ಕನ್ನಡಪ್ರಭ ವಾರ್ತೆ ಮಂಡ್ಯ
ಕೆಆರ್‌ಎಸ್ ಅಣೆಕಟ್ಟೆ ಬಳಿ ನಿರ್ಮಿಸಲು ಹೊರಟಿರುವ ಅಮ್ಯೂಸ್‌ಮೆಂಟ್ ಪಾರ್ಕ್ ಸೇರಿದಂತೆ ರೈತರಿಗೆ ಮಾರಕವಾಗಿರುವ ಎಲ್ಲ ಯೋಜನೆಗಳನ್ನು ತಕ್ಷಣ ಕೈಬಿಡಬೇಕು ಎಂದು ಕರ್ನಾಟಕ ರಾಜ್ಯ ಸಂಘ ಹಾಗೂ ಹಸಿರು ಸೇನೆ ಏಕೀಕರಣ ಸಮಿತಿ ಕಾರ್ಯಕರ್ತರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.ನಗರದ ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಎದುರು ಸೇರಿದ ಕಾರ್ಯಕರ್ತರು ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ರೈತರು ಬೆಳೆದ ಎಲ್ಲಾ ತರಹದ ಬೆಳೆಗಳಿಗೆ ಸರಿಯಾದ ಬೆಲೆಯನ್ನು ನಿಗದಿಮಾಡಿಲ್ಲ, ಕೇಂದ್ರದ ರಾಷ್ಟ್ರೀಕೃತ ಮತ್ತು ರಾಜ್ಯದ ಸಹಕಾರಿ ಸಂಘಗಳಲ್ಲಿ ರೈತರು ಮಾಡಿರುವ ಕೃಷಿ ಸಾಲಗಳನ್ನು ಮನ್ನಾ ಮಾಡಬೇಕು. ಕೆಆರ್‌ಎಸ್‌ನಲ್ಲಿ ಸರ್ಕಾರ ಮಾಡಬೇಕೆಂದಿರುವ ರೈತರಿಗೆ ಮಾರಕವಾದ ಮತ್ತು ಅಣೆಕಟ್ಟೆಗೆ ಧಕ್ಕೆಯಾಗುವ ಕೆಲಸಗಳನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.ಮೈಷುಗರ್ ಕಾರ್ಖಾನೆಯನ್ನು ಜೂ.೧೫ರೊಳಗೆ ಕಬ್ಬು ನುರಿಸಲು ಪ್ರಾರಂಭ ಮಾಡಬೇಕು. ಪೂರ್ಣ ಅವಧಿಗೆ ಎಂಡಿಯವರನ್ನು ನೇಮಕ ಮಾಡಬೇಕು. ಸರ್ಕಾರಗಳು ಇಳುವರಿಯನ್ನು ಆಧರಿಸಿ ಮಾಡಿರುವ ಕಬ್ಬಿನ ದರವನ್ನು ರದ್ದು ಮಾಡಿ ರಾಜ್ಯದಲ್ಲಿರುವ ಕಾರ್ಖಾನೆಗಳು ಏಕರೂಪದಲ್ಲಿ ಬೆಲೆಯನ್ನು ಕೊಡಬೇಕು. ರೈತ ಬೆಳೆದ ಕಬ್ಬಿಗೆ ವಿಮೆ ಮಾಡಬೇಕು ಎಂದು ಒತ್ತಾಯಿಸಿದರು.
ಇತ್ತೀಚೆಗೆ ತೋಟಗಾರಿಕೆ ಬೆಳೆಗಳಿಗೆ ಒತ್ತು ಕೊಡುತ್ತಿದ್ದು, ತೆಂಗಿನ ಬೆಳೆಗೆ ಕಾಂಡದಲ್ಲಿ ರಸ ಸೋರುವ ರೋಗ ಕಾಣಿಸಿಕೊಂಡು ಇಳುವರಿ ಕಡಿಮೆಯಾಗಿ ರೈತರಿಗೆ ನಷ್ಟವಾಗುತ್ತಿದೆ. ತೋಟಗಾರಿಕೆ ಅಧಿಕಾರಿಗಳು ತಕ್ಷಣ ಕ್ರಮ ತೆಗೆದುಕೊಂಡು ಸಮಸ್ಯೆ ಬಗೆಹರಿಸಬೇಕು. ಜಿಲ್ಲಾಸ್ಪತ್ರೆಯಲ್ಲಿ ವೈದ್ಯರು ಸರಿಯಾಗಿ ಇರುವುದಿಲ್ಲ. ಇದರಿಂದ ರೋಗಿಗಳಿಗೆ ತೀವ್ರ ತೊಂದರೆಯಾಗಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗಳು ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.ಭತ್ತ-ರಾಗಿ ಖರೀದಿ ಕೇಂದ್ರಗಳನ್ನು ವರ್ಷಪೂರ್ತಿ ತೆರೆಯಬೇಕು. ತಾಲ್ಲೂಕು ಕಚೇರಿಯಲ್ಲಿ ರೈತರಿಗೆ ಆಗುತ್ತಿರುವ ತೊಂದರೆ ತಪ್ಪಿಸಬೇಕು. ಬ್ಯಾಂಕಿನಲ್ಲಿ ರೈತರಿಗೆ ಚಿನ್ನದ ಮೇಲೆ ಸಾಲ ನೀಡಲು ಇಂತಿಷ್ಟು ಚಿನ್ನವನ್ನು ಗಿರವಿ ಇಡಬೇಕು ಎಂದು ನಿಯಮ ಜಾರಿ ಮಾಡಿದ್ದು, ಇದನ್ನು ಸರಿಪಡಿಸಬೇಕು. ಹೊನಗಳ್ಳಿಮಠ ವ್ಯಾಪ್ತಿಯ ೯೬೦ ಎಕರೆ ರೈತರ ಜಮೀನು ದಾಖಲೆ ಕೈ ಫಹಣಿಯಲ್ಲಿಯೇ ಮುಂದುವರಿಯುತ್ತಿದ್ದು ಕಂಪ್ಯೂಟರ್ ಆರ್‌ಟಿಸಿ ಕೊಡಿಸಬೇಕು ಎಂದು ಆಗ್ರಹಪಡಿಸಿದರು.
ಪ್ರತಿಭಟನೆಯಲ್ಲಿ ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ಇಂಡುವಾಳು ಚಂದ್ರಶೇಖರ್, ಪ್ರಧಾನ ಕಾರ್ಯದರ್ಶಿ ಮಂಜೇಶ್‌ಗೌಡ, ಉಪಾಧ್ಯಕ್ಷರಾದ ನಾಗೇಂದ್ರಸ್ವಾಮಿ, ರಾಮಲಿಂಗೇಗೌಡ, ಮುಖಂಡರಾದ ಶಂಭೂನಹಳ್ಳಿ ಸುರೇಶ್, ಮಹೇಂದ್ರ, ಸೋಸಿ ಪ್ರಕಾಶ್, ಮಹೇಶ್, ಶಿವಳ್ಳಿ ಚಂದ್ರಶೇಖರ್, ಎಚ್.ಜಿ.ಪ್ರಭುಲಿಂಗು, ಬಸವರಾಜೇಗೌಡ, ತಮ್ಮೇಗೌಡ, ಎಲ್.ಸುರೇಶ್, ತೇಜ ಕೋಡಿಶೆಟ್ಟಿಪುರ ಭಾಗವಹಿಸಿದ್ದರು.