ರಸಗೊಬ್ಬರ ಕೊರತೆ ಆತಂಕ ಇದ್ದರೂ ಅದ್ಯಾವುದನ್ನು ತಲೆಕೆಡಿಸಿಕೊಳ್ಳದೆ ಬಿತ್ತನೆಗೆ ಸಜ್ಜಾಗುತ್ತಿದ್ದಾರೆ.
ಸೋಮರಡ್ಡಿ ಅಳವಂಡಿ ಕೊಪ್ಪಳ
ಜಿಲ್ಲಾದ್ಯಂತ ಪೂರ್ವ ಮುಂಗಾರು ಮಳೆ ಅತ್ಯುತ್ತಮ ಎನ್ನುವಂತಾಗಿದ್ದರಿಂದ ರೈತರು ಬಿತ್ತನೆಗೆ ಈಗಾಗಲೇ ಹೊಲವನ್ನು ಉಳುಮೆ ಮಾಡಿ ಸಿದ್ಧ ಮಾಡಿಕೊಳ್ಳುತ್ತಿದ್ದಾರೆ. ಆದರೆ, ರಸಗೊಬ್ಬರ ಮತ್ತು ಬೀಜ ಸಿಗುವುದೇ ರೈತರಿಗೆ ದೊಡ್ಡ ಆತಂಕವಾಗಿದೆ.
ಈಗಾಗಲೇ ರಾಜ್ಯ ಸರ್ಕಾರ ಎಫ್‌ಐಡಿ ಹೊಂದಿದವರಿಗೆ ಮಾತ್ರ ರಸಗೊಬ್ಬರ ಎಂದು ಹೇಳಿರುವುದು ಒಂದು ಕಡೆಯಾದರೆ ಎಕರೆಗೆ ಒಂದು ಚೀಲ ಮಾತ್ರ ಪ್ರಥಮ ಹಂತದಲ್ಲಿ ಯೂರಿಯಾ ಮತ್ತು ಡಿಎಪಿ ನೀಡಲಾಗುತ್ತದೆ ಎಂದು ಹೇಳಿರುವುದು ರೈತರನ್ನು ಆತಂಕಕ್ಕೆ ದೂಡಿದೆ. ಈ ಆತಂಕದ ನಡುವೆ ಬಿತ್ತನೆಗೆ ಭೂಮಿ ಸಜ್ಜು ಮಾಡಿಕೊಳ್ಳುತ್ತಿದ್ದಾರೆ.
ಮುತ್ತಿಗೆ ಹಾಕಲಿ ಸೈನಿಕರೆಲ್ಲ ಬಿತ್ತುಳುವುದನವ ಬಿಡುವುದೇ ಇಲ್ಲ ಎಂದು ಕವಿ ಕುವೆಂಪು ಹೇಳಿದಂತೆ ಕೊಲ್ಲಿಯಲ್ಲಿ ಯುದ್ಧ ನಡೆದಿದ್ದರೂ, ರಸಗೊಬ್ಬರ ಕೊರತೆ ಆತಂಕ ಇದ್ದರೂ ಅದ್ಯಾವುದನ್ನು ತಲೆಕೆಡಿಸಿಕೊಳ್ಳದೆ ಬಿತ್ತನೆಗೆ ಸಜ್ಜಾಗುತ್ತಿದ್ದಾರೆ.
ಪೂರ್ವ ಮುಂಗಾರು ಅತ್ಯುತ್ತಮವಾಗಿ ಆಗಿರುವುದರಿಂದ ರೈತರು ಈ ಬಾರಿ ಉರಿ ಬಿಸಿಲಿನಲ್ಲಿಯೂ ಭೂಮಿ ಉಳುಮೆ ಮಾಡಿ, ಹದ ಮಾಡಿಕೊಳ್ಳುತ್ತಿರುವುದು ಜಿಲ್ಲಾದ್ಯಂತ ಕಂಡು ಬರುತ್ತಿದೆ.
3.17 ಲಕ್ಷ ಹೆಕ್ಟೇರ್ ಗುರಿ: ಪ್ರಸಕ್ತ ವರ್ಷ ಮುಂಗಾರು ಹಂಗಾಮಿನಲ್ಲಿ ತುಂಗಭದ್ರಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ಜಿಲ್ಲೆಯ 60 ಸಾವಿರ ಹೆಕ್ಟೇರ್ ಪ್ರದೇಶವನ್ನೊಳಗೊಂಡು 3.17 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಕೃಷಿ ಇಲಾಖೆ ಹೊಂದಿದೆ. 3.17 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ನೀಡಿರುವ ಕೃಷಿ ಇಲಾಖೆ ಅದಕ್ಕೆ ತಕ್ಕಂತೆ ರಸಗೊಬ್ಬರ ಪೂರೈಕೆಗೂ ಸಿದ್ಧತೆ ಮಾಡಿಕೊಳ್ಳುತ್ತಿದೆಯಾದರೂ ರಸಗೊಬ್ಬರ ಪೂರೈಕೆಯಲ್ಲಿನ ಅಭಾವ ಆತಂಕವನ್ನುಂಟು ಮಾಡಿದೆ.
