮೀಜಿ ಮತ್ತಿತರರು ಅಭಿನಂದಿಸಿದರು. | Kannada Prabha

ಸಾರಾಂಶ

ಸಾಧನೆ ಎಂದಿಗೂ ಸಾಧಕನ ಸ್ವತ್ತೇ ವಿನಃ ಸೋಮಾರಿಯ ಸ್ವತ್ತಾಗುವುದಿಲ್ಲ. ಪರಿಶ್ರಮ, ಆಸಕ್ತಿ ಮತ್ತು ಅದಕ್ಕೆ ಪೂರಕವಾದ ಉತ್ತೇಜನ ದೊರೆತಾಗ ಸಾಧನೆ ಪರಿಪೂರ್ಣತೆಯನ್ನು ಪಡೆಯುತ್ತದೆ. ಈ ನಿಟ್ಟಿನಲ್ಲಿ ಉತ್ತಮ ಸಾಧನೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸವನ್ನು ಸತತ 11 ವರ್ಷಗಳಿಂದ ಪಿಸಿವಿ ಚಾರಿಟೇಬಲ್ ಟ್ರಸ್ಟ್‌ ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ.

ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ

ಹಿಂದುಳಿದ ವರ್ಗಗಳಿಗೆ ಸೇರಿದ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹೆಚ್ಚಿನ ಸಾಧನೆ ಮಾಡುವ ಉನ್ನತ ಹಂತದ ಹುದ್ದೆಗಳನ್ನು ಹೊಂದುವ ಮಹತ್ವಾಕಾಂಕ್ಷೆಯನ್ನು ಹೊಂದಬೇಕು ಎಂದು ಹಂಪಿ ಹೇಮಕೂಟ ಗಾಯತ್ರಿ ಪೀಠಾಧ್ಯಕ್ಷ ದಯಾನಂದಪುರಿ ಸ್ವಾಮೀಜಿ ಹೇಳಿದರು.

ಇಲ್ಲಿನ ಪಿಸಿವಿ ಚಾರಿಟೇಬಲ್ ಟ್ರಸ್ಟ್‌ನ ನೇತೃತ್ವದಲ್ಲಿ ನಡೆದ 2024ನೇ ಸಾಲಿನ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

ಸಮಕಾಲೀನ ಕಾಲಘಟ್ಟದಲ್ಲಿ ತಾಂತ್ರಿಕ ಜ್ಞಾನ ಮತ್ತು ಕೌಶಲವನ್ನು ಉತ್ತೇಜಿಸುವ ಕೆಲಸ ಆಗಬೇಕು. ಸಾಧನೆ ನಿಂತ ನೀರಾಗಬಾರದು. ಅದು ಹರಿಯುವ ನದಿಯಂತೆ ನಿರಂತರತೆಯನ್ನು ಕಾಯ್ದುಕೊಳ್ಳಬೇಕು. ದೇವಾಂಗ ಸಮುದಾಯದ ಶೈಕ್ಷಣಿಕ ಸಬಲೀಕರಣಕ್ಕೆ ಪೂರಕವಾಗಿ ಉನ್ನತ ಸ್ತರಗಳಲ್ಲಿ ತಮ್ಮ ಅಸ್ತಿತ್ವವನ್ನು ಪ್ರತಿಪಾದಿಸುವುದು ಅಗತ್ಯ ಎಂದರು.

ಸಾಧನೆಗೆ ಬೇಕು ಉತ್ತೇಜನ:

ಪುಷ್ಪಾಂಡಜಮುನಿ ಆಶ್ರಮದ ದಿವ್ಯ ಜ್ಞಾನಾನಂದ ಸ್ವಾಮೀಜಿ ಮಾತನಾಡಿ, ಸಾಧನೆ ಎಂದಿಗೂ ಸಾಧಕನ ಸ್ವತ್ತೇ ವಿನಃ ಸೋಮಾರಿಯ ಸ್ವತ್ತಾಗುವುದಿಲ್ಲ. ಪರಿಶ್ರಮ, ಆಸಕ್ತಿ ಮತ್ತು ಅದಕ್ಕೆ ಪೂರಕವಾದ ಉತ್ತೇಜನ ದೊರೆತಾಗ ಸಾಧನೆ ಪರಿಪೂರ್ಣತೆಯನ್ನು ಪಡೆಯುತ್ತದೆ. ಈ ನಿಟ್ಟಿನಲ್ಲಿ ಉತ್ತಮ ಸಾಧನೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸವನ್ನು ಸತತ 11 ವರ್ಷಗಳಿಂದ ಪಿಸಿವಿ ಚಾರಿಟೇಬಲ್ ಟ್ರಸ್ಟ್‌ ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದರು.