3.17 ಲಕ್ಷ ಎಕರೆ ಪ್ರದೇಶದಲ್ಲಿ ಭತ್ತ ಬೆಳೆಯುವ ಪ್ರದೇಶ ಹೊರತುಪಡಿಸಿ 1 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳದ ಗುರಿ ಹಾಕಿಕೊಳ್ಳಲಾಗಿದೆ. 25 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಜೋಳ, ಸಜ್ಜೆ 64 ಸಾವಿರ ಹೆಕ್ಟೇರ್, ನವಣೆ 5 ಸಾವಿರ ಹೆಕ್ಟೇರ್, ಹುರುಳಿ 3500 ಹೆಕ್ಟೇರ್ ಸೇರಿದಂತೆ 3.17 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಕೃಷಿ ಇಲಾಖೆ ಹೊಂದಿದೆ.
ಗೊಬ್ಬರ ಕೊಡಿ: ಬಿತ್ತನೆ ಮಾಡುವುದಕ್ಕೆ ನಾವೆಲ್ಲ ಸಕಲ ಸಿದ್ಧತೆ ಮಾಡಿಕೊಂಡಿದ್ದೇವೆ. ಆದರೆ, ನಮಗೆ ಅಗತ್ಯಕ್ಕೆ ತಕ್ಕಂತೆ ಯುರಿಯಾ ಮತ್ತು ಡಿಎಪಿ ಗೊಬ್ಬರ ನೀಡುವಂತೆ ರೈತರು ಆಗ್ರಹಿಸುತ್ತಿದ್ದಾರೆ. ಕೃಷಿ ಇಲಾಖೆ ಯೂರಿಯಾ ಮತ್ತು ಡಿಎಪಿ ಕೊಡುವ ಪ್ರಮಾಣದ ಆಧಾರದಲ್ಲಿಯೇ ನಾವು ಈ ವರ್ಷ ಬಿತ್ತನೆ ಮಾಡುತ್ತೇವೆ ಎನ್ನುತ್ತಿದ್ದಾರೆ ರೈತರು.
ಆದರೆ, ಕೃಷಿ ಇಲಾಖೆಯ ಅಧಿಕಾರಿಗಳು ಮನವಿ ಮಾಡುತ್ತಿರುವುದೇ ಬೇರೆಯಾಗಿದೆ. ಕೇವಲ ಯೂರಿಯಾ ಮತ್ತು ಡಿಎಪಿ ರಸಗೊಬ್ಬರ ಹಾಕುವುದಕ್ಕೆ ಚಿಂತೆ ಮಾಡದೆ ನ್ಯಾನೋ ಯೂರಿಯಾ ಮತ್ತು ಡಿಎಪಿ ಬಳಕೆ ಮಾಡಿ ಎಂದು ಜಾಗೃತಿ ಮೂಡಿಸುತ್ತಿದೆ. ಇದರಿಂದ ಭೂಮಿಯ ಫಲವತ್ತತೆ ಕಾಪಾಡಿಕೊಳ್ಳಬಹುದು. ಅತಿಯಾದ ಯೂರಿಯಾ ರಸಗೊಬ್ಬರ ಬಳಕೆ ಭೂಮಿಯ ಆರೋಗ್ಯ ಸೂಕ್ತವಲ್ಲ ಎನ್ನುವ ದೊಡ್ಡ ಅಭಿಯಾನ ಮಾಡುತ್ತಿದೆ. ಆದರೆ, ರೈತರು ಮಾತ್ರ ನಮಗೆ ಯೂರಿಯಾ, ಡಿಎಪಿ ರಸಗೊಬ್ಬರವೇ ಬೇಕು ಎನ್ನುವ ಮನಸ್ಥಿತಿಯಿಂದ ಇನ್ನು ಹೊರಬರುತ್ತಿಲ್ಲ.
ಮುಂಗಾರು ಬಿತ್ತನೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ವರ್ಷ ಎಫ್‌ಐಡಿ ಮೂಲಕವೇ ರಸಗೊಬ್ಬರ ವಿತರಣೆ ಮಾಡುವುದರಿಂದ ನಿಯಂತ್ರಣದಲ್ಲಿರುತ್ತದೆ ಹಾಗೂ ಪ್ರತಿ ರೈತರಿಗೂ ಗೊಬ್ಬರ ದೊರೆಯುವಂತಾಗುತ್ತದೆ ಎಂದು ಕೃಷಿ ಇಲಾಖೆ ಜೆಡಿ ಕೃಷ್ಣಮೂರ್ತಿ ತಿಳಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.