ಕೌಶಲ್ಯಾಧಾರಿತ ಸಾಧನೆಗೆ ಮನ್ನಣೆ:

ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಬೆಂಗ್ರಾ ಜಿಲ್ಲಾ ಕಸಾಪ ಕಾರ್ಯದರ್ಶಿ ಪ್ರೊ.ರವಿಕಿರಣ್ ಕೆ.ಆರ್. ಮಾತನಾಡಿ, ದೊಡ್ಡಬಳ್ಳಾಪುರದಂತಹ ಸಂಕೀರ್ಣ ಪ್ರದೇಶದಲ್ಲಿ ಇಂದು ಶೈಕ್ಷಣಿಕವಾದ ನಿಶ್ಯಬ್ದ ಕ್ರಾಂತಿ ನಡೆಯುತ್ತಿದೆ. ಇಲ್ಲಿನ ಬಹುತೇಕ ಮನೆಗಳಲ್ಲಿ ಪದವೀಧರರಿದ್ದಾರೆ. ಅದರಲ್ಲೂ ಹೆಣ್ಣು ಮಕ್ಕಳು ಉತ್ತಮ ಶೈಕ್ಷಣಿಕ ಸಾಧನೆಗೆ ಸಾಕ್ಷಿಯಾಗಿರುವುದು ವಿಶೇಷ. ಜ್ಞಾನಾಧಾರಿತ ಅಧ್ಯಯನ ಮತ್ತು ಸಾಧನೆಯ ಜೊತೆಗೆ ಕೌಶಲ್ಯಾಧಾರಿತ ಅಧ್ಯಯನ ಮತ್ತು ಸಾಧನೆಯನ್ನು ಉತ್ತೇಜಿಸುವ ಅಗತ್ಯವಿದೆ. ಸಿಇಟಿ, ನೀಟ್‌ ಇತ್ಯಾದಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ನಮ್ಮ ವಿದ್ಯಾರ್ಥಿಗಳನ್ನು ಗುಣಾತ್ಮಕವಾಗಿ ಸಜ್ಜುಗೊಳಿಸುವುದು ಅಗತ್ಯವಾಗಿದೆ ಎಂದರು.

ಸಾಮಾಜಿಕ ಕಾಳಜಿ ಅಗತ್ಯ:

ಪ್ರಾಸ್ತಾವಿಕವಾಗಿ ಮಾತನಾಡಿದ ಪಿಸಿವಿ ಚಾರಿಟೇಬಲ್‌ ಟ್ರಸ್ಟ್‌ನ ಅಧ್ಯಕ್ಷ ಪಿ.ಸಿ.ವೆಂಕಟೇಶ್, ಕಳೆದ 11 ವರ್ಷಗಳಿಂದ ತಮ್ಮ ಟ್ರಸ್ಟ್‌ನ ಮೂಲಕ ಶೈಕ್ಷಣಿಕ ಸಾಧಕರನ್ನು ಗುರುತಿಸಿ ಉತ್ತೇಜನ ನೀಡಲಾಗುತ್ತಿದೆ. ಶಿಕ್ಷಣದ ಅರಿವಿನ ಜೊತೆಗೆ ಸಾಮಾಜಿಕ ಕಾಳಜಿಯನ್ನೂ ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು. ಪರಿಸರ ಸಂರಕ್ಷಣೆಯ ಅರಿವು, ಪರಂಪರೆಯ ಸಂರಕ್ಷಣೆ ಸಂಕಲ್ಪವನ್ನು ಮಾಡಬೇಕು ಎಂದರು.

ಕೇಂದ್ರ ರೇಷ್ಮೆ ಮಂಡಳಿ ಮಾಜಿ ಅಧ್ಯಕ್ಷ ಕೆ.ಎಂ.ಹನುಮಂತರಾಯಪ್ಪ, ಎಂಎಬಿಎಲ್‌ ವಿದ್ಯಾ ಸಂಸ್ಥೆ ಕಾರ್ಯದರ್ಶಿ ಎಂ.ಬಿ.ಗುರುದೇವ್ ಮಾತನಾಡಿದರು.

ಇದೇ ವೇಳೆ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದು ಉತ್ತೀರ್ಣರಾದ 180ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನದೊಂದಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಕ್ರೀಡಾ ಪ್ರತಿಭೆಗಳು, ವಿವಿಧ ಕ್ಷೇತ್ರಗಳ ಸಾಧಕರನ್ನು ಗೌರವಿಸಲಾಯಿತು.

ಪಿಸಿವಿ ಚಾರಿಟೇಬಲ್ ಟ್ರಸ್ಟಿನ ಕಾರ್ಯದರ್ಶಿ ಪಿ.ವಿ.ಪ್ರಶಾಂತ್, ಖಜಾಂಚಿ ಪುಷ್ಪಲತಾ, ಟ್ರಸ್ಟಿ ಅನುಶ್ರೀ, ಡಾ.ಚಂದನ ಮತ್ತಿತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

''ದ್ವೇಷ ಮಸೂದೆಯಿಂದ ಭಿನ್ನ ದನಿ ದಮನ ಆಗಲ್ಲ ''
3 ವರ್ಷ ಮೊಮ್ಮಗನಿಗೆ ಬಾರಲ್ಲಿ ಹೆಂಡ ಕುಡಿಸಿದ ಅಜ್ಜ: ಆಕ್ರೋಶ